ಸಂಸ್ಕೃತ ವಿವಾದ
ಕಾಂಗ್ರೆಸ್ ನಾಯಕರ ಸಂಸ್ಕೃತ ಭಾಷಾ ವಿಷಯದಲ್ಲಿ ದ್ವಂದ್ವ ನೀತಿ
ರಾಜ್ಯದಲ್ಲಿದೆ ಒಟ್ಟು 33 ಸಂಸ್ಕೃತ ಕಾಲೇಜು
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ರಾಜ್ಯದಲ್ಲಿರುವ ಸಂಸ್ಕೃತ ವಿವಿ ಬಗ್ಗೆ ಕಾಂಗ್ರೆಸ್ನಲ್ಲೇ ಗೊಂದಲವಿದೆ. ಕೆಲ ನಾಯಕರು ವಿರೋಧಿಸಿದರೆ, ಇನ್ನೊಂದೆಡೆ ಕಾಂಗ್ರೆಸ್ನಿಂದಲೇ ಸಂಸ್ಕೃತ ಹಾಗೂ ಸಂಸ್ಕೃತ ಕಾಲೇಜುಗಳ ಪೋಷಣೆಯಾಗುತ್ತಿದೆ.
ಕರ್ನಾಟಕದಲ್ಲಿ ಸಂಸ್ಕೃತ ವಿವಿ ಏಕೆ ಎಂದು ಪ್ರಶ್ನಿಸುತ್ತಿರುವ ಅನೇಕರಿಗೆ, ಶೃಂಗೇರಿಯಲ್ಲಿ ರಾಜೀವ್ ಗಾಂಧಿ ಸಂಸ್ಕೃತ ವಿವಿಯ ಅಧ್ಯಯನ ಪೀಠ ಎನ್ನುವುದರ ಬಗ್ಗೆ ಹಿತಿಯಿಲ್ಲ. ಇದಿಷ್ಟೇ ಅಲ್ಲದೇ, ಕಾಂಗ್ರೆಸ್ ಕಾಲದಲ್ಲಿಯೇ ಕರ್ನಾಟಕದಲ್ಲಿ ಹಲವು ಸಂಸ್ಕೃತ ಪದವಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ ಎನ್ನುವುದು ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
ಸಂಸ್ಕೃತ ವಿವಿಗೆ ನೂರು ಕೋಟಿ ಅನುದಾನ ನೀಡಿರುವ ಬಿಜೆಪಿ ಸರಕಾರದ ಕ್ರಮವನ್ನು ಕಾಂಗ್ರೆಸ್ನ ಕೆಲ ನಾಯಕರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನೇರವಾಗಿ ವಿರೋಧಿಸದಿದ್ದರೂ, ಪರೋಕ್ಷವಾಗಿ ಕನ್ನಡಪರ ಸಂಘಟನೆಗಳ ಮೂಲಕ ವಿರೋಧದ ಕೂಗನ್ನು ಹೊತ್ತಿಸುತ್ತಿದ್ದಾರೆ. ಆದರೆ ಈ ನಾಯಕರು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರ ಹೆಸರಲ್ಲಿರುವ ಕೇಂದ್ರೀಯ ಸಂಸ್ಕೃತ ವಿವಿಯ ಅಧ್ಯಯನ ಪೀಠವನ್ನು ಏಕೆ ವಿರೋಧಿ ಸುತ್ತಿಲ್ಲ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.
ಈ ರೀತಿ ದ್ವಂದ್ವ ನೀತಿಯನ್ನು ಗಮನಿಸಿದರೆ, ಬಿಜೆಪಿ ಸರಕಾರವನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಸಂಸ್ಕೃತ ವಿವಿಗೆ ಕಾಂಗ್ರೆಸಿಗರು ಅಥವಾ ಕಾಂಗ್ರೆಸ್ ಬೆಂಬಲಿತ ಪ್ರಗತಿಪರರ ವಿರೋಧಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ ಎನ್ನುವ ಮಾತನ್ನು ಬಲಪಂಥೀಯರು ಹೇಳುತ್ತಿದ್ದಾರೆ.
ರಾಜ್ಯದಲ್ಲಿವೆ 33 ಕಾಲೇಜು: ಹಾಗೇ ನೋಡಿದರೆ, ಕರ್ನಾಟಕದಲ್ಲಿ ಈಗಾಗಲೇ 33 ಸಂಸ್ಕೃತ ಕಾಲೇಜುಗಳು ಚಾಲ್ತಿಯಲ್ಲಿದೆ. ಈ ಕಾಲೇಜುಗಳಲ್ಲಿ ಸಂಸ್ಕೃತ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಸ್ಗಳು ಹಾಗೂ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಈ 33 ಕಾಲೇಜುಗಳ ಪೈಕಿ 9 ಅನುದಾನಿತ ಹಾಗೂ ಸರಕಾರಿ ಕಾಲೇಜುಗಳಿವೆ. ಇನ್ನುಳಿದಂತೆ ಸಂಸ್ಕೃತ ವಿವಿ ಕ್ಯಾಂಪಸ್ಗಳು ಚಾಲ್ತಿಯಲ್ಲಿದೆ. ಈ ಎಲ್ಲ ಕಾಲೇಜುಗಳು ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಚಾಲ್ತಿ ಯಲ್ಲಿದೆ. ಆದರೆ ಇಷ್ಟು ವರ್ಷ ಈ ಕಾಲೇಜು ಅಥವಾ ಸಂಸ್ಕೃತದ ಅಧ್ಯಯನದ ಬಗ್ಗೆ ಇಲ್ಲದ ಆಕ್ಷೇಪ, ಆಕ್ರೋಶ ಇದೀಗ ಶುರುವಾಗಿರುವುದಕ್ಕೆ ರಾಜಕೀಯ ಕಾರಣವಲ್ಲದೇ ಇನ್ನೇನು ಇಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
1865ರಲ್ಲಿ ಮೊದಲ ಕಾಲೇಜು ಆರಂಭ: ಕರ್ನಾಟಕದಲ್ಲಿ ಮೊದಲ ಸಂಸ್ಕೃತ ಸ್ನಾತಕೋತ್ತರ ಕಾಲೇಜು ಆರಂಭವಾಗಿರುವುದು 1864ರಲ್ಲಿ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಮನ್ ಮಹಾರಾಜ ಸಂಸ್ಕೃತ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜನ್ನು ಆರಂಭಿಸಿದರು. ಇದು ಕರ್ನಾಟಕದಲ್ಲಿ ಆರಂಭವಾಗಿರುವ ಮೊದಲ ಸಂಸ್ಕೃತ ಕಾಲೇಜು. ಇದಾದ ಬಳಿಕ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಶ್ರೀ ಚಾಮರಾಜೇಂದ್ರ ಸಂಸ್ಕೃತ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜನ್ನು 1885ರಲ್ಲಿ ಆರಂಭಿಸಲಾಗಿದೆ. ಚಾಮರಾಜಪೇಟೆಯ ಕಾಲೇಜಿನಲ್ಲಿ ಆದಿಚುಂಚನ ಗಿರಿ ಮಠದ ಶ್ರೀ ಬಾಲಗಂಗಾಧರನಾಥ
ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಕೊಳ್ಳದಮಠದ ಶಾಂತವೀರ ಮಹಾಸ್ವಾಮಿ ಸೇರಿದಂತೆ ಅನೇಕರು ಅಭ್ಯಾಸ ನಡೆಸಿರುವ ಇತಿಹಾಸವಿದೆ.
ಕೈನಲ್ಲೇ ಇದ್ದಾರೆ ಸಂಸ್ಕೃತ ಆರಾಧಕರು
ಕಾಂಗ್ರೆಸ್ನ ರಾಜ್ಯ ಹಾಗೂ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅನೇಕರು ಸಂಸ್ಕೃತವನ್ನು ಇಷ್ಟ ಪಟ್ಟು ಓದುವವರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಂಸ್ಕೃತ ಅಧ್ಯಯನ ಮಾಡಲೆಂದೇ ಕೆಲ ವರ್ಷಗಳ ಹಿಂದೆ ಸಂಸ್ಕೃತ ಶಿಕ್ಷಕರೊಬ್ಬರನ್ನು ನೇಮಿಸಿಕೊಂಡಿದ್ದರು. ಇದೇ ರೀತಿ ಅನೇಕ ನಾಯಕರು ಸಂಸ್ಕೃತವನ್ನು ಓದಿಕೊಂಡಿದ್ದಾರೆ. ಆದರೀಗ ರಾಜ್ಯ ಕಾಂಗ್ರೆಸ್ ನಾಯಕರು ಸಂಸ್ಕೃತ ವಿವಿಗೆ ವಿರೋಧಿಸುತ್ತಿರುದನ್ನು ನೋಡಿದ ಅನೇಕರು, ಇದೊಂದು ರಾಜಕೀಯ
ಗಿಮಿಕ್ ಎನ್ನುವ ಮಾತುಗಳನ್ನು ಹೇಳಿದ್ದಾರೆ.