ಆನಂದ ಹಂಚಿಕೆ ಕಾಯಕದಲ್ಲಿ ಸದ್ದಿಲ್ಲದ ಸೇವಾ ತಂಡ
ಪರಿಸರ, ಶಾಲೆ ಪೂರಕವಾದ ವಿ ಷೇರ್ ಹ್ಯಾಪಿನೆಸ್
ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ
ಸುತ್ತಲಿನ ಪರಿಸರ, ಮನೆ, ಮಂದಿ ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ. ಹೀಗಾಗಿ ನಮ್ಮ ಸುತ್ತ ಒಳ್ಳೆಯ ವಾತಾವರಣ ನಿರ್ಮಾಣ ಮಾಡ್ತಾ ಇದ್ದೇವೆ. ಇದರಿಂದ ಸಮಾಜ ಉತ್ತಮವಾದರೆ ಸಾಕು, ನಮಗೆ ನಾವು ಒಳ್ಳೆಯದು ಮಾಡಿಕೊಳ್ಳುವ ಕೆಲಸಕ್ಕೆ ಸಾರ್ವಜನಿಕರು ಸೇವೆ ಹೆಸರಿಟ್ಟರೆ ಅದು ನಮ್ಮ ಪುಣ್ಯ ಎಂದು ಮಾತನಾಡುತ್ತಾ ಹೋಗುತ್ತಿದ್ದ ನವೀನ್ ಅವರನ್ನು ಕಣ್ಣರಳಿಸಿಕೊಂಡು ನೋಡುತ್ತಾ ನಿಂತೆ ಇದ್ದೆ.
ಜಾಮೆಟ್ರಿ ಬಾಕ್ಸ್ ಕೊಟ್ಟಿದ್ದನ್ನು ಫೋಟೋ ಸಮೇತ ಪ್ರೆಸ್ನೋಟ್ ಮಾಡಿ ಪತ್ರಿಕಾಲಯಗಳಿಗೆ ಕಳುಹಿಸಿ ಕೊಟ್ಟು ಮರು ದಿನ ಸುದ್ದಿ ಬಂದಿಲ್ಲದ ಪತ್ರಿಕೆ ವರದಿಗಾರ ರಿಗೆ ಫೋನ್ ಮಾಡಿ ಪ್ಲೀಸ್ ಸುದ್ದಿ ಹಾಕಿ ಸರ್ ಎಂದು ತಲೆತಿನ್ನುವ ಸಮಾಜಸೇವಕರ ನಡುವೆ ಹತ್ತಾರು ಲಕ್ಷಾಂತರ ರು. ಸಮಾಜಕ್ಕೆ ಕೊಟ್ಟರೂ ಪ್ರಚಾರದ ಹಂಗಿಲ್ಲದೆ ಸೇವೆ ಮುಂದುವರೆಸುತ್ತಿರುವ ವಿ ಷೇರ್ ಹ್ಯಾಪಿನೆಸ್ ತಂಡ ನಿಜಕ್ಕೂ ವಿನೂತನ ಎನಿಸಿತು.
ದಿನನಿತ್ಯದ ಕಾಯಕ: ಬೆಂಗಳೂರಿನ ಐಟಿ, ಬಿಟಿ ಕಂಪನಿಗಳ ಸೇವಾ ಮನೋಭಾವದ ನೂರಕ್ಕೂ ಹೆಚ್ಚು ಉದ್ಯೋಗಿಗಳ ಸೇವಾ ತಂಡದ ಹೆಸರೇ ವಿಭಿನ್ನ ವಿ ಷೇರ್ ಹ್ಯಾಪಿನೆಸ್. ಸಂತೋಷವನ್ನು ಹಂಚುವುದೇ ಇವರ ದಿನನಿತ್ಯದ ಕಾಯಕ. ಪ್ರತಿತಿಂಗಳೂ ನಿರ್ದಿಷ್ಟ ಮೊತ್ತವನ್ನು ಪ್ರತಿ ಸದಸ್ಯರೂ ಬ್ಯಾಂಕ್ ಖಾತೆಗೆ ಜಮೆ
ಮಾಡುತ್ತಾರೆ. ತಂಡದ ನಾಯಕ ನವೀನ್, ಶಾಸ್ತ್ರಿ, ಠಾಕೂರ್, ಸತ್ಯ ಮೇಡಂ, ನವೀನ್, ಡೇವಿಡ್ ಚರ್ಚೆ ನಡೆಸಿ ಸೇವಾ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ಕೈಗೊಂಡು ಯೋಜನೆಯನ್ನು ಅನುಷ್ಠಾನಗೊಳಿಸುತ್ತಾರೆ.
ಕಾರ್ಯಕ್ರಮದ ಒಂದೆರಡು ಫೋಟೋಗಳು ವ್ಯಾಟ್ಸ್ಆಪ್ ಗ್ರೂಪ್ ನಲ್ಲಿ ಹಾಕಿದರೆ ಎಲ್ಲ ಮುಗಿದಂತೆ ಆಗುತ್ತದೆ. ಹೀಗೆ ಸದ್ದಿಲ್ಲದೆ ಸೇವೆ ಕಳೆದ ೪ ವರ್ಷಗಳಿಂದ ಸತತವಾಗಿ ನಡೆಯುತ್ತಿದೆ. ಎರಡೂ ಲಾಕ್ಡೌನ್ನಲ್ಲಿ ರೈತರು ಬೆಳೆಯನ್ನು ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದಾಗ ಕೂಲಿಯಾಳುಗಳನ್ನು ಇಟ್ಟು ತರಕಾರಿ ಬಿಡಿಸಿ ಬೆಂಗಳೂರಿನ ರಾಷ್ಟ್ರೋತ್ಥಾನದ ಉಚಿತ ಬಿಸಿಯೂಟದ ಕಾರ್ಯಕ್ರಮಕ್ಕೆ ಕೊಟ್ಟಿದ್ದು ಸಾರ್ಥಕತೆ ತಂದಿದೆ ಎಂಬುದು ತಂಡದ ಮನದಾಳದ ಮಾತು. ಉಳಿದಂತೆ ಪ್ರತಿ ವರ್ಷ ಚಳಿಗಾಲದಲ್ಲಿ ಸಾವಿರಾರು ಕಂಬಳಿಗಳನ್ನು ಬೀದಿಯಲ್ಲಿ ಮಲಗಿರುವವರಿಗೆ ಹೊಚ್ಚಿಸಿ ಸದ್ದಿಲ್ಲದೆ ನಡೆದುಬಿಡುವ ತಂಡ, ಬೆಂಗಳೂರಿಗರ ಮನ ಮತ್ತು ಮನಸನ್ನು ತುಂಬಿದೆ. ವೃದ್ಧಾಶ್ರಮಕ್ಕೆ ಅಗತ್ಯ ವಸ್ತು ಸರಬರಾಜು ರೊಟೀನ್ ಎಂಬುದು ಯಾರಿಗೂ ಗೊತ್ತಿಲ್ಲ.
ಪಾಠ, ಪರಿಸರಕ್ಕೆ ಒತ್ತು
ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಅನುಷ್ಠಾನ ಮತ್ತು ಪರಿಸರ ಉಳಿಸುವ ಕಾಯಕವನ್ನು ಗುರಿಯಾಗಿಸಿಕೊಂಡಿರುವ ತಂಡ ಕೆಜಿಎಫ್ ಸೇರಿದಂತೆ ಹಲವಾರು ಕಡೆ ನೂರಾರು ಸಸಿ ನೆಟ್ಟಿದೆ. ಹತ್ತಾರು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಆಗಿದೆ. ತೀರಾ ಇತ್ತೀಚೆಗೆ ದೇವರಾಯ ಸಮುದ್ರದ ಸರ್ಕಾರಿ ಪ್ರೌಢಶಾಲೆ, ಗ್ರಾಮಪಂಚಾಯತಿ, ಹೊಸಕೆರೆ ಸ್ಟಡಿ ಸೆಂಟರ್, ಕೋಲಾರದ ಬಿಇಒ ಕಚೇರಿ, ಕೆಲವಾರು ಸರ್ಕಾರಿ ಪ್ರೌಢಶಾಲೆಗಳಿಗೆ ಟಿವಿ, ಪೀಠೋ ಪಕರಣಗಳನ್ನು ಹಂಚಿಕೆ ಮಾಡಿದೆ.
***
ಪ್ರಚಾರದ ಹಂಗಿಲ್ಲದೆ ಸಾರ್ಥಕ ಸೇವೆ ಸಲ್ಲಿಸುತ್ತಿರುವ ವಿ ಷೇರ್ ಹ್ಯಾಪಿನೆಸ್ ತಂಡದ ಸೇವೆ ಶ್ಲಾಘನೀಯ. ಗ್ರಾಮಾಂತರ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ತಂಡದ ಪರಿಕಲ್ಪನೆ ರಾಮರಾಜ್ಯದ ಕನಸಿನ ಸಾಕಾರವಾಗಿದ್ದು ಇಂತಹವರ ಸಂತತಿ ಸಾವಿರವಾಗಲಿ. ವೀಕೆಂಡ್ನಲ್ಲಿ ಮೋಜು ಮಸ್ತಿ ಹೆಸರಲ್ಲಿ ಸಮಯ ಮತ್ತು ಹಣ ಹಾಳು ಮಾಡುವ ವಿದ್ಯಾವಂತರು ವಿ ಷೇರ್ ಹ್ಯಾಪಿನೆಸ್ ತಂಡದ ಹಾದಿಯಲ್ಲಿ ಮುನ್ನಡೆಯಲಿ.
– ಎಂವಿಎನ್ ರಾವ್, ಗ್ರಾಮಪಂಚಾಯಿತಿ
ಸದಸ್ಯರು, ಹೊಸಕೆg