Saturday, 10th April 2021

ಸರಕಾರಿ ಶಾಲೆಗಳಲ್ಲಿಯೂ ಬದಲಾವಣೆ ಸಾಧ್ಯ

ಅಭಿಮತ

ಸತೀಶ್‌ ಬಿ.ಕೆ

ಸರಕಾರಿ ಶಾಲೆಗಳೆಂದರೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುತ್ತವೆ. ಆದರೆ ಅಂದು, ಇಂದು ಶಾಲೆಗಳು ಸಮಸ್ಯೆ ಗಳನ್ನು ಮೆಟ್ಟಿ ನಿಂತು ಬೆಳೆದಿರುತ್ತವೆ. ಇತರ ಶಾಲೆಗಳಿಗೆ ಮಾದರಿ ಶಾಲೆ, ಉದಾಹರಣೆ ಎನಿಸಿಕೊಳ್ಳುತ್ತವೆ.

ಕೆಲವು ಶಾಲೆಗಳಿಗೆ ಸರಕಾರದ ಅನುದಾನ ಸಿಕ್ಕರೆ ಕೆಲವು ಶಾಲೆಗಳಿಗೆ ಕಂಪನಿಗಳು, ಸರಕಾರೇತರ ಸಂಸ್ಥೆಗಳ ಸಹಕಾರದಿಂದ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘಗಳ ಕೆಲಸಗಳಿಂದ ಉನ್ನತಿಕರಣ ಹೊಂದುತ್ತವೆ. ಆದರೆ ಬಹಳಷ್ಟು ಶಾಲೆಗಳಿಗೆ ಯಾವುದೇ ಅನುದಾನವಾಗಲಿ, ಸಹಾಯವಾಗಲಿ, ನೆರವಾಗಲಿ ಸಿಗದೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿರುತ್ತವೆ.

ಸಾಮಾನ್ಯವಾಗಿ ಸರಕಾರಿ ಶಾಲೆಗಳೆಂದರೆ ಕಣ್ಣ ಮುಂದೆ ಬರುವುದು ಮುರುಕಲು ಗೋಡೆಗಳು, ಮಾಸಿದ ಬಣ್ಣ, ಜೋತಾಡುವ ಕಿಟಕಿ ಬಾಗಿಲುಗಳು, ನೆಲದ ಮೇಲೆ ಕುಳಿತು ಕಲಿಯುವ ಮಕ್ಕಳು ಈ ಚಿತ್ರಣಗಳನ್ನೇ ಹೆಚ್ಚಾಗಿ ಕಾಣಲಾಗುತ್ತದೆ. ಭೌತಿಕ ಸಂಪನ್ಮೂಲಗಳ ಕೊರತೆ, ಶಿಥಿಲಾವಸ್ಥೆಯ ಕಟ್ಟಡಗಳು, ಶಾಲೆಯ ಸ್ವರೂಪವನ್ನೇ ತಗ್ಗಿಸಿ ಆಕರ್ಷಣೆ ಕಳೆದುಕೊಂಡು ಮಕ್ಕಳು ಪೋಷಕರಿಂದ ದೂರವಾಗಿ ಕೊನೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಸ್ಥಿತಿಗೆ ಬರುತ್ತವೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪೋಷಕರೆಲ್ಲರೂ ತಮ್ಮ ಮಕ್ಕಳನ್ನು ಸುಸಜ್ಜಿತ ಕಟ್ಟಡ, ಸಕಲ ಸೌಲಭ್ಯ ಹೊಂದಿರುವ ವರ್ಣರಂಜಿತ ಶಾಲೆಗಳಲ್ಲಿ ಕಲಿಸಲು ಆಸಕ್ತರಾಗಿರುತ್ತಾರೆ. ಶಾಲಾ ಶುಲ್ಕ, ಡೊನೇಶನ್ ಎಷ್ಟಾದರೂ ಸರಿಯೇ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವಿರುವ ಶಾಲೆಗಳನ್ನು ಆಯ್ದುಕೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸರಕಾರಿ ಶಾಲೆಗಳು ಭೌತಿಕ ಸಂಪನ್ಮೂಲಗಳ ಕೊರತೆ, ಆಕರ್ಷಣೆ ಕಳೆದುಕೊಂಡು ಪೋಷಕರಿಂದ ವಿಮುಖವಾಗುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಹಿರಿಯೂರಿನ ಸಹಿಪ್ರಾ ಶಾಲೆ ಸಕ್ಕರೆ ಕಾರ್ಖಾ ನೆಗೆ ನಾನು ಶಿಕ್ಷಕನಾಗಿ ಹೋದ ಬಳಿಕ, ನನ್ನ ಸರಕಾರಿ
ಶಾಲೆಯನ್ನು ಹೇಗೆ ಬದಲಾಯಿಸಬಹುದು ಎಂಬ ಸ್ವ ವಿಮರ್ಶೆ ಪ್ರಶ್ನೆಗಳಿಗೆ ಹಲವಾರು ಉತ್ತರಗಳನ್ನು ನನ್ನ ನಾ ಕಂಡು ಕೊಂಡು, ಬೋಧನಾ ಕಲಿಕಾ ಪ್ರಕ್ರಿ ಯೆಯ ಜತೆಜತೆಗೆ ನನ್ನ ಶಾಲೆಯ ಕಲಿಕಾ ವಾತಾವರಣ ಬದಲಾಯಿಸಿಕೊಳ್ಳುವುದು ನನ್ನ ಗುರುತರ ಜವಾ ಬ್ದಾರಿ. ಈ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಸಿದ್ಧಪಡಿಸಿ, ಅವುಗಳನ್ನು ಕಾರ್ಯರೂಪಣೆಗೆ ತರಲು ಮುಂದಾದೆ.

ಶಿಕ್ಷಕನೊಬ್ಬನಿಂದಲೇ ಎಲ್ಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಶಿಕ್ಷಕನೊಬ್ಬ ತನ್ನನ್ನು ತಾನು ಬದಲಾಯಿಸಿಕೊಳ್ಳ ಬಹುದು. ಈ ಬದಲಾವಣೆ ಶಾಲಾ ಮುಖಿಯಾದರೆ ಖಂಡಿತ ಎಲ್ಲವೂ ಬದಲಾಗುವ ಆಶಾಭಾವನೆ ಮೂಡುತ್ತದೆ. ಈ ಪ್ರಯತ್ನ ದಲ್ಲಿ ಶಾಲೆಯ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು ಇತರ ಸಿಬ್ಬಂದಿ ಎಲ್ಲರ ಸಮನ್ವಯತೆ ಅತ್ಯವಶ್ಯಕ. ಎಲ್ಲರೂ ಶಾಲಾ ವೃದ್ಧಿಯ ಕಡೆ ಚಿಂತನೆ ಮಾಡಿ ಕಾರ್ಯನಿರ್ವಹಿಸಿದರೆ, ಎಲ್ಲವೂ ಸಾಧ್ಯವಾಗುವುದು ಈ ನಿಟ್ಟಿನಲ್ಲಿ ಶಿಕ್ಷಕನಾಗಿ ಸಮನ್ವಯತೆ ಸಾಧಿಸ ಬೇಕಾಗಿದೆ.

ಇನ್ನು ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಪ್ರೊಜೆಕ್ಟರ್ ಮೊಬೈಲ್ ಆಪ್‌ಗಳನ್ನು ಸಂದರ್ಭೋಚಿತವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಬಹುದಾಗಿದೆ. ಜತೆಗೆ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ನಾವಿನ್ಯತೆಯನ್ನು ತರಬಹುದಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣವು ಇಂದಿನ ಬಹುಮುಖ್ಯ ಅಂಶವಾಗಿದೆ. ಸರಕಾರಿ ಶಾಲಾ ಶಿಕ್ಷಕರು ಈ ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಳ್ಳುವ ಮೂಲಕ ಶಾಲೆಗಳ ಉನ್ನತಿಕರಣ ಬಳಸಬಹುದು.

ಪ್ರಾಥಮಿಕ ಶಿಕ್ಷಣದ ಬುನಾದಿ ಕಲಿಕಾ ಹಂತವಾದ ನಲಿಕಲಿ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಇದಕ್ಕೆ ಪೂರಕವಾಗಿ ಗೋಡೆ ಬರಹಗಳು, ಕಾಡುಗಳ ಜೋಡಣೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಬುನಾದಿ ಹಂತದಿಂದಲೇ ಮಗುವಿನ ಶಿಕ್ಷಣವನ್ನು ಸದೃಢಗೊಳಿಸಿಬಹುದು. ಪ್ರತಿ ಮಗುವಿಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಬಳಕೆ ಹಾಗೂ ನಿರ್ವಹಣೆ, ಆಟದ ಮೈದಾನ, ಪೌಷ್ಟಿಕ ಆಹಾರಗಳು ಮಕ್ಕಳ ಆರೋಗ್ಯ ಮತ್ತು ಸದೃಢ ಕಲಿಕೆಗೆ ಅವಶ್ಯಕವಾಗಿವೆ ಇವುಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದು ಶಿಕ್ಷಕನ ಜಾಣ್ಮೆ ಆಗಿದೆ.

ಇನ್ನು ಪ್ರಮುಖವಾಗಿ ಮಕ್ಕಳಿಗೆ ಪರಿಸರದ ವಾತಾವರಣದಲ್ಲಿ ಪಾಠ ಪ್ರವಚನಗಳು ನಡೆಯಬೇಕು. ಶಾಲಾ ಪರಿಸರದಲ್ಲಿ ಗಿಡಮರಗಳು, ಅಲಂಕಾರಿಕ ಸಸ್ಯಗಳು ಒಂದು ಶಾಲೆಯ ಸೌಂದರ್ಯ ಹೆಚ್ಚಿಸುವುದಲ್ಲದೇ ಶುದ್ಧಗಾಳಿ ನೆರಳು ಮಕ್ಕಳ ಕಲಿಕೆಗೆ ಏಕಾಗ್ರತೆಗೆ ಪರಿಣಾಮಕಾರಿಯಾದವುಗಳಾಗಿವೆ. ಹಾಗಾಗಿ ಪರಿಸರ ಶಾಲೆ ನಮ್ಮದಾಗಿರಬೇಕು.

Leave a Reply

Your email address will not be published. Required fields are marked *