ಈಶ್ವರಪ್ಪ ರಾಜೀನಾಮೆ ಆಯ್ತು, ಬಂಧನಕ್ಕೆ ಆಗ್ರಹ
ಸರಕಾರವೇ ಟಾರ್ಗೆಟ್
ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ನೆಪದಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಮುಗಿಬಿದಿದ್ದ ಕಾಂಗ್ರೆಸ್ಗೆ, ಈಶ್ವರಪ್ಪ ರಾಜೀನಾಮೆಯ ಬೆನ್ನಲ್ಲೇ ಕೈಗೆ ಸಿಕ್ಕ ಅಸ, ಕೆಳಗೆ ಬಿದ್ದಂತಾಗಿದೆ.
ಶತಾಯ ಗತಾಯ ಸರಕಾರದ ವಿರುದ್ಧ ಸಮರ ಮುಂದುವರಿಸು ಮೂಲಕ ‘ಇಶ್ಯೂ’ ಜೀವಂತ ಇಡುವ ಲೆಕ್ಕಾ ಚಾರದಲ್ಲಿ ಕಾಂಗ್ರೆಸ್ ಇದೀಗ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸುತ್ತಿದೆ. ಮೊದಲಿನಿಂದಲೂ ಶೇ.೪೦ ಕಮಿಷನ್ ಆರೋಪವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿತ್ತು. ಆದರೆ ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಿರಲಿಲ್ಲ. ಆದರೆ, ಈಶ್ವರಪ್ಪ ವಿರುದ್ಧ ಗುತ್ತಿಗೆದಾರನೊಬ್ಬ ನೇರವಾಗಿಯೇ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಗೆ ಪ್ರಬಲ ಅಸ ಲಭಿಸಿದಂತಾಗಿತ್ತು.
ಇದನ್ನೇ ಮುಂದಿಟ್ಟುಕೊಂಡು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಹೇಗೂ ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆ ವಿವಾದದಂತೆ ಈಗಲೂ ರಾಜೀನಾಮೆ ನೀಡುವುದಿಲ್ಲ; ಅದನ್ನೇ ಮುಂದಿಟ್ಟುಕೊಂಡು ಹೋರಾಡ ಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್ಗೆ ಈಶ್ವರಪ್ಪ ರಾಜೀನಾಮೆ ಹಿನ್ನಡೆಯಾಗಿದೆ. ಹೀಗಾಗಿ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಲಾಗಿದೆ.
ಇಷ್ಟು ದಿನ ಹಿಜಾಬ್, ಹಲಾಲ್ ವಿವಾದಗಳಲ್ಲಿ ಕಾಂಗ್ರೆಸ್ ಯಾವ ತೀರ್ಮಾನ ಕೈಗೊಳ್ಳಬೇಕು ಎನ್ನುವ ಗೊಂದಲಕ್ಕೆ ಸಿಲುಕಿತ್ತು. ಇದರ ಪ್ರಯೋಜನ ಪಡೆದಿದ್ದ ಬಿಜೆಪಿ ಹಿಂದುತ್ವದ ಆಧಾರದಲ್ಲಿ ಮತಬೇಟೆ ನಡೆಸಿತ್ತು. ಆದರೀಗ ಸಂತೋಷ್ ಆತ್ಮಹತ್ಯೆಯಿಂದಾಗಿ, ಕಾಂಗ್ರೆಸ್ಗೆ ಬಿಜೆಪಿ ವಿರುದ್ಧ ಮುಗಿ ಬೀಳಲು ಉತ್ತಮ ಅಸ್ತ್ರ ಸಿಕ್ಕಿದೆ. ಇದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದು ಬೇಡ ಎನ್ನುವ ನಿರ್ಧಾರಕ್ಕೆ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ವರಿಷ್ಠರಿಂದಲೂ ಸೂಚನೆ: ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ, ಮತಗಳ ಕ್ರೋಡೀಕರಣ, ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ತಂತ್ರ ರೂಪಿಸುತ್ತಿರುವ ಕಾಂಗ್ರೆಸ್ಗೆ ಬ್ರಹ್ಮಾಸ್ತ್ರದ ಅಗತ್ಯವಿತ್ತು. ಇದೀಗ ಸಿಕ್ಕಿರುವ ಈ ಪ್ರಕರಣ ಬಳಸಿಕೊಂಡು ಕರ್ನಾಟಕದಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳಲು ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈಶ್ವರಪ್ಪ ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಮುಂದಿನ ಕೆಲ ದಿನಗಳ ಕಾಲ ಈಶ್ವರಪ್ಪ ಅವರನ್ನೇ ಟಾರ್ಗೆಟ್ ಮಾಡಿಕೊಂಡು ಪ್ರತಿಭಟನೆ, ಧರಣಿ, ಹೋರಾಟ ನಡೆಸಿದರೂ ಅದಾದ ಬಳಿಕ ಇದೇ ವಿಷಯವನ್ನಿಟ್ಟುಕೊಂಡು ಇಡೀ ಸರಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಕೈ ಪ್ಲಾನ್ಗೆ ಅಡ್ಡಗಾಲು
ಈ ವಿಷಯ ಮುಂದಿಟ್ಟು ಕೊಂಡು ಕೈ ನಾಯಕರು ನಡೆಸಬಹುದಾದ ಹೋರಾಟವನ್ನು ಗಮನಿಸಿದ ಬಿಜೆಪಿ ವರಿಷ್ಠರು, ಅವರಿಂದ ರಾಜೀನಾಮೆ ಪಡೆ ಯುವ ಮೂಲಕ ಕಾಂಗ್ರೆಸ್ನ ಹೋರಾಟಕ್ಕೆ ಅಡ್ಡಗಾಲು ಹಾಕಿದರು. ರಾಜೀನಾಮೆ ನೀಡಿದ್ದರಿಂದ ಇದೀಗ, ಈ ವಿಷಯದಲ್ಲಿ ಮೈಲೇಜ್ ಸಹ ಸಿಗುವು ದಿಲ್ಲ. ಆದ್ದರಿಂದ ರಾಜೀನಾಮೆ ವಿಷಯ ಕೈಬಿಟ್ಟು, ಬಂಧನಕ್ಕೆ ಆಗ್ರಹಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ನಿರಂತರ ಸುದ್ದಿಗೋಷ್ಠಿ?
ಈಶ್ವರಪ್ಪ ವಿರುದ್ಧ ಹೋರಾಟ ಮುಗಿಯುವ ಮೊದಲೇ, ಕಾಂಗ್ರೆಸ್ ಇತರ ಗುತ್ತಿಗೆದಾರರಿಂದ ನಾನಾ ಇಲಾಖೆಯಲ್ಲಿರುವ ಕಮಿಷನ್ ವಿಷಯದಲ್ಲಿ ನಿರಂತರ ಸುದ್ದಿಗೋಷ್ಠಿ ನಡೆಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಕೊಡಗಿನಲ್ಲಿ ಗುರುವಾರ ಗುತ್ತಿಗೆದಾರರೊಬ್ಬರು ಸುದ್ದಿಗೋಷ್ಠಿ ನಡೆಸಿದ್ದು, ಮುಂದಿನ ದಿನದಲ್ಲಿ ಇದು ಮುಂದುವರೆ ಸಲು ಕಾಂಗ್ರೆಸ್ ಸಿದ್ಧತೆ ನಡೆಸಿಕೊಂಡಿದೆ