Friday, 13th December 2024

Aaram Aravind Swamy: ಹೆಸರಲ್ಲಿ ಮಾತ್ರ ಆರಾಮ, ಅರವಿಂದ್ ಸ್ವಾಮಿ ಲೈಫಲ್ಲಿ ಬರೀ ಟೆನ್ಷನ್; ‘ಆರಾಮ್ ಅರವಿಂದ್ ಸ್ವಾಮಿ’ ಟ್ರೈಲರ್‌ ಔಟ್‌

Aaram Aravind Swamy

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಅನೀಶ್ ತೇಜೇಶ್ವರ್ ನಟನೆಯ ʼಆರಾಮ್ ಅರವಿಂದ್ ಸ್ವಾಮಿʼ (Aaram Aravind Swamy) ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕಾಮಿಡಿ ಜತೆಗೆ ಎಮೋಷನ್, ಆ್ಯಕ್ಷನ್‌ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೈಲರ್‌ ತಯಾರಿಸಲಾಗಿದೆ. 2 ನಿಮಿಷ 14 ಸೆಕೆಂಡ್ ಇರುವ ʼಆರಾಮ್ ಅರವಿಂದ್ ಸ್ವಾಮಿʼ ಟ್ರೈಲರ್‌ ಗಮನ ಸೆಳೆಯುವಂತಿದೆ. ಮೇಲ್ನೋಟಕ್ಕೆ ಫುಲ್ ಆರಾಮ್ ಆಗಿ ಇರುವ ಅರವಿಂದ್ ಸ್ವಾಮಿ ಜೀವನದಲ್ಲಿ ಬರೀ ಟೆನ್ಷನ್‌ಗಳೇ ತುಂಬಿವೆ. ಪ್ರೀತಿ, ಮದುವೆ, ದುಡ್ಡ, ಫ್ಯಾಮಿಲಿ ಸುತ್ತ ಕಥೆ ಸಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ʼಆರಾಮ್ ಅರವಿಂದ್ ಸ್ವಾಮಿʼ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ.

ʼಆರಾಮ್ ಅರವಿಂದ್ ಸ್ವಾಮಿʼ ಝಲಕ್ ನೋಡುತ್ತಿದ್ದರೆ ಅನೀಶ್‌ಗೆ ಬ್ರೇಕ್ ನೀಡುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ವೈವಿಬಿ ಶಿವಸಾಗರ್ ಕ್ಯಾಮೆರಾ ವರ್ಕ್, ಉಮೇಶ್‌ ಆರ್‌.ಬಿ. ಸಂಕಲನ ಈ ಚಿತ್ರಕ್ಕಿದೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ‘ನಮ್‌ ಗಣಿ ಬಿಕಾಂ ಪಾಸ್‌’, ‘ಗಜಾನನ ಆ್ಯಂಡ್‌ ಗ್ಯಾಂಗ್‌’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ 3ನೇ ಚಿತ್ರ ಇದಾಗಿದ್ದು, ಇದೇ ತಿಂಗಳ 22ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

ಟಿಕೆಟ್ ಆಫರ್

ಚಿತ್ರ ರಿಲೀಸ್‌ ಆಗುವ ನ. 22ರಿಂದ ʼಆರಾಮ್ ಅರವಿಂದ್ ಸ್ವಾಮಿʼ ಚಿತ್ರದ ಟಿಕೆಟ್ ಬೆಲೆ ಕೇವಲ 99 ರೂ. ಆಗಿರಲಿದೆ. ಆದರೆ ಈ ಆಫರ್ 3 ದಿನ ಇರಲಿದೆ. ಆ ಮೇಲೆ ಎಂದಿನಂತೆ ಟಿಕೆಟ್ ದರ ಪಾವತಿಬೇಕಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿರುವ ಮಿಲನಾ ನಾಗ್‌ರಾಜ್‌ ಅವರೂ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಮಲಯಾಳಂ ಮೂಲದ ಯುವತಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅನೀಶ್‌ ಮತ್ತು ಮಿಲನಾ ನಟನೆಯ ಮೊದಲ ಸಿನಿಮಾ ಇದಾಗಿದ್ದು, ಸೆಟ್ಟೇರಿದ ದಿನದಿಂದಲೇ ಗಮನ ಸೆಳೆದಿದೆ. ಕೆಲವು ದಿನಗಳ ಹಿಂದೆ ಮಿಲನಾ ಡಬ್ಬಿಂಗ್‌ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಜತೆಗೆ ಅವರು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ.

2010ರಲ್ಲಿ ಬಿಡುಗಡೆಯಾದ ʼಪೊಲೀಸ್‌ ಕ್ವಾರ್ಟಸ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅನೀಶ್‌ ಈಗ ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ರಿಲೀಸ್‌ ಆದ ʼರಾಮಾರ್ಜುನʼ ಸಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಅವರು ಇದೀಗ ʼಬೆಂಕಿʼ, ʼಎನ್‌ಆರ್‌ಐʼ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾದ ʼವಾಸು ನಾನ್‌ ಪಕ್ಕಾ ಕಮರ್ಶಿಯಲ್‌ʼ ಅನೀಶ್‌ ನಿರ್ಮಾಣದ ಮೊದಲ ಚಿತ್ರ. ಅವಿನಾಶ್‌, ರಾಜ್‌ ದೀಪಕ್‌ ಶೆಟ್ಟಿ, ನಿಶ್ವಿಕಾ ನಾಯ್ಡು ಮುಂತಾದವರು ನಟಿಸಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು.