Saturday, 16th October 2021

ವಿಶೇಷ ಚೇತನರ ಸೇವೆಯಲ್ಲಿ ಸಾರ್ಥಕತೆ : ಕ್ಯಾಥರೀನ್

ವೈದ್ಯ ವೈವಿಧ್ಯ

ಡಾ ಎಚ್ ಎಸ್ ಮೋಹನ್

drhsmohan@gmail.com

ಕಳೆದ ವಾರ ಇಲ್ಲಿ ಬರೆದ ವಿಕಲಾಂಗ ಹುಡುಗಿ ಮಿಂಡಾ ಮತ್ತು ಆಕೆಯ ಸಾಕುತಾಯಿ ಕ್ಯಾಥರೀನ್ ಕಾಕ್ಸ್ 2008 ರಲ್ಲಿಯೇ ಅಮೆರಿಕದ ತಮ್ಮ ವಾಸಸ್ಥಾನ ನ್ಯೂಮೆಕ್ಸಿಕೋ ಪ್ರಾಂತಕ್ಕೆ ತೆರಳಿದರು. ಬೆಂಗಳೂರಿನ ಆಶ್ರಯದಲ್ಲಿ ಭೇಟಿಯಾದಾಗ ಅವರ ಬಗ್ಗೆ, ಅವರು ಮಿಂಡಾಳನ್ನು ದತ್ತು ತೆಗೆದುಕೊಳ್ಳಲು ಕಾರಣವಾದ ಬಗ್ಗೆ ಹಾಗೂ ಮಿಂಡಾಳ ಬಾಲ್ಯ ಜೀವನದ ಬಗ್ಗೆ ಹಲವು ಪ್ರಶ್ನೆಗಳನ್ನು ಬರೆದುಕೊಟ್ಟಿದ್ದೆ.

ಇ-ಮೇಲ್ ನಲ್ಲಿ ಉತ್ತರಿಸುವುದಾಗಿ ತಿಳಿಸಿದ್ದರು, ಹಾಗೆಯೇ ಉತ್ತರಿಸಿದರು ಕೂಡಾ. ಹಿಂದಿನ ನನ್ನ ಲೇಖನಕ್ಕೆ ಪೂರಕವಾದ ಮಾಹಿತಿಯನ್ನು ಧಾರಾಳವಾಗಿ
ಒದಗಿಸಿದರು. ಆ ಮಾಹಿತಿಗಳು ಅವರ ಮಾತುಗಳಲ್ಲಿಯೇ ಇದ್ದರೆ ಒಳಿತಲ್ಲವೇ ? ಮಿಂಡಾಳನ್ನು ದತ್ತು ಸ್ವೀಕರಿಸಲು ನಾನು ಬೆಂಗಳೂರಿಗೆ ಬರುವಷ್ಟರಲ್ಲಿಯೇ (1990) ಬೇರೆ 4 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೆ. ನನ್ನ ಮೊದಲ ಮಗಳು ರೆಬೆಕಾಳಿಗೆ ಈಗ 33 ವರ್ಷ (2008 ರಲ್ಲಿ ). ಹೈಥಿ ದೇಶದ ಆಸ್ಪತ್ರೆಯೊಂದರಲ್ಲಿ ನರ್ಸ್ ಕೆಲಸದಲ್ಲಿ ನಾನಿದ್ದಾಗ ಆಕೆಯ ತಂದೆ ಆಕೆಯನ್ನು ಆಸ್ಪತ್ರೆಗೆ ತಂದರು. ಆಕೆಗೆ ಆಗ 6 ತಿಂಗಳಾಗಿದ್ದರೂ ಆಕೆಯ ತೂಕ ಕೇವಲ 7 ಪೌಂಡ್. ಆಕೆಗೆ ತಾಯಿ ಇರಲಿಲ್ಲ.

ನಿಧನರಾಗಿದ್ದರು. ಆಕೆಯನ್ನು ಹೈಥಿಯಲ್ಲಿದ್ದಾಗಲೇ ದತ್ತು ತೆಗೆದುಕೊಂಡು, ನಾನು ಅಮೆರಿಕಕ್ಕೆ ಬರುವಾಗ ಇಲ್ಲಿಗೆ ಕರೆದುಕೊಂಡು ಬಂದೆ. ಆಕೆ ಈಗ ಸ್ವತಂತ್ರಳಾಗಿದ್ದಾಳೆ. ಅಲ್ಲದೆ ಆಕೆಯೂ ಮೂರು ಮಕ್ಕಳನ್ನು ದತ್ತು ಸ್ವೀಕರಿಸಿ ಸಾಕುತ್ತಿದ್ದಾಳೆ. ಮಕ್ಕಳಿಗೆ ಸಂಬಂಧಪಟ್ಟ ಮಿಸ್ಸೂರಿಯ ಒಂದು ಸಂಸ್ಥೆಯಲ್ಲಿ ಆಕೆ ಸಾಮಾಜಿಕ ಕಾರ್ಯಕರ್ತೆ ಯಾಗಿ ಕೆಲಸ ಮಾಡುತ್ತಿದ್ದಾಳೆ. ನನ್ನ ಎರಡನೇ ಮಗಳು ಬ್ರೆಜಿಲ್‌ನವಳು. ಆಕೆ ೮ ವರ್ಷದವಳಿದ್ದಾಗ ಆಕೆಯನ್ನು ದತ್ತು ಸ್ವೀಕರಿಸಿದೆ. ಡೆಬ್ಬಿಗೆ ಈಗ 32 ವರ್ಷಗಳು. ಆಕೆ ತನ್ನ ಮಕ್ಕಳೊಂದಿಗೆ ಈಗ ಕ್ಯಾಲಿಫೋರ್ನಿಯಾದಲ್ಲಿದ್ದಾಳೆ (ಅಮೆರಿಕ). ಲೈಂಗಿಕ ಶೋಷಣೆಗೆ ಒಳಗಾಗಿದ್ದ ಆಕೆ ಮಾನಸಿಕವಾಗಿ ಬಹಳ ನೊಂದಿದ್ದಳು. ಆಕೆಯ ದುಃಖವನ್ನು ನಿವಾರಿಸಿ ಆಕೆಗೆ ಬೇರೆ ಹೊಸ ಜೀವನ ಕೊಡುವ ಉದ್ದೇಶದಿಂದ ಆಕೆಯನ್ನು ದತ್ತು ತೆಗೆದುಕೊಂಡೆ.

ಬೆಂಗಳೂರಿನ ಆಶ್ರಯದಿಂದ ದತ್ತು ತೆಗೆದುಕೊಂಡ ಶಾಂತಿ ನನ್ನ ಮೂರನೆಯ ಮಗಳು. ಆಕೆಗೆ ಆಗ 4 ವರ್ಷಗಳು. ಈಗ ಆಕೆಗೆ 26 ವರ್ಷಗಳು. ಆಕೆಗೆ ಎಡಗಣ್ಣಿಲ್ಲ. ಬಲಗಣ್ಣಿನಲ್ಲಿ ಸ್ವಲ್ಪ ಸ್ವಲ್ಪ ದೃಷ್ಟಿಯಿದೆ. ಮೆದುಳಿನ ಬೆಳವಣಿಗೆ ಸಹಿತ ಕಡಿಮೆಯಿದ್ದು, ಮಾನಸಿಕ ವಾಗಿ ಆಕೆಗೆ ಸಮಸ್ಯೆ ಇದೆ. ಹಾಗಿದ್ದರೂ ಆಕೆ ನನಗೆ ತುಂಬಾ ಖುಷಿಕೊಡುವ ಹುಡುಗಿ. ಆಕೆ ಸ್ವತಂತ್ರವಾಗಿ ಕ್ಯಾಲಿಫೋರ್ನಿಯಾದಲ್ಲಿದ್ದಾಳೆ. ಆಗಾಗ ಒಂದೆರಡು ವಾರ ನಮ್ಮೊಡನೆ ಬಂದಿರುತ್ತಾಳೆ. ನನ್ನ ನಾಲ್ಕನೆಯ ಮಗಳು ಜಯಂತಿ ಭಾರತದವಳೇ. ಆಕೆ ಮೂರು ವರ್ಷದವಳಿದ್ದಾಗ ಕೊಲ್ಕತ್ತಾದಿಂದ ಬಂದಳು. ಈಗ ಆಕೆಗೆ 25 ವರ್ಷಗಳು. ಬೆನ್ನಿನ ಮಿದುಳು ಬಳ್ಳಿಯಲ್ಲಿ ಬರುವ Spina Bifida ಎಂಬ ವಿಕಲಾಂಗತೆಯಿದೆ.

ಓಡಾಡಲು ತಳ್ಳುವ ಗಾಡಿ ಉಪಯೋಗಿಸುತ್ತಾಳೆ. ಅಮೆರಿಕದ ನ್ಯೂ ಮೆಕ್ಸಿಕೋ ಪ್ರಾಂತದಲ್ಲಿರುವ ಆಕೆಗೆ 5 ವರ್ಷದ ಒಂದು ಮಗುವಿದೆ. ಬೆಂಗಳೂರಿನ ಆಶ್ರಯದವರು ಕಳುಹಿಸಿದ ಒಂದು ವಾರ್ತಾಪತ್ರದಲ್ಲಿ ಮಿಂಡಾಳ ಪ್ರಸ್ತಾಪವಿತ್ತು. ಆಕೆಗೆ ಆಗ 7 ತಿಂಗಳುಗಳು. ಕೈಕಾಲುಗಳಿಲ್ಲದ ಮಗುವೊಂದನ್ನು ತಾವು ಮಣಿಪಾಲದ ಆಸ್ಪತ್ರೆಯಿಂದ ತಂದು ಸಾಕುತ್ತಿದ್ದೇವೆ ಎಂದಿತ್ತು. ನನ್ನ ಉಳಿದ 4ಮಕ್ಕಳೆದುರಿಗೆ ಅದನ್ನು ಓದಿದಾಗ, ಅವರೆಲ್ಲರೂ ಆ ಮಗುವನ್ನು ದತ್ತು ತೆಗೆದುಕೊಳ್ಳಲು ಸೂಚಿಸಿದರು.

ವಾಷಿಂಗ್ಟನ್ ನಲ್ಲಿಯೇ ದತ್ತು ತೆಗೆದುಕೊಳ್ಳುವ ಏಜೆನ್ಸಿಯ ಮೂಲಕ ಆ ಸಂಬಂಧ ದಾಖಲೆಗಳು, ಕ್ರಮಗಳು ಜರುಗಿದವು. ನಾನು ಬೆಂಗಳೂರಿಗೆ ಆಕೆಯನ್ನು ಕರೆದುಕೊಂಡು ಬರಲು ಫೆಬ್ರವರಿ 1990 ರಲ್ಲಿ ಹೋದಾಗ ಆಕೆಗೆ 2 ವರ್ಷವಿನ್ನೂ ಆಗಿರಲಿಲ್ಲ. ಆಗ ನಾನು ಬೆಂಗಳೂರಿನಲ್ಲಿದ್ದಾಗ ಮಿಂಡಾ (ಆಗ ಅವಳು ಸ್ವಪ್ನಾ)ಳ ಬಗ್ಗೆ ಬೆಂಗಳೂರಿನ, ಮಣಿಪಾಲದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಹಲವಾರು ಲೇಖನಗಳನ್ನು ಓದಿದ್ದೆ. ಆಗ ಅವಳು ಗುಂಗುರು ಕೂದಲಿನ, ನಗುಮೊಗದ ಸುಂದರ ಮಗುವಾಗಿದ್ದಳು. ವಿಕಲಾಂಗತೆ ಇದ್ದಾಗಲೂ ಆಗಲೇ ಆಕೆ ತನ್ನ ಕೆಲಸ ತಾನೇ ಮಾಡಿಕೊಳ್ಳುವ ಪ್ರೇರಣೆ ಹೊಂದಿದ್ದಳು. ಆ ವಯಸ್ಸಿನಲ್ಲಿಯೇ ಕಷ್ಟದ ಕೆಲಸ ಮಾಡುವ ದೃಢ ಮನೋಭಾವವಿತ್ತು. ಕನ್ನಡದಲ್ಲಿ ಸುಲಭವಾಗಿ ಮಾತನಾಡುತ್ತಿದ್ದಳು. ಇಂಗ್ಲಿಷ್‌ನಲ್ಲಿ ಕೆಲವು ಶಬ್ದ ಮಾತನಾಡಲು ಗೊತ್ತಿತ್ತು. ಆಕೆಗೆ ಸ್ವತಂತ್ರವಾಗಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಆದರೆ ತುಂಬಾ ವೇಗವಾಗಿ ತೆವಳುವುದನ್ನು ಕಲಿತಿದ್ದಳು. ತನ್ನ ಕಾಲಿನ ಬೆರಳುಗಳಿಂದ ಮತ್ತು ತನ್ನ ಪೂರ್ಣಾವಸ್ಥೆಗೆ ಬೆಳೆಯದ ಕೈಗಳಿಂದ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದಳು. ಮತ್ತು ಹಲವು ಆಟಿಕೆಗಳಿಂದ ಚೆನ್ನಾಗಿಯೇ ಆಡುತ್ತಿದ್ದಳು.

ಆಕೆಯನ್ನು ಅಮೆರಿಕಗೆ ಕರೆತಂದ ನಂತರ ಆಕೆ ತನ್ನ ಮೊದಲಿನ ಗುಣಗಳನ್ನೇ ಅಭಿವೃದ್ಧಿಪಡಿಸಿಕೊಂಡು ಬೆಳೆಯತೊಡಗಿದಳು. ಮಿಂಡಾ ಮತ್ತು ಶಾಂತಿ
ಇಬ್ಬರಿಗೂ ಆರಂಭಿಕ ತರಬೇತಿ ಆಶ್ರಯದಲ್ಲಿ ತುಂಬಾ ಚೆನ್ನಾಗಿ ದೊರಕಿತ್ತು. ಅಲ್ಲಿ ಅವರಿಗೆ ವೈಯಕ್ತಿಕ ನಿಗಾ ಸೂಕ್ತವಾಗಿ ದೊರಕಿದ್ದರಿಂದ ಅವರು ಬಹಳ ಬೇಗ
ಕುಟುಂಬ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಯಿತು. ತಮ್ಮಲ್ಲಿರುವ ದೈಹಿಕ ಊನದ ಬಗ್ಗೆ ಅವರಿಬ್ಬರಿಗೂ ಯಾವುದೇ ವಿಧದ ನಾಚಿಕೆಯಾಗಲೀ,
ಚಿಂತೆಯಾಗಲೀ ಇರಲಿಲ್ಲ. ಆಶ್ರಯ ಸಂಸ್ಥೆಯಿಂದ ಈ ಗುಣಗಳು ಅವರಿಗೆ ಬಂದಿದೆ ಎಂದು ನನ್ನ ನಂಬುಗೆ. ಹಾಗಾಗಿ ಆ ಸಂಸ್ಥೆಯನ್ನು ನಾನು ಬಹಳ
ಇಷ್ಟಪಡುತ್ತೇನೆ.ಚಿತ್ರಗಳನ್ನು ಬಿಡಿಸಲು, ಅವುಗಳಿಗೆ ಬಣ್ಣ ಹಚ್ಚಲು ಮಿಂಡಾ ಬಹಳ ಬೇಗ ಆರಂಭಿಸಿದಳು. ಬಹಳ ಬೇಗ ಸ್ನೇಹಿತರನ್ನು ಮಾಡಿಕೊಳ್ಳುತ್ತಿದ್ದಳು ಹಾಗೂ ಸುಲಭವಾಗಿ ಬೆರೆಯುತ್ತಿದ್ದಳು. ಅಮೆರಿಕಕ್ಕೆ ಬಂದ ಕೆಲವೇ ದಿನಗಳಲ್ಲಿ ಕುಳಿತುಕೊಳ್ಳಲು ಕಲಿತಳು. ನಂತರ ಒಂದು ವರ್ಷದ ಅಂಡುಗಳನ್ನೂರಿ ನಡೆಯಲು ಆರಂಭಿಸಿದಳು.

ಅವಳು ಮೂರೂವರೆ ವರ್ಷದವಳಿದ್ದಾಗಲೇ ಆಕೆಗೆ ಮೊದಲ ತಳ್ಳುಗಾಡಿ (Wheelchair) ಕೊಡಿಸಿದೆವು. ಅದರಲ್ಲಿ ಓಡಾಡಲು ಬಹಳ ಬೇಗ ಕಲಿತಳು. ಮೊದಲ
ತಳ್ಳುಗಾಡಿಯಲ್ಲಿ ಆಕೆಗೇ ಅದರಲ್ಲಿ ಹತ್ತಿ ಕುಳಿತು, ನಂತರ ಅದರಿಂದ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅದರಲ್ಲಿ ಮೇಲೆ ಏರಿಸಿ ಕೆಳಗೆ ಇಳಿಸಿ ಕೊಳ್ಳುವ ವ್ಯವಸ್ಥೆ ಇರಲಿಲ್ಲ. ಆಕೆಗೆ 6 ವರ್ಷಗಳಾದಾಗ ಬೇರೆ ವೀಲ್ ಚೇರ್ ಕೊಡಿಸಿದೆವು. ಅದನ್ನು ನೆಲದ ಅಂತರಕ್ಕೆ ಇಳಿಸಲು ಬರುತ್ತಿದ್ದುದರಿಂದ ಅವಳಾ ಗಿಯೇ ಅದನ್ನು ಹತ್ತಿ ಇಳಿದು ಮಾಡುವುದು ಸುಲಭವಾಯಿತು. ಅಲ್ಲದೇ ಅದರ ಸೀಟನ್ನು ಎತ್ತರಿಸಲೂ ಬರುತ್ತಿತ್ತು. ಆಗ ಆಕೆಗೆ ಬೇರೆಯವರ ಜತೆ ಮಾತನಾಡು ವಾಗ ಅವರ ಕಣ್ಣಿನ ಸಮಾನಾಂತರಕ್ಕೆ ಬರಲು ಸಾಧ್ಯವಾಗುತ್ತಿತ್ತು. ಆಕೆ ಬೆಳೆಯುತ್ತಿದ್ದಂತೆ ಇದು ಮುಖ್ಯ ವಿಷಯವೆನಿಸಿತು.

ಬೇರೆ ದೊಡ್ಡವರ ಜತೆಯಲ್ಲಿzಗ ಆಕೆ ತನ್ನ ಸೀಟನ್ನು ಎತ್ತರಿಸಿದರೆ, ಅವರು ಅವಳನ್ನು ದೊಡ್ಡವರಾಗಿ ಗಣಿಸುತ್ತಾರೆಯೇ ಹೊರತು ಚಿಕ್ಕ ವ್ಯಕ್ತಿಯಾಗಿಯಲ್ಲ.
(ಲೇಖಕನಾಗಿ ನಾನು ರಾಮಾಯಣದಲ್ಲಿನ ರೋಚಕ ಘಟನೆಯೊಂದರ ಹೋಲಿಕೆ ಕೊಡಲು ಇಚ್ಛಿಸುತ್ತೇನೆ. ಅಂಗದ ಸಂಧಾನದ ಸನ್ನಿವೇಶದಲ್ಲಿ ಅಂಗದನು
ರಾವಣನ ಆಸ್ಥಾನಕ್ಕೆ ಸಂಧಾನಕ್ಕೆ ಬರುತ್ತಾನೆ. ಒಂದು ಕೆಚ್ಚು ಮತ್ತು ಕಿಚ್ಚು ಈ ಎರಡು ಪದಗಳಲ್ಲಿ, ವ್ಯಾಕರಣದ ಮುಖೇನ ಗಮನಿಸಿದರೆ ಅಲ್ಪಮಾತ್ರ ವ್ಯತ್ಯಾಸ. ಆದರೆ ಬದುಕಿಗೆ ಅದನ್ನು ಸಮೀಕರಣವಾಗಿಸಿದರೆ ಮಾತ್ರ ಎರಡರ ಮಧ್ಯೆ ದೊಡ್ಡ ಕಂದಕವೇ ಇದೆ ಎಂಬುದು ಗೋಚರವಾಗುತ್ತದೆ. ಕೆಚ್ಚು ಎಂಬುದು ನಮ್ಮೊಳ ಗಿನ ಛಲ. ಇದರಿಂದ ನಾವು ನಮ್ಮ ಅಭ್ಯುದಯಕ್ಕಾಗಿ ಹೇಗೆ ಶ್ರಮಿಸಬೇಕು.

ಯಕಶ್ಚಿತ್ತ ಕಪಿ ಎಂದು ನಿರ್ಲಕ್ಷ್ಯ ಮಾಡಿ ಅಲ್ಲಿ ಆತನಿಗೆ ಸೂಕ್ತ ಆಸನ ಕೊಡುವುದಿಲ್ಲ. ಅಂಗದನು ತನ್ನ ಬಾಲವನ್ನು ಸುರುಳಿ ಸುರುಳಿಯಾಗಿ ಸುತ್ತಿಕೊಂಡು
ರಾವಣನ ಸಿಂಹಾಸನದ ಎದುರು ಆತನ ಸಮಾನ ಎತ್ತರದಲ್ಲಿ ಕುಳಿತುಕೊಳ್ಳುತ್ತಾನೆ. ರಾವಣನ ಆಸ್ತಾನಿಗರು ಇದನ್ನು ನೋಡಿ ಬಹಳ ಆಶ್ಚರ್ಯಗೊಳ್ಳುತ್ತಾರೆ).
ಮಿಂಡಾ ಬರೆಯುವುದನ್ನು, ಚಿತ್ರ ಬಿಡಿಸುವುದನ್ನು ಬಹಳ ಬೇಗ ಕಲಿತಳು. ಆಕೆಗೆ ಆ ಎರಡರಲ್ಲಿಯೂ ಬಹಳ ಆಸಕ್ತಿ ಇತ್ತು. ಆಕೆ ಪೆನ್ಸಿಲ್ ಅಥವಾ ಬ್ರಷ್‌ಗಳನ್ನು
ತನ್ನ ಭುಜ ಮತ್ತು ಗಲ್ಲದ ಮಧ್ಯೆ ಹಿಡಿದುಕೊಳ್ಳುತ್ತಿದ್ದಳು. ಆಕೆಯ ರೀತಿಯ ವಿಕಲಾಂಗದವರು ಮಾಡುವಂತೆ ಬಾಯಿಂದ ಉಪಯೋಗಿಸುವ ಕಡ್ಡಿಯನ್ನು ಬಳಸು ತ್ತಿರಲಿಲ್ಲ.

ಮಿಂಡಾ ಎಲ್ಲಾ ಸಾಮಾನ್ಯ ಹುಡುಗಿಯರ ಜತೆ ಪಬ್ಲಿಕ್ ಶಾಲೆಗೆ ಕೆಲವು ಕಾಲ ಹೋದಳು. ಆದರೆ ಆಕೆಗೆ ತನ್ನ ವಿಕಲಾಂಗತೆಯ ಊನದಿಂದ ತನ್ನ ಸಾಮರ್ಥ್ಯದ
ಮಿತಿಯನ್ನು ಅರಿತುಕೊಂಡು, ತನ್ನ ವೈಯಕ್ತಿಕ ನೆಲೆಯ ವ್ಯಾಸಂಗ ಅಗತ್ಯವಿದೆಯೆಂದು ಮನದಟ್ಟು ಮಾಡಿಕೊಂಡಳು. ಹಾಗಾಗಿ ಮನೆಯಲ್ಲಿಯೇ ವ್ಯಾಸಂಗ ಮಾಡುತ್ತಾ ಪ್ರೌಢಶಾಲೆಯನ್ನು ಅಕ್ರೆಡಿಟೆಡ್ ಪ್ರೋಗ್ರಾಂನಲ್ಲಿ ಮನೆಯಲ್ಲಿರುತ್ತಲೇ ಪೂರೈಸಿದಳು. ಇದು ಅವಳಿಗೆ ಹಲವು ವಿಧದಲ್ಲಿ ಸಹಾಯವಾಯಿತು.
ತನ್ನ ವ್ಯಾಸಂಗದ ಜತೆಯಲ್ಲಿ ಕಲೆಯನ್ನು ಗಂಭೀರವಾಗಿ ಪರಿಗಣಿಸಿ ಕಲಿಯಲು ಮತ್ತು ಪರಿಣತಿ ಪಡೆಯಲಾರಂಭಿಸಿದಳು. ಆಕೆಗೆ 15 ವರ್ಷಗಳಿದ್ದಾಗ ಹೀಗೆ ಆರಂಭವಾದ ಕಲಾ ವ್ಯಾಸಂಗ (ಅಂದರೆ 5-6 ವರ್ಷಗಳ ಮೊದಲು) ತುಂಬಾ ಬಾಲೀಷ ರೀತಿಯದಾಗಿತ್ತು.

ಆಕೆಯ ಕಲಾ ಶಿಕ್ಷಕಿ ಎಮಿಲಿ -ಸ್ಟ್ ಆಕೆಗೆ ಬೇರೆ ಬೇರೆ ಭಿನ್ನ ರೀತಿಯ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಕೊಡಲಾರಂಭಿಸಿದಳು. ಅಂತಹ ನವೀನ ವಿಧಾನ
ಗಳಲ್ಲೂ ತನ್ನ ನೈಪುಣ್ಯ ತೋರಿಸುತ್ತಾ ಹಂತ ಹಂತವಾಗಿ ಕಲೆಯನ್ನು ಕಲಿಯುತ್ತಾ ಹೋದಳು. ಹರಿತ ಚಾಕು ಉಪಯೋಗಿಸಿ ಮಾಡುವ ಕ್ಲಿಷ್ಟಕರ ಪೈಂಟಿಂಗ್ –
ಲೈನೋಕಟ್ಸ್‌ಗಳನ್ನು ಸಹಿತ ಮಾಡತೊಡಗಿದಳು. ಇವೆಲ್ಲವೂ ಕ್ಯಾಥರೀನ್ ಕಾಕ್ಸ್ ಅವರು ಮಿಂಡಾ ಬಗೆಗೆ ಕೊಟ್ಟ ವಿವರಗಳಾದರೆ ಶ್ರೀಮತಿ ಕ್ಯಾಥರೀನ್
ಕಾಕ್ಸ್‌ರ ವ್ಯಕ್ತಿ ಚಿತ್ರಣ ಈ ಕೆಳಗಿದೆ.

ಶ್ರೀಮತಿ ಕ್ಯಾಥರೀನ್ ಕಾಕ್ಸ್ : ಅಮೆರಿಕದ ಕೊಲೆರೆಡೋ ವಿಶ್ವವಿದ್ಯಾಲಯದಿಂದ ನರ್ಸಿಂಗ್ ನಲ್ಲಿ ಪದವಿ ಪಡೆದು ನರ್ಸ್ ವೃತ್ತಿಯಲ್ಲಿ ಬಹಳ ವರ್ಷತೊಡಗಿದ್ದರು. ನಂತರ ಭಾಷಾಶಾಸ, ಮತಧರ್ಮ ಶಾಸ್ತ್ರ (Theology) ಗಳನ್ನು ಅಧ್ಯಯನ ಮಾಡಿದರು. ನರ್ಸ್ ವೃತ್ತಿಯಲ್ಲಿzಗ ಬಹಳ ವರ್ಷಗಳ ಕಾಲ ಮಕ್ಕಳ ಜತೆ ಕೆಲಸ ಮಾಡಿದರು. ನಂತರ  ವನದ ಅಂತಿಮ ಹಂತದ ರೋಗಿಗಳನ್ನು ಇಟ್ಟುಕೊಂಡು ಕಾಳಜಿ ವಹಿಸುವ ಹಾಸ್ಟೆಲ್‌ನಲ್ಲಿ ಸೇವೆ ಸಲ್ಲಿಸಿದರು. 62 ವರ್ಷದ ಅವರು ಮದುವೆಯಾಗದೆ ಒಂದು ಸಣ್ಣ ಪಟ್ಟಣದ ಆಂಗ್ಲಿಕನ್ ಪ್ರೀಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಅವರು ಕೆಲಸ ಮಾಡುತ್ತಿರುವ ಚರ್ಚ್ ಹಲವು ವಿಧದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದೆ. ಅಲ್ಲಿಯ ಹಳ್ಳಿಗಳ ಬಡ ಮಹಿಳೆಯರ, ಮಕ್ಕಳ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಈಗಿನ ಪರಿಸ್ಥಿತಿಯಲ್ಲಿ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುವುದು ಹೇಗೆ? ಎಂಬುದರ ಬಗ್ಗೆಯೇ ಹಲವು ವಿಧಾನಗಳಿಂದ ಅವರ ಚರ್ಚ್ ಬಡ ರೈತರಿಗೆ ಕಲಿಸಿ ಕೊಡುತ್ತಿದೆ. ಅವರು, ಮಿಂಡಾ ಮತ್ತು ಉಳಿದ ಮೂವರು ದೊಡ್ಡ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ಯಾವ ಸಮಸ್ಯೆಯಿಂದ ಬಂದ ಯಾರಿಗೂ ಆಶ್ರಯ ಕೊಡುವ ಒಂದು ರೀತಿಯ ಅನಾಥಾಲಯದಂತೆ ಅವರ ಮನೆ. ಮನೆಯಿಲ್ಲದ ಅಥವಾ ವಿವಿಧ ರೀತಿಯ
ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದವರು ಬೇರೆ ಕಡೆ ವಸತಿ ಸಿಗುವವರೆಗೆ ತಾತ್ಕಾಲಿಕವಾಗಿ ಅವರ ಮನೆಯಲ್ಲಿರುತ್ತಾರೆ. ಹೀಗೆ ಬೇರೆಯವರ ದುಃಖದ
ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮಿಂಡಾಗೆ ಕೂಡ ಇಷ್ಟ. ಆಕೆ ಹೊಸ ಅತಿಥಿಗಳಿಗೊಂದಿಗೆ ಹೃದಯವಂತಿಕೆ ಮೆರೆದು ಬೇಗ ಹೊಂದಿಕೊಳ್ಳುತ್ತಾಳೆ –
ಎಂದು ಕಾಕ್ಸ್ ನುಡಿಯುತ್ತಾರೆ. ತಾನು ಹೇಗಿದ್ದೇನೆ ಅದರ ಬಗ್ಗೆ ಮಿಂಡಾಗೆ ಸಮಾಧಾನವಿದೆ. ಹಿಂದಿನ ಯಾವುದೋ ಜನ್ಮದ ಪಾಪಕ್ಕೆ ತನಗೆ ಈಗ ಶಿಕ್ಷೆ ಬಂದಿದೆ
– ಎಂದೆ ಮಿಂಡಾ ಯೋಚಿಸುವುದಿಲ್ಲ. ಎಂಬುದು ಅವರ ಅಂಬೋಣ.

ಶ್ರೀ ಮತಿ ಕಾಕ್ಸ್ ಕೆಲವೊಮ್ಮೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡುತ್ತಾರೆ. ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹ, ಮಕ್ಕಳ ಲೈಂಗಿಕ ಶೋಷಣೆ,
ಗುಲಾಮತನ, ರಸ್ತೆಯಲ್ಲಿನ ಮಕ್ಕಳು, ಶಿಕ್ಷಣದಲ್ಲಿನ ಅಸಮಾನತೆ, ಆರೋಗ್ಯ ವಿಷಯಗಳಾದ – ಮಲೇರಿಯಾ, ಏಡ್ಸ್ ಬಾಽತ ಮಕ್ಕಳ ಆರೈಕೆ ಹೀಗೆ – ಈ ಎಲ್ಲಾ ವಿಷಯಗಳ ಬಗೆಗೆ ಉಪನ್ಯಾಸ ಕೊಡುತ್ತಾರೆ. ಹಾಗೆಯೇ ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುತ್ತಾರೆ. ಹೀಗೆ ಅವರು ವೈವಿಧ್ಯಮಯ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *