ಮನೆಯವರ ಒಣ ಹಾಕಿದ್ದ ಟವಲ್ ಮುಖಕ್ಕೆ ಸುತ್ತಿಕೊಂಡು ಕಳ್ಳತನ
ಮಂಜುನಾಥ ಕೆ.ಬೆಂಗಳೂರು
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತಿದೆ. ಆ ಮಾತು ಈ ಪ್ರಕರಣದಲ್ಲಿ ಅಕ್ಷರಶಃ ನಿಜವಾಗಿದೆ. ಸುಮಾರು ೩೫ ವರ್ಷಗಳ ಕಾಲ ಸಾಕಷ್ಟು ಶ್ರಮಪಟ್ಟು ಕಲಾ ಕ್ಷೇತ್ರದಲ್ಲಿ ಸಾಧನೆಗೈದು ಮಹಿಳೆಯೊಬ್ಬರು ಪಡೆದಿದ್ದ ರಾಷ್ಟ್ರ ಪಶಸ್ತಿ, ಚಿನ್ನದ ಪದಕಗಳನ್ನೇ ಖದೀಮರು ಕದ್ದೊಯ್ದಿದ್ದಾರೆ. ಹೌದು, ರಾಷ್ಟ್ರ ಪ್ರಶಸ್ತಿ ವಿಜೇತೆ ಹೇಮ ಶೇಖರ್ ಅವರ ಮನೆ ನಡೆದ ಕಳ್ಳತನದಲ್ಲಿ ಚಿನ್ನಾಭರಣದ ಜತೆಗೆ ಜೀವಮಾನದ ಸಾಧನೆ ಮಾಡಿ ಪಡೆದ ರಾಷ್ಟ್ರ ಪ್ರಶಸ್ತಿಯನ್ನೆ ಕಳ್ಳರು ದೋಚಿದ್ದಾರೆ.
ಮನೆಯವರು ಇಲ್ಲದೇ ಇರುವುದನ್ನು ಗಮನಿಸಿ ಹೊಂಚು ಹಾಕಿ ಕುಳಿತಿದ್ದ ಖದೀಮರು ಮನೆಯ ಟೆರೇಸ್ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಚಿನ್ನಾಭರಣ ಕಳ್ಳತನ ಮಾಡಿದಲ್ಲದೆ, ಹೇಮಶೇಖರ್ ರಾಷ್ಟ್ರಪತಿಗಳಿಂದ ಪಡೆದಿದ್ದ ಚಿನ್ನದ ಪದಕವನ್ನೂ ಕಳವು ಮಾಡಿ ಪರಾರಿಯಾಗಿದ್ದಾರೆ.
ಏನಿದು ಪ್ರಕರಣ?: ರಾಷ್ಟ್ರ ಪ್ರಶಸ್ತಿ ವಿಜೇತರಾದ ಹೇಮ ಶೇಖರ್ ಮತ್ತು ಅವರ ಪತಿ ಟಿ.ಎಲ್. ಚಂದ್ರಶೇಖರ್ರಯ್ಯ ಕಾರ್ಯಕ್ರಮ ನಿಮಿತ್ತ ಮಾ. ೫ ರಂದು ಕೋಣನ ಕುಂಟೆಯ ಸುಪ್ರಜಾನಗರದಲ್ಲಿರುವ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ತೆರಳಿದ್ದು, ಮಾ. ೧೫ರಂದು ಮಧ್ಯಾಹ್ನ ವಾಪಸಾದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಕೋಣನಕುಂಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿ, ಬೆರಳಚ್ಚು ಪಡೆದು ಮತ್ತು ಸ್ಥಳ ಮಹಜರು ನಡೆಸಿ ಅಕ್ಕ ಪಕ್ಕದ ಮನೆಯವರ ಹೇಳಿಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಹೇಮಶೇಖರ್ ಚಿನ್ನದ ಪದಕ ಕಳವು: ಹೇಮಶೇಖರ್ ಅವರು ಕರಕುಶಲ-ಬಾಟಿಕ್ ಮತ್ತು ಟೈ ಅಂಡ್ ಡೈ ಕಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿ ದ್ದಾರೆ. ಬಾಟಿಕ್ ಮತ್ತು ಟೈ ಅಂಡ್ ಡೈ ಕಲಾ ವಿಭಾಗದಲ್ಲಿ ೨೦೦೨ರಲ್ಲಿ ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಹಾಗೂ ೨೦೧೪ರಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಶಿಲ್ಪ ಗುರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದು ಕರಕುಶಲಕರ್ಮಿಗೆ ಕೇಂದ್ರ ಸರಕಾರ ಕೊಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇದನ್ನು ಬಾಟಿಕ್ ಟೈ ಮತ್ತು ಡೈ ಕಲೆಗೆ ಪಡೆದ ಮೊದಲ ವ್ಯಕ್ತಿ ಮತ್ತು ಮಹಿಳೆ ಹೇಮಶೇಖರ್. ೧೯೯೫ ರಾಜ್ಯ ಪ್ರಶಸ್ತಿ, ೧೯೯೪ ರಲ್ಲಿ ರಾಜ್ಯ ಮೆರಿಟ್ ಸರ್ಟಿಫಿಕೆಟ್ ಸೇರಿ ದಂತೆ ಹಲವು ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ. ಇವೆಲ್ಲವನ್ನೂ ಕಳ್ಳರು ದೋಚಿದ್ದಾರೆ. ಪೊಲೀಸರು ಸ್ಥಳೀಯ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ಪರಿಶೀಲನೆ ನಡೆಸಿದ್ದು, ಕಳ್ಳರು ಪಕ್ಕದ ಮನೆಯ ಮಹಡಿಯ ಮೂಲಕ ಟೆರೇಸ್ಗೆ ಬಂದು ಅಲ್ಲಿದ್ದ ಗೇಟ್ ಬೀಗ ಒಡೆದು, ನಂತರ ಮನೆಗಳ ಬಾಗಿಲುಗಳನ್ನು ಮೀಟಿ ಕಳ್ಳತನ ಮಾಡಿದ್ದಾರೆ.
ಕಳ್ಳರು ಬರುವಾಗ ಪಕ್ಕದ ಮನೆ ಯವರು ಒಣ ಹಾಕಿದ್ದ ಟವಲ್ಅನ್ನು ಮುಖಕ್ಕೆ ಸುತ್ತಿಕೊಂಡು ಬಂದಿದ್ದು, ಅದನ್ನು ಮನೆಯ ರೈಲಿಂಗ್ಸ್ ಮೇಲೆ ಎಸೆದು ಹೋಗಿದ್ದಾರೆ ಎಂದು ಹೇಮಶೇಖರ್ ದಂಪತಿ ತಿಳಿಸಿದ್ದಾರೆ.
***
ಚಿನ್ನಾಭರಣ ಕಳೆದು ಹೋಗಿದಕ್ಕೆ ಸ್ವಲ್ಪ ಬೇಸವಾಗಿದೆ. ಆದರೆ ಜೀವಮಾನದ ಸಾಧನೆ ಮಾಡಿ ಪಡೆದ ರಾಷ್ಟ್ರ ಪ್ರಶಸ್ತಿಯ ಚಿನ್ನದ ಪದಕ ಕಳೆದುಕೊಂಡಿರುವುದು ತುಂಬಾ ದುಃಖವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಅಮೂಲ್ಯವಾದ ರಾಷ್ಟ್ರಪತಿಗಳು ನೀಡಿದ್ದ ಚಿನ್ನದ ಪದಕವನ್ನು ಮತ್ತೆ ಸಿಗುವಂತೆ ಮಾಡಬೇಕು.
– ಹೇಮಶೇಖರ್ ರಾಷ್ಟ್ರಪ್ರಶಸ್ತಿ ಪುರಸ್ಕೃತರು
ಏನೇನು ಕಳ್ಳತನ?
? ೨೨ ಗ್ರಾಂನ ಚಿನ್ನದ ಪದಕ
(ರಾಷ್ಟ್ರ ಪ್ರಶಸ್ತಿ)
? ಸುಮಾರು ೨೦೦ ಗ್ರಾಂ
ಚಿನ್ನಾಭರಣ
? ೨.ಕೆ.ಜಿಯಷ್ಟು ಬೆಳ್ಳಿ
ಸಾಮಾಗ್ರಿಗಳು
? ೮೫ ಸಾವಿರ ನಗದು