Thursday, 23rd March 2023

ಪಾಲಿಕೆ ಮೇಯರ್, ದೂಡಾ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ

ದಾವಣಗೆರೆ: ನಗರದ ರಿಂಗ್ ರಸ್ತೆ ಬಳಿ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹಾಗೂ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.

ತಲೆಗೆ ಪೂರ್ಣ ಪ್ರಮಾಣ ಹೆಲ್ಮೆಟ್ ಧರಿಸಿದ್ದರಿಂದ ಕಾರಿಗೆ ಡಿಕ್ಕಿ ಹೊಡೆದು ಹಾರಿ ಬಿದ್ದರೂ ಸಣ್ಣಪುಟ್ಟ ಗಾಯ ಗಳಿಂದ ಬೈಕ್ ಸವಾರ ಪಾರಾಗಿದ್ದಾನೆ.

ನಗರದ ರಿಂಗ್ ರಸ್ತೆ ಬಳಿ ಮೇಯರ್ ವೀರೇಶ್ ಹಾಗೂ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಕಾರಿನೊಳಗೆ ಕುಳಿತಿದ್ದರು. ಈ ವೇಳೆ ಸಿನಿಮೀಯ ರೀತಿಯಲ್ಲಿ ಬೈಕ್ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಬೈಕ್ ಸವಾರನ ಮುಖಕ್ಕೆ ಗಾಯ ಗಳಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮೇಯರ್ ಹಾಗೂ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಕಾರು ನಿಧಾನ ಗತಿಯಲ್ಲಿ ಇದ್ದ ಕಾರಣ ಬೈಕ್ ಗುದ್ದಿದ ರಭಸಕ್ಕೆ ಕಾರಿನ ಡೋರ್ ನುಜ್ಜುಗುಜ್ಜಾಗಿದೆ.

ಗಾಯಾಳು ಬೈಕ್ ಸವಾರ ವೃತ್ತಿಯಲ್ಲಿ ಮೆಕ್ಯಾನಿಕ್. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ವೀರೇಶ್ ಹಾಗೂ ದೇವರಮನಿ ಶಿವಕುಮಾರ್ ಒಂದೇ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದರು.

ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದ್ದರಿಂದ ಅನಾಹುತ ತಪ್ಪಿತು. ಎಲ್ಲರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಹಾಫ್ ಹೆಲ್ಮೆಟ್ ಧರಿಸಿದರೆ ಅಷ್ಟೇನೂ ಸುರಕ್ಷವಾಗಿರುವುದಿಲ್ಲ. ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು,” ಎಂದು ಮೇಯರ್ ವೀರೇಶ್ ಮನವಿ ಮಾಡಿದ್ದಾರೆ.

error: Content is protected !!