ಮತ ವಿಭಜನೆ ಭೀತಿ: ಅನಿವಾರ್ಯವಾಗಿ ಹೋರಾಟದ ಕಣಕ್ಕೆ ಧುಮುಕುತ್ತಿರುವ ನಾಯಕರು
ವಿನಾಯಕ ಮಠಪತಿ ಬೆಳಗಾವಿ
ಪಂಚಮಸಾಲಿ 2 ಎ ಮೀಸಲು ಹೋರಾಟದ ಕಾವು ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಗಡಿ ಭಾಗದ ಜಿಲ್ಲೆಗಳಲ್ಲಿ ಹೋರಾಟದ ರೂಪುರೇಷೆಗಳು ಭರದಿಂದ ಸಾಗಿವೆ. ಇನ್ನೂ ಸರಕಾರ ಮೇಲೆ ಸಾಧ್ಯವಾದಷ್ಟು ಒತ್ತಡ ಹೇರುವ ನಿರ್ಧಾರಕ್ಕೆ ಸಮಾಜದ ಮುಖಂಡರು ಬಂದಿದ್ದು, ಇದರಿಂದ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರು ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪಂಚಮಸಾಲಿ ೨ ಎ ಮೀಸಲು ಹೋರಾಟದ ಕಾವು ಹೆಚ್ಚಾಗಿದೆ. ಮೊದಲಿಗೆ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳ ಹೋರಾಟಕ್ಕೆ ಬಲ ತುಂಬಿದ್ದೇ ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್. ತಮ್ಮದೇ ಸರಕಾರದ ವಿರುದ್ಧ ಮಾತಿನ ಹೊಡೆತ ನೀಡುತ್ತ ಪಂಚಮಸಾಲಿ ಹೋರಾಟಗಾರರಿಗೆ ಆತ್ಮ ಸ್ಥೈರ್ಯ ತುಂಬಿದ್ದರು. ಸದ್ಯ ಹೋರಾಟದ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರು ಅನಿವಾರ್ಯ ವಾಗಿ ಹೋರಾಟದ ಭಾಗವಾಗುತ್ತಿದ್ದಾರೆ.
ಮತ ವಿಭಜನೆಯ ಭೀತಿ: ಪ್ರಮುಖವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ – ಧಾರವಾಡ ಅವಳಿ ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಸಮುದಾಯದ ಮತಗಳು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹಾಗೆಯೇ ಇಲ್ಲಿನ ಅನೇಕ ಶಾಸಕರು ಸಮುದಾಯದ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಜಯ ಗಳಿಸಿದ್ದರು. ಸದ್ಯ ಪಂಚಮಸಾಲಿ ಸಮುದಾಯದ ೨ ಎ ಮೀಸಲು ಹೋರಾಟದಿಂದ ಹಿಂದೆ ಸರಿದರೆ, ಮತ ವಿಭಜನೆ ಯಾಗುವ ಭೀತಿ ಹಲವು ಬಿಜೆಪಿ ಶಾಸಕರಲ್ಲಿ ಮೂಡಿದೆ. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸರಕಾರದ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುವ ನಿರ್ಧಾರ ಅನೇಕ ಬಿಜೆಪಿ ಮುಖಂಡರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಸನಗೌಡ ಯತ್ನಾಳ್ ಹೇಳಿಕೆಯ ಬಿಸಿತುಪ್ಪ
ಪಂಚಮಸಾಲಿ ಹೋರಾಟದ ದಿಕ್ಕು ಸಂಪೂರ್ಣ ಬದಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಆಶ್ವಾಸನೆ
ಯನ್ನು ಈಗ ಸಮುದಾಯ ಬಲವಾಗಿ ಎತ್ತಿ ಹಿಡಿಯುತ್ತಿದೆ. ಜತೆಗೆ ಕೇವಲ ಮೀಸಲು ಹೋರಾಟ ಆಗಿದ್ದರೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಬಿಜೆಪಿ ಹಿರಿಯ ಮುಖಂಡರಲ್ಲಿ ಒಬ್ಬರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು
ತಮ್ಮದೇ ಸರಕಾರದ ವಿರುದ್ಧ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಕೆಲವೊಮ್ಮೆ ಪಕ್ಷದ ನಾಯಕರಿಗೆ ಇರುಸುಮುರುಸು ತರಿಸಿದ್ದು ಸುಳ್ಳಲ್ಲ. ಆದರೆ ಇವರಿಗೆ ಹೋರಾಟಕ್ಕೆ ಹಿಂದೇಟು ಹಾಕಿದರೆ ಸಮುದಾಯದ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದು ಸ್ಪಷ್ಟ.
***
ಪಂಚಮಸಾಲಿ ಸಮುದಾಯದ ಮಕ್ಕಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ, ಸಮಾಜದವರು ಮಾಡುತ್ತಿರುವ ಹೋರಾಟ ವನ್ನು ನಾವೆಲ್ಲರೂ ಬೆಂಬಲಿಸೋಣ. ಜಯ ಮೃತ್ಯುಂಜಯ ಸ್ವಾಮಿಗಳ ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸುವೆ.
-ಬಾಲಚಂದ್ರ ಜಾರಕಿಹೊಳಿ ಕೆಎಂಎ- ಅಧ್ಯಕ್ಷ
ಪಂಚಮಸಾಲಿ ೨ ಎ ಮೀಸಲು ವಿಚಾರವಾಗಿ ಜನಪ್ರತಿನಿಧಿಗಳು ಕೇವಲ ಪತ್ರಿಕಾ ಪ್ರಕಟಣೆ ನೀಡುವ ಬದಲು ಸದನದಲ್ಲಿ ಗಟ್ಟಿ ಧ್ವನಿ ಎತ್ತಬೇಕು. ಈಗಾಗಲೇ ಪಂಚಮಸಾಲಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಆದರೆ ಜನಪ್ರತಿನಿಧಿಗಳಾದವರು ಕೇವಲ ಪತ್ರಿಕಾ ಪ್ರಕಟಣೆ ಹೊರಡಿಸುವ ಬದಲು ಪಂಚಮಸಾಲಿ ಸಮುದಾಯಕ್ಕೆ ೨ ಎ ಮೀಸಲಾತಿ ನೀಡುವ ಕುರಿತು ಸದನದಲ್ಲಿ ಧ್ವನಿ ಎತ್ತಬೇಕು.
– ಜಯಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮ ಪಂಚಮಸಾಲಿ ಪೀಠ