ಅಯೋಧ್ಯೆಯ ಕೊರೆವ ಚಳಿಯಲ್ಲೂ ಸಮಾರೋಪಾದಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಅಂತಿಮ ಅಣಿ
ವಿಶ್ವವಾಣಿ ಪ್ರತ್ಯಕ್ಷ ವರದಿ: ಅನಿಲ್ ಎಚ್.ಟಿ
ಅಯೋಧ್ಯೆ (ಉಪ್ರ): ರಾಮ ಲಲ್ಲಾನಿಗೆ ೫೦೦ ವರ್ಷಗಳ ಬಳಿಕ ತನ್ನ ಹುಟ್ಟೂರಿಗೆ ಮರಳಿ ಬರುವ ಸಂಭ್ರಮ. ದೇಶದ ಬಹುಕೋಟಿ ಹಿಂದೂಗಳ ಶತಮಾನಗಳ ಕನಸು ನನಸಾಗುವ ಹೊತ್ತು. ಭಾರತದ ಇತಿಹಾಸದಲ್ಲಿಯೇ ಅತ್ಯಂತ ವೈಭವದ ದೈವಿಕ ಕಾರ್ಯಕ್ರಮ… ನ ಭೂತೋ, ನ ಭ ವಿಷ್ಯತಿ ಎಂಬಂಥ ಅತೀ ದೊಡ್ಡ ಧಾರ್ಮಿಕ ಉತ್ಸವಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಮರೋಪಾದಿಯಲ್ಲಿ ಸಜ್ಜಾಗುತ್ತಿದೆ.
ಶ್ರೀರಾಮನ ಜನ್ಮಸ್ಥಾನದಲ್ಲಿ ಕೊನೆಗೂ ಜ.೨೨ರಂದು ಶ್ರೀರಾಮಮಂದಿರ ಲೋಕಾರ್ಪಣೆಯಾಗಲಿದೆ. ಭಕ್ತರ ಬಹುದಿನಗಳ ಬೇಡಿಕೆಯ ಅಪೂರ್ವ ಮಂದಿರದ ಉದ್ಘಾಟನೆಯ ದೈವಿಕ ಕೈಂಕರ್ಯಕ್ಕೆ ಕೇವಲ ೭ ದಿನಗಳು ಇರುವಂತೆಯೇ ರಾಮನಗರಿ ಎಲ್ಲ ರೀತಿಯಲ್ಲಿ ಸಜ್ಜಾಗುತ್ತಿದೆ.
ಅಯೋಧ್ಯೆಯಲ್ಲಿ ಈಗ ಮೈ ಕೊರೆಯುವ ಚಳಿ. ಕನಿಷ್ಠ ೯ ಡಿಗ್ರಿ ಸೆಂಟಿಗ್ರೇಡ್ನಷ್ಟು ತಾಪಮಾನ ಕಂಡುಬಂದಿದೆ. ಮಧ್ಯಾಹ್ನವಾದರೂ ಸೂರ್ಯನ ದರ್ಶನವಿಲ್ಲದೇ ಮಂಜು ಮುಸುಕಿದ ವಾತಾವರಣ. ಇದಾವುದೂ ಸಿದ್ಧತೆಗೆ ಅಡ್ಡಿಯಾಗಿಲ್ಲ. ಶ್ರೀರಾಮ ದೇವಾಲಯದ ಮೊದಲ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದೆ.
ಅತ್ಯಾಧುನಿಕ ತಪಾಸಣಾ ವ್ಯವಸ್ಥೆ: ಕಳೆದ ಕೆಲವು ವಾರ ಗಳಿಂದ ಉತ್ತರ ಪ್ರದೇಶದ ಪೊಲೀಸರೇ ಶ್ರೀರಾಮ ಮಂದಿರದ ಬಂದೋಬಸ್ತ್ ಹೊಣೆ
ವಹಿಸಿಕೊಂಡಿದ್ದಾರೆ. ಈ ಮೊದಲು ವಿವಾದಿತ ಮಂದಿರದ ಜಾಗವನ್ನು ಸಿಆರ್ಪಿಎಫ್ ಗಮನಿಸುತ್ತಿತ್ತು. ಇದೀಗ ಉತ್ತರ ಪ್ರದೇಶದ ಪೊಲೀಸರ ಉಸ್ತುವಾರಿ ಯಲ್ಲಿನ ಶ್ರೀರಾಮಮಂದಿರ ಕ್ಕಾಗಿಯೇ ವಿಶೇಷ ಪೊಲೀಸ್ ಕಾರ್ಯಪಡೆ ರಚಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ಕಾರ್ಯಪಡೆಗೆ ನೀಡಲಾಗಿದೆ.
ದೇವಾಲಯದ ಪ್ರವೇಶದಲ್ಲಿಯೇ ಅತ್ಯಾಧುನಿಕ ತಪಾಸಣಾ ವ್ಯವಸ್ಥೆಯಿದ್ದು, ಸೂಕ್ಷ್ಮ ಕ್ಯಾಮೆರಾ ಕಣ್ಗಾವಲಿರಿಸಲಾಗಿದೆ. ಬಾಂಬ್ ನಿಷ್ಟ್ರಿಯ ದಳ, ಶ್ವಾನ ಪಡೆಗಳು ಕೂಡ ಇಲ್ಲಿಯೇ ಬೀಡು ಬಿಟ್ಟಿದೆ. ಶ್ರೀರಾಮಮಂದಿರದ ಲೋಕಾರ್ಪಣೆಗೆ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಆರ್ಪಿಎಫ್ ಮತ್ತು ಸೇನಾ ಕಮಾಂಡೋಗಳನ್ನೂ ರಾಮಮಂದಿರ ಸಂಕೀರ್ಣದ ಭದ್ರತೆಗೆ ಕಳೆದ ವಾರದಿಂದ ನಿಯೋಜಿಸಲಾಗಿದೆ. ಸಿಆರ್ ಪಿಎಫ್ ನ ಮಹಿಳಾ ಬೆಟಾಲಿಯನ್ ಕೂಡ ಸ್ಥಳದಲ್ಲಿ ಬಂದೋಬಸ್ತ್ ಹೊಣೆ ವಹಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ೪೦೦ ಕ್ಕೂ ಅಧಿಕ ಪೊಲೀಸರು ಹೆಜ್ಜೆ ಹೆಜ್ಜೆಗೂ ಸಂಕೀರ್ಣ ಜಾಗದಲ್ಲಿ ಕಾವಲಿದ್ದಾರೆ.
ಇಂಥ ಸರ್ಪಗಾವಲನ್ನು ಭೇದಿಸಿ ಸಲೀಸಾಗಿ ಮಂದಿರ ಪ್ರದೇಶಕ್ಕೆ ತೆರಳುವುದು ಖಂಡಿತಾ ಅಸಾಧ್ಯ. ಇದೇ ೨೨ ರಂದು ಶ್ರೀರಾಮಮಂದಿರ ಭಕ್ತಾರ್ಪಣೆ ಯದ ಬಳಿಕವೂ ಇದೇ ತಪಾಸಣೆ ಮುಂದುವರಿಯಲಿದೆ. ಹೀಗಾಗಿ ಭಕ್ತರಿಗೆ ರಾಮಮಂದಿರ ಮತ್ತು ಸಂಕೀರ್ಣಕ್ಕೆ ತೆರಳಿ ವಾಪಸಾಗಲು ಏನಿಲ್ಲವೆಂದರೂ ೩ ಗಂಟೆಗಳಾದರೂ ಬೇಕೇ ಬೇಕು ಎಂಬಂಥ ಸ್ಥಿತಿಯಿದೆ.
ಮಹೋನ್ನತ ದಿನಕ್ಕೆ ಕಾತರ: ಜನವರಿ ೨೨ – ಅಯೋಧ್ಯೆ ಪಾಲಿಗೆ ಇದು ಚರಿತ್ರೆ ಸೃಷ್ಟಿಸುವ ದಿನ. ಭಾರತೀಯರ ಪಾಲಿಗೆ ಇದೇ ದಿನ ೫೦೦ ವರ್ಷಗಳ ಕನಸು ನನಸಾಗುವ ಮಹೋನ್ನತ ದಿನ. ಇಂಥ ಅವಿಸ್ಮರಣೀಯ ದಿನವನ್ನು ಅಯೋಧ್ಯಾ ವಾಸಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ. ಈಗಾಗಲೇ ಅಯೋಧ್ಯೆಯ ಮನೆಮನೆಗಳಲ್ಲಿ ಹಬ್ಬದ ಸಡಗರ ಕಂಡು ಬರುತ್ತಿದ್ದು ಬಹುತೇಕ ಮನೆಗಳು, ಅಂಗಡಿಗಳು ಹೊಸದ್ದಾಗಿ ಸುಣ್ಣ ಬಣ್ಣ ಬಳಿದುಕೊಂಡು
ಸುಂದರವಾಗಿ ಕಂಗೊಳಿಸುತ್ತಿದೆ.
ವಿಶ್ವದ ಹಿಂದೂಗಳ ಪಾಲಿಗೆ ರಾಮ ಹೇಗೆ ಆದರ್ಶಪ್ರಾಯನೋ ಹಾಗೇ ಶ್ರೀರಾಮಮಂದಿರ ಲೋಕಾರ್ಪಣೆ ಮತ್ತು ತನ್ನೂರಿಗೆ ಮರಳಿ ಬಂದು ಪಟ್ಟಾಭಿ ಷೇಕ ಪಡೆದುಕೊಳ್ಳಲಿರುವ ರಘು ರಾಮನ ಉತ್ಸವವನ್ನೂ ಮಾದರಿಯಾಗಿ ಆದರ್ಶಮಯವಾಗಿ ಮಾಡಲು ಅಯೋಧ್ಯೆ ಜನ ಸಂಕಲ್ಪ ತೊಟ್ಟಂತಿದೆ. ಇಂಥ ಸಂಭ್ರಮ ಅಯೋಧ್ಯೆಯ ಎಲ್ಲೂ ಕಂಡುಬಂದಿದೆ.
ಸೇನಾ ಸರ್ಪಗಾವಲು: ದೇವಾಲಯ ಸಂಕೀರ್ಣಕ್ಕೆ ಪೊಲೀಸ್ ಮತ್ತು ಸೇನಾಪಡೆಯ ಕಮಾಂಡೋಗಳ ಸರ್ಪಗಾವಲು ವಿಽಸಲಾಗಿದೆ. ಅತೀ ಸೂಕ್ಷ್ಮ ರೀತಿಯಲ್ಲಿ ತಪಾಸಣೆಗೊಳಪಟ್ಟ ಬಳಿಕವೇ ಸಂಕೀರ್ಣದಲ್ಲಿನ ಕಾಮಗಾರಿಯನ್ನು ದೂರದಿಂದ ವೀಕ್ಷಿಸಲು ಬ್ಯಾರಿಕೇಡ್ ಒಳಗೇ ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ತಪಾಸಣೆ ಹೇಗಿದೆ ಎಂದರೆ, ಮೊಬೈಲ, ಕ್ಯಾಮೆರಾ ಹಾಗಿರಲಿ ಬಾಚಣಿಗೆ, ಪೆನ್ನು, ಪರ್ಸ್ ಗಳನ್ನೂ ಕೂಡ ತಪಾಸಣೆ ಸಂದರ್ಭ ಪಕ್ಕಕ್ಕಿಡಲು ಸೂಚಿಸಿ, ಇದೆಲ್ಲವನ್ನೂ ಹೊರಗಿಟ್ಟ ಬಳಿಕವೇ ಸಂಕೀರ್ಣ ವೀಕ್ಷಣೆಗೆ ಜನರನ್ನು ಒಳ ಬಿಡಲಾಗುತ್ತಿದೆ.
ಮೂರು ಹಂತದಲ್ಲಿನ ಬಿಗಿಯಾದ ತಪಾಸಣೆ ಬಳಿಕವೇ ಪ್ರಧಾನ ಮಂದಿರ ಮತ್ತು ಮಂದಿರ ಸಂಕೀರ್ಣದ ಕಾಮಗಾರಿ ವೀಕ್ಷಣಾ ಪ್ರದೇಶಕ್ಕೆ ತೆರಳಬಹುದು. ಇಲ್ಲಿಯೂ ಹೆಜ್ಜೆ ಹೆಜ್ಜೆಗೂ ಸುಸಜ್ಜಿತ ಬಂದೂಕುಧಾರಿ ಕಮಾಂಡೋಗಳು ಹದ್ದಿನಗಣ್ಣಲ್ಲಿ ಗಮನಿಸುತ್ತಿರುತ್ತಾರೆ. ಹಲವು ಮಾರು ದೂರದಲ್ಲಿ ನಡೆವ ಕಾಮಗಾರಿ ವೀಕ್ಷಿಸಲು ಪ್ರತಿನಿತ್ಯ ೧೫-೨೦ ಸಾವಿರ ಸಂದರ್ಶಕರು ಅಯೋಧ್ಯೆಗೆ ಬರುತ್ತಿzರೆ. ಜ.೨೨ ರ ನಂತರ ಈ ಸಂಖ್ಯೆ ದಿನಕ್ಕೆ ೧ ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.
ಭೂಮಿಪೂಜೆಯ ಜಾಗದಲ್ಲಿ ಮೂರ್ತಿ: ಶ್ರೀರಾಮಮಂದಿರ ಸಂಕೀರ್ಣದೊಳ ಗಡೆಯೇ ಕಳೆದ ೩೦ ವರ್ಷಗಳಿಂದ ಪೂಜೆ ಸಲ್ಲಿಸುತ್ತ ಬರಲಾಗುತ್ತಿರುವ ಪ್ರಾಚೀನ ಕಾಲದ ಶ್ರೀರಾಮ, ಸೀತೆ, ಲಕ್ಷ್ಮಣರ ಮೂರ್ತಿಗಳಿಗೆ ಪ್ರತ್ಯೇಕ ಮಂದಿರ ನಿರ್ಮಿಸಲಾಗಿದೆ. ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಪ್ರಧಾನಿ ಮೋದಿಯವರು ನೂತನ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಅದೇ ಸ್ಥಳದಲ್ಲಿಯೇ ಈ ಮೂರ್ತಿಗಳಿಗೆ ಪುಟ್ಟದಾದ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಹಲವು ವರ್ಷಗಳ ಕಾಲ ಟೆಂಟ್ನಲ್ಲಿ ಪೂಜಿಸಲ್ಪಡುತ್ತಿದ್ದ ಈ ರಾಮನಿಗೆ ಮೂರು ವರ್ಷಗಳಿಂದ ಮಂದಿರದಲ್ಲಿ ಪೂಜೆ ಸ್ವೀಕರಿಸುವ ಯೋಗ ಲಭಿಸಿದೆ. ಈ ಮಂದಿರ ವೀಕ್ಷಣೆಯ ಬಳಿಕ ಪೊಲೀಸ್ ಭದ್ರವ್ಯೂಹದೊಳಗೆ ಸಾಗಿ ಕಾಮಗಾರಿಗಳ ವಿವಿಧ ಹಂತಗಳನ್ನು ವೀಕ್ಷಿಸಬಹುದು.
ಭಾರತದ ಬೇರೆ ದೇವಾಲಯಗಳಿಗೆ ಹೋಲಿಸಿದ್ದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ೨.೭೭ ಎಕರೆ ವಿಶಾಲವಾದ ಜಾಗದಲ್ಲಿರುವುದು ಮತ್ತು ಮಂದಿರ
ಸಂಕೀರ್ಣವು ಕೂಡ ಅತ್ಯಂತ ವಿಶಾಲವಾದ ೭೭ ಎಕರೆ ಪ್ರದೇಶದಲ್ಲಿರುವುದರಿಂದ ಎಷ್ಟೇ ಸಂಖ್ಯೆಯಲ್ಲಿ ಭಕ್ತರು ಬಂದರೂ ನೂಕು ನುಗ್ಗಲಿನ ಪರಿಸ್ಥಿತಿ ಉದ್ಬವಿಸಲಾರದು. ಅಯೋಧ್ಯೆಯ ಮುಖ್ಯ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ೨೭ ನ್ನು ಸಂಪರ್ಕಿಸುವ ಇಲ್ಲಿನ ಎಲ್ಲ ರಸ್ತೆಗಳನ್ನು ನೂತನವಾಗಿ ಡಾಮರೀಕರಣಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ.
ಶೇ. ೬೦ರಷ್ಟು ಮಾತ್ರ ಪೂರ್ಣ
ದಶರಥನ ಅರಮನೆಯಾಗಿದ್ದ ಕನಕ ಭವನದ ಹಿಂಬದಿಯಲ್ಲಿಯೇ ಶ್ರೀರಾಮಮಂದಿರ ಭವ್ಯರೂಪದಲ್ಲಿ ತಲೆ ಎತ್ತುತ್ತಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಇಂದಿಗೂ ದೇವಾಲಯದ ಕಾರ್ಯ ನಡೆಯುತ್ತಲೇ ಇದೆ. ದೇವಾಲ ಯದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಭಾಸವಾಗುತ್ತಿದೆ. ಈ ನಡುವೆಯೇ ಜ.೨೨ ರಂದು ಪ್ರಧಾನಿ ಸೇರಿದಂತೆ ನಾನಾ ಗಣ್ಯರ ಸಮ್ಮುಖದಲ್ಲಿ ಮಂದಿರ ಲೋಕಾರ್ಪಣೆ ಮಾಡಲು ತರಾತುರಿಯಿಂದ ಕೆಲಸಕಾರ್ಯ ಗಳು ಭರದಿಂದ ಸಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಬಹುತೇಕ ಕಾಮಗಾರಿಗಳು ಶೇ. ೬೦ರಷ್ಟು ಮಾತ್ರ ಮುಕ್ತಾಯವಾಗಿದ್ದು ಸಂಪೂರ್ಣ
ವಾಗಲು ಇನ್ನೂ ೬-೭ ತಿಂಗಳಾದರೂ ಅಗತ್ಯವಿದೆ.
*
ಇಡೀ ನಗರವನ್ನು ವಿದ್ಯುದ್ದೀಪಾಲಂಕಾರಗಳಿಂದ ಶಂಗರಿಸಲಾಗಿದೆ. ಸಾಲು ದೀಪಗಳು ರಾತ್ರಿಯಲ್ಲಿ ಪ್ರಜ್ವಲಿಸಿ ಅಯೋಧ್ಯೆಗೆ ಹೊಸ ಮೆರುಗು ನೀಡಿದೆ.
ಅಯೋಧ್ಯೆಯ ೧೨ ಸಾವಿರ ಕೊಠಡಿಗಳು ಜ.೨೦ ರಿಂದಲೇ ಭರ್ತಿಯಾಗಿದೆ. ಧರ್ಮಛತ್ರದಲ್ಲಿ ೬ ಸಾವಿರ ಕೋಣೆಗಳನ್ನು ಭಕ್ತರಿಗೆ ಮೀಸಲಿಡಲಾಗಿದೆ.
ದೇಶದ ವಿವಿಧೆಡೆಗಳಿಂದ ಭಕ್ತರ ಸಾಗರ, ವಿಶೇಷವಾಗಿ ಸಾಧುಸಂತರು ಅಯೋಧ್ಯೆ ನಗರಕ್ಕೆ ಬರುತ್ತಿದ್ದಾರೆ. ಅಯೋಧ್ಯೆಯಲ್ಲಿ ಈಗ ಮೈಕೊರೆಯುವ ಚಳಿ, ಶೀತಗಾಳಿ. ಸಂಜೆ ಶೀತವಾತಾವರಣ ಹೆಚ್ಚುತ್ತಿರುವುದರಿಂದಾಗಿ ನಗರದ ಅಲ್ಲಲ್ಲಿ ಜನರು ಬೆಂಕಿಹಾಕಿ ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.
ಶ್ರೀರಾಮರಥದ ಆಕರ್ಷಣೆ!
ಶ್ರೀರಾಮ ಮಂದಿರದ ಮಾಡೆಲ್ ಅನ್ನು ಪ್ರದರ್ಶಿಸುತ್ತ ಹತ್ತಾರು ವ್ಯಾನ್ಗಳು ಅಯೋಧ್ಯೆ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ಕೇಸರಿ ದ್ವಜಗಳಿಂದ ಅಲಂಕೃತವಾದ ಶ್ರೀರಾಮರಥ ಎಂದೇ ಕರೆಯಲ್ಪಡುವ ಈ ವಾಹನದ ಹಿಂಬದಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಾಡೆಲ್ ಅನ್ನು ಗಾಜಿನ ಆವರಣದಲ್ಲಿರಿಸಲಾಗಿದೆ. ಈ ರಾಮರಥ ಗ್ರಾಮಗಳಿಗೆ ಬಂದಂತೆ ಸ್ಥಳೀಯರು ಅತ್ಯಂತ ಭಕ್ತಿಭಾವದಿಂದ ರಥವನ್ನು ಎದಿರುಗೊಂಡು ಶ್ರೀರಾಮನ ಚಿತ್ರಕ್ಕೆ ಆರತಿ ಬೆಳಗುತ್ತಿzರೆ. ಪುಪ್ಪಾರ್ಚನೆ ಮೂಲಕ ರಾಮರಥಕ್ಕೆ ಸ್ವಾಗತ ಕೋರುತ್ತಿದ್ದಾರೆ. ಈ ಸಂದರ್ಭ ರಥದ ನಿರ್ವಹಣೆ ಹೊತ್ತವರು ಜ.೨೨ ರಂದು ಅಯೋಧ್ಯೆಗೆ ಬಂದು ಶ್ರೀರಾಮ ಪಟ್ಟಾಭಿಷೇಕ ನೋಡಿ ಶ್ರೀರಾಮ ಪ್ರಭುವಿನ ಅನುಗ್ರಹಕ್ಕೆ ಪಾತ್ರರಾಗಿ ಎಂದು ಧ್ವನಿವರ್ಧಕದ ಮೂಲಕ ಮನವಿ ಮಾಡುತ್ತಿzರೆ. ಈ ರೀತಿಯಲ್ಲಿ ಯೂ ಶ್ರೀರಾಮ ಮಂದಿರ ಲೋಕಾರ್ಪಣೆಯ ಪ್ರಚಾರ ವಿಭಿನ್ನವಾಗಿ ನಡೆಯುತ್ತಿದೆ.