ನಿರ್ದೇಶಕರಾಗಿ ಮುಂದುವರಿಸಲು ಹೆಚ್ಚಿದ ಸಾರ್ವಜನಿಕ ಒತ್ತಡ
ವೈದ್ಯಲೋಕದಿಂದಲೂ ಒತ್ತಾಯ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ದೇಶದ ಏಕೈಕ ಬೃಹತ್ ಹೃದ್ರೋಗ ಚಿಕಿತ್ಸಾ ಆಸ್ಪತ್ರೆ ಯಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ್ ಅವರನ್ನೇ ಮುಂದುವರಿಸಬೇಕೆನ್ನುವ ವೈದ್ಯಲೋಕದ ಒತ್ತಾಯ ಹೆಚ್ಚಾಗಿದೆ.
ಅಷ್ಟೇ ಅಲ್ಲ. ಸಾರ್ವಜನಿಕರಿಂದ ಕೂಡ ಮಂಜುನಾಥ್ ಅವರೇ ನಿರ್ದೇಶಕರಾಗಿರ ಬೇಕೆನ್ನುವ ಆಗ್ರಹ ತೀವ್ರವಾಗಿದೆ. ಕಳೆದ ಅನೇಕ ವರ್ಷಗಳಿಂದ ನಿರ್ದೇಶಕರಾಗಿ ನಿಷ್ಕಳಂಕ ಸೇವೆ ಸಲ್ಲಿಸಿ ಸಾಮಾನ್ಯ ಸರಕಾರಿ ಹೃದ್ರೋಗ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಕೊಂಡೋಯ್ದಿರುವ ಮಂಜುನಾಥ್ ಅವರೇ ಮುತ್ತೆ ಮುಂದುವರಿಯಬೇಕಿದೆ.
ಸಂಸ್ಥೆಯನ್ನು ಉಳಿಸಿ ಬೆಳೆಸುವ ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಮಂಜು ನಾಥ್ ಅವರನ್ನೇ ಮುಂದುವರಿಸುವ ನಿರ್ಧಾರವಾಗಬೇಕೆಂದು ಶಾಸಕರು, ಅಧಿಕಾರಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರು ಹಾಗೂ ಸಾರ್ವಜನಿಕರಿಂದ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿವೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿದ್ದು, ಸದ್ಯದ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಇವರೇ ಏಕೆ ಇರಬೇಕು?: ಅಚ್ಚರಿ ಎಂದರೆ ಡಾ.ಮಂಜುನಾಥ್ ಅವರು ನಿತ್ಯ ಕರ್ತವ್ಯಕ್ಕೆ ಹಾಜರಾಗುವಾಗ ಮೊದಲು ಪರಿಶೀಲಿಸುವುದು ಶೌಚಾಲಯಗಳನ್ನು. ಏಕೆಂದರೆ, ಶೌಚಾ ಲಯ ಸ್ವಚ್ಛತೆ, ಒಟ್ಟಾರೆ ಆಸ್ಪತ್ರೆ ಸ್ವಚ್ಛತೆಯ ಪ್ರತಿಬಿಂಬ ಎನ್ನುವುದು ಇವರ ನಂಬಿಕೆ. ಆಸ್ಪತ್ರೆಯ ಶೌಚಾಲಯಗಳು ಶಸ್ತ್ರ ಚಿಕಿತ್ಸಾ ಕೊಠಡಿಯಷ್ಟೇ ಸ್ವಚ್ಛವಾಗಿರಬೇಕು ಎಂದು ವಾದಿಸುತ್ತಾರೆ. ಅದೇ ರೀತಿ ಆಸ್ಪತ್ರೆಯನ್ನು ನಿತ್ಯ ಚೊಕ್ಕವಾಗಿರುವಂತೆ ಮಾಡಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಜಯದೇವ ಸಂಸ್ಧೆ ಕಳೆದ ೧೨ ವರ್ಷಗಳಿಂದ ಶೇ.೫೦೦ರಷ್ಟು ಪ್ರಗತಿ ಸಾಧಿಸಿದ ದೇಶದ ಏಕೈಕ ಸರಕಾರಿ ಆಸ್ಪತ್ರೆಯಾಗಿದೆ. ಇದೀಗ ಈ ಆಸ್ಪತ್ರೆ ಬರೀ ಸ್ಥಳೀಯರು ಮಾತ್ರವಲ್ಲದೆ, ಮಧ್ಯಮವರ್ಗದವರು ಹಾಗೂ ಶ್ರೀಮಂತರು ಮತ್ತು ವಿದೇಶಿಯರ ಅಚ್ಚುಮೆಚ್ಚಿನ ಆಸ್ಪತ್ರೆಯಾಗಿದೆ.
ಮಂಜುನಾಥ್ ಅವರ ಈ ಅತ್ಯುತ್ತಮ ಸೇವೆ ಗುರುತಿಸಿ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಂದರೆ ಇವರು ಸಾರ್ವಜನಿಕರಲ್ಲಿ ಸರಕಾರಿ ಆಸ್ಪತ್ರೆ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳುಮತ್ತು ಉಪೇಕ್ಷೆ ಭಾವನೆ ಯನ್ನು ತೊಡೆದು ಸರಕಾರಿ ಆಸ್ಪತ್ರೆ ಎಂದರೆ ಯಾವುದೇ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲ ಎನ್ನುವಂತೆ ನಿರ್ಮಿಸಿ ಸಾಧಿಸಿ ತೋರಿಸಿದ್ದಾರೆ.
ಇಂಥವರು ಮುಂದುವರಿಯುವುದು ಅನಿವಾರ್ಯ ಎನ್ನುವ ಚರ್ಚೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಇದರ ಮಧ್ಯೆ,
ಕಲಬುರ್ಗಿಯಲ್ಲಿ ಸದ್ಯ ಇರುವ ಆಸ್ಪತ್ರೆಯನ್ನು ೨೫೦ ಹಾಸಿಗೆ ಸಾಮರ್ಥ್ಯಕ್ಕೆ ವಿಸ್ತರಿಸುವ ಕಾಮಗಾರಿ ಸದ್ಯದ ಪೂರ್ಣಗೊಳ್ಳ ಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸಿನ ಯೋಜನೆಯಾಗಿ ಬೆಳಗಾವಿಯಲ್ಲೂ ೩೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನೂ ನಿರ್ಮಿಸುವ ಕೆಲಸ ಆಗಬೇಕಿದೆ.
ಆದ್ದರಿಂದ ಪ್ರಗತಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಸಿಗುವಂತೆ ಮಾಡಲು ಮಂಜುನಾಥ್ ಅವರೇ ಇನ್ನೂ ಇರಬೇಕೆನ್ನುವ ಒತ್ತಡ ಕೂಡ ಇದೆ. ಹೊಸ ಪರಿಕಲ್ಪನೆ ಎನ್ನುವಂತೆ ಜಯದೇವ ಆಸ್ಪತ್ರೆಯ ಸೇವೆ ಎಡೆ ಲಭ್ಯವಾಗಬೇಕೆಂದು ವಿವಿಧ ಕಡೆ ಜಯದೇವ ಸ್ಯಾಟಲೈಟ್ ಆಸ್ಪತ್ರೆ ಸ್ಥಾಪಿಸುವ ಪ್ರಯತ್ನ ನಡೆಸಲಾಗಿದೆ. ಸದ್ಯಕ್ಕೆ ಮಶ್ವರಂ ನ ಕೆ ಸಿ ಜನರಲ್ ಆಸ್ಪತ್ರೆ ಯಲ್ಲಿ ಈ ಉಪ ಕೇಂದ್ರ ಆರಂಭಿಸಲಾಗುತ್ತಿದೆ. ಇಂಥ ಅನೇಕ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳಲು ಮಂಜುನಾಥ್ ಅವರೇ ನಿರ್ದೇಶಕರಾಗಿ ಇರುವುದು ಅನಿವಾರ್ಯ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ.
ಅಷ್ಟಕ್ಕೂ, ಸೇವಾ ನಿಯಮ ಹೇಳುವುದೇನು ?
ಮಂಜುನಾಥ್ ಅವರು ಈಗಾಗಲೇ ಸೇವೆಯಿಂದ ನಿವೃತ್ತಿಯಾಗಿದ್ದರೂ ಅವರು ನಿರ್ದೇಶಕರಾಗಿ ತಮ್ಮ ಹೃದ್ರೋಗಿಗಳ ಸೇವಾ ಕಾರ್ಯ ಮುಂದುವರಿಸಲು ಕಾನೂನು ಎಲ್ಲ ರೀತಿಯ ಅವಕಾಶವಿದೆ. ವೈದ್ಯಕೀಯ ಕ್ಷೇತ್ರದ ಸಾಧಕರು, ಅನುಭವಿಗಳ ಸೇವೆ ಯನ್ನು ಬಳಸಿಕೊಳ್ಳಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಶಿಕ್ಷಣ ಮಂಡಳಿ ೨೦೨೨ರ ಫೆಬ್ರವರಿಯಲ್ಲಿ ಒಂದು ಸ್ಪಷ್ಟ ನಿಯಮಗಳು ಅಧಿಸೂಚನೆಯನ್ನೂ ಪ್ರಕಟಿಸಿದೆ.
ಇದರಲ್ಲಿ ವೈದ್ಯಕೀಯ ಸಂಸ್ಥೆಗಳ ನೇಮಕಕ್ಕೆ ಸಂಬಂಧಿಸಿದಂತೆ ಹೇಳಿರುವ ನಿಯಮಗಳ ಪ್ರಕಾರ ವೈದ್ಯಕೀಯ ಸಂಸ್ಥೆಗಳು,
ಕಾಲೇಜಗಳ ನಿರ್ದೇಶಕರು, ಮುಖ್ಯಸ್ಥರ ಹುದ್ದೆಗಳಿಗೆ ನಿವೃತ್ತಿ ನಂತರದ ಅಂದರೆ ೭೦ ವರ್ಷಗಳ ವಯಸ್ಸಿನವರೆಗೂ ನೇಮಕ ಮಾಡಲು ಅವಕಾಶವಿದೆ. ಇದರ ಪ್ರಕಾರ ಮಂಜುನಾಥ್ ಅವರು ಜಯದೇವ ಆಸ್ಪತ್ರೆಗೆ ನಿರ್ದೇಶಕರಾಗಿ ಮುಂದುವರಿಯಲು ಯಾವುದೇ ಕಾನೂನು ಅಡ್ಡಿ ಬರುವುದಿಲ್ಲ. ಅಲ್ಲದೆ ಇದೇ ನಿಯಮದ ಪ್ರಕಾರ ಈಗಾಗಲೇ ಅನೇಕ ನಿವೃತ್ತ ನಿರ್ದೇಶಕರು ನಾನಾ ವೈದ್ಯಕೀಯ ಸ್ವಾಯತ್ತ ಸಂಸ್ಥೆಗಳಲ್ಲಿ ನಿರ್ದೇಶಕರಾಗಿರುವುದೇ ಉದಾಹರಣೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.