ಫೆಬ್ರವರಿಗೆ ಮಂತ್ರಿಗಳ ಮೌಲ್ಯಮಾಪನ, ನಂತರ ಪುನಾರಚನೆ?
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ನಡೆಯುವುದು ದಿಟ. ಆದರೆ ಸದ್ಯಕ್ಕಲ್ಲ ! ಮುಂದಿನ ವರ್ಷ ಫೆಬ್ರವರಿ 2ನೇ ವಾರದ
ವೇಳೆಗೆ ಸಂಪುಟಕ್ಕೆ ದೊಡ್ಡ ಸರ್ಜರಿಯೇ ನಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಅನೇಕ ದಿನಗಳಿಂದ ಸಂಪುಟ ಪುನಾರಚನೆ ಪ್ರಸ್ತಾಪ ಪಕ್ಷದೊಳಗೆ ಆಗಾಗ ಮುನ್ನೆಲೆಗೆ ಬರುತ್ತಾ ಇತ್ತು.
ಅದರಲ್ಲೂ ೩ ಕ್ಷೇತ್ರಗಳ ಉಪಚುನಾವಣೆ ನಂತರ ಸಂಪುಟ ಪುನಾರಚನೆ ಮಾಡಲು ಪಕ್ಷದ ನಾಯಕರು ಚಿಂತಿಸಿದ್ದರು. ಆದರೆ ಸಂಪುಟ ಪುನಾರಚನೆ ಎನ್ನುವುದು ಸದ್ಯಕ್ಕೆ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ ಎನ್ನುವ ಕಾರಣಕ್ಕೆ ಫೆಬ್ರವರಿ ಅಂತ್ಯದ ತನಕ ಈ ಪ್ರಸ್ತಾಪವನ್ನೇ ಮುಂದೂಡುವುದು ಸೂಕ್ತ ಎಂದು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪಕ್ಷ ಹೈಕಮಾಂಡ್ ಸಲಹೆ ಸೂಚನೆಗಳು ಕೂಡ ಕಾರಣ ಎಂದು ತಿಳಿದು ಬಂದಿದೆ.
ಇದರೊಂದಿಗೆ ಮಾಜಿ ಸಚಿವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಸ್ತಾಪ ಕೂಡ ಮುಂದೆ ಹೋಗಿದೆ ಎನ್ನಲಾಗಿದ್ದು,
ಫೆಬ್ರವರಿ ಸಮಯಕ್ಕೆ ನಡೆಯುವ ಪುನಾರಚನೆ ಸಂದರ್ಭದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಚಿವರಿಗೆ ಕೊಕ್ ನೀಡುವ ಜೊತೆಗೆ ಮೂರ್ನಾಲ್ಕು ಹೊಸ ಮುಖಗಳು ಸೇರಿದಂತೆ ೧೦ ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇದೆ ಎಂದು ಪಕ್ಷದ ಉನ್ನತ
ಮೂಲ ಗಳು ತಿಳಿಸಿವೆ.
ಇದರೊಂದಿಗೆ ಕಳೆದೊಂದು ವಾರದಿಂದ ಹಾಲಿ ಸಚಿವರಿಗೆ ಎದುರಾಗಿದ್ದ ಸಂಪುಟ ಪುನಾರಚನೆಯ ಗುಮ್ಮ ದೂರವಾದಂತಾಗಿದೆ. ಅದರಲ್ಲೂ ವಿಶೇಷವಾಗಿ ವಿವಾದಗಳಿಗೆ ಆರೋಪಗಳಿಗೆ ಗುರಿಯಾಗಿದ್ದ ಸಚಿವರಾದ ಜಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್, ತಿಮ್ಮಾಪುರ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್, ವೆಂಕಟೇಶ್ ಸೇರಿದಂತೆ ಅನೇಕ ಸಚಿವರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ.
ಶೀಘ್ರವೇ ಆಡಳಿತಕ್ಕೆ ವೇಗ: ರಾಜ್ಯದಲ್ಲಿ ಮುಡಾ ಅಕ್ರಮ ಆರೋಪ ಭುಗಿಲೆದ್ದ ನಂತರ ಸರಕಾರಕ್ಕೆ ಮಂಕು ಕವಿದಂತಾಗಿತ್ತು. ಇದರಿಂದ
ಆಡಳಿತದ ವೇಗ ಕೂಡ ಕಡಿಮೆಯಾಗಿತ್ತು. ಈ ಮಂಕು ಕವಿದ ವಾತಾವರಣವನ್ನು ಉಪಚುನಾವಣೆ ಫಲಿತಾಂಶ ದೂರ ಸರಿಸಿದ ಪರಿಣಾಮ ಆಡಳಿತಕ್ಕೆ ಹೆಚ್ಚಿನ ವೇಗ ನೀಡಲು ಮುಖ್ಯಮಂತ್ರಿ ಚಿಂತಿಸಿದ್ದಾರೆ. ಅಷ್ಟೇ ಅಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲೂ ಮುಖ್ಯಮಂತ್ರಿಗಳು ಸದ್ಯದ ವಿವಿಧ ಹಂತದ ಸಭೆಗಳನ್ನು ನಡೆಸಲು ನಿಶ್ಚಯಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದೆ.
ಪುನಾರಚನೆ ಸದ್ಯಕ್ಕೆ ಇಲ್ಲ ಏಕೆ?
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಪಕ್ಷದ ಹೈಕಮಾಂಡ್ ಸಲಹೆ ಸೂಚನೆಗಳನ್ನು ಪಡೆದು ಸಣ್ಣದೊಂದು ಪುನಾರಚನೆ ಮಾಡಬೇಕೆಂದು ಪಕ್ಷದೊಳಗೆ ಚರ್ಚೆಯಾಗಿತ್ತು. ಸಂಡೂರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಜಿ ಸಚಿವ ನಾಗೇಂದ್ರ ಅವರನ್ನು ಸದ್ಯದ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ನೀಡಿದ್ದ ಹೇಳಿಕೆ ಪುನಾರಚನೆ ಪ್ರಯತ್ನವನ್ನು ಪುಷ್ಟೀಕರಿಸಿತ್ತು. ಆದರೆ, ಇಷ್ಟು ತ್ವರಿತವಾಗಿ ಪುನಾರಚನೆ ಮಾಡುವುದು ಬೇಡ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎನ್ನಲಾಗಿದೆ.
ಗ್ಯಾರಂಟಿಗಳ ಒತ್ತಡದಿಂದ ಸಚಿವರು ಹೆಚ್ಚಿನ ವಿಶೇಷ ಅನುದಾನ ಪಡೆದು ಇಲಾಖೆಗಳನ್ನು ಮುನ್ನಡೆಸಲು ಸಾಧ್ಯವಾಗಿಲ್ಲ. ಇಂಥ
ಪರಿಸ್ಥಿತಿಯಲ್ಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟರೆ ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವ ಮಾಹಿತಿ ಪಕ್ಷದ
ವರಿಷ್ಠರ ಕೈ ಸೇರಿದೆ. ಹೀಗಾಗಿ ಸಚಿವರಿಗೆ ನಾಲ್ಕೈದು ತಿಂಗಳ ಕಾಲ ಅವಕಾಶ ನೀಡಿ ನಂತರ ಮೌಲ್ಯಮಾಪನ ಮಾಡುವ ಮೂಲಕ
ಸಂಪುಟದಿಂದ ಕೆಲವರನ್ನು ಕೈ ಬಿಡುವುದು ಸೂಕ್ತ ಎನ್ನುವ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ ಎಂದು ಪಕ್ಷದ ಉನ್ನತ
ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?