– ನಾಲ್ವರ ಹೆಸರು ಸ್ಕ್ರೀನಿಂಗ್ ಕಮಿಟಿಗೆ
– ಸಿವಿಸಿಗೆ ಬಹತೇಕ ಟಿಕೆಟ್ ಫೈನಲ್
– ಗೆಲ್ಲುವ ವಿಶ್ವಾಸದಲ್ಲಿ ಕಮಲ ಪಡೆ
ವಿಶೇಷ ವರದಿ: ಬಸವರಾಜ ಕರ್ಕಿಹಳ್ಳಿ
ಕೊಪ್ಪಳ: ಕೊಪ್ಪಳ-ರಾಯಚೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆ ಬರುವ ನವೆಂಬರ್ ಅಂತ್ಯದಲ್ಲಿ ನಡೆಯಲಿದ್ದು, ಒಂದು ಹೆಜ್ಜೆ ಮುಂದೆ ಇರುವ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ವೀಕ್ಷಕರ ಸಭೆ ನಡೆಸುವ ಮೂಲಕ ಅದಾಗಲೇ ಚುನಾವಣಾ ತಯಾರಿ ನಡೆಸಿದೆ.
ಕಳೆದ ಬಾರಿ ಸೋತಿದ್ದ ಕ್ಷೇತ್ರವನ್ನು ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕು ಎಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಚುನಾವಣೆ ಇನ್ನೂ ದೂರ ಇರುವಂತೆಯೆ ಕಾರ್ಯತಂತ್ರಕ್ಕೆ ಮುಂದಾಗಿದೆ. ಈಗಾಗಲೇ ವೀಕ್ಷಕರನ್ನು ನೇಮಕ ಮಾಡಿ ಸಭೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿಗಳು ಹಾಗೂ ಎರಡೂ ಜಿಲ್ಲೆಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರು ಇತ್ತೀಚಿಗೆ ಜಿಲ್ಲೆಯ ಕಾರಟಗಿಯಲ್ಲಿ ವೀಕ್ಷಕರಾಗಿ ಆಗಮಿಸಿ ಸಭೆ ನಡೆಸಿ ದ್ದಾರೆ. ಸಭೆಯಲ್ಲಿ ಎರಡೂ ಜಿಲ್ಲೆಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಪಡೆದಿದ್ದಾರೆ.
ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಸ್ವಲ್ಪ ಬೆಳೆದಿದೆ. ವೀಕ್ಷಕರು ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಿದ ಪಟ್ಟಿಯಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ರಾಯ ಚೂರು ಜಿಲ್ಲೆಯ ಬಸವನಗೌಡ ಬ್ಯಾಗವಾಟ, ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ ಸ್ಪರ್ಧೆ ಬಯಸಿ ಟಿಕೆಟ್ ಕೇಳಿದ್ದಾರೆ. ವೀಕ್ಷಕರು ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಹೈಕಮಾಂಡ್ಗೆ ಪಟ್ಟಿ ಕಳುಹಿಸಿದ್ದಾರೆ. ಪಕ್ಷಮ ಹೈಕಮಾಂಡ್ ಅಂತಿಮವಾಗಿ ಯಾರಿಗೆ ಅವಕಾಶ ನೀಡುತ್ತದೆಯೋ ಅವರು ಕಣ್ಣಕ್ಕಿಳಿಯಲಿದ್ದಾರೆ.
ಸಿವಿಸಿಗೆ ಟಿಕೆಟ್ ಪಕ್ಕಾ?: ಲಭ್ಯ ಮಾಹಿತಿ ಪ್ರಕಾರ ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಸಿ.ವಿ. ಚಂದ್ರಶೇಖರ್ ಅವರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂದು ತಿಳಿದುಬಂದಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವ ದಲ್ಲಿದ್ದು, ಗೆಲುವಿನ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಕ್ಷದ ಸಂಘಟನೆ ಉತ್ತಮವಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರು ಇದ್ದಾರೆ. ಅಲ್ಲದೆ ಇಬ್ಬರು ಸಂಸದರು ಸಹ ಬಿಜೆಪಿಯವರೇ ಇದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಕೈಕೊಡು ವವರು ಯಾರು ಇಲ್ಲ ಎನ್ನುವುದಕ್ಕಿಂತ ಪಕ್ಷದ ಹೈಕಮಾಂಡ್ ಬಿಗಿ ಇರುವ ಕಾರಣ ಅಭ್ಯರ್ಥಿ ವಿರುದ್ಧ ಕೆಲಸ ಮಾಡದೇ ಪಕ್ಷದ ಪರ ಕೆಲಸ ಮಾಡುವ ಅನಿವಾರ್ಯತೆ ಇದೆ.
ಕಳೆದ ಬಾರಿ ಕಳೆದುಕೊಂಡ ಕ್ಷೇತ್ರವನ್ನು ಈ ಬಾರಿ ಪಡೆಯಲೇಬೇಕು ಎನ್ನುವ ಕಾರಣಕ್ಕೆ ಪಕ್ಷ ಗೆಲ್ಲುವ ಕುದುರೆಗೆ ಮಣೆ ಹಾಕುವುದಂತೂ ದಿಟ. ಅಭ್ಯರ್ಥಿ ಯಾರೇ ಆದರೂ ಪಕ್ಷ ಗೆಲ್ಲುವಂತೆ ಮಾಡುತ್ತೇವೆ ಎನ್ನುವ ಮಾತುಗಳು ಟಿಕೆಟ್ ಆಕಾಂಕ್ಷಿ ಗಳಿಂದ ಬಂದಿವೆ. ಎಲ್ಲದಕ್ಕೂ ಕಾದು ನೋಡಬೇಕಷ್ಟೆ.
ಕಳೆದ ಬಾರಿಯ ಫಲಿತಾಂಶ..
2015ರ ಡಿಸೆಂಬರ್ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ನ ಬಸವರಾಜ ಪಾಟೀಲ್ ಇಟಗಿ 328 ಮತಗಳಿಂದ ಗೆಲುವು ಸಾಧಿಸಿದ್ದರು. ಎರಡೂ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಒಟ್ಟು 6747 ಮತಗಳು ಇದ್ದವು. ಈ ಪೈಕಿ ಇಟಗಿ 3441 ಮತ ಪಡೆದರೆ, ಬಿಜೆಪಿಯ ಸಿ.ವಿ. ಚಂದ್ರಶೇಖರ್ 3113 ಮತ ಪಡೆದು ಸೋತಿದ್ದರು. 161 ಮತ ತಿರಸ್ಕøತಗೊಂಡಿದ್ದರೆ 12 ಮತಗಳು ನೋಟಕ್ಕೆ ಬಿದ್ದಿದ್ದವು. ಪಕ್ಷೇತರ ಅಭ್ಯರ್ಥಿ ಚೀಟ್ಟೆಪ್ಪಗೌಡ 13 ಹಾಗೂ ಮುಜಿದ್ 7 ಮತ ಪಡೆದಿದ್ದರು. ಈ ಬಾರಿ ಮತಗಳ ಸಂಖ್ಯೆ ಹೆಚ್ಚಳವಾಗಲಿವೆ.
ಅಧಿಕಾರಸ್ತರ ಪರ ಫಲಿತಾಂಶ..: ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುತ್ತದೆಯೋ ಆ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಮಾತುಗಳಿವೆ. ಇದಕ್ಕೆ ಅನ್ವರ್ಥಕ ಎನ್ನುವಂತೆ ಇದುವರೆಗಿನ ಬಹುತೇಕ ಫಲಿ ತಾಂಶಗಳು ಹಾಗೆಯೆ ಬಂದಿವೆ. 2015ರಲ್ಲೂ ಇದೇ ರೀತಿಯಾಗಿತ್ತು.
ಬಸವರಾಜ ಪಾಟೀಲ್ ಇಟಿಗಿ ಯಾರು ಎಂದು ಅನೇಕರಿಗೆ ಗೊತ್ತೇ ಇರಲಿಲ್ಲ. ಆಗ ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಅಂದಿನ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕಾಂಗ್ರೆಸ್ ವ್ಯವಸ್ಥಿತ ಕೆಲಸ ಮಾಡಿದ್ದರು. ಇದರ ಜೊತೆಗೆ ಬಿಜೆಪಿಯ ಕೆಲವರು ಬಿಜೆಪಿ ಅಭ್ಯರ್ಥಿಗೆ ಕೈ ಕೊಟ್ಟ ಕಾರಣ ಇಟಗಿ ಗೆಲುವು ಸಧಿಸಿದ್ದರು. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದು, ಬಿಜೆಪಿಯಿಂದ ಯಾರೇ ಕಣಕ್ಕಿಳಿದರೂ ಗೆಲುವು ನಿಶ್ಚಿತ ಎನ್ನುತ್ತಾರೆ ಬಿಜೆಪಿ ಮುಖಂಡರು.
***
ಕಾರಟಗಿಯಲ್ಲಿ ನಡೆದ ಅಶ್ವತ್ಥನಾರಾಯಣಗೌಡ, ಬಿ.ಜಿ. ಪಾಟೀಲ್ ಅವರ ನೇತೃತ್ವದ ವೀಕ್ಷಕರ ಸಭೆಯಲ್ಲಿ ಒಟ್ಟು ನಾಲ್ವರ ಹೆಸರುಗಳನ್ನು ಕಳುಹಿಸಲಾಗಿದೆ. ಸಿ.ವಿ. ಚಂದ್ರಶೇಖರ್, ಬಸವನಗೌಡ ಬ್ಯಾಗವಾಟ, ಶರಣು ತಳ್ಳಿಕೇರಿ ಹಾಗೂ ನವೀನ ಗುಳಗಣ್ಣ ವರ ಸ್ಪರ್ಧೆ ಬಯಸಿ ಟಿಕೆಟ್ ಕೇಳಿದ್ದಾರೆ. ಅಂತಿಮವಾಗಿ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ.
ದೊಡ್ಡನಗೌಡ ಪಾಟೀಲ್, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ
ಕಳೆದ ಬಾರಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದೆ. ಈ ಬಾರಿ ಪಕ್ಷ ಕಣಕ್ಕಿಳಿಯುವಂತೆ ಹೇಳಿದೆ. ಪಕ್ಷದ ಹಿರಿಯರು ಹೇಳಿದಂತೆ ನಡೆದುಕೊಳ್ಳುತ್ತೇನೆ. ಸ್ಫರ್ಧೆ ಮಾಡುವಂತೆ ಸೂಚನೆ ನೀಡಿದರೆ ಕಣಕ್ಕಿಳಿಯುವೆ.
ಸಿ.ವಿ. ಚಂದ್ರಶೇಖರ್, ರಾಷ್ಟ್ರೀಯ ಪರಿಷತ್ ಸದಸ್ಯ.
ಯುವಕರ ಕೋಟಾದಡಿ ವಿಪ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ವೀಕ್ಷಕರ ಎದುರು ಅವಕಾಶ ನೀಡುವಂತೆ ಮನವಿ ಮಾಡಿರುವೆ. ಪಕ್ಷದಲ್ಲಿ ಹಲವು ವರ್ಷಗಳಿಂದ ಸಂಘಟನೆ ಮಾಡುತ್ತ ಬಂದಿರುವೆ. ನಮ್ಮ ತಂದೆಯವರು ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದಾರೆ. ಈ ಎಲ್ಲ ಕಾರಣಕ್ಕೆ ಟಿಕೆಟ್ ಕೇಳಿರುವೆ. ಪಕ್ಷ ಟಿಕೆಟ್ ಕೊಟ್ಟರೆ ಗೆದ್ದು ಬರುವ ವಿಶ್ವಾಸವಿದೆ. ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ.
ನವೀನ ಗುಳಗಣ್ಣವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.