ಅಧಿಕಾರಿ ಮೇಲೆ ಗುಮಾನಿಯ ಶೇಷ; ಗಾಬರಿಯಾದ ಗೃಹ ಸಚಿವ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಹುಕೋಟಿಗಳ ಬಿಟ್ ಕಾಯಿನ್ ಹಗರಣಕ್ಕೂ ಕೇಂದ್ರ ಕಾರಾಗೃಹಕ್ಕೂ ಸಂಬಂಧ ಇರುವ ಬಗ್ಗೆ ಪ್ರಶ್ನೆಗಳು ಪೋಲೀಸ್ ವಲಯ ವನ್ನು ಕಾಡಲಾರಂಭಿವೆ.
ಸದ್ಯ ಹಗರಣದಲ್ಲಿ ಕೇವಲ ರಾಜಕಾರಣಿಗಳು, ಅವರ ಮಕ್ಕಳು ಮಾತ್ರವಲ್ಲದೆ, ಅನೇಕ ಪೋಲೀಸ್ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳೂ ಪರೋಕ್ಷವಾಗಿ ಇದ್ದಾರೆ ಎನ್ನುವ ಗುಮಾನಿಗಳು ತೀವ್ರ ಗೊಳ್ಳುತ್ತಿವೆ. ಏಕೆಂದರೆ ಬಿಟ್ ಕಾಯಿನ್ ಸಂಬಂಧಿಸಿದ ಚೀಟಿ ಮತ್ತು ಮಾಹಿತಿಗಳು ಮೊದಲು ಸೋರಿಕೆಯಾಗಿದ್ದೇ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಎನ್ನುವ ಮಾಹಿತಿ ಪೋಲೀಸರಿಗೆ ಸಿಕ್ಕಿದೆ. ಇದರಲ್ಲಿ ದಕ್ಷಿಣ ವಲಯ ಕಾರಾಗೃಹಗಳ ಹೊಣೆ ಹೊತ್ತ ವಿ‘ಶೇಷ’ ಅಧಿಕಾರಿಯೊಬ್ಬರೂ ಬಿಟ್ ಕಾಯಿನ್ ವ್ಯವಹರಿಸುವವರಿಗೆ ಸಾಥ್ ನೀಡಿದ್ದರು ಎನ್ನುವ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಡ್ರಗ್ಸ್ ಪ್ರಕರಣಗಳಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ನ ೨೦ ಕ್ಕೂ ಹೆಚ್ಚಿನ ಸಲೆಬ್ರಿಟಿ ಗಳು ಕಾರಾಗೃಹದಲ್ಲಿ ಬಂಧಿ ಯಾಗಿದ್ದರು. ಇವರಲ್ಲಿ ಕೆಲವರು ಬಿಟ್ ಕಾಯಿನ್ ವ್ಯವಹಾರದಲ್ಲೂ ತೊಡಗಿದ್ದರು ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಮಾಹಿತಿಗಳು ನಗರ ಪೋಲೀಸರಿಗೆ ಸಿಕ್ಕಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ಖ್ಯಾತಿ ನಟಿಯೊಬ್ಬರಿಗೆ ಸೇರಿದ ಬಿಟ್ ಕಾಯಿನ್ ವ್ಯವಹಾರದ ಮಾಹಿತಿ ಮತ್ತು ದಾಖಲೆ ಕಾರಾಗೃಹದ ಲಭ್ಯವಾ ಗಿತ್ತು. ಸದ್ಯ ಇಡೀ ಹಗರಣದ ಪ್ರಮುಖ ರೂವಾರಿ ಎನ್ನುವಂತೆ ಕೇಳಿಬರುತ್ತಿರುವ ಶ್ರೀಕಿ ಕೂಡ ಈ ಹಿಂದೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ. ಈ ಸಂದರ್ಭದಲ್ಲಿ ಆತ ಅಲ್ಲಿಂದಲೇ ವ್ಯವಹಾರ ನಡೆಸಿದ್ದ ಎನ್ನಲಾಗಿದೆ.
ಇನ್ನೂ ಅಚ್ಚರಿ ವಿಚಾರವೆಂದರೆ, ಬಿಟ್ ಕಾಯಿನ್ ವಿಚಾರಕ್ಕೆ ನಟಿಯೊಬ್ಬರು ಶ್ರೀಕಿಯನ್ನು ವಿ‘ಶೇಷ’ ಅಧಿಕಾರಿ ಮೂಲಕ ಕರೆಸಿ ವ್ಯವಹಾರ ನಡೆಸಿದ್ದರು. ಈ ಎಲ್ಲ ಸತ್ಯಗಳು ಸೆಲೆಬ್ರಿಟಿ ಗಳಿಗೆ ಜಾಮೀನು ದೊರೆಯುತ್ತಿದ್ದಂತೆ ಮುಚ್ಚಿ ಹೋಗಿತ್ತು. ಏಕೆಂದರೆ, ಈ
ಅಕ್ರಮಗಳ ಮಾಹಿತಿಯನ್ನು ಡಿಐಜಿ ಮಟ್ಟದ ವಿ‘ಶೇಷ’ ಅಧಿಕಾರಿಯೊಬ್ಬರು ತಮ್ಮ ಮೇಲಧಿಕಾರಿಗಳಾದ ಡಿಜಿ ಮತ್ತು ಐಜಿ ಅವರಿಗೆ ತಿಳಿಸದೆ ಮರೆ ಮಾಚಿದ್ದರು ಎಂದೂ ತಡವಾಗಿ ಪೊಲೀಸರಿಗೆ ಗೊತ್ತಾಗಿದೆ.
೨ ಕೋಟಿ ರು. ಎಲ್ಲಿ ?
ತನಿಖೆಗಾಗಿ ಮಾಹಿತಿ ಸಂಗ್ರಹಿಸಲು ಹಣದ ತೊಂದರೆ ಆಗಬಾರದು ಎಂದು ನಿಗದಿತ ಹಣವನ್ನು ಸರಕಾರ ನೀಡುತ್ತದೆ. ಇದನ್ನು ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿ ಮೇಗರಿಕ್ ಪರಿಚರಿಸಿದ್ದರು. ಅದರಂತೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರತಿವರ್ಷ ೨ ಕೋಟಿ ರು. ನೀಡಲಾಗುತ್ತದೆ. ಇದನ್ನು ಯಾರು ಎಲ್ಲಿ,ಹೇಗೆ ವೆಚ್ಚ ಮಾಡಿzರೆ ಎನ್ನುವ ಮಾಹಿತಿಯೇ ಸಿಗುವುದಿಲ್ಲ.
ಇದನ್ನು ವಿ‘ಶೇಷ’ ಅಧಿಕಾರಿಗಳು ಬಳಸುತ್ತಿದ್ದಾರೆ ಎನ್ನಲಾಗಿದೆ. ಈ ಹಣದ ವೆಚ್ಚಕ್ಕಾಗಿ ಇಲಾಖೆ ಗಂಭೀರ ಲೆಕ್ಕ ಪರಿಶೋಧನೆ ಯನ್ನು ಮಾಡುವುದಿಲ್ಲ. ಹೀಗಾಗಿ ಇದನ್ನು ಡಿಐಜಿ ಮಟ್ಟದಲ್ಲಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಇಲಾಖೆ ಮೂಲ ಗಳು ಹೇಳಿವೆ.
ಸೆಲೆಬ್ರಿಟಿಗಳಿಗೆ ವಿ‘ಶೇಷ’ ಸೌಲಭ್ಯ ಹೇಗೆ ?
ಡ್ರಗ್ಸ್ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಆರೋಪಿಗಳು ಕೇಂದ್ರ ಕಾರಾಗೃಹ ಸೇರಿದ್ದರು. ಇವರಲ್ಲಿ ಬಹುತೇಕ ದೊಡ್ಡವರ ಮಕ್ಕಳು ಹಾಗೂ ಸಿನಿಮಾ ನಟ, ನಟಿಯರು ಹಾಗೂ ಪೆಡ್ಲರ್ಗಳಾಗಿದ್ದರು. ಈ ಆರೋಪಿಗಳು ಜೈಲಿನಲ್ಲಿದ್ದರು ಎನ್ನುವುದನ್ನು ಬಿಟ್ಟರೆ ಇವರಿಗೆ ಅಲ್ಲಿ ಯಾವುದೇ ಸೌಲಭ್ಯಗಳು ಕೊರತೆಯಾಗದಂತೆ ವಿ‘ಶೇಷ’ ಅಧಿಕಾರಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಕಾರಾಗೃಹದಲ್ಲಿ ಡ್ರಗ್ಸ್ ಆರೋಪಿಗಳಿಗೆ ವಿವಿಐಪಿ ಸೌಲಭ್ಯದ ಕೊಠಡಿಗಳನ್ನು ನೀಡಲಾಗಿತ್ತು. ಅವರಲ್ಲಿ ಅವರಿಗೆ ಮೊಬೈಲ್, ಟಿವಿ ಸೇರಿದಂತೆ ಎ ರೀತಿಯ ಸೌಲಭ್ಯಗಳನ್ನು ವಿ’ಶೇಷ’ ಅಧಿಕಾರಿ ಒದಗಿಸಿದ್ದರು. ಇದಕ್ಕಾಗಿ ಅವರು ಆರಂಭದ ಲಕ್ಷಗಟ್ಟಲೇ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಅದರಲ್ಲೂ ಈ ಸೆಲೆಬ್ರಿಟಿಗಳು ನಡೆಸುತ್ತಿದ್ದ ಬಿಟ್ ಕಾಯಿನ್ ವ್ಯವಹಾರ ಹಾಗೂ ಇತರ ಮಾಹಿತಿ ವಿನಿಮಯಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚುವರಿಯಾಗಿ ಮತ್ತೆ ಲಕ್ಷಗಟ್ಟಲೇ ಪೀಕುತ್ತಿದ್ದರು ಎಂದು ಜೈಲು ಮೂಲ ಗಳೇ ಹೇಳುತ್ತಿವೆ.
ಹೀಗಾಗಿ ಬಿಟ್ ಕಾಯಿನ್ ಹಗರಣ ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ ಪೊಲೀಸರಿಗೆ ಈಗ ದಕ್ಷಿಣ ವಲಯ ಕಾರಾಗೃಹ ಗಳ ಉಸ್ತುವಾರಿ ಹೊತ್ತ ವಿ‘ಶೇಷ’ ಅಧಿಕಾರಿ ಮೇಲೆ ಗುಮಾನಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.