ನಿಯಮಾವಳಿಯ ಕುಂಟು ನೆಪಕ್ಕೆ ಭಗ್ನಗೊಂಡ ಕನಸು
ತಂದೆಯ ಸಾವಿನ ನೋವನ್ನು ಮರೆತು ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿ
ಅಪರ್ಣಾ ಎ.ಎಸ್ ಬೆಂಗಳೂರು
ನೂರಾರು ಕನಸೊತ್ತು ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ದೂರ ಊರಿನಿಂದ ತಂದೆಯ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಬಂದಿದ್ದ ಅಭ್ಯರ್ಥಿಗೆ ‘ನಿಯಮಾವಳಿ’ ಹೆಸರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಫುಲ್ ಸ್ಲೀವ್ ಟೀ ಶರ್ಟ್ ಹಾಕಿಕೊಂಡು ಬಂದಿದ್ದ ಎನ್ನುವ ಕಾರಣಕ್ಕೆ ಅಭ್ಯರ್ಥಿಗೆ ಪ್ರವೇಶ ನೀಡಿಲ್ಲ. ಬದಲಿ ಶರ್ಟ್ ಧರಿಸಿ ಆಗಮಿಸಿದರೂ, ‘ಸಮಯ ಮುಗಿದಿದೆ’ ಎನ್ನುವ ಕಾರಣ ನೀಡಿ ಪ್ರವೇಶಕ್ಕೆ ಅವಕಾಶವನ್ನು ಅಧಿಕಾರಿಗಳು ನೀಡಿಲ್ಲ. ಈ ವೇಳೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದರೂ, ಅಭ್ಯರ್ಥಿಗೆ ಪ್ರವೇಶ ನೀಡದಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಪಿಎಸ್ಸಿ ಪರೀಕ್ಷೆ ತಗೆದುಕೊಂಡಿದ್ದ ಅಭ್ಯರ್ಥಿ ಹರಿಶಂಕರ್ ನಾಯ್ಕ್ ಅವರ ತಂದೆ ಬಹುದಿನದ ಅನಾರೋಗ್ಯದಿಂದ ಶನಿವಾರ ಕೊನೆಯುಸಿರು ಎಳೆದಿದ್ದರು. ತಂದೆಯ ಸಾವಿನ ನಡುವೆಯೂ, ಪರೀಕ್ಷೆಗೆ ಹಾಜರಾಗಬೇಕು ಎನ್ನುವ ಉದ್ದೇಶದಿಂದ, ಶನಿವಾರ ರಾತ್ರಿ ವೇಳೆಗೆ ಎಲ್ಲ ಕಾರ್ಯವನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ಆಗಮಿಸಿದ್ದರು. ೧೦ ಗಂಟೆಗೆ ಆರಂಭವಾಗಲಿದ್ದ ಪರೀಕ್ಷೆಗೆ, ೯.೨೦ ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಹರಿಶಂಕರ್ ನಾಯ್ಕ್ ಅವರನ್ನು ಪೂರ್ಣ ತೋಳಿನ ಅಂಗಿ ಹಾಕಿದ ಕಾರಣಕ್ಕೆ ಅವಕಾಶ ನೀಡಿರಲಿಲ್ಲ.
ಪ್ರವೇಶ ನೀಡದೇ ಇದ್ದದ್ದು ಏಕೆ?: ತಂದೆಯ ತಿಥಿ ಮುಗಿಸಿ ಬಂದಿದ್ದು, ಪೂರ್ಣ ತೋಳಿನ ಟೀಶರ್ಟ್ ಧರಿಸಿದ್ದರು. ಪರೀಕ್ಷಾ ನಿಯಮಾವಳಿಯ ಪ್ರಕಾರ
ತುಂಬು ತೋಳಿನ ಶರ್ಟ್ ಧರಿಸುವಂತಿರಲಿಲ್ಲ. ಹರಿಶಂಕರ್ ನಾಯ್ಕ್ ಅವರು ತುಂಬುತೋಳಿನ ಟೀ ಶರ್ಟ್ ಧರಿಸಿದ್ದು, ಪರೀಕ್ಷಾ ಕೇಂದ್ರದ ಅಧಿಕಾರಿ ಗಳು ಈ ಕಾರಣದಿಂದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಬಳಿಕ ಮಾರುಕಟ್ಟೆಗೆ ತೆರಳಿ ಅರ್ಧ ತೋಳಿನ ಬಟ್ಟೆ ಧರಿಸಿ ಬಂದಾಗ ಕೆಲ ನಿಮಿಷಗಳು ತಡವಾಗಿದೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಅವರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಆದರೆ ಅಭ್ಯರ್ಥಿ ಹರಿಶಂಕರ್ ಹಾಗೂ ಪೃಥ್ವಿ ಅವರ ಪ್ರಕಾರ ಸಿಬ್ಬಂದಿಗಳು ಅವಕಾಶ ನೀಡಲಿಲ್ಲವೆಂದು ಅರ್ಧ ತೋಳಿನ ಅಂಗಿ ಧರಿಸಿ ವಾಪಾಸು
ಬಂದಾಗಲೂ ಪರೀಕ್ಷೆ ಆರಂಭವಾಗಿರಲಿಲ್ಲ. ಆರಂಭಕ್ಕೆ ಐದು ನಿಮಿಷ ಅವಕಾಶವಿದ್ದರೂ, ಸಮಯ ಮುಗಿದಿದೆ ಎಂದು ಪ್ರವೇಶ ನೀಡಲಿಲ್ಲ. ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಿನ ಪರೀಕ್ಷೆ ವೇಳೆಗೆ ವಯೋಮಿತಿ ಸಮಸ್ಯೆಯಾಗುತ್ತದೆ. ಅಧಿಕಾರಿಗಳ ನಡೆಯಿಂದ ನಮ್ಮ ಜೀವನವೇ ಹಾಳಾ ಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಯಿಂದ ಅರೆಬೆತ್ತಲೆ ಪ್ರತಿಭಟನೆ
ಪರೀಕ್ಷೆ ಬರೆಯಲು ಅವಕಾಶ ನೀಡದ ಹಿನ್ನೆಲೆ ವಯಸ್ಸಿನ ಮಿತಿಯಿಂದಾಗಿ ಇನ್ನು ಮುಂದೆ ಬರೆಯಲು ಸಾಧ್ಯವಾಗುವುದಿಲ್ಲ. ಬಟ್ಟೆಯ ಕಾರಣ ನೀಡಿ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಇದರಿಂದಾಗಿ ನಮಗೆ ಅನ್ಯಾಯವಾಗಿದೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಭ್ಯರ್ಥಿ ಹರಿಶಂಕರ್ ನಾಯ್ಕ್
ಬೆಂಗಳೂರಿನ ಮೈಸೂರು ರಸ್ತೆಯ ಸಂಯುಕ್ತ ಪದವಿ ಪೂರ್ವ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿಗಳು ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರಹಾಕಿದರು.
*
ನಾನು ಹಾಗೂ ನನ್ನ ಜತೆಗೆ ಪೃಥ್ವಿ ಎನ್ನುವವರು ಕೆಪಿಎಸ್ಸಿ ಪರೀಕ್ಷೆಗೆ ಆಗಮಿಸಿದ್ದೆವು. ಪೂರ್ಣ ಸ್ಲೀವ್ ಅಂಗಿ ಧರಿಸಿದ್ದರಿಂದ ಅವಕಾಶ ನೀಡಲಿಲ್ಲ. ಬಳಿಕ ಪರೀಕ್ಷೆ ಆರಂಭಕ್ಕೆ ಐದು ನಿಮಿಷವಿದ್ದಾಗ ಅರ್ಧರ ತೋಳಿನ ಅಂಗಿ ಧರಿಸಿ ಬಂದರೂ, ಅವಕಾಶ ನೀಡಲಿಲ್ಲ. ಅವಕಾಶ ನೀಡುವಂತೆ ಕಾಲಿಗೆ ಬಿದ್ದರೂ ಅವಕಾಶ ನೀಡಿಲ್ಲ. ಮೈಸೂರಿನ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಅವರ ಬಳಿ ಮನವಿ ಮಾಡಿದಾಗ ಅವರು ಅಲ್ಲಿನ ಅಧಿಕಾರಿ ಗಳೊಂದಿಗೆ ಮಾತನಾಡಿದರೂ ಅವಕಾಶ ನೀಡಿಲ್ಲ. ನಮಗೆ ಅನ್ಯಾಯವಾಗಿದೆ.
-ಹರಿಶಂಕರ್ ನಾಯ್ಕ, ಕೆಪಿಎಸ್ಸಿ ಅಭ್ಯರ್ಥಿ