ಕೋಲಾರ ಸಂಸದ ಎಂ.ಮಲ್ಲೇಶ್ಬಾಬು ಕನಸು, ಅಭಿವೃದ್ಧಿ ಸಾಕಾರದ ನನಸು
ಕೆ.ಎಸ್.ಮಂಜುನಾಥರಾವ್
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿಕೊಂಡ ಯಡವಟ್ಟುಗಳಿಂದಾಗಿ ನಿರೀಕ್ಷೆಯಂತೆಯೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಎನ್ಡಿಎ ಅಭ್ಯರ್ಥಿ ಎಂ.ಮಲ್ಲೇಶ್ಬಾಬು ಅವರು ೭೧,೩೮೮ ಬಹುಮತದ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಸಚಿವ ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಹೈಕಮಾಂಡ್ ಮಣೆಹಾಕಿದಾಗ ಸಿಡಿದೆದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಾಲ್ವರು ರಾಜೀನಾಮೆಗೆ ಮುಂದಾದಾಗ ಸುರಕ್ಷಿತ ಅಭ್ಯರ್ಥಿ ಬೆಂಗಳೂರಿನ ಗೌತಮ್ ಅವರನ್ನು ಕೋಲಾರದ ಅಭ್ಯರ್ಥಿಯನ್ನಾಗಿಸಿದಾಗಲೇ ಕಾಂಗ್ರೆಸ್ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು! ಈ ನಿಟ್ಟಿನಲ್ಲಿ ನೂತನ ಸಂಸದ ಮಲ್ಲೇಶ್ ಬಾಬು ತಮ್ಮ ಮನದಾಳದ ಮಾತುಗಳನ್ನು ವಿಶ್ವವಾಣಿಗೆ ಜತೆಗೆ ಮುಕ್ತವಾಗಿ ಹಂಚಿಕೊಂಡಿದ್ದು ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರ ಬೆಂಬಲಿಗರ ಸಹಕಾರವನ್ನೂ ಸಹಾ ಬಯಸಲಾಗಿತ್ತು ಎಂಬ ಬಾಂಬ್ ಸಿಡಿಸುವ
ಮೂಲಕ ಕೋಲಾರ ಜಿಲ್ಲಾ ಕಾಂಗ್ರೆಸ್ ಬುಡವನ್ನೇ ಅಲ್ಲಾಡಿಸಿದ್ದಾರೆ!!
ನೂತನ ಸಂಸದರಾಗಿ ನಿಮ್ಮ ಮುಂದಿನ ಯೋಜನೆಗಳೇನು?
– ಶಾಶ್ವತ ಬರದನಾಡೆಂದು ಹಣೆಪಟ್ಟಿ ಪಡೆದಿರುವ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸುವುದು ನನ್ನ ಪ್ರಮುಖ ಗುರಿಯಾಗಿದ್ದು ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸ್ಟೃಸುವುದರೊಂದಿಗೆ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕಾಗಿದೆ.
ಮುಖ್ಯವಾಗಿ ಬಂಗಾರಪೇಟೆ ಮತ್ತು ಕೆಜಿಎಫ್ ನಿಂದ ಪ್ರತಿದಿನ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗುತ್ತಿರುವ ೧೦ ಸಾರ ಯುವಶಕ್ತಿಗೆ ಸ್ಥಳೀಯವಾಗಿ
ಪುನರ್ವಸತಿ ಕಲ್ಪಿಸಬೇಕಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಹಬ್ ಆರಂಭ, ಐಐಟಿ ಸ್ಥಾಪನೆ, ಎಪಿಎಂಸಿ ಮಾರುಕಟ್ಟೆ ವಿಸ್ತರಿಸಿ ರೈತರಿಗೆ ಸುಸಜ್ಜಿತ ಮಾರ್ಕೆಟ್ ಆರಂಭ ಆಗಬೇಕು. ಮುಖ್ಯವಾಗಿ ಕೆಸಿ ವ್ಯಾಲಿಯ ಮೂರನೇ ಹಂತದ ಶುದ್ಧೀಕರಣ ಮಾಡಬೇಕಾಗಿದೆ.
ಅಭಿವೃದ್ಧಿಯಲ್ಲಿ ತಾಯಿ ಮಂಗಮ್ಮ, ತಂದೆ ಮುನಿಸ್ವಾಮಿ ಸ್ಪೂರ್ತಿ ಹೇಗಿದೆ?
– ತಾಯಿ ಮಂಗಮ್ಮ ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಎರಡು ಬಾರಿ ಮಾಡಿರುವ ಸೇವೆ ಮನೆಮಾತಾಗಿದೆ. ತಂದೆ ಮುನಿಸ್ವಾಮಿ ಅವರು
ಐಎಎಸ್ ಅಧಿಕಾರಿಯಾಗಿ ಕೋಲಾರದಲ್ಲಿ ಕೈಗಾರಿಕಾ ಬೆಳವಣಿಗೆಗೆ ಕಾರಣರಾಗಿದ್ದು ಇತಿಹಾಸ. ಹೀಗಾಗಿ ಅಪ್ಪ,ಅಪ್ಪನ ಸಾಧನೆಯನ್ನು ನನಗೆ ಹೋಲಿಕೆ ಮಾಡಿ ನೋಡುವುದರಿಂದಾಗಿ ಇಬ್ಬರನ್ನೂ ಮೀರಿದ ಸಾಧನೆ ಮೂಲಕ ನನ್ನತನವನ್ನು ಸಾಬೀತು ಮಾಡಬೇಕಿದೆ.ಆದ್ದರಿಂದ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಕೋಲಾರ ಕ್ಷೇತ್ರಕ್ಕೆ ನೂತನ ಯೋಜನೆಗಳೇನು?
– ಎಪಿಎಂಸಿಯಿಂದ ಕೋಲಾರ ರೈಲ್ವೆ ಸ್ಟೇಷನ್ಗೆ ಟ್ರ್ಯಾಕ್ ಹಾಕಿಸಿದರೆ ಕೃಷಿ ಉತ್ಪನ್ನಗಳನ್ನು ಶೀಘ್ರವಾಗಿ ಉತ್ತರ ಭಾರತಕ್ಕೆ ಕಳುಹಿಸಬಹುದಾಗಿದ್ದು
ಇದರಿಂದಾಗಿ ತಾಜಾ ತರಕಾರಿ ಮಾರುಕಟ್ಟೆಗೆ ಕಳುಹಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಬಹುದಾಗಿದ್ದು ಖರೀದಿದಾರರಿಗೂ
ಗುಣಮಟ್ಟದ ಉತ್ಪನ್ನಗಳು ದೊರೆಯುತ್ತವೆ. ಕೆಜಿಎಫ್ ನಲ್ಲಿ ಕೆಐಡಿಬಿ ಪಡೆದುಕೊಳ್ಳುತ್ತಿರುವ ಜಮೀನಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಕಂಪನಿ ಗಳನ್ನು ಬರುವಂತೆ ಮಾಡುವ ಮೂಲಕ ಚಿನ್ನದನಾಡನ್ನು ಕೈಗಾರಿಕಾ ಹಬ್ ಮಾಡಬೇಕಿದೆ.
ಚುನಾವಣೆಯಲ್ಲಿ ಬಿಜೆಪಿ ಸಹಕಾರ ಹೇಗಿತ್ತು..?
– ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದಾಗಿ ಗೆಲುವು ಸಿಕ್ಕಿದ್ದು ಅಭಿವೃದ್ಧಿ ರಾಜಕಾರಣದ ಮೂಲಕ ಎಲ್ಲರ ಋಣ ತೀರಿಸಿಕೊಳ್ಳಬೇಕಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ವಿಶ್ವಾಸ ಕಳೆದುಕೊಂಡಿದ್ದು ಗ್ಯಾರಂಟಿಗಳೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಮಂತ್ರದ ಮೂಲಕ ಜನರ ಮನಸು ಗೆಲ್ಲಬೇಕಿದ್ದು ಈ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರನ್ನು ತರಬೇಕಿದ್ದು ಯೋಜನೆಗೆ ವೇಗ ಕೊಡುತ್ತೇನೆ. ಕೋಲಾರ ಗಡಿಯಲ್ಲಿನ ಆಂಧ್ರದ ವಿ.ಕೋಟ, ಪಲಮನೇರು
ಭಾಗದಲ್ಲಿ ಹರಿಯುತ್ತಿರುವ ನದಿ ನೀರನ್ನು ಕೋಲಾರ ಜಿಲ್ಲೆಗೆ ತರಲು ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಆಂಧ್ರದ ಟಿಡಿಪಿ ಪಕ್ಷದ ಮೇಲೆ
ಪ್ರಧಾನಿ ಮೋದಿ ಅವರ ಮೂಲಕ ಒತ್ತಡ ಮಾಡಿಸಲಾಗುತ್ತದೆ.
ಸಮಚಿತ್ತ ಭಾವ, ಸಮಾಧಾನ ಅನುಭಾವ
ಮಲ್ಲೇಶ್ ನಗುವುದಿಲ್ಲ, ಸದಾ ಮುಖ ಊದಿಸಿಕೊಂಡು ಇರುತ್ತಾರೆ ಎಂಬುದು ಎಲ್ಲರ ಕಾಮೆಂಟ್. ವಾಸ್ತವದಲ್ಲಿ ಚಿತ್ರಣವೇ ಬೇರೆ. ಬಾಲ್ಯದಿಂದಲೇ ತಂದೆಯ ಐಎಎಸ್ ಅಧಿಕಾರ, ಐಶ್ವರ್ಯ ಕಂಡು ಅರಗಿಸಿಕೊಂಡ ಮಲ್ಲೇಶ್ ಸೋಲು, ಗೆಲುವು ಎಲ್ಲವನ್ನೂ ಸಮಾಧಾನ ಚಿತ್ತದಿಂದ ಹಗುರ ಮನದಿಂದ ಆಹ್ವಾದಿಸುತ್ತಾರೆ. ಎರಡು ಬಾರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ತಾಯಿ ನಡೆಸಿದ ಆಡಳಿತವನ್ನು ಹತ್ತಿರದಿಂದ ಕಂಡ ಮಲ್ಲೇಶ್ ಸಮಾಧಾನದಿಂದ ಮುನ್ನಡೆಯುವ ಮನೋಭಾವಕ್ಕೆ ಜೋತು ಬಿದ್ದಿದ್ದಾರೆ. ಹೀಗಾಗಿಯೇ ಎರಡು ಬಾರಿ ಸತತ ಸೋಲು ಕಂಡರೂ ಹಿಂಜರಿಯದೇ ಜನರೊಂದಿಗೆ ಇರಲು
ಸಾಧ್ಯವಾತು. ಎಂಬಿಎ ಪದವೀಧರ ಮಲ್ಲೇಶ್ ಯಶಸ್ವಿ ಉದ್ಯಮಿಯೂ ಹೌದು, ಆದ್ದರಿಂದಲೇ ರಾಜಕೀಯ, ವ್ಯಾಪಾರ, ಬದುಕು, ಜಯ-ಅಪಜಯ ಎಲ್ಲವನ್ನೂ ಸಮರ್ಪಕವಾಗಿ ಸದ್ದಿಲ್ಲದೆ ನಿರ್ವಹಿಸಿಕೊಂಡು ಹೋಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆಂದು ಪತ್ನಿ ಡಾ.ಮಂಜುಳಾ ಪ್ರತಿಕ್ರಿಯಿಸು ತ್ತಾರೆ.
ಬಿದ್ದಲ್ಲೇ ಎದ್ದ ಮಲ್ಲೇಶ್ ಬಂಗಾರಪೇಟೆ ಖುಷ್
ಬಂಗಾರಪೇಟೆ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು ಕಂಡಿದ್ದ ಮಲ್ಲೇಶ್ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಲೀಡ್ ಪಡೆಯುವ ಮೂಲಕ ಬಿದ್ದಲ್ಲೇ ಎದ್ದು ಸಾಧನೆಗೈದಿದ್ದಾರೆ. ಮಂಗಮ್ಮ ಅವರು ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದು ಇದೀಗ ಮಲ್ಲೇಶ್ ಸಂಸದರಾಗುವ ಮೂಲಕ ತಾಯಿಯ ಕನಸನ್ನು ನನಸು ಮಾಡಿದ್ದಾರೆ. ತಂದೆ ಮುನಿಸ್ವಾಮಿ ಅವರು ತಮ್ಮ ೪೨ ವಯಸ್ಸಿನಲ್ಲಿ ಮಗ ಮುಂದೆ ಎಂಪಿ ಆಗಬೇಕೆಂದು ಕನಸು ಕಂಡಿದ್ದು , ಅದೃಷ್ಟ ಎಂಬಂತೆ ೪೨ ವರ್ಷದ ಮಲ್ಲೇಶ್ ಇದೀಗ ತಂದೆಯ ಆಸೆ ಪೂರೈಸಿದ್ದಾರೆ!
ಕೆ.ಎಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದಾಗಿ ಬೆಂಬಲಿಗರು ಮತ್ತು ಅಭಿಮಾಣಿಗಳು ತಿರುಗಿಬಿದ್ದ ಪರಿಣಾಮ ನನ್ನ ಗೆಲುಗೆ
ಸ್ವಲ್ಪಮಟ್ಟಿನ ಸಹಾಯ ಆಗಿದ್ದು ನಿಜ, ಅಸಮಾಧಾನಿತ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ ಕೋರಿದ್ದೂ ಸತ್ಯ. ಆದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವ ಜತೆಗೆ ಕಾಂಗ್ರೆಸ್ ಜನಪ್ರತಿನಿಧಿಗಳ ಸಹಕಾರವನ್ನೂ ಪಡೆದುಕೊಂಡು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗು ತ್ತೇನೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ.
– ಎಂ.ಮಲ್ಲೇಶ್ ಬಾಬು ಸಂಸದರು