ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಉಪ ಚುನಾವಣೆಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಲಪಡಿಸಲು ತಂತ್ರ
ರಾಜ್ಯದಲ್ಲಿ ಭಾರಿ ಸದ್ದುಮಾಡಿರುವ ಮುಡಾ, ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ.
ಆದರೆ ಈ ಪಾದಯಾತ್ರೆ ಮೇಲ್ನೋಟಕ್ಕೆ ಬಿಜೆಪಿ ಪ್ರಾಯೋಜಿತ ಎನ್ನಲಾಗುತ್ತಿದೆಯಾದರೂ, ಇಡೀ ಪಾದಯಾತ್ರೆಯ ಹಿಂದೆ ಎಚ್.ಡಿ. ಕುಮಾರಸ್ವಾಮಿ
ಅವರ ‘ತಂತ್ರಗಾರಿಕೆ’ ಇದೆ ಎನ್ನಲಾಗಿದೆ.
ರಾಜ್ಯ ಸರಕಾರದ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳನ್ನು ಮುಂದಿಟ್ಟುಕೊಂಡು, ಹಗರಣಗಳನ್ನು ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಮಾತುಗಳನ್ನು ಬಿಜೆಪಿ ಆಡುತ್ತಿದೆ. ಸದನದ ಹೊರಗೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಆದರೆ ಪಾದಯಾತ್ರೆಯ ಐಡಿಯಾ ಸುತ್ತ ಕುಮಾರಸ್ವಾಮಿ ಅವರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಇದು ಜೆಡಿಎಸ್ ಆಲೋಚನೆಯಾಗಿರುವುದರಿಂದಲೇ ಪಾದಯಾತ್ರೆಯನ್ನು ಹಳೇ ಮೈಸೂರು ಭಾಗಕ್ಕೆ ಕೇಂದ್ರೀಕರಿಸಲಾಗಿದೆ. ಒಂದು ವೇಳೆ
ಬಿಜೆಪಿಯ ಪ್ಲ್ಯಾನ್ ಆಗಿದ್ದರೆ, ಪಾದಯಾತ್ರೆಯನ್ನು ಮಧ್ಯ ಕರ್ನಾಟಕ ಭಾಗದಿಂದ ಮೈಸೂರು ಅಥವಾ ಬೆಂಗಳೂರಿಗೆ ಹಮ್ಮಿಕೊಳ್ಳುತ್ತಿದ್ದರು. ಹಳೇ
ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯುತ್ತಿದೆ ಯಾದರೂ, ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ಜೆಡಿಎಸ್ನಿಂದಲೇ ಈ ಪಾದಯಾತ್ರೆ ಆಯೋಜಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿಖಿಲ್ ಕುಮಾರಸ್ವಾಮಿಗೆ ಮಣೆ: ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ರಾಜ್ಯ ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ ದೇವೇಗೌಡರಿಗೆ ಆರೋಗ್ಯ ಸಮಸ್ಯೆ, ರೇವಣ್ಣ ಕುಟುಂಬದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಗಳಿವೆ. ಆದ್ದರಿಂದ ರಾಜ್ಯ ರಾಜಕೀಯದಲ್ಲಿ ಗೌಡರ ಕುಟುಂಬದ ಕುಡಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮುನ್ನೆಲೆಗೆ ತರುವುದು ಕುಮಾರಸ್ವಾಮಿ ಅವರ ಲೆಕ್ಕಾಚಾರವಾಗಿದೆ. ೨೦೧೯ರ ಲೋಕಸಭಾ ಹಾಗೂ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ನಿಖಿಲ್ಕುಮಾರ್ ಅವರ ವರ್ಚಸ್ಸು ಹೆಚ್ಚಿಸಲು ಈ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಎನ್ಡಿಎ ಜಂಟಿ ಪಾದಯಾತ್ರೆಯಾಗಿದ್ದರೂ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಹೆಚ್ಚಿನ ಒಲವಿರುವುದರಿಂದ ಮುಂದಿನ ಚುನಾವಣೆಗಳಿಗೆ ನಿಖಿಲ್ಗೆ ಸಹಾಯವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣಕ್ಕೆ ನಿಖಿಲ್?
ಇನ್ನು ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣಕ್ಕೆ ಕೆಲವೇ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಕ್ಷೇತ್ರವನ್ನು
ಜೆಡಿಎಸ್ಗೆ ಬಿಟ್ಟು ಕೊಡುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂರಿಸುವ ಲೆಕ್ಕಾಚಾರಗಳು ಗೌಡರ ಕುಟುಂಬದಲ್ಲಿ ನಡೆಯುತ್ತಿದೆ.
ಮುಡಾ, ವಾಲ್ಮೀಕಿ ಸೇರಿದಂತೆ ವಿವಿಧ ಪ್ರಕರಣವನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ನಡೆಸುವ ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ. ಅವರು ಬೇಕಿದ್ದರೆ ಪಾದಯಾತ್ರೆ ಮಾಡಿಕೊಳ್ಳಲಿ. ಆದರೆ ಅಧಿಕೃತವಾಗಿ ಅನುಮತಿ ನೀಡುವುದಿಲ್ಲ. ಈ ಹಿಂದೆ ನಾವು ಪಾದಯಾತ್ರೆ ಮಾಡುವಾಗಲೂ ಅವರು ಅನುಮತಿ ನೀಡಿರಲಿಲ್ಲ. ಆದರೆ ಪಾದಯಾತ್ರೆಗೆ ತಡೆ ನೀಡುವುದಿಲ್ಲ.
– ಡಾ.ಜಿ. ಪರಮೇಶ್ವರ್ ಗೃಹ ಸಚಿವ
ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ನಮ್ಮ ಈ ಹೋರಾಟ ತಡೆಯಲು ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಮೇಕೆದಾಟು ಪಾದಯಾತ್ರೆ
ಮಾಡಿದ್ದಾರಲ್ಲವೇ? ನಮಗೆ ಪಾದಯಾತ್ರೆಗೆ ಏಕೆ ಅವಕಾಶ ನೀಡುವುದಿಲ್ಲ? ಸದನದಲ್ಲಿ ಮುಡಾ ಬಗ್ಗೆ ಏಕೆ ಚರ್ಚೆ ಮಾಡದೇ ಮುಖ್ಯಮಂತ್ರಿಗಳು
ಸುದ್ದಿಗೋಷ್ಠಿಯಲ್ಲಿ ಏಕೆ ಉತ್ತರ ಕೊಡುತ್ತಾರೆ?
– ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ