ರಾಜ್ಯ ನಾಯಕರ ಶಿಫಾರಸಿಗೆ ಸಿಗದ ಮನ್ನಣೆ, ಪ್ರಬಲ ಸಮುದಾಯವೇ ಮೋದಿ ಗುರಿ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ದೇಶದ ಹ್ಯಾಟ್ರಿಕ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ರಾಜ್ಯದ ಐವರು ಸಂಸದರಿಗೆ ಮಂತ್ರಿ ಸ್ಥಾನ ಲಭಿಸಿದ್ದು, ಅವರ
ಆಯ್ಕೆಗಳ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರವೇ ಅಡಗಿರುವುದು ಗೋಚರವಾಗುತ್ತಿದೆ.
ರಾಜ್ಯಸಭೆಗೆ ಕರ್ನಾಟಕದಿಂದ ಹೆಸರಿಗಷ್ಟೇ ಎನ್ನುವಂತೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಲೋಕಸಭಾ ಸದಸ್ಯರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಎಚ್.ಡಿ ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಎಲ್ಲ ಸಂಸದರನ್ನು ಮೋದಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಒಂದು ದೊಡ್ಡ ರಾಜಕೀಯ ಲೆಕ್ಕಾಚಾರವೇ ಇದೆ
ಎನ್ನುವುದು ಸ್ಪಷ್ಟ. ಏಕೆಂದರೆ ಸದ್ಯ ರಾಜ್ಯದಿಂದ ಮಂತ್ರಿಯಾಗಿರುವ ಈ ಐವರಲ್ಲಿ ಯಾರೊಬ್ಬರೂ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ನಾಯಕರಿಂದ
ಶಿಫಾರಸುಗೊಂಡವರಲ್ಲ. ಹಾಗೆಯೇ ಒತ್ತಡ ಮತ್ತು ಪ್ರಭಾವ ಬಳಸಿ ಆಯ್ಕೆ ಮಾಡಿದ್ದೂ ಅಲ್ಲ. ಅಂದರೆ ಈ ಎಲ್ಲಾ ಐದು ಆಯ್ಕೆಗಳು ಪಕ್ಕಾ ಹೈಕಮಾಂಡ್ ಅಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠ ಅಮಿತ್ ಶಾ ಅವರ ನೇರ ಆಯ್ಕೆಯಾಗಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ ಇಂಥವರನ್ನು ಮಂತ್ರಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ನಾಯಕರು ಒತ್ತಡ ಹೇರಿದ್ದ ಯಾರೊಬ್ಬರೂ ಮಂತ್ರಿಯಾಗಿಲ್ಲ
ಎನ್ನಲಾ ಗಿದ್ದು, ಇದರೊಂದಿಗೆ ಪಕ್ಷವನ್ನು ವಿಭಿನ್ನ ದಿಕ್ಕಿನಲ್ಲಿ ಸಂಘಟನೆ ಮಾಡುವ ಯತ್ನ ನಡೆದಿದೆ ಎಂದು ತಿಳಿದು ಬಂದಿದೆ.
ಅಂದರೆ ಈತನಕ ಪಕ್ಷವನ್ನು ಹೆಚ್ಚಾಗಿ ಲಿಂಗಾಯತ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಮಾಡುತ್ತಿದ್ದ ವರಿಷ್ಠರು ಇನ್ನೂ ಮುಂದೆ ಒಕ್ಕಲಿಗರನ್ನೂ ಗಮನದಲ್ಲಿಟ್ಟುಕೊಂಡು ಮುನ್ನಡೆ ಯುವ ನೀಡಿದ್ದಾರೆ. ಹೀಗಾಗಿ ಸಂಪುಟದಲ್ಲಿ ರಾಜ್ಯದಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಸಂಸದರಿಗೆ ಸದ್ಯಕ್ಕೆ ಯಾವುದೇ ಆದ್ಯತೆ ಸಿಕ್ಕಿಲ್ಲ ಎನ್ನಲಾಗಿದೆ. ಪಕ್ಷದ ವರಿಷ್ಠರ ಈ ನಡೆಯನ್ನು ಗಮನಿಸಿದರೆ ರಾಜ್ಯದಲ್ಲಿ ಪ್ರಬಲ ಸಮುದಾಯ ಗಳನ್ನು ತನ್ನ ತೆಕ್ಕೆಗೆ ತಂದುಕೊಳ್ಳುವುದಲ್ಲದೆ ಕುಟುಂಬ ಮತ್ತು ಬಣ ಗಳಿಗೆ ಸೀಮಿತವಾದ ಪಕ್ಷವನ್ನು ಪರ್ಯಾಯ ವ್ಯವಸ್ಥೆಯೊಂದಿಗೆ
ಬಲಗೊಳಿಸುವ ತಂತ್ರವು ಅಡಗಿದೆ ಎಂದು ಬಿಜೆಪಿ ದೆಹಲಿ ಕಚೇರಿ ಮೂಲಗಳು ತಿಳಿಸಿವೆ.
ಯಾವ ಕಾರಣಕ್ಕೆ ಯಾರಿಗೆ ಮಂತ್ರಿಗಿರಿ?
ಧಾರವಾಡದ ಪ್ರಹ್ಲಾದ ಜೋಶಿ ಸಂಪುಟದಲ್ಲಿ ಸ್ಥಾನ ಪಡೆಯುವುದರಲ್ಲಿ ಪ್ರಥಮ ಆದ್ಯತೆ ಪಡೆದಿದ್ದಾರೆ. ಹಾಗೆ ನೋಡಿದರೆ ಧಾರವಾಡ ಭಾಗದಲ್ಲಿ ಲಿಂಗಾಯತ ಸಮಾಜಕ್ಕೆ ಆದ್ಯತೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ದೊರಕಿಸುವ ಪ್ರಯತ್ನ ನಡೆದಿತ್ತು. ಆದರೆ ಹೈಕಮಾಂಡ್ ಸತತ ೫ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಜೋಶಿ ಅವರಿಗೆ ಮಣೆಹಾಕಿದೆ. ಆನಂತರದಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಜಯ ಸಾಧಿಸಿರುವ ಶೋಭಾ ಕರಂದ್ಲಾಜೆ ಅವರಿಗೆ ಹೈಕಮಾಂಡ್ ಆದ್ಯತೆ ನೀಡಿದೆ. ಇವರಿಬ್ಬರ ಆಯ್ಕೆ ವಿಚಾರದಲ್ಲಿ ಪಕ್ಷದ
ಕಾರ್ಯಬದ್ಧತೆ ಹಾಗೂ ಮೋದಿ ಮತ್ತು ಅಮಿತ್ ಶಾ ಅವರ ಬಗೆಗಿನ ನಿಷ್ಠೆ ಹೆಚ್ಚು ಕೆಲಸ ಮಾಡಿದೆ ಎಂದು ಹೇಳಲಾಗಿದೆ.
ಉಳಿದಂತೆ ಎನ್.ಡಿ.ಎ ಪ್ರಾತಿನಿಧ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮಂತ್ರಿಸ್ಥಾನ ನೀಡಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆಸ್ ನಿಂದ ಇನ್ನಷ್ಟು ಅಂತರ ಕಾಯ್ದುಕೊಳ್ಳುವಂತೆ ಮಾಡುವ ಒಳಮರ್ಮ ಅಡಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿzರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಿ ಬಹಿರಂಗ ಸಮರ ಸಾರಿದ್ದ ವಿ. ಸೋಮಣ್ಣ ಅವರಿಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವ ಸಂದರ್ಭದಲ್ಲಿ ಮಂತ್ರಿಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಲಿಂಗಾಯತ ಸಮುದಾಯದಿಂದ ಅನೇಕ ಸಂಸದರು ಸಮರ್ಥರಿದ್ದರೂ ಅವರನ್ನೆಲ್ಲ ಪಕ್ಕಕ್ಕಿರಿಸಿ ಸೋಮಣ್ಣ ಅವರಿಗೆ ಆದ್ಯತೆ ನೀಡುವುದು ಸಮುದಾಯದಲ್ಲಿ ಪರ್ಯಾಯ ನಾಯಕತ್ವ ರೂಪಿಸುವ ಉದ್ದೇಶವಿದೆ ಎನ್ನುವ ಮಾತನ್ನು ಅಲ್ಲಗಳೆಯಲಾಗದು ಎಂದು ಪಕ್ಷದ ಮುಖಂಡರೆ ಹೇಳಿದ್ದಾರೆ.
ಮಾಜಿ ಸಿಎಂಗಳು ಯಾಕೆ ಮೂಲೆಗೆ ?
ಕೇಂದ್ರಮಂತ್ರಿಯಾಗುವುದು ಖಚಿತ ಎಂದು ನಿರೀಕ್ಷೆ ಮಾಡಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ
ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಜಗದೀಶ್ ಶೆಟ್ಟರ್ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದು ಹಾಗೂ ಬೊಮ್ಮಾಯಿ ಅವರ ಹಿಂದೆ ರಾಜ್ಯ ನಾಯಕರ ಒತ್ತಾಯ ಒತ್ತಾಸೆಯಿರುವುದು ಕೂಡ ಮಂತ್ರಿಸ್ಥಾನ ಕೈತಪ್ಪಲು ಕಾರಣ ಎಂದು ಹೇಳಲಾಗಿದೆ. ಉಳಿದಂತೆ ಗೋವಿಂದ ಕಾರಜೋಳ ಮತ್ತು ಬಿ .ವೈ ರಾಘವೇಂದ್ರ ಅವರ ವೈ-ಲ್ಯಕ್ಕೂ ರಾಜ ನಾಯಕರ ಒತ್ತಡವೇ ಕಾರಣ ಎಂದು ತಿಳಿದುಬಂದಿದೆ. ಆದರೆ ರಾಜ್ಯದ ಐವರು ಸಚಿವರ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಆದ್ಯತೆ ನೀಡದಿರುವುದು ಪಕ್ಷದಲ್ಲಿ ಕೊಂಚ ಅಸಮಾಧಾನ ಮತ್ತು ಅಪಸ್ವರಕ್ಕೆ ದಾರಿಯಾಗಬಹುದು ಎಂದು ಹೇಳಲಾಗುತ್ತಿದೆ.