ವಿಶೇಷ ವರದಿ: ಬಾಲಕೃಷ್ಣ ಎನ್. ಬೆಂಗಳೂರು
ಉತ್ತರದ ಶೀತ ಮಾರುತಕ್ಕಿಂತ ಪೂರ್ವ ಮತ್ತು ಆಗ್ನೆಯ ಭಾಗದಿಂದ ಪ್ರಬಲ ಬಿಸಿ ಗಾಳಿ
ರಾಜ್ಯದಲ್ಲಿ ಈಗಲೇ ಬೇಸಿಗೆಯ ಅನುಭವ. ಹಗಲಲ್ಲಿ ಹೆಚ್ಚಿದ ಬಿಸಿಲು, ರಾತ್ರಿವೇಳೆ ಸೆಕೆ
ಚಳಿಗಾಲ ಮುಗಿಯುತ್ತ ಬಂದಿದೆ. ಆದರೆ, ಗೊತ್ತೇ ಆಗಲಿಲ್ಲ ನೋಡಿ…. ಹೌದು, ಈ ಬಾರಿ ಚಳಿಗಾಲ ಬಂದಿದ್ದೇ ಸರಿಯಾಗಿ ಅನುಭವಕ್ಕೆ ಬಂದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಚಳಿ ಬಹುತೇಕ ಕಡಿಮೆಯಾಗಿದ್ದು, ಈಗಾಗಲೇ ಸೆಕೆ ಶುರುವಾಗಿದೆ. ಹಗಲು ಬಿಸಿಲಿನ ಝಳ, ರಾತ್ರಿ ಹೊತ್ತು ಸೆಕೆ ಜನರನ್ನು ಹೈರಾಣಾಗಿಸಿದೆ.
ಸಾಮಾನ್ಯವಾಗಿ ನವೆಂಬರ್ನಿಂದ ಆರಂಭವಾಗುವ ಚಳಿ ಶಿವರಾತ್ರಿಯವರೆಗೆ ಮುಂದುವರಿಯುತ್ತದೆ. ಆದರೆ, ಇದುವರೆಗೆ ಜನವರಿಯಲ್ಲಿ ಕೆಲವು ದಿನ ತುಸು ಚಳಿಯನ್ನು ಹೊರತುಪಡಿಸಿ ಬಹುತೇಕ ಚಳಿಗಾಲ ಎಂಬುದೇ ಅರಿವಿಗೆ ಬಾರದಂತೆ ದಿನಗಳು ಕಳೆಯುತ್ತಿವೆ. ಫೆಬ್ರವರಿ ಆರಂಭವಾದ ಮೇಲಂತೂ ಚಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿ ಬೇಸಿಗೆ ಕಾಲ ಆರಂಭವಾಯಿತೇನೋ ಎಂಬಂತೆ ಭಾಸವಾಗುತ್ತಿದೆ. ಹವಾಮಾನದಲ್ಲಿನ ಈ ಬದಲಾವಣೆ ಜನರನ್ನು ಹೈರಾಣಾಗಿಸುತ್ತಿದೆ. ಮನೆ, ಕಚೇರಿ ಮೊದಲಾದ ಕಡೆಗಳಲ್ಲಿ ಫ್ಯಾನ್ ಹಾಕಿಕೊಳ್ಳದೆ ಅಥವಾ ಎಸಿ ಇಲ್ಲದೆ ಕೂರುವುದಕ್ಕೇ ಆಗದಷ್ಟು ಸೆಕೆಯ ಅನುಭವ ಆಗುತ್ತಿದೆ. ರಾತ್ರಿ ವೇಳೆಯಲ್ಲಿ ರಗ್ಗು ಹೊದೆ ದುಕೊಳ್ಳುವ ಅವಶ್ಯಕತೆಯೇ ಕಂಡು ಬರುತ್ತಿಲ್ಲ.
ಚಳಿ ಕಡಿಮೆಯಾಗಲು ಕಾರಣ: ಚಳಿಗಾಲದಲ್ಲಿ ರಾಜ್ಯದ ಮೇಲೆ ಉತ್ತರ ಭಾರತದ ಕಡೆಯಿಂದ ಬೀಸುವ ಶೀತ ಮಾರುತದ ಪ್ರಭಾವ ಹೆಚ್ಚಿರುತ್ತದೆ. ಆದರೆ, ಈ ಬಾರಿ ಪೂರ್ವ ಮತ್ತು ಆಗ್ನೆಯ ಭಾಗ ದಿಂದ ಬೆಚ್ಚನೆಯ ಪ್ರಬಲ ಗಾಳಿ ಬೀಸುತ್ತಿರುವುದು ಚಳಿ ಕಡಿಮೆಯಾಗಿ ಬೆಚ್ಚನೆಯ ವಾತಾವರಣಕ್ಕೆ ಕಾರಣವಾಗಿದೆ.
ಇದರೊಂದಿಗೆ ದಕ್ಷಿಣ ಒಳನಾಡಿನಲ್ಲಿ ಟ್ರಫ್ ಸೃಷ್ಟಿಯಾಗಿದ್ದು, ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣಕ್ಕೆ ಕಾರಣವಾಗಿದೆ. ಟ್ರಫ್ ಕಾರಣದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯೂ ಆಗಿದೆ. ಉಳಿದ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಇದರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗಲು, ರಾತ್ರಿ ಸೆಕೆ ಇದ್ದರೆ ಬೆಳಗ್ಗಿನ ಹೊತ್ತು ಚಳಿಯ ವಾತಾವರಣ ಕಂಡು ಬರುತ್ತಿದೆ. ಕರ್ನಾಟಕದ ಕೆಲವು ಭಾಗಗಳು, ತೆಲಂಗಾಣ, ಆಂಧ್ರಪ್ರದೇಶ, ಮರಾಠವಾಡ, ರಾಜಸ್ತಾನ, ದೆಹಲಿ, ಪಂಜಾಬ, ಹರಿಯಾಣ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ವಿದರ್ಭಗಳಲ್ಲಿ ಬಿಸಿ ಗಾಳಿ ಪ್ರಮಾಣ ಹೆಚ್ಚುತ್ತಿದೆ.
ಭಾರತದ ಅನೇಕ ಭಾಗಗಳಲ್ಲಿ ಫೆಬ್ರವರಿ ತಿಂಗಳು ಪೂರ್ತಿ ರಾತ್ರಿ ವೇಳೆಯ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಚಳಿಯ ವಾತಾವರಣ ಕಂಡು ಬಂದಿದೆ. ಈ ಬಾರಿ ಹೆಚ್ಚು ಮಳೆಯಾದ್ದರಿಂದ ಮಂಜಿನ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಬೇಸಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಬಿಸಿಲು ಹೆಚ್ಚಿ ತಾಪಮಾನ ಸರಾಸರಿಗಿಂತ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ವಾಡಿಕೆಯಂತೆ ತಾಪಮಾನ
ರಾಜ್ಯದೆಡೆ ಸದ್ಯ ಚಳಿಯ ವಾತಾವರಣವಿದ್ದರೂ ನಿಧಾನವಾಗಿ ಉಷ್ಣತೆ ಏರುತ್ತಿದೆ. ಫೆ. ೨೦ರ ಬಳಿಕ ಬೇಸಿಗೆ ಆರಂಭವಾಗಲಿದೆ. ಈ ಬಾರಿ ಬೇಸಿಗೆಯಲ್ಲಿ ವಾಡಿಕೆಯ ತಾಪಮಾನವೇ ಇರಲಿದೆ. ಆದರೆ, ತೀರಾ ಉಷ್ಣಾಂಶ ಹೆಚ್ಚಾಗುವಂತಹ ಅತಿರೇಕದ ವಾತಾವರಣ ಉಷ್ಣತೆ ದಾಖಲಾಗುವ ಮುನ್ಸೂಚನೆ ಇಲ್ಲ. ಉತ್ತರ ಒಳನಾಡಿನಲ್ಲಿ ಈಗಲೂ ಬೆಳಗ್ಗಿನ ಜಾವ ತೀಕ್ಷ್ಣ ಚಳಿಯಿದ್ದರೂ ದಿನದ ಉಷ್ಣತೆಯಲ್ಲಿ ಏರಿಕೆ ಕಂಡು ಬಂದಿದೆ. ಕರಾವಳಿಯಲ್ಲಿಯೂ ಬೆಳಗ್ಗಿನ ಜಾವ ಚಳಿಯಿದ್ದು, ದಿನದ ಉಷ್ಣತೆ ಸಾಧಾರಣ ಮಟ್ಟದಲ್ಲಿದೆ. ಇತ್ತ ದಕ್ಷಿಣ ಒಳನಾಡಿನಲ್ಲಿ ತುಸು ಬೆಚ್ಚಗಿನ ವಾತಾವರಣ ಇದ್ದು ಮೋಡ ಕವಿದ ವಾತಾವರಣವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಾರ್ಯಸೂಚಿ ಸಿದ್ಧ
ಚಳಿಗಾಲದಿಂದ ಬೇಸಿಗೆಗೆ ಹೋಗುವ ಕಾಲ ಇದು. ಸಾಮಾನ್ಯವಾಗಿ ಈ ಅವಧಿಯಲ್ಲಿ ರಾತ್ರಿ ಹೊತ್ತು ಸೆಕೆ ಇರುತ್ತದೆ. ಕ್ರಮೇಣ ಕನಿಷ್ಠ ತಾಪಮಾನ
ನಿರ್ದಿಷ್ಟ ಪ್ರಮಾಣದವರೆಗೂ ಹೆಚ್ಚಾಗುತ್ತಲೇ ಇರುತ್ತದೆ. ಈ ಬಾರಿ ಉತ್ತಮ ಮಳೆಯಾದ್ದರಿಂದ ಬೇಸಿಗೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿದಲ್ಲಿ ೪೦ ರಿಂದ ೪೫ ರಷ್ಟು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಬೇಸಿಗೆ ತೀವ್ರತೆ ಬರುವುದು ಮಾರ್ಚ್ ನಂತರ. ಬೇಸಿಗೆ ಹೆಚ್ಚಾದರೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯಸೂಚಿ ಸಿದ್ಧಪಡಿಸಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.