Sunday, 3rd July 2022

’ಅಂತ್ಯ ಕವಿ’ಯ ಬಗ್ಗೆ ಅಂತ್ಯವಿಲ್ಲದ ನೆನಪು

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ತಮ್ಮನ್ನೇ ‘ಅಂತ್ಯ ಕವಿ’ ಎಂದು ಕರೆದುಕೊಂಡ ಚಂಪಾ ಬಗ್ಗೆ ಹೇಳಲು ಸಾಕಷ್ಟು ಪ್ರಸಂಗಗಳಿವೆ. ಚಂಪಾ ಬಗ್ಗೆ ಮಾತಾಡಲಾ ರಂಭಿಸಿದರೆ ಅಂತ್ಯವೇ ಇರುವು ದಿಲ್ಲ. ಅಷ್ಟೊಂದು ನೆನಪುಗಳನ್ನು ಅವರು ಬಿಟ್ಟುಹೋಗಿದ್ದಾರೆ. ಇಲ್ಲದಿದ್ದರೇನಂತೆ, ಚಂಪಾ ಜತೆ ಸಣ್ಣ ಮುನಿಸು, ಹುಸಿ ಕೋಪ, ಪ್ರೀತಿ ಮತ್ತು ಶಾಶ್ವತ ಸಂಬಂಧ ಜೀವಂತ ಇದ್ದೇ ಇರುತ್ತದೆ.

1987 – 88 ರ ದಿನಗಳು. ನಾನು ಧಾರವಾಡದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಓದುವಾಗ, ‘ಅವಲೋಕನ’ ಎಂಬ ಪತ್ರಿಕೆಯನ್ನು ಹೊರ ತರುತ್ತಿದೆ. ಅದರಲ್ಲಿ ಚಂಪಾ ಕುರಿತು ವ್ಯಕ್ತಿಚಿತ್ರ ಬರೆದಿದ್ದೆ – ‘ಆ ದಿನಗಳಲ್ಲಿ ಚಂಪಾ ಬಂಡಾಯ ಸಾಹಿತಿಯ ಪೊರೆ ಕಳಚಿ, ಕನ್ನಡ ಹೋರಾಟಗಾರ ಎನಿಸಿಕೊಳ್ಳಲು ಪ್ರಯತ್ನಿಸು ತ್ತಿದ್ದಾರೆ.

ಹೀಗಾಗಿ ಧಾರವಾಡದ ಬೀದಿಗಳಲ್ಲಿ ಯಾವುದೇ ಬೀದಿ ನಾಯಿ ಕಾಲೆತ್ತಿ ಇಂಗ್ಲಿಷ್ ಗೋಡೆ ಬರಹಗಳ ಮೇಲೆ ಉಚ್ಚೆ ಹಾರಿಸಿದರೂ, ಅದು ನನ್ನ ನಾಯಿ ಅದು ನನ್ನ ನಾಯಿ ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಅವರದು ಕನ್ನಡಪ್ರೇಮ. ಇದನ್ನೆಲ್ಲ ನೋಡಿದರೆ, ಚಂಪಾ ಕನ್ನಡದ ಕಾವಲು ‘ನಾಯಿ’ಯೋ, ಬೀದಿನಾಯಿಗಳ ಕಾವಲುಗಾರನೋ ಎಂಬ ಅನುಮಾನ ಬರುತ್ತದೆ.’ ಇದನ್ನು ಓದಿದ ಚಂಪಾ, ‘ಇದು ನಿಮ್ಮ ಅನುಮಾನ ಮಾತ್ರ ಅಲ್ಲ, ನನ್ನ ಅನುಮಾನವೂ ಹೌದು. ಆ ನಾಯಿ ಗಳೆಲ್ಲ ನನ್ನವೇ ಎಂದು claim ಮಾಡಿಕೊಳ್ತಿದ್ದೆ, ಆದರೆ ಇವೇನಾದರೂ ಕನ್ನಡದ ಗೋಡೆಬರಹಗಳ ಮೇಲೆ ಉಚ್ಚೆ ಹಾರಿಸಿ ದರೆ ಏನು ಮಾಡೋದು? ಹೀಗಾಗಿ ಸುಮ್ಮನಿದ್ದೇನೆ’ ಎಂದು ಜೋರಾಗಿ ನಕ್ಕಿದ್ದರು.

ಒಂದು ದಿನ ನಾನು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಚಂಪಾ ಅವರನ್ನು ಕಾಣಲು ಹೋಗಿದ್ದೆ. ಅಲ್ಲಿ ಅವರ ಸಹೋ ದ್ಯೋಗಿ ಗಿರಡ್ಡಿ ಗೋವಿಂದರಾಜ ಕೂಡ ಇದ್ದರು. ಅವರಿಗೆ ನನ್ನನ್ನು ಪರಿಚಯಿಸಿದ ಚಂಪಾ, ‘ಇವರು ವಿಶ್ವೇಶ್ವರ ಭಟ್ಟರು, ನನ್ನ ಹಾಗೆ ಅಡ್ಡ ಹೆಸರನ್ನು ಅಡಗಿಸಲು ಗೊತ್ತಿಲ್ಲದೇ, ತಾವು ಯಾವ ಜಾತಿಯವರು ಎಂಬುದನ್ನು ಹೇಳುವ ಎದೆಗಾರಿಕೆ ಇರುವವರು’ ಎನ್ನುತ್ತ, ‘ಇವರು ಗಿರಡ್ಡಿ ಗೋವಿಂದರಾಜ, ಹೆಸರು ಕೇಳಿದರೆ ಗಂಡಸು ಅಂತ ಗೊತ್ತಾ ಗುತ್ತದೆ, ಜಾತಿ ಯಾವುದು ಅನ್ನೋದು ಗೊತ್ತಾಗುವುದಿಲ್ಲ’ ಎಂದು ಮೆಲ್ಲಗೆ ನಕ್ಕಿದ್ದರು.

ಒಮ್ಮೆ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಡಾ.ಯು.ಆರ್. ಅನಂತಮೂರ್ತಿ ಮಾತಾಡುತ್ತ, ‘ನನಗೆ ಧಾರವಾಡ ಅಂದ್ರೆ ಬಹಳ ಇಷ್ಟ. ಧಾರವಾಡದಲ್ಲಿ ಸುಮ್ಮನೆ ಕಲ್ಲು ಹೊಡೆದರೂ, ಅದು ಸಾಹಿತಿಗೋ, ಕವಿಗೋ ತಗಲುತ್ತದೆ ಅನ್ನುವ ಮಾತಿದೆ’ ಎಂದಾಗ ಸಭಿಕರೆಲ್ಲ ಚಪ್ಪಾಳೆ ತಟ್ಟಿದರು. ಆಗ ಚಂಪಾ ಎದ್ದು ನಿಂತು, ‘ಅನಂತಮೂರ್ತಿಯವರೇ, ಆ ಮಾತು ನೂರಕ್ಕೆ ನೂರು ನಿಜ, ಆದರೆ ಅದನ್ನು ಪರೀಕ್ಷೆ ಮಾಡಲು ಹೋಗಬ್ಯಾಡ್ರಿ’ ಎಂದಾಗ ಇಡೀ ಸಭಾಂಗಣ ನಕ್ಕಿತ್ತು. ಮುಂದೆ ಅವರ ಸರದಿ ಬಂದಾಗ, ‘ಧಾರವಾಡದ ಸಾಹಿತಿಗಳೆಲ್ಲ ಮೌನವಾಗಿರುವುದನ್ನು ನೋಡಿದರೆ, ಪರೀಕ್ಷಾರ್ಥವಾಗಿ ಎಸೆದ ಕಟಿನಿಂದ ಗಾಯಗೊಂಡು ಸುಮ್ಮನಿದ್ದಿರಬೇಕು’ ಎಂದು ಹೇಳಿದ್ದರು.

ಆ ದಿನಗಳಲ್ಲಿ ನಮಗೆ ಚಂಪಾ ಅವರೊಂದಿಗೆ ಹರಟೆ ಹೊಡೆಯುವುದು, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಂದ್ರೆ ಖುಷಿ ವಿಚಾರ. ಬಂಡಾಯ ಸಾಹಿತ್ಯ, ಗೋಕಾಕ್ ಚಳವಳಿ, ಕನ್ನಡಪರ ಚಟುವಟಿಕೆ, ಎಡಪಂಥೀಯ ಹೋರಾಟ, ಪ್ರಗತಿಪರ ಚಿಂತನೆ.. ಹೀಗೆ ಹತ್ತಾರು ಚಟುವಟಿಕೆಗಳಲ್ಲಿ ಚಂಪಾ ಕ್ರಿಯಾ ಶೀಲರಾಗಿದ್ದ ಕಾಲಘಟ್ಟವದು. ಈ ಮಧ್ಯೆ ಸವುಡು ಮಾಡಿಕೊಂಡು ಇಂಗ್ಲಿಷ್ ವಿಭಾಗಕ್ಕೆ ಹೋಗಿ ಪಾಠವನ್ನೂ ಮಾಡುತ್ತಿದ್ದರು. ಹಾಗೆಂದು ಅವರ ಸ್ನೇಹಿತರೇ ತಮಾಷೆ ಮಾಡುತ್ತಿದ್ದರು. ‘ಎಷ್ಟೆಂದರೂ ನಾವು ಜವಾರಿ ಮಂದಿ, ಒಂದೇ ಕೆಲಸ ಮಾಡಿ ನಮಗ ರೂಢ ಇಲ್ಲ’ ಎನ್ನುತ್ತಿದ್ದರು.

ಧಾರವಾಡದ ಸಾಹಿತ್ಯ ರಂಗಸ್ಥಳದಲ್ಲಿ ತಮ್ಮ ಧೀಮಂತಿಕೆ, ಛಾಪು ಮೂಡಿಸಿ, ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೆಣಗುತ್ತಿದ್ದ ಆರಂಭದ ದಿನಗಳವು. ವಿದ್ಯಾವರ್ಧಕ ಸಂಘದ ಕಾರ್ಯಕ್ರಮವೊಂದರಲ್ಲಿ ಚಂಪಾ, ಬೇಂದ್ರೆಯವರನ್ನು ಟೀಕಿಸಿದ್ದರು. ‘ಬೇಂದ್ರೆಗೆ ಜ್ಞಾನಪೀಠ ಬಂದು ಅಷ್ಟು ವರ್ಷ ಆತು, ಆದರೆ ನೀವು ಇನ್ನೂ ಕೂತಕೊಳಾಕ ಆಸನ ಸಿಕ್ತು ಅಂತ ಕುಂಡೆ ಒರೆಸಿಕೊಳ್ತಾ ಇದೀರಲ್ಲ? ನಮಗೆ ಅವರ ಕವನ ಇನ್ನೂ ಅರ್ಥವಾಗಿಲ್ಲ, ಇನ್ನು ಆ ಜ್ಞಾನಪೀಠ ಪ್ರಶಸ್ತಿ ಆಯ್ಕೆ
ಸಮಿತಿಯವರಿಗೆ ಹೇಗೆ ಅರ್ಥವಾಯ್ತೋ ಗೊತ್ತಾಗ್ತಿಲ್ಲ. ಅವರಾದರೂ ಬೇಂದ್ರೆ ಕವನಗಳನ್ನು ಅರ್ಥ ಮಾಡಿಸಿದ್ದರೆ ಚಲೋ ಇತ್ತು’ ಎಂದು ಹೇಳಿದರು.

ಕಾರ್ಯಕ್ರಮ ಮುಗಿದ ಬಳಿಕ, ಪತ್ರಕರ್ತರು ಚಂಪಾ ಅವರನ್ನು ಸುತ್ತುವರಿದು, ‘ಬೇಂದ್ರೆ ಬಗ್ಗೆ ನಿಮಗೇಕೆ ಆಕ್ರೋಶ?’ ಎಂದು ಕೇಳಿದ್ದಕ್ಕೆ ಚಂಪಾ, ‘ನನಗೆ ಅವರ ಬಗ್ಗೆ ಆಕ್ರೋಶವಿಲ್ಲ. ಆದರೆ ಅವರ ನಾಕುತಂತಿಗಿಂತ ಬೇರೆ ಕೃತಿಗೆ ಜ್ಞಾನಪೀಠ ಕೊಡಬಹುದಿತ್ತು. ನಾಕುತಂತಿ ಮತ್ತು ವಾಮನ ಬೇಂದ್ರೆ (ಬೇಂದ್ರೆ ಅವರ ಮಗ)
ದ.ರಾ.ಬೇಂದ್ರೆ ಅವರ ಕೆಟ್ಟ ಕೃತಿಗಳು’ ಎಂದು ಚಟಾಕಿ ಹಾರಿಸಿ ಸುದ್ದಿ ಮಾಡಿದ್ದರು. ಚಂಪಾ ಯಾವತ್ತೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರಲು ಹವಣಿಸಿ ದಂತೆ ಅನಿಸುತ್ತಿತ್ತು. ಅದಕ್ಕಾಗಿ ಅವರು ಸಾಹಿತಿ, ರಾಜಕಾರಣಿ ಹೀಗೆ ಯಾರೇ ಆಗಿರಲಿ, ಅದರಲ್ಲೂ ಗಣ್ಯರಾದವರನ್ನು ಟೀಕಿಸುತ್ತಿದ್ದರು.

‘ನೀವ್ಯಾಕೆ ಪದೇ ಪದೆ ಬೇಂದ್ರೆ, ಶಂಭಾ ಜೋಶಿಯವರನ್ನು ಟೀಕಿಸುತ್ತೀರಿ?’ ಎಂದಾಗ, ‘ಮಾಳಮಡ್ಡಿ ಮಲ್ಲ್ಯಾನನ್ನ ಟೀಕಿಸಿದ್ರೆ ನೀವು ಸುದ್ದಿ ಮಾಡ್ತೀರಾ?’ ಎಂದಿ ದ್ದರು. ಹಾಗಂತ ಬೇಂದ್ರೆ, ಶಂಭಾ ಬಗ್ಗೆ ಚಂಪಾಗೆ ಗೌರವ ಇರಲಿಲ್ಲ ಎಂದಲ್ಲ. ಟೀಕೆ, ವ್ಯಂಗ್ಯ, ವಿಡಂಬನೆ, ಒಗರು, ಕಟೋಕ್ತಿ, ಚೋದ್ಯ, ಚಂಪಾ ಸ್ವಭಾವ.
ಅದು ಅವರ ವ್ಯಕ್ತಿತ್ವದ ಮೂಲಧಾತು. ಅದಿಲ್ಲದೇ ಚಂಪಾ ಇಲ್ಲ. ನಿಮ್ಮನ್ನು ಟೀಕಿಸಿದ ಮಾತ್ರಕ್ಕೆ ನಿಮಗೆ ಆಗದವರು ಎಂದು ಭಾವಿಸಿದರೆ, ಅದು ನಿಮ್ಮ ತಪ್ಪು. ಚಂಪಾ ಯಾರನ್ನು ಇಷ್ಟಪಟ್ಟಿzರೋ, ಅವರೆಲ್ಲರ ಕಾಲೆಳೆಯದೇ ಹೋಗುತ್ತಿರಲಿಲ್ಲ; ಅದನ್ನು ಹಿಂದಾಗಡೆ ಅಲ್ಲ, ಮುಂದೆಯೇ.

ಒಮ್ಮೆ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಮುಂದೆ ಸಾಹಿತಿಗಳೆಲ್ಲ ನಿಯೋಗದಲ್ಲಿ ಹೋಗಿದ್ದರು. ‘ಕನ್ನಡಕ್ಕೆ ಸಂಬಂಧಿಸಿದಂತೆ ನೀವು ಯಾವ ಬೇಡಿಕೆಯನ್ನಾದರೂ ನನ್ನ ಮುಂದೆ ಇಟ್ಟರೆ, ಅ ಪರಿಹರಿಸುವೆ’ ಎಂದರು. ಅಷ್ಟೊತ್ತಿಗೆ ಅವರ ಸಹಾಯಕ ನಿಯೋಗದಲ್ಲಿದ್ದ ಐವರು ಸಾಹಿತಿಗಳಿಗೆ ಹಾರ ತಂದಿಟ್ಟ. ಪಟೇಲರು ಸಾಹಿತಿ ಗಳಿಗೆ ಹಾರ ಹಾಕಲು ಮುಂದಾದಾಗ ಚಂಪಾ, ‘ಪಟೇಲರೇ, ನಮಗ ಹಾರ ಬೇಡ, ಪರಿ.. ಹಾರ ಬೇಕು’ ಎಂದರು. ಆಗ ಪಟೇಲರು, ‘ಸಾಹಿತಿಗಳಿಗೆ ಹಾರ ಹಾಕಬೇಕು, ನನ್ನಂಥವರಿಗೆ ಕಂಠಹಾರ (ಮದ್ಯ) ಹಾಕಬೇಕು’ ಎಂದರು.

ಆಗ ಚಂಪಾ, ‘ಈ ವಿಷಯದಲ್ಲಿ ಸಾಹಿತಿಗಳು ಸಹ ನಿಮ್ಮ ವರ್ಗದವರೇ. ನೀವು ನಮಗೂ ಕಂಠಹಾರವನ್ನೇ ಹಾಕಬಹುದಿತ್ತು’ ಎಂದರು. ಇಷ್ಟು ಹೇಳಿದ ಬಳಿಕ ಪಟೇಲರು ‘ಸನ್ಮಾನ’ ಮಾಡದೇ ಕಳಿಸುವುದುಂಟಾ? ಚಂಪಾ ಯಾರೊಂದಿಗೂ ಸುದೀರ್ಘ, ಶಾಶ್ವತ ಸ್ನೇಹ ಇಟ್ಟುಕೊಂಡವರಲ್ಲ. ಹಾಗಂತ ದ್ವೇಷವನ್ನೂ ಮಾಡಿದವರಲ್ಲ. ಪ್ರೀತಿ ಇಲ್ಲದೆ ನಾನು ಏನನ್ನೂ ಮಾಡಲಾರೆ; ದ್ವೇಷವನ್ನೂ ಕೂಡಾ ಈ ಹನಿಗವನವನ್ನು ಚಂಪಾ ಹೊರತಾಗಿ ಬೇರೆಯವರು ಬರೆದಿದ್ದರೆ ಅಷ್ಟು ಜನಪ್ರಿಯವಾಗುತ್ತಿರಲಿಲ್ಲ.

ಆತ್ಮೀಯತೆಯ ಚೌಕಟ್ಟಿನೊಳಗೆ ವಿರೋಧಿಸುವ, ಟೀಕಿಸುವ, ಜತೆಯಲ್ಲಿಯೇ ಸಂಬಂಧವನ್ನು ಕಾಪಿಟ್ಟುಕೊಳ್ಳುವ ಆಪ್ತತೆ ಅವರಲ್ಲಿತ್ತು. ಹೀಗಾಗಿ ಬಲಪಂಥೀಯ ರಿಗೂ ಚಂಪಾ ಚಹಾಕ್ಕೆ, ಮಾತಿಗೆ ಸಿಗುತ್ತಿದ್ದರು. ತಮ್ಮಸಿದ್ಧಾಂತಗಳ ಒಳಸುಳಿಗಳ ನಡುವೆ ಅವರು ಸಂಬಂಧಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಚಂಪಾ ಇನ್ನೂ ನಿಮ್ಮ ಕಾಲೆಳೆಯುತ್ತಿದ್ದಾರೆ ಅಂದ್ರೆ ನಿಮ್ಮ ಬಗ್ಗೆ ಅವರಿಗೆ ಪ್ರೀತಿ ಇದೆ ಎಂದೇ ಅರ್ಥವಾಗಿತ್ತು. ಇದನ್ನೇ ತಪ್ಪಾಗಿ ಭಾವಿಸಿದವರಿಗೆ ಚಂಪಾ ದಕ್ಕುತ್ತಿರಲಿಲ್ಲ.

ಕೆಲವೊಮ್ಮೆ ಅವರ ವ್ಯಂಗ್ಯ ಸಹಿಸಿಕೊಳ್ಳಲು ಆಗದಷ್ಟು ಹರಿತವಾಗಿರುತ್ತಿದ್ದವು. ‘ಬ್ಲೇಡ್ ನಿಂದ ಗಡ್ಡ ಮಾಡಿ ಕೊಳ್ಳಬಹುದು, ಕತ್ತನ್ನೂ ಕತ್ತರಿಸಬಹುದು.. ಬ್ಲೇಡೇ ಬೇಡ ಅಂದ್ರೆ ಹೇಗೆ?’ ಎಂದು ಅನಂತಮೂರ್ತಿಯವರೊಂದಿಗಿನ ತಮ್ಮ ‘ಕಾದಾಟ’ದಲ್ಲಿ ಹೇಳಿದ್ದರು. ಕೆಲವೊಮ್ಮೆ ಚಂಪಾ ಅವರ ಸೃಜನಶೀಲತೆಯೆಲ್ಲ ಈ ಕಾಲೆಳೆಯುವುದರಲ್ಲಿ, ವ್ಯಂಗ್ಯದಲ್ಲಿ, ವಿಡಂಬನೆಯ ಸೋರಿ ಹೋಯಿತಾ ಎಂದು ಅನಿಸುವುದುಂಟು. ಆದರೆ ಇವಿಲ್ಲದೇ ಚಂಪಾ ಇಲ್ಲ ಎಂಬುದೂ ಅಷ್ಟೇ ಸತ್ಯ. ಚಂಪಾ ಅವರಿಗೆ ಸಾಮಾಜಿಕ ಮತ್ತು ಸಾಹಿತ್ಯಕ ಮಹತ್ವಾಕಾಂಕ್ಷೆ ಇತ್ತು.

ಅವರ ಸರೀಕರಾದ ಲಂಕೇಶ, ಅನಂತಮೂರ್ತಿ, ಕಂಬಾರ, ತೇಜಸ್ವಿ ತಮಗಿಂತ ಎತ್ತರದಲ್ಲಿ ಮೆರೆಯುವುದನ್ನು ಕಂಡಿದ್ದರು. ಲಂಕೇಶ ಪತ್ರಿಕೆಯ ಯಶಸ್ಸಿನಿಂದ ಪ್ರೇರಿತರಾಗಿ ತಮ್ಮ ‘ಸಂಕ್ರಮಣ’ವನ್ನು ವಾರಪತ್ರಿಕೆಯಾಗಿ ಪರಿವರ್ತಿಸಿ ಕೆಲ ವಾರಗಳ ಕಾಲ ಓ(ದಿ) ಡಿಸಿದರು. ಧಾರವಾಡ ತಮ್ಮ ಚಟುವಟಿಕೆಗಳಿಗೆ ಸೀಮಿತ
ವಾದದ್ದು ಎಂದು ಅನಿಸಿದ್ದರಿಂದಲೇ, ಅವರು ಬೆಂಗಳೂರಿನ ಕಡೆ ಮುಖ ಮಾಡಿದರು.

ಸರಕಾರೀ ಕೃಪಾಪೋಷಿತ ಸಾಹಿತಿಗಳು, ಬೆಂಬುಜೀಗಳು (ಬೆಂಗಳೂರಿನ ಬುದ್ಧಿಜೀವಿಗಳು), ರಾಜಧಾನಿಯ ಸಾಹಿತಿಗಳು ಎಂದು ಜರೆಯುತ್ತಲೇ ತಾವೂ ಅವರಬ್ಬರಾದರು. ಮಠ, ಮಠಾಧೀಶರನ್ನು ಟೀಕಿಸುವುದನ್ನು ತಮ್ಮ ಸಾಹಿತ್ಯಕಾರ್ಯದ ಒಂದು ಭಾಗವನ್ನಾಗಿ ಮಾಡಿಕೊಂಡ ಚಂಪಾ, ಜೆ.ಎಚ್.ಪಟೇಲರ ಅವಽಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಲು, ಅದೇ ಮಠಾಧೀಶರ, ಸ್ವಾಮೀಜಿಗಳ ಕಾಲಿಗೆರಗಿ ಆ ಪದವಿಯನ್ನು ಹೊಡಕೊಂಡರು.

ಜೀವನದಲ್ಲಿ ರಾಜಕಾರಣಭಾವ ಇಲ್ಲದಿದ್ದರೆ, ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ ಎನ್ನುತ್ತ ತಮ್ಮ ಸಹೋದ್ಯೋಗಿಗಳನ್ನು ಟೀಕಿಸುತ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ಚುನಾವಣೆಗೆ ನಿಂತು ಗೆದ್ದರು. ಪರಿಣಾಮ, ರಾಜಕೀಯ ವಾಂಛೆ ಹೆಚ್ಚಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿ, ಇಡಗಂಟು ಕಳೆದು ಕೊಂಡರು. ಕಾರ್ಯಕ್ರಮ, ಪ್ರತಿಭಟನೆ, ಭಾಷಣಗಳ ಚಂಪಾ ಕಳೆದು ಹೋದರು. ಮನಸ್ಸು ಮಾಡಿದ್ದರೆ, ಚಂಪಾ ಒಳ್ಳೆಯ ಕಾದಂಬರಿ ಬರೆಯಬಹುದಿತ್ತು.
ಒಳ್ಳೆಯ ಪ್ರಬಂಧಗಳನ್ನು ಬರೆಯಬಹುದಿತ್ತು. ವೈಚಾರಿಕ ಲೇಖನ, ವಿಮರ್ಶೆ, ಸಂಶೋಧನಾ ಲೇಖನಗಳನ್ನು ಬರೆಯಬಹುದಿತ್ತು. ಸಾಹಿತ್ಯಕ ಒಳನೋಟ, ಸೋಪಜ್ಞತೆ ನೀಡುವ ಬರಹಗಳನ್ನು ಕೈಗಿಡಬಹುದಿತ್ತು. ಆದರೆ ಕವನ, ನಾಟಕ, ಅಂಕಣಗಳಿಗೆ ಸೀಮಿತವಾದರು.

ಕೊನೆಕೊನೆಗೆ ಅವರ ಬರಹ ಕೇವಲ ಎರಡು-ಮೂರು ತಿಂಗಳಿಗೆ ಬರುತ್ತಿದ್ದ ‘ಸಂಕ್ರಮಣ’ದಲ್ಲಿನ ಚಂಪಾ ಕಾಲಂಗೆ, ನಾಲ್ಕೈದು ವರ್ಷಗಳಿಗೊಮ್ಮೆ ಬರುತ್ತಿದ್ದ ಒಂದು ಕವನ ಸಂಕಲನಕ್ಕೆ, ಪತ್ರಿಕಾ ಹೇಳಿಕೆಗಳಿಗೆ ಮತ್ತು ಚಂದಾ ಹಣ ಬಾಕಿ ಉಳಿಸಿಕೊಂಡಿದ್ದರೆ ನೆನಪಿಸುವ ಪೋಸ್ಟ್ ಕಾರ್ಡಿಗೆ ಸೀಮಿತವಾಗಿತ್ತು. ವರಾತ ಮಾಡಿದರೆ ಪ್ರಯಾಸದಿಂದ ಲೇಖನ ಬರೆದುಕೊಡುತ್ತಿದ್ದರು. ಒಮ್ಮೆ ಚಂಪಾ ಅವರಿಗೆ, ‘ನಿಮ್ಮನ್ನು ಸೇರಿದಂತೆ, ಬೆಂಗಳೂರಿನ ಸಾಹಿತಿಗಳು ಬರೆಯುತ್ತಿಲ್ಲವಲ್ಲ?’ ಎಂದು ಹೇಳಿದಾಗ, ’ಒಳ್ಳೆಯದೇ. ಇದೂ ಕನ್ನಡಮ್ಮನ ಸೇವೆಯೇ.

ಕೆಲವು ಸಾಹಿತಿಗಳು ಬರೆಯದಿರುವುದೇ ವಾಸಿ. ಅವರು ಬರೆದರೆ ಓದಬೇಕಾಗುತ್ತದಲ್ಲ?’ ಎಂದು ಕಟಕಿಯಾಡಿದ್ದರು. ನನ್ನದು ಚಂಪಾ ಅವರೊಂದಿಗೆ ಸುಮಾರು ಮೂವತ್ತೈದು ವರ್ಷಗಳ ಒಡನಾಟ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅದು ಮತ್ತಷ್ಟು ನಿಕಟವಾಯಿತು. ಈ ಅವಧಿಯಲ್ಲಿ ಅವರು ನನ್ನನ್ನು ಅನೇಕ ಸಲ ಟೀಕಿಸಿದ್ದಿದೆ. ನನ್ನ ವಿರುದ್ಧ ಸಹ ಕೆಲವು ವೇದಿಕೆಗಳಲ್ಲಿ ಮಾತಾಡಿದ್ದಿದೆ. ತಮ್ಮ ಲೇಖನಗಳಲ್ಲೂ ಟೀಕಿಸಿದ್ದುಂಟು. ಆದರೆ ಇವ್ಯಾವವೂ ನಮ್ಮಿಬ್ಬರ ಸಂಬಂಧಕ್ಕೆ ಧಕ್ಕೆಯಾಗಲಿಲ್ಲ. ವಾರಕ್ಕೊಮ್ಮೆಯಾದರೂ ಚಂಪಾ ಫೋನ್ ಮಾಡುತ್ತಿದ್ದರು. ಪತ್ರಿಕೆಯ ವರದಿ, ಲೇಖನ, ಶೀರ್ಷಿಕೆಗಳ ನೆಪವಾಗಿಟ್ಟುಕೊಂಡು ಮಾತಾಡುತ್ತಿದ್ದರು. ಕೆಲವೊಮ್ಮೆ ತಮ್ಮ ಅಸಹನೆ, ವಿರೋಧಗಳನ್ನು ತಿಳಿಸಲೂ ಅವರು ಕರೆಯುತ್ತಿದ್ದರು.

ನಾನು ಸಹ ಅವರನ್ನು ಕೆಲವು ಸಲ ಟೀಕಿಸಿದಾಗಲೂ ಅವರು ಶಟಗೊಳ್ಳಲಿಲ್ಲ. ‘ಇವೆಲ್ಲ ಗುದಮುರಿಗೆ ಇರಲೇಬೇಕು, ಇಲ್ಲ ಅಂದ್ರೆ ಬದುಕ ನೀರಸ ಆಗ್ತದ’ ಎಂದು ಹೇಳುತ್ತಿದ್ದರು. ಮತ್ತೆ ಅದೇ ವ್ಯಂಗ್ಯ, ವಿಡಂಬನೆ ಮುಂದುವರಿಯುತ್ತಿತ್ತು. ಆರಂಭದಲ್ಲಿ ನನ್ನ ಬಗ್ಗೆ ಬೇರೆಯದೇ ಕಲ್ಪನೆ ಹೊಂದಿದ್ದ ಚಂಪಾ ಬರಬರುತ್ತ, ತಮ್ಮ
ಮೆಚ್ಚುಗೆಯನ್ನು ವ್ಯಕ್ತಪಡಿಸುವಷ್ಟರ ಮಟ್ಟಿಗೆ ಬದಲಾಗಿದ್ದರು. ಇದು ನನ್ನ ಅನುಭವವೊಂದೇ ಅಲ್ಲ, ಅನೇಕರು ಹಾಗೆ ಹೇಳುವುದನ್ನು ಕೇಳಿದ್ದೇನೆ.

ಆರು ವರ್ಷಗಳ ಹಿಂದೆ, ಚಂಪಾ ಅವರು ಐದು ದಶಕ ಗಳಿಂದ ತಾವು ಅತ್ಯಂತ ಪ್ರೀತಿಯಿಂದ ಪೊರೆಯುತ್ತ ಬಂದ ‘ಸಂಕ್ರಮಣ’ ಪತ್ರಿಕೆಯ ಕಾರ‍್ಯಕ್ರಮವನ್ನು ಎರಡು ದಿನಗಳ ಕಾಲ ಶಿಕ್ಷಕರ ಸದನದಲ್ಲಿ ಏರ್ಪಡಿಸಿದ್ದರು. ಆ ಕಾರ್ಯ ಕ್ರಮಕ್ಕಾಗಿ ಆ ಎರಡೂ ದಿನ ‘ವಿಶ್ವವಾಣಿ’ ತಲಾ ಒಂದು ಪುಟ ಮೀಸಲಿಟ್ಟಿತ್ತು. ಮರು ದಿನವೇ ನಮ್ಮ ಆಫೀಸಿಗೆ ಬಂದ ಚಂಪಾ, ನನ್ನ ಜತೆ ಪ್ರಗತಿಪರ ವಿಚಾರಧಾರೆ ಎಂದು ಹೇಳಿ ಕೊಳ್ಳುವ ಯಾವ ಪತ್ರಿಕೆಗಳೂ ನಿಲ್ಲಲಿಲ್ಲ ಎಂದು ಹೇಳಿಕೊಂಡಿ
ದ್ದರು. ಕಳೆದ ವರ್ಷ ಅವರು, ‘ಸಂಕ್ರಮಣ’ ಪತ್ರಿಕೆ ನಿಲ್ಲಿಸುವ ನಿರ್ಧಾರ ಪ್ರಕಟಿಸಿದಾಗ, ನಾನು ಅವರಿಗೆ ಫೋನ್ ಮಾಡಿದ್ದೆ.

‘ಚಂಪಾ ಅವರೇ, ಯಾವ ಕಾರಣಕ್ಕೂ ಸಂಕ್ರಮಣವನ್ನು ನಿಲ್ಲಿಸಬೇಡಿ. ಅದು ಕೇವಲ ಪತ್ರಿಕೆಯಲ್ಲ, ಸಾಹಿತ್ಯ ಚಳವಳಿ. ನಿಮಗೆ ಬೇಕಾದ ಆರ್ಥಿಕ ನೆರವನ್ನು ವ್ಯವಸ್ಥೆ ಮಾಡಲು ನಾನು ಸಿದ್ಧ. ಆದರೆ ನೀವು ಬದುಕಿzಗ, ನಿಮ್ಮ ಪತ್ರಿಕೆ ಸಾಯಬಾರದು. ನಿಮ್ಮ ವಿಶ್ವಾಸಿಕರನ್ನಿಟ್ಟುಕೊಂಡು ಪತ್ರಿಕೆ ಮುಂದುವರಿಸಿ. ಯಾವ ಕಾರಣಕ್ಕೂ ಪತ್ರಿಕೆ ನಿಲ್ಲಿಸಬೇಡಿ’ ಎಂದು ಹೇಳಿದೆ. ಚಂಪಾ ಏನನ್ನೂ ಹೇಳಲಿಲ್ಲ. ಅದಾಗಿ ಹದಿನೈದು ದಿನಗಳ ನಂತರ, ‘ಭಟ್ಟರೇ, ಪತ್ರಿಕೆ ನಿಲ್ಲಿಸಬೇಡಿ, ನಾನು ಹಣ ಕಾಸು ನೆರವು ನೀಡುತ್ತೇನೆ ಎಂದು ಹೇಳಿದವರು ನೀವೊಬ್ಬರೇ.

ನಿಮಗೆ ಧನ್ಯವಾದಗಳು’ ಎಂದು ಹೇಳಿದ್ದರು. ಕಳೆದ ಮೂರು ತಿಂಗಳಿನಿಂದ ಚಂಪಾ ಅವರನ್ನು ಕಾಣಬೇಕು, ಅವರೊಂದಿಗೆ ಹರಟೆ ಹೊಡೆದು ಬರಬೇಕು, ಅವರ ಆರೋಗ್ಯ ವಿಚಾರಿಸಬೇಕು ಎಂದು ಅಂದುಕೊಳ್ಳುತ್ತಿದ್ದೆ. ಎರಡು-ಮೂರು ಸಲ ಫೋನ್ ಮಾಡಿದೆ. ಯಾಕೋ ಅವರು ನನ್ನ ಕರೆ ಸ್ವೀಕರಿಸಲಿಲ್ಲ. ಆದರೆ ಅವರು ಹೀಗೆ ಹೇಳದೇ-ಕೇಳದೇ ನಡೆದುಬಿಡುತ್ತಾರೆ ಅಂದುಕೊಂಡಿರಲಿಲ್ಲ.

ಚಂಪಾ ಅವರನ್ನು ಅವರ ಬರಹ, ಕವನಗಳದರೂ ನೆನೆಯಬಹುದು ಅಂದುಕೊಂಡರೆ, ಅವರೇ ಬರೆದ ಈ ಕವನ ನೆನಪಾಗಿ ಯಾಕೋ ವ್ಯಥೆಯಾಯಿತು. ನಾನು ಬಿತ್ತಿದ್ದೆಷ್ಟೋ ನಾನು ಒಕ್ಕಿದ್ದೆಷ್ಟೋ ಬಾಯಿ ಬಿಡಲಿಕ್ಕೆಂದು ನನಗೆ ಸಿಕ್ಕಿದ್ದೆಷ್ಟೋ ಸಿಕ್ಕ ಈ ಇಷ್ಟರಲ್ಲಿ ನಿನಗೆ ದಕ್ಕಿದ್ದೆಷ್ಟೋ ಅದಕ್ಕೇ ಹೇಳುತ್ತೇನೆ ಕೇಳು, ಚಿನ್ನ ನನ್ನ ಕವನಗಳಲ್ಲಿ, ಬರಹಗಳಲ್ಲಿ ಹುಡುಕದಿರು ನನ್ನ ತಮ್ಮನ್ನೇ ‘ಅಂತ್ಯ ಕವಿ’ ಎಂದು ಕರೆದುಕೊಂಡ ಚಂಪಾ ಬಗ್ಗೆ ಹೇಳಲು ಸಾಕಷ್ಟು ಪ್ರಸಂಗಗಳಿವೆ. ಚಂಪಾ ಬಗ್ಗೆ ಮಾತಾಡಲಾರಂಭಿಸಿದರೆ ಅಂತ್ಯವೇ ಇರುವುದಿಲ್ಲ. ಅಷ್ಟೊಂದು ನೆನಪುಗಳನ್ನು ಅವರು ಬಿಟ್ಟುಹೋಗಿzರೆ. ಇಲ್ಲದಿದ್ದರೇನಂತೆ, ಚಂಪಾ ಜತೆ ಸಣ್ಣ ಮುನಿಸು, ಹುಸಿ ಕೋಪ, ಪ್ರೀತಿ ಮತ್ತು ಶಾಶ್ವತ ಸಂಬಂಧ ಜೀವಂತ ಇದ್ದೇ ಇರುತ್ತದೆ.