Friday, 24th September 2021

ಆತಂಕ ಸೃಷ್ಟಿಸಿದ ರೆಡಾಕ್ಸೈಡ್ ಮಿಶ್ರಿತ ಕೆಂಪಡಕೆ ಮಾರಾಟ

ಶಿರಸಿ : ಮಾರುಕಟ್ಟೆಯಲ್ಲಿ ಕೆಂಪಡಕೆಗೆ ಬಂಗಾರದ ಬೆಲೆ ಬಂದ ಬೆನ್ನಿಗೇ ಕಳಪೆ ಗುಣಮಟ್ಟದ ಕೆಂಪಡಕೆ ಕ್ಯಾನ್ಸರ್ ಕಾರಕ ರೆಡಾಕ್ಸೈಡ್ ಮಿಶ್ರಣದೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಂಪಡಕೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ ಅಂದಾಜು 53 ಸಾವಿರ ಗಡಿ ದಾಟಿದೆ. ದಿನದಿಂದ ದಿನಕ್ಕೆ ದರ ಏರುಮುಖವಾಗಿದೆ. ಕಾರಣ ಮಾರುಕಟ್ಟೆಗೆ ಎರಡನೇ ದರ್ಜೆಯ ಅಡಕೆಗೆ ರೆಡಾಕ್ಸೈಡ್ ಹಾಕಿ ಮಾರಾಟಕ್ಕೆ ತರಲಾಗುತ್ತಿದೆ. ನಗರದ ಕೆಲ ಅಡಕೆ ವಕಾರಿ ವ್ಯಾಪಾರಸ್ಥರು ಇದೇ ರೆಡಾಕ್ಸೈಡ್ ಹಾಕಿ ಹೊರಗಿನ ಮಾರುಕಟ್ಟೆಗೂ ರವಾನಿಸುತ್ತಿದ್ದಾರೆ. ಇದು ಹೊರಗಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದ್ದು, ಇದು ಭವಿಷ್ಯದಲ್ಲಿ ಅಡಕೆ ದರ ಇಳಿಕೆಗೆ ಕಾರಣ ವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕಳಪೆ ದರ್ಜೆಗೇ ಬೇಡಿಕೆ!
ಎರಡು ಹಾಗೂ ಮೂರನೆ ದರ್ಜೆಯ ಅಡಕೆಗೆ ಮಾರುಕಟ್ಟೆಯಲ್ಲಿ ಮೊದಲ ದರ್ಜೆ ಅಡಕೆಗಿಂತ ಕ್ವಿಂಡಾಲ್ ಗೆ 5 ರಿಂದ 6 ಸಾವಿರ ರೂ. ಕಡಿಮೆ ಲಭಿಸುತ್ತದೆ. ಬೆಳೆಗಾರರು ಸಹಕಾರಿ ಸಂಸ್ಥೆಗಳ ಮೂಲಕ ಅಥವಾ ಖಾಸಗಿ ಯಲ್ಲಿ ತಮ್ಮ ಉತ್ಪನ್ನವನ್ನು ಮಾರುತ್ತಾರೆ.

ಖಾಸಗಿ ಅಥವಾ ಟೆಂಡರ್ ಮೂಲಕ ಖರೀದಿದಾರರು ಬೆಟ್ಟೆ ಜತೆ ಹೆಚ್ಚಾಗಿ ಕಳಪೆ ದರ್ಜೆಯ ಅಡಕೆಗೇ ಬೇಡಿಕೆ ಇಟ್ಟು ಖರೀದಿಸುತ್ತಾರೆ. ಹಾಗೆ ಖರೀದಿಸಿದ ಅಡಕೆಯನ್ನು ತಮ್ಮ ಗೋದಾಮಿಗೆ ಸಾಗಿಸಿ ಅಲ್ಲಿ ರೆಡಾಕ್ಸೈಡ್ ಮಿಶ್ರಣ ಮಾಡಿ ಹೊರ ಜಿಲ್ಲೆ, ರಾಜ್ಯಕ್ಕೆ ರವಾನಿಸುತ್ತಿದ್ದಾರೆ. ಅಂದಾಜಿನ ಪ್ರಕಾರ ಶಿರಸಿ, ಸಿದ್ದಾಪುರ, ಯಲ್ಲಾ ಪುರ ಮಾರುಕಟ್ಟೆಯಲ್ಲಿ 100ಕ್ಕೂ ಹೆಚ್ಚು ಬ್ಯಾಗ್ ಗಳು ನಿತ್ಯ ರೆಡಾಕ್ಸೈಡ್ ಮಿಶ್ರಣದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತವೆ!

ಕನಿಷ್ಠ 3ರಿಂದ 5 ಸಾವಿರ ಲಾಭ: ವರ್ತಕರಿಗೆ ರೆಡಾಕ್ಸೈಡ್ ಮಿಶ್ರಣದ ಅಡಕೆ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲು ಕ್ವಿಂಟಾಲ್ ಒಂದಕ್ಕೆ ಗರಿಷ್ಠ 300ರಿಂದ 500 ರೂ. ಖರ್ಚಾಗುತ್ತದೆ. ಆದರೆ ಅದೇ ಅಡಕೆಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ ಕನಿಷ್ಠ 3ರಿಂದ 5 ಸಾವಿರ ರೂ. ಲಭ್ಯವಾಗುತ್ತಿದೆ. ಸ್ಥಳೀಯವಾಗಿ ಬಣ್ಣ ಹಾಕಿದ ಅಡಕೆ ಖರೀದಿ ಕಡಿಮೆ ಪ್ರಮಾಣದಲ್ಲಿದ್ದು, ಹೊರಗಿನ ಖರೀದಿದಾರರು, ಮಾರುಕಟ್ಟೆಯೇ ಇಂಥ ಅಡಕೆಗೆ ಮುಖ್ಯ ವೇದಿಕೆಯಾಗಿದೆ.

ಅಡಕೆ ಕ್ಯಾನ್ಸರ‍್ ಕಾರಕ ಎಂಬ ಕತ್ತಿ ಬೆಳೆಗಾರರ ಮೇಲೆ ತೂಗುತ್ತಿರುವ ಸಂದರ್ಭದಲ್ಲಿ ನೈಜ ಕ್ಯಾನ್ಸರ್ ಕಾರಕ ರೆಡಾಕ್ಸೈಡ್ ಅನ್ನು ಅಡಕೆಗೆ ಮಿಶ್ರಣ ಮಾಡಿ ಮಾರುಕಟ್ಟೆಗೆ ಬಿಡುತ್ತಿರುವುದು ಬೆಳೆಗಾರರ ಪಾಲಿಗೆ ನುಂಗಲಾರದ ತುತ್ತಾಗಿದೆ. ಈ ಜಾಲ ವ್ಯವಸ್ಥಿತವಾಗಿ ಮುಚ್ಚಿದ ಬಾಗಿಲ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಪಟ್ಟವರು ತ್ವರಿತ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಟಿಎಸ್ಎಸ್ ರವೀಶ ಹೆಗಡೆ, ಅಡಕೆಗೆ ದರ ಏರಿಕೆ ಸಂದರ್ಭದಲ್ಲಿ ಇಂಥ ವ್ಯವಹಾರಗಳಿಗೆ ಅವಕಾಶ ನೀಡಿದರೆ ಅಡಕೆಯ ಮಾನ ಹೋಗುತ್ತದೆ. ಇಂಥ ಕೃತ್ಯದಲ್ಲಿ ತೊಡಗಿದರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು ಒತ್ತಾಯಿಸಿದರು.

Leave a Reply

Your email address will not be published. Required fields are marked *