Thursday, 19th May 2022

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ: ಐದು ಮಂದಿ ಬಂಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಾಗವೇರಿ ಗ್ರಾಮದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದಾರೆ. ಇನ್ನಿತರ ಆರೋಪಿಗಳಿಗಾಗಿ ತೀವ್ರ ಶೋಧ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ, ಪ್ರವೀಣ್, ರಿಯಾಜ್ ಮತ್ತು ಮಧುಸೂಧನ್ ಎಂಬ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಎಂ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಆದೇಶದ ಮೇರೆಗೆ, ಕೇಂದ್ರ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಎಂ.ಚಂದ್ರಶೇಖರ್ ಅವರು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ನೇರ ಮೇಲ್ವಿಚಾರಣೆಯಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು.

ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ಜೆಲ್ಲಿ ಕ್ರಷರ್ ನಲ್ಲಿ ಸೋಮವಾರ ರಾತ್ರಿ ದುರಂತ ಸಂಭವಿಸಿದ್ದು, ಘಟನೆಗೆ ಜಿಲೆಟಿನ್ ಕಡ್ಡಿಗಳ ಸ್ಫೋಟವೇ ಕಾರಣ ಎಂದು ತಿಳಿದು ಬಂದಿದೆ.