ಬಿಜೆಪಿ ವರಿಷ್ಠರಿಂದ ಸಂದೇಶ
ಪ್ರಧಾನಿ ಸೂಚನೆ ಮೇರೆಗೆ ಶಿಸ್ತು ಜಾರಿ
ಹೊಸ ಮುಖಗಳಿಗೆ ಆದ್ಯತೆ
ಚುನಾವಣೆ ಹಿನ್ನೆಲೆ ಮಹತ್ವದ ಸೂಚನೆ
ಪ್ರದೀಪ್ ಕುಮಾರ್ ಎಂ.
ಬೆಂಗಳೂರು: ‘ಚುನಾವಣೆಯಲ್ಲಿ ಗೆಲ್ಲುವ ಅಥವಾ ಗೆಲ್ಲಿಸುವ ಸಾಮರ್ಥ್ಯವಿದ್ದರಷ್ಟೇ ನಾಯಕರ ಕುಟುಂಬದವರಿಗೆ ಪಕ್ಷದಲ್ಲಿ ಸ್ಥಾನಮಾನ, ಕ್ಯಾಬಿನೆಟ್ನಲ್ಲಿ ಬರ್ಥ್ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್’.
ಬಿಜೆಪಿ ಹಿರಿಯ ನಾಯಕರ ಪುತ್ರರು ಮತ್ತು ಕುಟುಂಬ ಸದಸ್ಯರಿಗೆ ಹೀಗೊಂದು ಸ್ಪಷ್ಟ ಸಂದೇಶವನ್ನು ಪಕ್ಷದ ವರಿಷ್ಠರು ಕಳುಹಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬದವರ ಪರ ಲಾಬಿ ಮಾಡದಂತೆ ಪಕ್ಷದ ಸಂಸದರು, ಶಾಸಕರು ಹಾಗೂ ಪ್ರಮುಖರಿಗೆ ಸೂಚನೆ ಯನ್ನೂ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಕಾಂಗ್ರೆಸ್ನಂತೆ ಬಿಜೆಪಿಯಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗು ತ್ತಿದೆ ಎಂಬ ಟೀಕೆಗೆ ತೆರೆ ಎಳೆಯಲು ಪಕ್ಷದ ರಾಷ್ಟ್ರೀಯ ನಾಯಕರು ಮುಂದಾಗಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಗೆಲವೊಂದೇ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಪಕ್ಷ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದರ ಜತೆಗೆ ಸದ್ಯ ದಲ್ಲೇ ರಾಜ್ಯ ಸಚಿವ ಸಂಪುಟ ಪುನಾರಚನೆ ಜತೆಗೆ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿ ಗಳ ಪಟ್ಟಿಯಲ್ಲೂ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ವರಿಷ್ಠರಿಂದ ಇಂತಹ ಸಂದೇಶ ಬಂದಿರುವುದು ಮಹತ್ವ ಪಡೆದಿದೆ.
ಹಿಂಬಾಗಿಲಿನ ಪ್ರವೇಶಕ್ಕೂ ನಿರ್ಬಂಧ: ಈ ಮಧ್ಯೆ ಜನರಿಂದ ಗೆದ್ದು ಬರಲು ವಿಫಲವಾಗಿ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುವವರಿಗೂ ಕಡಿವಾಣ ಹಾಕಲು ಬಿಜೆಪಿ ತೀರ್ಮಾನಿಸಿದೆ. ಚುನಾವಣೆಯಲ್ಲಿ ಸೋತವರಿಗೆ ವಿಧಾನ ಪರಿಷತ್
ನಲ್ಲಿ ಅವಕಾಶ ಕಲ್ಪಿಸುವುದು, ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡುವುದು, ಪಕ್ಷದ ಪದಾಧಿಕಾರಿಗಳಾಗಿ ನೇಮಿಸುವುದು ಬೇಡ. ಅದರ ಬದಲು ಹೊಸಬರಿಗೆ ಅವಕಾಶ ಕಲ್ಪಿಸಿ ಪಕ್ಷ ಸಂಘಟನೆಯತ್ತ ಗಮನಹರಿಸಿ ಎಂಬ ಸಂದೇಶವೂ ಎಲ್ಲ ರಾಜ್ಯಗಳಿಗೆ ವರಿಷ್ಠರಿಂದ ಹೋಗಿದೆ ಎಂದು ತಿಳಿದುಬಂದಿದೆ.
ಹೊಸ ಮುಖಗಳಿಗೆ ಆದ್ಯತೆ: ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ನಾಯಕರು ಚಿಂತನೆ ನಡೆಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಎಲ್ಲಾ ಕಡೆ ಚುನಾವಣೆ ಯಲ್ಲಿ ಹೊಸ ಮುಖಗಳನ್ನು ಪರಿಚಯಿಸಿದ್ದರಿಂದ ಜನರು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲಿ ಸಾಧ್ಯವೋ ಅಲ್ಲೆಲ್ಲ ಹೊಸಬರಿಗೆ ಮಣೆ ಹಾಕುವ ಬಗ್ಗೆಯೂ ಯೋಚಿಸುತ್ತಿದ್ದು, ಈ ಬಗ್ಗೆ ಪಕ್ಷದ ಆಂತರಿಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯದ್ದೇ ತೀರ್ಮಾನ
ಪಂಚ ರಾಜ್ಯಗಳ ಚುನಾವಣೆ ಬಳಿಕ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ವಂಶಾಡಳಿತದ ವಿರೋಧಿ. ಹಲವು ಸಂಸದರ ಮಕ್ಕಳಿಗೆ ಟಿಕೆಟ್ ನಿರಾಕರಿಸು ವಂತೆ ನಾನೇ ಹೇಳಿದ್ದೆ. ಹೀಗಾಗಿ ಕೆಲವು ಸಂಸದರ ಮಕ್ಕಳಿಗೆ ತಾವೇ ಉದ್ದೇಶಪೂರ್ವಕ ಟಿಕೆಟ್ ನಿರಾಕರಿಸಿದ್ದು’ ಎಂದು ಹೇಳಿ ದ್ದರು. ಇದರ ಮುಂದುವರಿದ ಭಾಗವಾಗಿ ಪಕ್ಷದ ವರಿಷ್ಠರು ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳಿಗೂ ಈ ಕುರಿತು
ಸಂದೇಶ ಕಳುಹಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವ ಅಥವಾ ಗೆಲ್ಲಿಸುವ ಸಾಮರ್ಥ್ಯವಿದ್ದರಷ್ಟೇ ನಾಯಕರ ಕುಟುಂಬದವರಿಗೆ ಪಕ್ಷದಲ್ಲಿ ಸ್ಥಾನಮಾನ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್. ಆಂತರಿಕ ಸಮೀಕ್ಷೆ ಮೂಲಕ ಪಕ್ಷದ ಸಂಸದೀಯ ಮಂಡಳಿ ಇದನ್ನು ತಿಳಿದು ಕೊಂಡು ಯಾರಿಗೆ, ಎಲ್ಲಿ ಅವಕಾಶ ಕಲ್ಪಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಯಾರೂ ಲಾಬಿ ಮಾಡುವುದು ಬೇಡ ಎಂಬ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.