Tuesday, 7th December 2021

ವಿವಾಹ ವಿಚ್ಛೇದನಗಳನ್ನು ತಡೆಗಟ್ಟಬಹುದೇ ?

ಅಭಿಪ್ರಾಯ

ಕೆ.ಪಿ.ಪುತ್ತೂರಾಯ

ಒಟ್ಟಿನಲ್ಲಿ ಕೇವಲ ಮದುವೆ ಮಾತ್ರ ಅದ್ದೂರಿಯಾದರೆ ಸಾಲದು; ದಾಂಪತ್ಯ ಜೀವನವೂ ಅದ್ದೂರಿಯಾಗಿರಬೇಕು! ವಿಚ್ಛೇದನದಿಂದ, ಇಬ್ಬರ ಬದುಕು ಅತಂತ್ರ ವಾಗಬಹುದು, ಮರುವಿವಾಹ ಕಷ್ಟಸಾಧ್ಯವಾಗಬಹುದು. ವಿವಾಹ ವಿಚ್ಛೇದನಗಳು ಮಕ್ಕಳ ಮನಸ್ಸಿನ ಮೇಲೂ, ಅವರ ಭವಿಷ್ಯದ ಮೇಲೂ ಅಗಾಧವಾದ ದುಷ್ಪರಿಣಾಮವನ್ನು ಬೀರಬಹುದು.

ಈ ನಡುವೆ, ವಿವಾಹಿತರಲ್ಲಿ ವಿರಸಗಳು, ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿರೋದು ಸತ್ಯ ಸಂಗತಿ. ದೊಡ್ಡ ದೊಡ್ಡ ಕಾರಣಗಳು ಬೇಕಿಲ್ಲ; ಸಣ್ಣ ಪುಟ್ಟ ಕ್ಷುಲ್ಲಕ ಕಾರಣಗಳಿಗೂ ಗಂಡ-ಹೆಂಡಿರು ಒಬ್ಬರಿಂದಿನ್ನೊಬ್ಬರು ದೂರ ಸರಿಯುತ್ತಾರೆ ಇಲ್ಲವೇ ಡೈವಸ್ ಗಳಾಗುತ್ತಿರುತ್ತವೆ.

‘ತಪ್ಪಡ್’ ಎಂಬ ಚಲನಚಿತ್ರವನ್ನು ನೋಡಿದವರಿಗೆ, ಇದು ಸ್ಪಷ್ಟವಾಗಿ ತಿಳಿಯುತ್ತದೆ. ವಿದ್ಯಾವಂತರಲ್ಲೇ ಹಾಗೂ ಮಕ್ಕಳನ್ನು ಹಡೆದು, ಹಲವಾರು ವರುಷಗಳ ಕಾಲಕಳೆದ ದಾಂಪತ್ಯ ಜೀವನದ ನಂತರವೂ ಹೀಗಾಗು ತ್ತಿರೋದು ಇನ್ನೂ ವಿಷಾದನೀಯ. ಹಿಂದಿನ ಕಾಲದಲ್ಲಿ ವಿವಾಹ ವಿಚ್ಛೇದನಗಳ ಕಲ್ಪನೆಯೇ ಇಲ್ಲವಾಗಿತ್ತೆನ್ನ ಬಹುದು. ಕಾರಣ, ವಿವಾಹವೆಂದರೆ, ಜೀವನ ಪರ್ಯಂತ ಕಳಚಿಕೊಳ್ಳಲಾಗದ ಒಂದು ಬಂಧನ ಹಾಗೂ ಬದ್ಧತೆ ಎಂಬ ಬಲವಾಗಿ ಬೇರೂರಿದ ಭಾವನೆಯಿತ್ತು.

ಭಾರತೀಯ ಸಂಸ್ಕೃತಿಯಲ್ಲಿ ಲಗ್ನದ ವೇಳೆ ಸಪ್ತಪದಿಗಳನ್ನು ತುಳಿದ ದಂಪತಿಗಳಿಗೆ ವಿವಾಹ ವಿಚ್ಛೇದನವಿಲ್ಲ ಎನ್ನಲಾಗಿದೆ. ಜತೆಗೆ ಹೆಣ್ಣಿಗೆ ಗಂಡನೊಂದಿಗೆ ಇರಲೇಬೇಕಾದ ಅನಿವಾರ್ಯತೆ, ಅವಲಂಬನೆ, ಸಾಮಾಜಿಕ ಕಟ್ಟುಪಾಡು ಇತ್ತು ಹಾಗೂ ಕುಟುಂಬದ ಗೌರವ, ಮಾನ – ಮರ್ಯಾದೆ ಎಲ್ಲಿ ಬೀದಿ ಪಾಲಾದೀತೋ ಎಂಬ ಭಯ ಬೇರೆ ಇರುತ್ತಿತ್ತು. ಗಂಡನ ಮನೆಯನ್ನು ತೊರೆದು ಬರುವ ಮಗಳಿಗೆ ತವರಿನವರ ಪ್ರೋತ್ಸಾಹವೂ ಇಲ್ಲವಾಗಿತ್ತು. ‘ಏನೇ ಸಂಕಷ್ಟ ಸಮಸ್ಯೆ ಗಳಿದ್ದರೂ, ನಿನ್ನ ಗಂಡನ ಮನೆಯಲ್ಲಿದ್ದೇ ಪರಿಹರಿಸಿಕೊಂಡು ಬಿಡು; ಅವನ್ನೆಲ್ಲಾ ತವರು ಮನೆಗೆ ತಾರದಿರು; ಶಾಶ್ವತ ವಾಗಿ ಬಾರದಿರು’ ಎಂಬುದೇ ಹೆತ್ತವರ ಕಿವಿಮಾತಾಗಿರುತ್ತಿತ್ತು. ಏನೇ ಭಿನ್ನಾಭಿಪ್ರಾಯಗಳಿದ್ದರೂ, ನೋವು ನಿಂದನೆಗಳಿದ್ದರೂ, ಕಷ್ಟ-ಸಂಕಷ್ಟಗಳಿದ್ದರೂ ಮಕ್ಕಳ ಮುಖ ನೋಡಿಯಾದರೂ ಎಲ್ಲವನ್ನೂ ಸಹಿಸಿಕೊಂಡು ನುಂಗಿಕೊಂಡು ಹಿಂದಿನ ಕಾಲದವರು ತ್ಯಾಗ, ತಾಳ್ಮೆಗಳನ್ನು ತಮ್ಮದಾಗಿಸಿಕೊಂಡು ಜೀವನ ನಡೆಸಿದರು.

ಆದರೆ ಇಂದಿನ ಕಾಲ ಹಾಗಲ್ಲ. ಸಾಲ ಮಾಡಿಯಾದರೂ ಸರಿ, ಇದ್ದ ಒಂದಷ್ಟು ಆಸ್ತಿಯನ್ನು ಮಾರಿಯಾದರೂ ಸರಿ, ಒಣ ಪ್ರತಿಷ್ಠೆಗೆ ಒಳಗಾಗಿ ಹೆತ್ತವರು ಮಕ್ಕಳ
ಮದುವೆಯನ್ನೇನೋ ಅದ್ದೂರಿಯಾಗಿ ಮಾಡಿಬಿಡುತ್ತಾರೆ. ಆದರೆ ಅವರ ದಾಂಪತ್ಯ ಜೀವನ ಅದ್ದೂರಿಯಾಗಿರೋದಿಲ್ಲ. ನಿಯೋಜಿತ ವಿವಾಹವೇ ಇರಲಿ; ಒಬ್ಬರಿ ನ್ನೊಬ್ಬರನ್ನು ಒಪ್ಪಿಕೊಂಡು ಆದ ಪ್ರೇಮ ವಿವಾಹವೇ ಇರಲಿ, ಎಷ್ಟೋ ಕುಟುಂಬಗಳಲ್ಲಿ ಮದುವೆ ಆದ ಕೆಲವೇ ತಿಂಗಳು ಇಲ್ಲವೇ ವರುಷಗಳಲ್ಲಿ ವಿವಾಹ ವಿಚ್ಛೇದನ ಗಳು ನಡೆದು ಹೋಗುತ್ತವೆ.

ಹೀಗಾಗಲು ಕಾರಣಗಳು ಅನೇಕ, ಒಬ್ಬರಿನ್ನೊಬ್ಬರ ಗುಣ ಸ್ವಭಾವಗಳನ್ನು ಅರ್ಥ ಮಾಡಿಕೊಳ್ಳದೇನೇ, ಬರೇ ರೂಪ, ಅಂತಸ್ತು ಏನೇನೋ ಕಲ್ಪನೆಗಳು,
ಭ್ರಮೆ-ಭ್ರಾಂತಿಗಳಿಗೆ ಒಳಗಾಗಿ ಆತುರ-ಅವಸರದಲ್ಲಿ ಮಾಡಿಕೊಂಡ ಬಾಳ ಸಂಗಾತಿಯ ಆಯ್ಕೆ ವಿವಾಹ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತೆ. ಬರೀ ಶಾರೀರಿಕ
ಸೌಂದರ್ಯದ ಆಕರ್ಷಣೆಗೆ ಒಳಗಾಗುವ ಯುವಕ ಯುವತಿಯರು, ಒಬ್ಬರಿನ್ನೊಬ್ಬರ ಆಂತರಿಕ ಸೌಂದರ್ಯವನ್ನೂ ಅರಿತುಕೊಳ್ಳುವ ಜಾಣ್ಮೆಯನ್ನು, ತಾಳ್ಮೆ ಯನ್ನು ಹೊಂದಿರುವುದಿಲ್ಲ. ಕೇವಲ ಕೆಲವಾರು ಭೇಟಿಗಳಿಂದ ಇದು ಕಷ್ಟ ಸಾಧ್ಯವಾದರೂ, ಸುದೀರ್ಘ ಮಾತುಕತೆ, ವಿಮರ್ಶೆ, ವಿಚಾರಧಾರೆಗಳ ವಿನಿಮಯದಿಂದ ಸಾಧ್ಯ.

ಹೊಂದಾಣಿಕೆಯ ಕೊರತೆ ಆರಂಭದಲ್ಲಿ ಚೆನ್ನಾಗಿದ್ದ ದಂಪತಿಗಳಲ್ಲಿ ವರುಷಗಳು ಕಳೆದಂತೆ, ತಮ್ಮ ನಡೆ ನುಡಿಗಳಲ್ಲಿ ನಡತೆ ವರ್ತನೆಗಳಲ್ಲಿ ಬದಲಾಗೋದುಂಟು. ಸಹಬಾಳ್ವೆಯ ಸೂತ್ರ ದುರ್ಬಲವಾದಾಗ, ಸಣ್ಣ ಪುಟ್ಟ ತಪ್ಪುಗಳೂ, ಕೊರತೆಗಳೂ ದೊಡ್ಡದಾಗಿ ಕಾಣಲಾರಂಭಿಸುತ್ತವೆ. ಮೊದಲಿದ್ದ ಆಕರ್ಷಣೆ, ಪ್ರೀತಿ ಇಲ್ಲವಾಗ ಬಹುದು. ಇದು ಸಹಿಸಲಾರದ ಮಟ್ಟಕ್ಕೆ ಏರಿದಾಗ ವಿವಾಹ ವಿಚ್ಛೇದನವೇ ಉಳಿದಿರುವ ಏಕೈಕ ಮಾರ್ಗ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಹೊಂದಾಣಿಕೆಯೊಂದೇ ದಾಂಪತ್ಯ ಜೀವನವನ್ನು ಮುಂದುವರಿಸಲು ಉಳಿದಿರುವ ಏಕೈಕ ಮಾರ್ಗ. ಇತರರನ್ನು ಬದಲಿಸಲು ಸಾಧ್ಯವಾಗದಿದ್ದಲ್ಲಿ ಕೊಂಚ ನಾವೇ ಬದಲಾಗಬೇಕಾಗುತ್ತದೆ.

ತ್ಯಾಗದ ಮನೋಭಾವವಿಲ್ಲದಿರೋದು ಪ್ರತಿಯೊಂದು ವಿಚಾರದಲ್ಲೂ ನಾನು ಹೇಳಿದ್ದೇ ನಡೆಯಬೇಕು; ನಾನೇ ಗೆಲ್ಲಬೇಕೆಂಬ ಹಠಮಾರಿತನದಿಂಧ ಮನೆಯಲ್ಲಿ ಗಂಡ ಹೆಂಡತಿಯರಿಬ್ಬರೂ ಸ್ಪಽಗಳಾದರೆ, ಕದನ ಕಟ್ಟಿಟ್ಟ ಬುತ್ತಿ. ಸಂಸಾರದಲ್ಲಿ ಸೋತುಗೆಲ್ಲಬೇಕು; ಗೆದ್ದು ಸೋಲಬಾರದು.‘ಬಾಡಿಹೋದರೆ, ಮನೆಯ
ತೋರಣ, ಅದಕೆ ನಾನು ಮಾತ್ರವಲ್ಲ, ನೀನೂ ಕಾರಣವೆಂಬ ಕವಿಯ ಮಾತನ್ನು ಮರೆಯಬಾರದು. ಅಹಂ ಸುಗಮ ದಾಂಪತ್ಯ ಜೀವನಕ್ಕೆ ಅಡ್ಡಿಯಾಗುತ್ತದೆ. ಈ ಸತ್ಯವನ್ನೇ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದರು ‘ಹತ್ತಿರವಿದ್ದರು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ. ಎಷ್ಟು ಕಷ್ಟವೊ ಹೊಂದಿಕೆ ಎಂಬುದು ಈ ನಾಲ್ಕುದಿನದ ಬಾಳಿನಲ್ಲಿ!’ ಈ ಅಹಂ ಬರಲು ಕಾರಣಗಳು ಹಲವು; ರೂಪ, ಅಧಿಕಾರ, ಅಂತಸ್ತು ಇತ್ಯಾದಿ. ಆದರೆ ಇವೆಲ್ಲವೂ ಶಾಶ್ವತವಲ್ಲದ ಸೊತ್ತು ಸಂಪತ್ತುಗಳೆಂಬ ಅರಿವಾದರೆ, ಅಹಂ ನಮ್ಮ ಬಳಿ ಸುಳಿಯದು.

ವರದಕ್ಷಿಣೆಗಾಗಿ ನೀಡುವ ಕಿರುಕುಳದಿಂದಾಗಿ ಹುಡುಗಿ ವಿವಾಹ ವಿಚ್ಛೇದನವನ್ನು ಬಯಸುವುದುಂಟು. ಆಗ ಅದಕ್ಕೆ ಕಾನೂನಿನ ರಕ್ಷಣೆಯೂ ಇದೆ. ಲೈಂಗಿಕ ಅತೃಪ್ತಿ, ಬದಲಾವಣೆಯ ಆಸೆ ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ವಿವಾಹೇತರ ಅನೈತಿಕ ಸಂಬಂಧಗಳಿಗೆ ಕಾರಣವಾಗಿ, ವಿವಾಹ ವಿಚ್ಛೇದನಗಳಾಗುವುದುಂಟು.
ಅಂತೆಯೇ, ಆರೋಗ್ಯದ ಸಮಸ್ಯೆಗಳಿಂದ, ಬಂಜೆತನ ಇಲ್ಲವೇ ಮಕ್ಕಳನ್ನು ಹಡೆಯುವುದರಿಂದ ವಂಚಿತರಾದ ದಂಪತಿಗಳೂ ಬೇರೆಯಾಗೋದುಂಟು. ಇಂತಹ
ಸಂದರ್ಭಗಳಲ್ಲಿ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಿ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋದು ಸೂಕ್ತ. ಪರಿಹಾರವೇ ಇಲ್ಲವೆಂದಾದಲ್ಲಿ ತ್ಯಾಗವೊಂದೇ
ಉಳಿದಿರುವ ಮಾರ್ಗ.

ಒಟ್ಟಿನಲ್ಲಿ ಕೇವಲ ಮದುವೆ ಮಾತ್ರ ಅದ್ದೂರಿಯಾದರೆ ಸಾಲದು; ದಾಂಪತ್ಯ ಜೀವನವೂ ಅದ್ದೂರಿಯಾಗಿರಬೇಕು! ವಿಚ್ಛೇದನದಿಂದ, ಇಬ್ಬರ ಬದುಕು ಅತಂತ್ರ ವಾಗಬಹುದು, ಮರುವಿವಾಹ ಕಷ್ಟಸಾಧ್ಯವಾಗಬಹುದು. ವಿವಾಹ ವಿಚ್ಛೇದನಗಳು ಮಕ್ಕಳ ಮನಸ್ಸಿನ ಮೇಲೂ, ಅವರ ಭವಿಷ್ಯದ ಮೇಲೂ ಅಗಾಧವಾದ ದುಷ್ಪರಿಣಾಮವನ್ನು ಬೀರಬಹುದು. ಮಕ್ಕಳ ಹಿತದೃಷ್ಟಿಯಿಂದಾದರೂ ಡೈವರ್ಸ್ ಮಾಡಿಕೊಳ್ಳಬಾರದು. ಈ ನಡುವೆ ಮಹಿಳೆಯರೂ ದುಡಿಯುವ ಕಾರಣ, ಸಹಜವಾಗಿ ಅವರಲ್ಲಿ ಸೃಷ್ಟಿಗೊಳ್ಳುವ ಅತಿಯಾದ ಸ್ವೇಚ್ಛಾಚಾರ, ಆರ್ಥಿಕ ಸ್ವಾತಂತ್ರ (independent life) ಇಲ್ಲವೇ ಗಂಡನಲ್ಲಿ ಹುಟ್ಟಿಕೊಳ್ಳುವ ಸಂಶಯ,
ವಿವಾಹ ವಿಚ್ಛೇದನಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ವಿನಮ್ರತೆ, ನಂಬಿಕೆಗಳೇ ಸಹಕಾರಿ.

ಎಷ್ಟೋ ಮನೆಗಳಲ್ಲಿ ಮದ್ಯಪಾನ, ಜೂಜು, ಮಾದಕ ವಸ್ತುಗಳ ಚಟ, ಪರಸೀ ಸಂಬಂಧಗಳೇ ಮುಂತಾದ ದುರ್ವ್ಯಸನಗಳಿಗೆ ಒಳಗಾದ ಗಂಡನಿಂದ ಬೇಸತ್ತ
ಮಡದಿ, ಅವನಿಂದ ದೂರವಾಗಲು ಬಯಸೋದು ಸಹಜ ಸ್ವಾಭಾವಿಕ ಹಾಗೂ ಸರ್ವೇ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಈ ದುಶ್ಚಟಗಳಿಂದ ಮುಕ್ತನಾಗಿ,
ಮಡದಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಗಂಡನ ದಾಗಿರುತ್ತದೆ. ಲೌಕಿಕಸುಖ, ಅತಿ ಆಸೆಗಳು, ಪ್ರಲೋಭಗಳು, ಪ್ರಚೋದನೆಗಳು, ಊ ಈ ಜನರ
ಸಂಪರ್ಕಗಳು ಕೂಡಾ ವಿವಾಹ ವಿಚ್ಚೇದನಗಳಿಗೆ ಕಾರಣವಾಗುವುದುಂಟು.

ಕೆಲವೊಮ್ಮೆ ತವರು ಮನೆಯವರ ಪ್ರೋತ್ಸಾಹ, ಕುಮ್ಮಕ್ಕು ಕೂಡಾ ವಿವಾಹ ವಿಚ್ಛೇದನಕ್ಕೆ ಕಾರಣವಾಗೋದುಂಟು. ಗಂಡ ಹೆಂಡಿರ ನಡುವಿನ ಪ್ರತಿಯೊಂದು ಸಮಸ್ಯೆಗೂ ತಲೆ ಹಾಕದೆ, ಅವನ್ನು ಪರಿಹರಿಸಿಕೊಳ್ಳುವ ಕೆಲಸವನ್ನು ಅವರಿಗೇ ಬಿಟ್ಟುಬಿಡೋದು ಎಂದೆಂದಿಗೂ ಸೂಕ್ತ. ‘ಹೇಗೋ, adjust ಮಾಡಿಕೊಂಡು ಗಂಡನ ಜೊತೆಯೇ ಇರು. ನಾನಿಲ್ಲವೇ ನಿನ್ನಪ್ಪನ ಜೊತೆ ಕಳೆದ ೫೦ ವರುಷಗಳಿಂದ!” ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೂ ನಮ್ಮ ದೇಶದಲ್ಲಾಗುತ್ತಿರುವ ವಿವಾಹ ವಿಚ್ಛೇದನಗಳಿಗೆ ಇನ್ನೊಂದು ಕಾರಣ. ಈ ಹಿನ್ನೆಲೆಯಲ್ಲಿ ದೇಶದ ಸಂಸ್ಕೃತಿಯನ್ನು ತಿಳಿ ಹೇಳುತ್ತಾ, ಸಂಸ್ಕಾರವನ್ನು ತುಂಬುವುದು ಹಿರಿಯರ ಕೆಲಸ ವಾಗಬೇಕು. ವಿರಸಕ್ಕೆ  ಹಲವುದಾರಿ. ಆದರೆ ಸರಸ ದಾಂಪತ್ಯಕ್ಕೆ ಒಂದೇ ದಾರಿ ಅದುವೇ ಗಂಡ ಹೆಂಡತಿಯರ ನಡುವೆ ಇರಬೇಕಾದ ಪ್ರಶ್ನಾತೀತವಾದ ಪ್ರೀತಿ, ಸ್ನೇಹ, ಕಾಳಜಿ, ಬದ್ಧತೆ ಹಾಗೂ ಪರಸ್ಪರ ನಂಬಿಕೆ, ಗೌರವ, ಪ್ರೋತ್ಸಾಹ.

ಇವುಗಳಿದ್ದಲ್ಲಿ, ಒಮ್ಮತವಿಲ್ಲದ ವಿಷಯಗಳನ್ನೂ ನಿಭಾಯಿಸಬಹುದು. ಸುಖೀ ಸಂಸಾರದ ಗುಟ್ಟು ಹಿಂದಿನ ಕಾಲದವರಂತೆ, ಗಂಡನ ಹಿಂದೆ ಹೆಂಡತಿಯೂ
ಹೋಗಬೇಕಾಗಿಲ್ಲ; ಇಂದಿನ ಕಾಲದವರಂತೆ, ಹೆಂಡತಿಯ ಹಿಂದೆ ಗಂಡನೂ ಹೋಗಬೇಕಾಗಿಲ್ಲ; ಜೀವನಪರ್ಯಂತ ಜೊತೆ ಜೊತೆಯೂ ಹೋಗುತ್ತಿದ್ದರೆ
ಸಾಕು. ಕಾರಣ ಕೊನೆಗೆ ದಕ್ಕುವುದು ಗಂಡನಿಗೆ ಹೆಂಡತಿ; ಹೆಂಡತಿಗೆ ಗಂಡ ಮಾತ್ರ! ಕಾರಣಗಳು ಏನೇ ಇರಲಿ, ವಿವಾಹ ವಿಚ್ಛೇದನ ಮಾಡಿಕೊಂಡವರು ಸುಖ ಶಾಂತಿ ನೆಮ್ಮದಿಯಿಂದಿರೋದು ಅಷ್ಟರಲ್ಲೇ ಇದೆ.  ಆದುದರಿಂದ, ಅನಿವಾರ್ಯ ಸಂದರ್ಭಗಳ ಹೊರತಾಗಿ, ವಿವಾಹ ವಿಚ್ಛೇದನಗಳಿಂದ ದೂರವಿರೋದೇ ಲೇಸು.