ಪರಸ್ಪರ ವೈಯಕ್ತಿಕ ನಿಂದನೆ, ತಿಥಿ ಕಾರ್ಡ್ ಮೂಲಕ ಮಿತಿಮೀರುತ್ತಿದೆ ಟೀಕಾಸ್ತ್ರಗಳು
ವೆಂಕಟೇಶ ಆರ್.ದಾಸ್ ಬೆಂಗಳೂರು
ರಾಜ್ಯಸಭೆ ಸೋಲಿನ ನಂತರ ಜೆಡಿಎಸ್ ಕಾರ್ಯಕರ್ತರ ಟೀಕೆಗಳು ಸಂಯಮದ ಎಲ್ಲೆಯನ್ನು ಮೀರುತ್ತಿದ್ದು, ಅಶ್ಲೀಲ ಬೈಗುಳಗಳು ಮತ್ತು ತಿಥಿ ಕಾರ್ಡ್ ಸೃಷ್ಟಿಸುವ ಹಂತಕ್ಕೆ ಬಂದು ತಲುಪಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಮತ ನೀಡದೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರೋಕ್ಷವಾಗಿ ಸಹಕಾರ ನೀಡಿದ ಗುಬ್ಬಿಯ ಶ್ರೀನಿವಾಸ್ ಮತ್ತು ಕೋಲಾರದ ಶ್ರೀನಿವಾಸ್ ಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಅಶ್ಲೀಲ ಪದ ಬಳಕೆ ಮತ್ತಿತರ ಚಟುವಟಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಲಿನ ಆಕ್ರೋಶ ಹೊರಹಾಕುವ ಭರದಲ್ಲಿ ಟೀಕೆಗಳು ಸಭ್ಯತೆಯ ಎಲ್ಲೆಯನ್ನು ಮೀರುತ್ತಿವೆ. ಈ ಇಬ್ಬರು ನಾಯಕರನ್ನು ಹೀನಾಯ ಮಾನವಾಗಿ ಟೀಕಿಸುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ.
ಜಾತ್ಯಾತೀತ ತತ್ವದ ಆಧಾರದ ಮೇಲೆ ಕೋಮುವಾದಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಗೆ ಬೆಂಬಲ ಸೂಚಿಸಬೇಕಿತ್ತು ಎಂಬುದು ಜೆಡಿಎಸ್ ನಾಯಕರ ವಾದವಾದರೆ, ಕೋಮುವಾದಿಗಳ ವಿರುದ್ಧ ಹೋರಾಟದಲ್ಲಿ ಏಕೆ ಕಾಂಗ್ರೆಸ್ ಮಾತ್ರವೇ ತಲೆಬಾಗಬೇಕು. ಈ ಬಾರಿ ಜೆಡಿಎಸ್ ನಾಯಕರೇ ಕಾಂಗ್ರೆಸ್ಗೆ ಸಾಥ್ ನೀಡಬಹುದಲ್ಲ ಎಂಬ ವಾದ ಕಾಂಗ್ರೆಸ್ ನಾಯಕರದ್ದಾಗಿತ್ತು. ಈ ಎಲ್ಲ ಕಾರಣ ಗಳಿಂದ ರಾಜ್ಯಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕಿತ್ತಾಡಿ ಕೊಂಡಿದ್ದರಿಂದ ಮೂರನೇ ಸ್ಥಾನ ಬಿಜೆಪಿ ಪಾಲಿಗೆ ಸುಲಭದಲ್ಲಿ ದೊರೆಯಿತು. ಈ ಎರಡು ಪಕ್ಷಗಳು ಬಿಜೆಪಿಯ ಬಿ ಟೀಮ್ ಎಂದು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದರೆ, ಬಿಜೆಪಿ ನಗುತ್ತಿದೆ.
ಸೋಲಿನ ನಂತರ ಹತಾಶೆಯಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಶ್ರೀನಿವಾಸ್ ಗೌಡ ಮತ್ತು ಗುಬ್ಬಿ ಶ್ರೀನಿವಾಸ್ ವಿರುದ್ಧ ಗುಡುಗಿದ್ದರು. ಅವರ ಈ ಧೋರಣೆಯನ್ನೇ ಮುಂದುವರಿಸಿದ ಪಕ್ಷದ ಕಾರ್ಯಕರ್ತರು ಪಕ್ಷ ಬಿಟ್ಟ ನಾಯಕರನ್ನು ಕೆಲ ಅಶ್ಲೀಲ
ಪದಗಳನ್ನು ಬಳಸಿ ಜಾಲತಾಣಗಳಲ್ಲಿ ಹೀಯಾಳಿಸುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಪರಸ್ಪರ ನಿಂದನೆಯಲ್ಲಿ ತೊಡಗಿ ದ್ದಾರೆ. ಆ ನಾಯಕರ ಬೆಂಬಲಿಗರು ಕೂಡ ಜೆಡಿಎಸ್ ನಾಯಕರನ್ನು ಹಣಿಯುವಲ್ಲಿ ಹಿಂದೆ ಬಿದ್ದಿಲ್ಲ ಎನ್ನಬಹುದು.
ತಿಥಿ ಕಾರ್ಡ್ ಸಂಸ್ಕೃತಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುತ್ತಿದ್ದಂತೆ ಶ್ರೀನಿವಾಸ ಗೌಡ ಅವರ ವೈಕುಂಠ ಸಮರಾಧನೆಯ ಕಾರ್ಡ್ ರೂಪಸಿದ್ದ ಜೆಡಿಎಸ್ ಕಾರ್ಯಕರ್ತರು ಅದನ್ನು ಜಾಲತಾಣಗಳಲ್ಲಿ ಪ್ರಕಟಿಸಿ, ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಜಾಲತಾಣಗಳ ಟೀಕೆ ಮುಂದುವರಿಯುವ ಜತೆಗೆ ಕೆಲ ಕಾರ್ಯಕರ್ತರು ಗುಬ್ಬಿ ಶ್ರೀನಿವಾಸ್ ಮನೆಯ ಮುಂದೆ ಹೋಗಿ ಗಲಾಟೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಗುಬ್ಬಿ ಶ್ರೀನಿವಾಸ್ ಎಚ್ಡಿಕೆ ವಿರುದ್ಧ ಏಕವಚನ ದಲ್ಲಿ ಮಾತನಾಡುವ ಮೂಲಕ ತಮ್ಮ ಬೆಂಬಲಿಗರನ್ನು ಪ್ರಚೋದನೆ ಮಾಡಿದಂತಾಗಿದೆ. ಹೀಗಾಗಿ, ಗುಬ್ಬಿ ಶ್ರೀನಿವಾಸ್ ಬೆಂಬಲಿ ಗರು ಮಾಜಿ ಸಿಎಂ ಎಚ್ಡಿಕೆ ಅವರ ಹೆಸರಿನಲ್ಲಿ ತಿರ್ಥಿ ಕಾರ್ಡ್ ರೂಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೆ ಇದು ಯಾವ ಮಟ್ಟಕ್ಕೆ ಹೋಗುತ್ತದೆಯೋ ಎಂಬ ಆತಂಕ ಕಾಡುತ್ತಿದೆ.
ನಾಯಕರು ಜವಾಬ್ದಾರಿ ಅರಿಯಲಿ
ಈ ನಡುವೆ ಜೆಡಿಎಸ್ನ ಮಾಜಿ ಶಾಸಕರು ಮತ್ತು ಜೆಡಿಎಸ್ ಶಾಸಕರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಪಕ್ಷಕ್ಕೆ ಮೋಸ ಮಾಡಿದ್ದು, ಆ ಇಬ್ಬರು ಶಾಸಕರ ತಪ್ಪೇ ಆಗಿದ್ದರೂ, ಅದನ್ನು ಕಾನೂನಾತ್ಮಕವಾಗಿ ಎದುರಿಸುವ ಪ್ರಯತ್ನವನ್ನು ಜೆಡಿಎಸ್ ಮಾಡಬೇಕಿದೆ. ಎಚ್ಡಿಕೆ ಆಕ್ರೋಶದಿಂದ ಮಾತನಾಡಿದ್ದರಿಂದ ಅವರ ಹಿಂಬಾಲಕರು ಮತ್ತು ಕಾರ್ಯಕರ್ತರು ಕೂಡ ಅದನ್ನೇ ಮುಂದುವರಿಸಿದ್ದಾರೆ. ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆ ಶಾಸಕರನ್ನು ಸಿಕ್ಕಸಿಕ್ಕಲ್ಲಿ ಬಟ್ಟೆ ಬಿಚ್ಚಿ ಹೊಡೆಯಿರಿ ಎಂದು ಕರೆ ಕೊಟ್ಟಿದ್ದಾರೆ.
ಅಲ್ಲಿ ಗುಬ್ಬಿ ಶ್ರೀನಿವಾಸ್, ಕುಮಾರಸ್ವಾಮಿ ಅವರನ್ನು ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಈ ಎಲ್ಲ ಅಂಶಗಳು ಕಾರ್ಯಕರ್ತರಿಗೆ ಪ್ರೇರಣೆ ಎಂಬಂತಾಗಿದ್ದು, ಕಾರ್ಯಕರ್ತರು ಪರಸ್ಪರ ನಿಂದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಜಾಲತಾಣಗಳಲ್ಲಿ ಕೆಟ್ಟ
ಸಂಸ್ಕೃತಿಯೊಂದಕ್ಕೆ ಕಾರಣವಾಗುತ್ತಿದೆ. ಈ ಅಂಶವನ್ನು ಮನಗಂಡು ಸೌಜನ್ಯದಿಂದ ವರ್ತಿಸುವುದನ್ನು ಕಾರ್ಯಕರ್ತರು ಕಲಿಯಬೇಕಿದೆ.