ರಾಜ್ಯದ ಮಠವೊಂದರಲ್ಲಿ ಅಡಗಿರುವ ಪಿಎಸ್ಐ ಅಕ್ರಮದ ಆರೋಪಿ
ರಂಜಿತ್ ಎಚ್. ಅಶ್ವತ್ಥ್ ಬೆಂಗಳೂರು
ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ಪಿಎಸ್ಐ ನೇಮಕ ಹಗರಣ ಬೆಳಕಿಗೆ ಬಂದು 15 ದಿನ ಕಳೆದರೂ, ಪ್ರಕರಣದ ಮುಖ್ಯ
ಆರೋಪಿ ದಿವ್ಯಾ ಹಾಗರಗಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ.
ತಲೆಮರೆಸಿಕೊಂಡಿರುವ ದಿವ್ಯಾ, ಕಾಶ್ಮೀರದಲ್ಲಿದ್ದಾರೆ ಎನ್ನುವ ಗಾಳಿ ಸುದ್ದಿಯ ಮೂಲಕ ಇಡೀ ಪ್ರಕರಣವನ್ನೇ ದಿಕ್ಕು ತಪ್ಪಿಸುವ ಕೆಲಸಗಳಾಗುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಪ್ರಕರಣದ ವಿಚಾರಣೆ ಆರಂಭಗೊಂಡ ದಿನದಿಂದಲೂ ದಿವ್ಯಾ ಹಾಗರಗಿ ತಲೆ ಮರೆಸಿ ಕೊಂಡಿದ್ದಾರೆ. ಆರಂಭದಲ್ಲಿ ಬೆಂಗಳೂರಿನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಬಳಿಕ ನೆರೆ ರಾಜ್ಯಗಳಿಗೆ ತೆರಳಿ ಅಲ್ಲಿಂದ ಮುಂಬೈಗೆ ಹೋಗಿದ್ದಾರೆ ಎನ್ನುವ ಮಾತುಗಳನ್ನು ಕೆಲವರು ಆಡಿದರು. ಬುಧವಾರ ಬೆಳಗ್ಗೆಯಿಂದ ಅನೇಕರು ಆಕೆ ಕಾಶ್ಮೀರ ದಲ್ಲಿದ್ದು, ಬಂಧಿಸಲು ಪ್ರತ್ಯೇಕ ತಂಡವನ್ನೇ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂಬ ಮಾತು ಹೇಳುತ್ತಿದ್ದಾರೆ. ಆದರೆ ಮೂಲ ಗಳ ಪ್ರಕಾರ, ದಿವ್ಯಾ ಕಾಶ್ಮೀರಕ್ಕೆ ತೆರಳಿಲ್ಲ. ಬದಲಿಗೆ ಕರ್ನಾಟಕದಲ್ಲಿಯೇ ಮಠವೊಂದರಲ್ಲಿ ಇದ್ದಾರೆ ಎನ್ನಲಾಗಿದೆ.
ಪ್ರಕರಣದ ದಾರಿ ತಪ್ಪಿಸುವ ಸಲವಾಗಿ ಈ ರೀತಿಯ ಗಾಳಿಸುದ್ದಿಗಳನ್ನು ತೇಲಿಬಿಡಲಾ ಗುತ್ತಿದೆ. ಈ ಮೂಲಕ ಇಡೀ ಪ್ರಕರಣ ಹಾಗೂ ತನಿಖೆಯ ಆಯಾಮವನ್ನೇ ಬದಲಾಯಿಸುವ ಪ್ರಯತ್ನಕ್ಕೆ ದಿವ್ಯಾ ಆಪ್ತರು ಕೈಹಾಕಿದ್ದಾರೆ. ಇದರಲ್ಲಿ ಕೆಲವು ಅಧಿಕಾರಿಗಳು ಶಾಮೀಲಾ ಗಿರುವ ಅನುಮಾನ ಶುರುವಾಗಿದೆ.
ಜಾಮೀನಿಗೆ ಕಾದ ದಿವ್ಯಾ: ತನಿಖೆ ಚುರುಕಾಗುತ್ತಿದ್ದಂತೆ ಆಕೆಯ ಬಂಧನ ನಿಶ್ಚಿತವಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿ ಸಿದ ದಿವ್ಯಾ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಹಜ ವಾಗಿ ಸಿಐಡಿ ತಕರಾರು ಅರ್ಜಿ ಸಲ್ಲಿಸಿರುವುದರಿಂದ ಜಾಮೀನು ಸಿಗುವುದು ಬಹುತೇಕ ಕಷ್ಟ.
ಆದರೆ, ಪ್ರಕರಣದ ತನಿಖೆಯ ಸ್ವರೂಪ, ಬಂಧನ ಬಳಿಕದ ತಂತ್ರಗಾರಿಕೆ ಬಗೆಗೆ ಯೋಚಿಸಲು ಈ ರೀತಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಮೂಲಗಳ ಪ್ರಕಾರ ದಿವ್ಯಾ, ೧೫ ದಿನದಲ್ಲಿ ನಾನಾ ಜಿಲ್ಲೆಗಳಲ್ಲಿ ಸುತ್ತಿದ್ದಾರೆ. ಇದರೊಂದಿಗೆ ಮಹಾ ರಾಷ್ಟ್ರ, ಗೋವಾಕ್ಕೂ ಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ರೀತಿ ಪದೇಪದೆ ಸ್ಥಳ ಬದಲಾಯಿಸುತ್ತಿರುವುದರಿಂದ ಪೊಲೀಸರಿಗೂ ಸ್ಪಷ್ಟ ಸುಳಿಲು ಸಿಕ್ಕಿರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ಧಾರ್ಮಿಕ ಸ್ಥಳದಲ್ಲಿರುವ ಸಾಧ್ಯತೆ
ದಿವ್ಯಾ ಅವರು ಸ್ವಾಮೀಜಿಗಳು, ಧಾರ್ಮಿಕ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಆದ್ದರಿಂದ ಆ ಸ್ನೇಹವನ್ನೇ ಬಳಸಿಕೊಂಡು, ಕರ್ನಾಟಕದ ಧಾರ್ಮಿಕ ಕೇಂದ್ರದಲ್ಲಿಯೇ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ. ಇದರಿಂದಾಗಿ ಪೊಲೀಸರಿಗೆ
ಆಕೆಯನ್ನು ಬಂಧಿಸುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.
ಸಿಎಂ ತೆರಳುವ ಮೊದಲೇ ಸೆರೆ?
ಪಿಎಸ್ಐ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ
ತೆರಳಿ ಪಕ್ಷದ ನಾಯಕರನ್ನು ಭೇಟಿಯಾಗುವ ಮೊದಲೇ, ದಿವ್ಯಾರನ್ನು ಬಂಧಿಸುವ ಸಾಧ್ಯತೆಯಿದೆ. ಇಲ್ಲವಾದರೆ, ಭೇಟಿಯ
ವೇಳೆ ಈ ಬಗ್ಗೆ ವರಿಷ್ಠರು ಪ್ರಶ್ನಿಸುವ ಸಾಧ್ಯತೆಯಿದೆ. ಆದ್ದರಿಂದ ಇನ್ನೆರಡು ದಿನದಲ್ಲಿ ದಿವ್ಯಾ ಅವರನ್ನು ಬಂಧಿಸುವುದಕ್ಕೆ
ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.