Thursday, 23rd September 2021

ಮೆಸ್ಸಿ ದಾಖಲೆ ಮುರಿದ ಸುನೀಲ್ ಚೆಟ್ರಿ

ದೋಹಾ: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎರಡು ಗೋಲ್ ಗಳನ್ನು ದಾಖಲಿಸುವ ಮೂಲಕ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆ ಮುರಿದಿದ್ದಾರೆ.

ಸೋಮವಾರ ರಾತ್ರಿ ನಡೆದ 2022 ಫಿಫಾ ವಿಶ್ವಕಪ್ ಮತ್ತು 2023 ಎಎಫ್‌ಸಿ ಏಷ್ಯನ್ ಕಪ್‌ಗಾಗಿ ಜಂಟಿ ಪ್ರಾಥಮಿಕ ಅರ್ಹತಾ ಸುತ್ತಿನಲ್ಲಿ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 36 ವರ್ಷದ ಚೆಟ್ರಿ ಈ ಸಾಧನೆ ಮಾಡಿದ್ದಾರೆ.

ಮೆಸ್ಸಿಯನ್ನು ಹಿಂದಿಕ್ಕಿದ ಚೆಟ್ರಿ 74 ಅಂತಾರಾಷ್ಟ್ರೀಯ ಗೋಲ್ ಗಳೊಂದಿಗೆ ಎರಡನೇ ಅತಿ ಹೆಚ್ಚು ಸಕ್ರಿಯ ಅಂತಾರಾಷ್ಟ್ರೀಯ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಕ್ರಿಯ ಅಂತರಾಷ್ಟ್ರೀಯ ಗೋಲ್ ಸ್ಕೋರರ್ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (103)  ಮೊದಲ ಸ್ಥಾನದಲ್ಲಿದ್ದಾರೆ. ಬಾರ್ಸಿಲೋನಾದ ಮೆಸ್ಸಿ (72 ಗೋಲು)ಯಿಂದ ಚೆಟ್ರಿ ಎರಡು ಗೋಲುಗಳಿಂದ ಮುಂದಿದ್ದಾರೆ ಮತ್ತು ಯುಎಇಯ ಅಲಿ ಮಬ್‌ಖೌತ್ (73 ಗೋಲು) ಅವರಿಗಿಂತ ಒಂದು ಗೋಲಿನಿಂದ ಮುಂದಿದ್ದಾರೆ.

ಸೋಮವಾರ ಜಸ್ಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಚೆಟ್ರಿ 79ನೇ ನಿಮಿಷದಲ್ಲಿ ಹಾಗೂ ಹೆಚ್ಚುವರಿ ಸಮಯದಲ್ಲಿ ಗೋಲು ಗಳನ್ನು ದಾಖಲಿಸಿದರು. ಭಾರತ ಈ ಪಂದ್ಯವನ್ನು 2-0 ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತವು ಏಳು ಪಂದ್ಯಗಳಿಂದ ಆರು ಅಂಕಗಳೊಂದಿಗೆ ಗ್ರೂಪ್ ಇ ಯಲ್ಲಿ ಮೂರನೇ ಸ್ಥಾನಕ್ಕೆ ಏರಿತು.

Leave a Reply

Your email address will not be published. Required fields are marked *