ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಮಾವೇಶಗಳಲ್ಲಿ ವೈಯಕ್ತಿಕ ನಿಂದನೆಗಳ ಕಾಟ, ಜೆಡಿಎಸ್ ಅಂಗಳದಲ್ಲಿ ಬಿಜೆಪಿಯದೇ ಆಟ
ವೈಯಕ್ತಿಕ ಲಾಭಕ್ಕೆ ಪ್ರತಿಪಕ್ಷಗಳ ಹವಣಿಕೆ
ದೇಶದ ಗಮನ ಸೆಳೆದ ಬಿಜೆಪಿ, ಜೆಡಿಎಸ್ ಪಾದಯಾತ್ರೆಯಿಂದ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಬಲ್ಯ ವೃದ್ಧಿಸಿದ್ದು, ಪ್ರತಿಪಕ್ಷಗಳು
ವೈಯಕ್ತಿಕ ರಾಜಕೀಯ ಲಾಭಕ್ಕೆ ಹವಣಿಸಿದ್ದು ಬೆಳಕಿಗೆ ಬಂದಿದೆ.
ಯಾತ್ರೆ, ಸಮಾವೇಶಗಳಲ್ಲಿ ಹೋರಾಟದ ಮೂಲ ಉದ್ದೇಶವಾದ ಮುಡಾ ಹಗರಣವೇ ಗೌಣ ಎನ್ನುವಂತಾಗಿದೆ. ಇಡೀ ಸಮಾವೇಶ ಮತ್ತು ಯಾತ್ರೆಗಳನ್ನು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಕಚ್ಚಾಟ, ನಿಂದನೆ
ಗಳೇ ನುಂಗಿಹಾಕಿದವು. ಹೀಗಾಗಿ ವಾರದುದ್ದಕ್ಕೂ ನಡೆದ ಯಾತ್ರೆ, ಸಮಾವೇಶಗಳಲ್ಲಿ ಜೆಡಿಎಸ್ ನ ಕುಮಾರಸ್ವಾಮಿ, ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ವಿಜಯೇಂದ್ರ ಅವರೇ ಪರಸ್ಪರ ಅಕ್ರಮ ಗಳನ್ನು ಪ್ರಸ್ತಾಪಿಸಿ ಬೆತ್ತಲಾಗಿದ್ದು ಸದ್ಯ ಚರ್ಚೆ ಯಾಗುತ್ತಿದೆ.
ಕಾರಣ, ಇಡೀ ಯಾತ್ರೆ, ಸಮಾವೇಶದುದ್ದಕ್ಕೂ ಈ ರಾಜಕೀಯ ನಾಯಕರ ವೈಯಕ್ತಿಕ ಕಚ್ಚಾಟಗಳನ್ನು ಬಿಟ್ಟರೆ, ಯಾವೊಬ್ಬರೂ ಮುಡಾ ಹಗರಣದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮಾತನಾಡಿಲ್ಲ. ಹಾಗೆಯೇ ಇದರಲ್ಲಿ ಅಕ್ರಮ ನಡೆದಿಲ್ಲ ಎನ್ನುವುದನ್ನು ಮನದಟ್ಟು ಪ್ರಯತ್ನಕ್ಕೆ ಕಾಂಗ್ರೆಸ್ ಕೂಡ ಮುಂದಾಗಲಿಲ್ಲ. ಹೀಗಾಗಿ ಮುಡಾ ವಿಚಾರದಲ್ಲಿ ರಾಜ್ಯದ ಜನತೆ ಯಾರನ್ನು ಅನುಮಾನಿಸಬೇಕು. ಯಾರನ್ನು ನಂಬಬೇಕು ಎನ್ನುವ ಗೊಂದಲ ಹೆಚ್ಚಿಸಿ ದಂತಾಗಿದೆ ಎಂದು ಮೂರೂ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ.
ಜನಾಂದೋಲನದಿಂದ ಜನಬಲ: ಆದರೆ ಆಡಳಿತಾರೂಢ ಕಾಂಗ್ರೆಸ್ ನ ಜನಾಂದೋಲನ ಸಮಾವೇಶ ಹಗರಣದ ಆರೋಪದಿಂದ ಮಂಕಾಗಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ ಕೀಯವಾಗಿ ಹೆಚ್ಚಿನ ವಿಶ್ವಾಸ ತುಂಬಿದಂತಾಗಿದೆ. ಅದರಲ್ಲೂ ಮುಂದಿನ ಮುಖ್ಯಮಂತ್ರಿ ಎಂದು ಅಲ್ಲಿಲ್ಲಿ ಘೋಷಣೆಗಳನ್ನು ಗಿಟ್ಟಿಸುತ್ತಿದ್ದ ಡಿ.ಕೆ.ಶಿವ ಕುಮಾರ್, ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ನಿಲ್ಲುತ್ತೇನೆ ಎಂದು ಘೋಷಿಸಿದ್ದು, ಇಡೀ ಸಂಪುಟದ ಸಚಿ ವರು ಸಿಎಂ ಬೆನ್ನಿಗೆ ನಿಂತು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಮುಖ್ಯಮಂತ್ರಿ ಅವರ ಪ್ರಾಬಲ್ಯ ವೃದ್ಧಿಸಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಸಿದ್ದರಾಮೋತ್ಸವದ ನಂತರ ನಡೆದ ಎರಡನೇ ಈ ದೊಡ್ಡ ಸಮಾವೇಶ ಜನತೆ ವಿಶ್ವಾಸವೂ ತಮ್ಮ ಮೇಲಿದೆ ಮೇಲಿದೆ ಎಂದು ಸಾರಲು ಯತ್ನಿಸಿ ದಂತಾಗಿದೆ. ಹೀಗಾಗಿಯೇ ಇಷ್ಟು ಹೊತ್ತಿಗಾಗಲೇ ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕಿದ್ದ ರಾಜ್ಯಪಾಲರು ಇನ್ನಷ್ಟು ಕಾಲ ಕಾದು ನೋಡುವಂತಾಗಿದೆ ಎಂದು ಮುಖ್ಯಮಂತ್ರಿ ಅವರ ಆಪ್ತ ಸಚಿವರು ಹೇಳಿದ್ದಾರೆ.
ರಾಜ್ಯಪಾಲರ ಬಳಿ ಚೆಂಡು: ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ಸಲ್ಲಿಸಿದ್ದು, ಅದರ ವಿಚಾರಣೆ ಸದ್ಯದ ನಡೆಯಲಿದೆ. ಅದನ್ನು ನೋಡಿ ಮುಂದಿನ ಹೆಜ್ಜೆ ಇಡಲು ರಾಜ್ಯಪಾಲರು ಲೆಕ್ಕಾಚಾರ ಹಾಕಿದ್ದಾರೆ ಎಂದು ಹೇಳಲಾಗಿದೆ. ಕಾರಣ, ಒಂದೊಮ್ಮೆ ವಿಚಾ ರಣೆಗೆ ಅನುಮತಿ ನೀಡಿದರೆ ಮುಖ್ಯಮಂತ್ರಿ ಅವರು ರಾಜೀನಾಮೆ ಸಲ್ಲಿಸುವುದಿಲ್ಲ. ಬದಲಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ ಎನ್ನುವ ಸುಳಿವು ರಾಜ ಭವನಕ್ಕೆ ತಲುಪಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ರಾಜ್ಯಪಾಲರು ಕಾನೂನು ಸಲಹೆ ಪಡೆಯುತ್ತಿzರೆ ಎಂದು ತಿಳಿದು ಬಂದಿದೆ
ಸಿದ್ದು ಕೈಹಿಡಿದ ಸಮಾವೇಶಗಳು
ಹಾಗೇ ನೋಡಿದರೆ, ಸಮಾವೇಶಗಳು ಅನೇಕ ಬಾರಿ ಸಿದ್ದರಾಮಯ್ಯ ಅವರ ಕೈಹಿಡಿದಿವೆ. ಈ ಹಿಂದೆ ಅವರು ಜೆಡಿಎಸ್ನಿಂದ ಹೊರ ಬಂದು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿದ್ದ ಅಹಿಂದ ಸಮಾವೇಶ ಕಾಂಗ್ರೆಸ್ ನಲ್ಲಿ ರಾಜಕೀಯ ಸೆಕೆಂಡ್ ಇನ್ನಿಂಗ್ಸ್ಗೆ ದಾರಿಮಾಡಿತ್ತು. ಆನಂತರ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ವಿಚಾರ ಬಂದಾಗ ದಾವಣಗೆರೆಯಲ್ಲಿ ನಡೆಸಿದ ಸಿದ್ದರಾಮೋತ್ಸವ ಪರಿಣಾಮ ಅವರು ೨ನೇ ಬಾರಿ ಮುಖ್ಯಮಂತ್ರಿಯಾದರು. ಅದಾದ ನಂತರದ ಮೈಸೂರಿನ ಜನಾಂದೋಲನ ಸಮಾವೇಶ ಸಿದ್ದರಾಮಯ್ಯ ಅವರನ್ನು ರಾಜಕೀಯ ವಾಗಿ ಮುನ್ನಡೆಸುತ್ತದೆಯೇ ಎಂದು ನೋಡಬೇಕಿದೆ ಎನ್ನುವುದು ಕೆಲವು ಸಚಿವರ ನಿರೀಕ್ಷೆಯ ಮಾತು.
ಚನ್ನಪಟ್ಟಣಕ್ಕೆ ಹೇಗೆ ಲಾಭ?
ಬಿಜೆಪಿಯ ಪಾದಯಾತ್ರೆ ಹಾಗೂ ಕಾಂಗ್ರೆಸ್ ಜನಾಂದೋಲನ ಮುಂಬರುವ ಚನ್ನಪಟ್ಟಣ ಉಪಚುನಾವಣೆ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ. ಜೆಡಿಎಸ್ ಪ್ರಾಬಲ್ಯ ಇರುವ ಯಾತ್ರಾಮಾರ್ಗದಲ್ಲಿ ಜೆಡಿಎಸ್ ಹೆಗಲ ಮೇಲೆ ಕುಳಿತು ಬಿಜೆಪಿ ವಿಜೃಂಭಿಸಿದೆ. ಆದರೆ ಜೆಡಿಎಸ್ ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಅಭ್ಯರ್ಥಿ ಎನ್ನುವುದನ್ನು ಸಾರಿ ಹೇಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ಯಾತ್ರೆಯಲ್ಲಿ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹೆಚ್ಚು ಕಾಣಿಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.