Tuesday, 7th December 2021

ತರಕಾರಿ ಬೆಲೆ ಏರಿಕೆ ನಿಯಂತ್ರಣ ಸಾಧ್ಯವಿಲ್ಲವೇ ?

eDITORIAL

ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾದಾಗ ತರಕಾರ ಬೆಲೆ ಗಗನಕ್ಕೇರುತ್ತದೆ. ಈಗ ಮಳೆ ಹಾನಿಯಿಂದ ನಿರಂತರ ಏರಿಕೆ ಕಂಡಿರುವ ಟೊಮೆಟೊ ದರ ಒಂದು ಕೆ.ಜಿ.ಗೆ ನೂರು ರುಪಾಯಿಯ ಆಸುಪಾಸಿನಲ್ಲಿದೆ. ಆದರೆ ಇನ್ನಿತರ ತರಕಾರಿ, ಹೂವು, ಸೊಪ್ಪು, ಹಣ್ಣುಗಳ ದರವೂ ಇದೇ ರೀತಿ ಏರಿಕೆಯಾಗಿದ್ದು ಇವೆಲ್ಲವೂ ಸಾಮಾನ್ಯರ ಕೈಗೆಟುಕದಂತೆ ಮುಗಿಲು ಮುಟ್ಟಿವೆ.

ಏರಿದ ಬೆಲೆಯಿಂದಾಗಿ ಸಾಮಾನ್ಯ ಜನರು ಊಟ ಉಪಚಾರಕ್ಕೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ನಿರ್ಮಾಣವಾದ ಬೆಲೆ ಏರಿಕೆ ಪರಿಸ್ಥಿತಿಗೆ ನಿಯಂತ್ರಣ ತರಲು ಸಾಧ್ಯವೇ ಇಲ್ಲವೆಂಬಂತೆ ಅಧಿಕಾರಿಗಳೂ ಕೈಕಟ್ಟಿ ಕುಳಿತುಕೊಂಡಂತಿದೆ. ಅದರ ವ್ಯತಿರಿಕ್ತ ಪರಿಣಾಮ ನಗರದ ಜನ ಜೀವನದ ಮೇಲೆ ಆಗುತ್ತದೆ. ಇದನ್ನು ತಪ್ಪಿಸಲು ಹಲವು ಮಾರ್ಗಗಳಿದ್ದರೂ ರೈತರು ಮತ್ತು ಅಽಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಬರ, ನೆರೆ ಇಡೀ ರಾಜ್ಯಾದ್ಯಂತ ಏಕಾಏಕಿ ಸಂಭವಿಸುವುದಿಲ್ಲ.

ಕೆಲ ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ವಿಪರೀತ ಮಳೆ ಯಾಗುತ್ತದೆ. ಇದು ನಮ್ಮ ರಾಜ್ಯದ ಭೌಗೋಳಿಕ ವೈಶಿಷ್ಟ್ಯ. ರೈತರು ಹಣದ ಬೆನ್ನು ಬಿದ್ದು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬದಲು, ಇದ್ದ ಜಮೀನಿನಲ್ಲೇ ಸ್ವಲ್ಪ ವಾಣಿಜ್ಯ ಬೆಳೆ ಬೆಳದು, ಇನ್ನು ಸ್ವಲ್ಪ ತರಕಾರಿ, ಹೂ, ಹಣ್ಣುಗಳನ್ನು ಬೆಳೆಯಲು ಆಸಕ್ತಿ ವಹಿಸಿದರೆ ಅತಿವೃಷ್ಟಿ, ಅನಾವೃಷ್ಟಿಯಲ್ಲೂ ತರಕಾರಿ ಬೆಲೆ ಮೇಲೆ ನಿಯಂತ್ರಣ ಸಾಧಿಸಬಹುದು. ತರಕಾರಿ ಬಳೆಯನ್ನು ಪ್ರೋತ್ಸಾಹಿಸಲು ತೋಟಗಾರಿಕೆ ಇಲಾಖೆಗಳಲ್ಲಿ ಹಲವಾರು ಯೋಜನೆ, ಸಬ್ಸಿಡಿಗಳಿವೆ.

ಅಧಿಕಾರಿಗಳು ಆ ಯೋಜನೆಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕಿದೆ. ಎಲ್ಲವೂ ಕಳಪೆ ಇರುವ ಈ ಕಾಲದಲ್ಲಿ ಪೌಷ್ಟಿಕ ಆಹಾರವಾದ ಹಣ್ಣು, ತರಕಾರಿ ಗಳನ್ನು ಅಗತ್ಯ ಹೆಚ್ಚಾಗಿರುವುದನ್ನು ಅರಿತು, ಆ ಬೆಳೆಗಳನ್ನು ಬೆಳೆಯಲು ರೈತರು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಇಡೀ ರಾಜ್ಯವನ್ನೇ
ಅಪೌಷ್ಟಿಕತೆಯತ್ತ ತಳ್ಳಿದಂತಾಗುತ್ತದೆ.