Tuesday, 9th August 2022

ಭರವಸೆ ಮೂಡಿಸಿದ ಸಿಐಡಿ

ಪಿಎಸ್‌ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ, ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿರುವುದು ಶ್ಲಾಘನೀಯ ಕಾರ್ಯ.

ಈ ಪ್ರಕರಣದ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳು, ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೆ ತನಿಖಾ ತಂಡವನ್ನು ಮುನ್ನಡೆಸಿದ್ದು, ಅಭಿನಂದನೆಗೆ ಅರ್ಹರಾಗಿದ್ದಾರೆ. ಪಿಎಸ್‌ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳು ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನ ಗಳಲ್ಲಿರುವ ಕಿಂಗ್‌ಪಿನ್‌ಗಳ ಹೆಸರು ಕೇಳಿಬಂದ್ದಿದ್ದು, ಸಿಐಡಿ ತಂಡ ಅವರನ್ನೆಲ್ಲ ಪತ್ತೆ ಹಚ್ಚಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈಪ್ರಭಾವಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ.

ಎಡಿಜಿಪಿಗೆ ಅಮೃತ್ ಪೌಲ್‌ಗೆ ೧೦ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿ ರುವುದರಿಂದ ತನಿಖೆಗೆ ಸಾಕಷ್ಟು ಸಮಯಾವಕಾಶ ಸಿಕ್ಕಂತಾಗಿದೆ. ಅಕ್ರಮವೆಸಗಿದ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರ, ನೇಮಕ ವಿಭಾಗ, ಓಎಂಆರ್ ತಿದ್ದುಪಡಿ ಹೀಗೆ ಹಲವು ಹಂತಗಳಲ್ಲಿ ನಂಟು ಸಾಧಿಸಿದ್ದು ಹೇಗೆ? ಏಜೆಂಟರ ಮೂಲಕ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳು ಸಂಪರ್ಕ ಸಾಧಿಸಿದ್ದು ಹೇಗೆ? ಈ ಪ್ರಕರಣದಲ್ಲಿ ಏಜೆಂಟರ ಜತೆಯಲ್ಲಿ ರಾಜಕೀಯ ಮುಖಂಡರೂ ಭಾಗಿಯಾಗಿದ್ದಾರಾ? ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವೆ ನಂಟು ಏರ್ಪಟ್ಟಿತ್ತಾ? ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತಾ? ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸ ಬೇಕಾಗಿದೆ.

ಆಗ ಈ ಪ್ರಕರಣದಲ್ಲಿ ಭಾಗಿಯಾದ ದೊಡ್ಡ ದೊಡ್ಡ ಕುಳಗಳೂ ಸಿಕ್ಕಿಬೀಳಬಹುದು. ಅಲ್ಲದೆ, ಮುಂದಿನ ನೇಮಕ ಪ್ರಕ್ರಿಯೆಗಳಲ್ಲಿ
ಭ್ರಷ್ಟಾಚಾರಕ್ಕೆ ದಾರಿಯಾಗದಂತೆ ಬದಲಾವಣೆ ತರಬಹುದು. ಪಿಎಸ್‌ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆಯುವಲ್ಲಿ ಸಿಐಡಿ ತಂಡ ಈವರೆಗೂ ಸರಿಯಾದ ದಾರಿಯಲ್ಲಿ ಸಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಸಿಐಡಿ ವಿಭಾಗದ ಮೇಲೆ ಭರವಸೆ ಮೂಡಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಇಲಾಖೆಗಳ ನೇಮಕದಲ್ಲೂ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸುವ ಮೂಲಕ ಭ್ರಷ್ಟಾಚಾರಿ ಗಳನ್ನು ಜೈಲಿಗಟ್ಟುವಲ್ಲಿ ಸಿಐಡಿ ಯಶಸ್ವಿಯಾಗಲಿ.