Tuesday, 29th September 2020

ಯೂ ಟ್ಯೂಬ್’ನಿಂದ ಹಣ ಗಳಿಸಬಹುದೇ ?

ಮೋಹನದಾಸ ಕಿಣಿ, ಕಾಪು

ಯಾರು ಬೇಕಾದರೂ ವಿಡಿಯೋ ಅಪ್‌ಲೋಡ್ ಮಾಡಬಹುದಾದಂತಹ ಯುಟ್ಯೂಬ್‌ನ್ನು 2005ರಲ್ಲಿಚಾಡ್ ಹರ್ಲಿ, ಸ್ಟೀವ್ ಚೆನ್ ಮತ್ತು ಜಾವೇದ್ ಕರೀಮ್ ಎಂಬವರು ಕ್ಯಾಲಿಫೋರ್ನಿಯಾ ನಗರ ಉಪಾಹಾರ ಗೃಹದ ಕೊಠಡಿಯೊಂದರಲ್ಲಿ ಯಾವುದೇ ನಿರ್ದಿಷ್ಟ ನಿರೀಕ್ಷೆ, ಗುರಿಯಿಲ್ಲದೆ ಆರಂಭಿಸಿದರು. ಸಣ್ಣ ದಾಗಿ ಆರಂಭವಾದ ಯೂಟ್ಯೂಬ್ ಇಂದು ವಿಶ್ವದ ನಾಲ್ಕನೇ ಅತಿ ದೊಡ್ಡ ಜಾಲತಾಣವಾಗಿದೆ.

ಜಾವೇದ್ ಕರೀಂ ಸೃಷ್ಟಿಸಿದ ‘ಮಿ ಅಟ್ ದಿ ಝೂ’ ಈ ಜಾಲತಾಣದ ಮೊತ್ತ ಮೊದಲ ವೀಡಿಯೊ. 2006ರಲ್ಲಿ ಗೂಗಲ್ ಯುಟ್ಯೂಬ್‌ನ್ನು ಖರೀದಿಸಿತು. ಬಳಕೆದಾರರೇ ನಿರ್ವಾಹಕರಾಗಿಯೂ-ವೀಕ್ಷಕರಾಗಿಯೂ ಇರುವ ವಿಶಿಷ್ಟ ಜಾಲತಾಣವಿದು. ಕೋಟ್ಯಂತರ ವೀಕ್ಷಕರಿರುವ ಯೂ ಟ್ಯೂಬ್ ವ್ಯಾಪಾರ, ಉದ್ಯಮಗಳಿಗೆ ಜಾಹೀರಾತು ನೀಡಲು ಉತ್ತಮ ವೇದಿಕೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಗ್ರಾಹಕರು ಮತ್ತು ಉದ್ಯಮಗಳ ಜತೆಯಲ್ಲಿ ವೀಕ್ಷಕರೂ ಇದರಿಂದ ಆದಾಯ ಗಳಿಸಬಹುದು. ಜನಸಾಮಾನ್ಯರೂ ಯಾವುದೇ ವಿಷಯದಲ್ಲಿ ವೀಡಿಯೊ ಮಾಡಿ ಈ ಜಾಲತಾಣದಲ್ಲಿ ಅಳವಡಿಸಬಹುದು. ಇದರಲ್ಲಿ ಅಳವಡಿ ಸಲಾಗುವ ವೀಡಿಯೋಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ನೋಡಬಹುದು.

ಪ್ರಮುಖ ಚುನಾವಣೆಗಳಲ್ಲಿ ರಾಜಕೀಯ ಧುರೀಣರು ಪಕ್ಷದ ಪ್ರಚಾರದ ಜಾಹೀರಾತು ರೂಪದಲ್ಲೂ ಈ ವೇದಿಕೆಯನ್ನು ವಿಶ್ವಾ ದ್ಯಂತ ಉಪಯೋಗಿಸುತ್ತಾರೆ. ಆದರೆ ಉತ್ತರ ಕೊರಿಯಾ, ಚೀನಾ, ಇರಾನ್ ಸೇರಿದಂತೆ ಕೆಲವೊಂದು ರಾಷ್ಟ್ರಗಳಲ್ಲಿ ಇದಕ್ಕೆ ನಿಷೇಧ ವಿದೆ. ಈ ಕೆಳಗಿನ ಅಂಕಿಅಂಶಗಳು ಯೂಟ್ಯೂಬ್ ಎಷ್ಟು ಬೃಹತ್ ಜಾಲತಾಣವೆಂಬುದನ್ನು ತೋರಿಸುತ್ತದೆ.

*ತಲಾ ಹತ್ತು ಲಕ್ಷಕ್ಕೂ ಹೆಚ್ಚಿನ ವೀಕ್ಷಕರಿರುವ 16,000ಕ್ಕೂ ಹೆಚ್ಚು ಚಾನಲ್‌ಗಳು ಸಕ್ರಿಯವಾಗಿವೆ.
*ಪ್ರತೀ ತಿಂಗಳು 8 ರಿಂದ 15 ಲಕ್ಷದಷ್ಟು ವೀಡಿಯೋ ಸೇರ್ಪಡೆಯಾಗುತ್ತಿವೆ.
*ವಾರ್ಷಿಕ ಆದಾಯ ಸುಮಾರು 90,000 ಕೋಟಿ ಡಾಲರ್.
*ಪ್ರತಿದಿನ 500 ಕೋಟಿ ವೀಡಿಯೋಗಳನ್ನು ವೀಕ್ಷಿಸಲಾಗುತ್ತದೆ. ದಿನವೊಂದರ ವೀಕ್ಷಕರ ಸಂಖ್ಯೆ ಸುಮಾರು 30 ದಶಲಕ್ಷ.
*2007ರಿಂದೀಚೆಗೆ ಯೂಟ್ಯೂಬ್ ತನ್ನ ಬ್ಲಾಗರುಗಳಿಗೆ (ವೀಡಿಯೊ ಮಾಡಿ ಹಾಕುವವರು) ಪಾವತಿಸಿದ ಮೊತ್ತ ಸುಮಾರು 1.50ಲಕ್ಷ ಕೋಟಿ ಡಾಲರ್.

ಯಾರು ವಿಡಿಯೋ ಹಾಕುವವರು?
*ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹಾಕುವವರದ್ದು ಒಂದು ವರ್ಗವಾದರೆ, ಕುತೂಹಲಕ್ಕೆೆಂದು ಆರಂಭಿಸಿ, ಆಗೊಮ್ಮೆ ಈಗೊಮ್ಮೆ ವೀಡಿಯೊ ಮಾಡಿ ಹಾಕುವ ವರ್ಗ ಇನ್ನೊಂದು. ಒಂದೋ ಎರಡೋ ವೀಡಿಯೊ ಹಾಕಿ ತೆಪ್ಪಗೆ ಇರು ವವರೂ ಸಾಕಷ್ಟು ಜನರಿದ್ದಾರೆ.

*ಕೆಲವರು ತಮ್ಮ ಉತ್ಪನ್ನಗಳ ವೀಡಿಯೊಗಳನ್ನು ಹಾಕಿದರೆ, ಜಾಹೀರಾತು ನೀಡುವವರದ್ದು ಇನ್ನೊಂದು ವರ್ಗ.  ವೀಡಿಯೊ ಗಳನ್ನು ಹಾಕಲು ಶುಲ್ಕವಿಲ್ಲ; ಆದರೆ ಜಾಹೀರಾತು ಹಾಕಲು ಶುಲ್ಕವಿದೆ.

*ಜಾಹೀರಾತುಗಳ ಮೂಲಕ ಬರುವ ಆದಾಯದ ಒಂದಂಶವನ್ನು, ವೀಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆೆಗನುಣವಾಗಿ, ವಿಡಿಯೋ ಹಾಕಿದವರಿಗೆ ಸಂಭಾವನೆ ರೂಪದಲ್ಲಿ ನೀಡಲಾಗುತ್ತದೆ. ಆದರೆ ಸಂಭಾವನೆ ಸಿಗಬೇಕಾದರೆ, ವೀಕ್ಷಕರ ಸಂಖ್ಯೆ ಮತ್ತು ಜಾಹೀರಾತು ವೀಕ್ಷಕರ ಸಂಖ್ಯೆ ಇಷ್ಟೇ ಇರಬೇಕೆಂಬ ಶರ್ತವಿದೆ.

10,000 ಜನ ನೋಡುವ ತನಕ ಯಾವುದೇ ಆದಾಯ ಗಳಿಸಲು ಸಾಧ್ಯವಿಲ್ಲ. ಕೆಲವರು ಪಡೆಯುವ ಆದಾಯ ಲಕ್ಷಗಳಲ್ಲಿ ಇರು ವುದೂ ಇದೆ! ಈ ಮೂಲಕ ಬರುವ ಆದಾಯವೇ ಕೆಲವರಿಗೆ ಜೀವನೋ ಪಾಯ. ನಾನು ನೋಡಿದ ಒಂದು ಚಾನಲಿನ ಬ್ಲಾಗರ್ ತನ್ನ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಇದರಿಂದ ಬರುವ ಆದಾಯದ ಮೂಲಕವೇ ಸಂಪಾದಿಸಿದ್ದರಂತೆ!

ವಿಡಿಯೋ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು, ಅದರಿಂದ ಹಣ ಗಳಿಸುವವರು ತಮ್ಮ ವಿಡಿಯೋಗಳನ್ನು ಹೆಚ್ಚು ಜನ ನೋಡುವಂತೆ ನಾನಾ ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ. ಅದರ ವಿವರ ಮುಂದಿನ ವಾರ ನೊಡೋಣ.

Leave a Reply

Your email address will not be published. Required fields are marked *