Friday, 13th December 2024

Actor Yash: ಮಗನ ಹುಟ್ಟುಹಬ್ಬದಂದು ಮಸ್ತ್‌ ಸ್ಟೆಪ್‌ ಹಾಕಿದ ಯಶ್‌; ರಾಧಿಕಾ ಪಂಡಿತ್‌ ಹಂಚಿಕೊಂಡ ಕ್ಯೂಟ್‌ ವಿಡಿಯೊ ಇಲ್ಲಿದೆ

Actor Yash

ಬೆಂಗಳೂರು: ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆದಿರುವ ಸ್ಯಾಂಡಲ್‌ವುಡ್‌ ನಟ, ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ತಮ್ಮ ಕುಟುಂಬದೊಂದಿಗೂ ಸಮಯ ಕಳೆಯುತ್ತಾರೆ. ಈ ಮೂಲಕ ಫ್ಯಾಮಿಲಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್‌ (Radhika Pandit), ಮಕ್ಕಳಾದ ಯಥರ್ವ್ (Yatharv) ಮತ್ತು ಆಯ್ರಾ (Ayra) ಜತೆಗೆ ಆಗಾಗ ಪ್ರವಾಸ ಹೋಗುತ್ತಿರುತ್ತಾರೆ. ಬಿಡುವು ಸಿಕ್ಕಾಗಲೆಲ್ಲ ಮುದ್ದು ಮಕ್ಕಳೊಂದಿಗೆ ಬೆರೆತು ಆಟವಾಡುತ್ತಾರೆ. ಈ ಹಿಂದೆಯೂ ಇಂತಹ ಅವರ ಕ್ಯೂಟ್‌ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದವು. ಇದೀಗ ಯಥರ್ವ್‌ನ ಹುಟ್ಟುಹಬ್ಬದಂದು ಮೈಮರೆತು ಕುಣಿದ ಯಶ್‌ ಅವರ ವಿಡಿಯೊ ಮತ್ತೊಮ್ಮೆ ವೈರಲ್‌ ಆಗಿದೆ (Viral Video).

ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿಯ ಪುತ್ರ ಯಥರ್ವ್‌ ಅ. 30ರಂದು 5ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಈ ವಿಶೇಷ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಚಿಕ್ಕ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ರಾಕಿಂಗ್‌ ಸ್ಟಾರ್‌ ಮಸ್ತಾಗಿ ಡ್ಯಾನ್ಸ್‌ ಮಾಡಿದ್ದಾರೆ. ಅವರ ಜತೆಗೆ ಮಗಳು ಆಯ್ರಾ ಕೂಡ ಕುಣಿದು ಕುಪ್ಪಳಿಸಿದ್ದಾಳೆ. ಈ ವಿಡಿಯೊವನ್ನು ರಾಧಿಕಾ ಪಂಡಿತ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ʼʼಡಡ್ಡ- ಯಾರೂ ನೋಡುತ್ತಿಲ್ಲ ಎನ್ನುವಂತೆ ಡ್ಯಾನ್ಸ್‌ ಮಾಡಿದರೆ ಆಯ್ರಾ – ತಂದೆಯನ್ನು ಯಾರೂ ಗಮನಿಸದಂತೆ ಡ್ಯಾನ್ಸ್‌ ಮಾಡುತ್ತಿದ್ದಾಳೆʼʼ ಎಂದು ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ. ಡಾ. ಶಿವರಾಜ್‌ ಕುಮಾರ್‌ ಅಭಿನಯದ ‘ಟಗರು’ ಚಿತ್ರದ ಟೈಟಲ್‌ ಟ್ರ್ಯಾಕ್‌ಗೆ ಯಶ್‌ ಸಖತ್‌ ಆಗಿ ಸ್ಟೆಪ್‌ ಹಾಕಿದ್ದಾರೆ. ಡ್ಯಾನ್ಸ್‌ನಲ್ಲಿ ಭಾಗಿಯಾಗುಂತೆ ಮಗಳು ಆಯ್ರಾಳನ್ನೂ ಆಹ್ವಾನಿಸಿದ್ದಾರೆ. ಮೊದಲು ನಾಚಿ ನೀರಾದ ಬಳಿಕ ಅವಳೂ ಹೆಜ್ಜೆ ಹಾಕಿದ್ದಾಳೆ. ಮೂಲತಃ ಯಶ್‌ ಅತ್ಯುತ್ತಮ ಡ್ಯಾನ್ಸರ್‌ ಕೂಡ ಹೌದು. ಈ ವಿಡಿಯೊದಲ್ಲಿ ಅವರ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ.

ನೆಟ್ಟಿಗರಿಂದ ಮೆಚ್ಚುಗೆ

ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ʼʼತಂದೆ ಮಗಳ ಅತ್ಯುತ್ತಮ ಜೋಡಿʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ʼʼಆಯ್ರಾನ ಕೊನೆಯ ಸ್ಟೆಪ್‌ ಉತ್ತಮವಾಗಿದೆʼʼ ಎಂದಿದ್ದಾರೆ. ʼʼಈ ವಿಡಿಯೊ ಪೋಸ್ಟ್‌ ಮಾಡಿದ್ದಕ್ಕೆ ಧನ್ಯವಾದಗಳುʼʼ ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಕ್ಯೂಟ್‌ ವಿಡಿಯೊ ಎಂದು ಹಲವರು ಹೇಳಿದ್ದು, ಕೆಲವರು ಹಾರ್ಟ್‌ ಎಮೋಜಿ ಕಳುಹಿಸಿದ್ದಾರೆ.

ಅಲ್ಲದೆ ಯಥರ್ವ್‌ನೊಂದಿಗೆ ಯಶ್‌ ಫನ್ನಿ ಗೇಮ್‌ನಲ್ಲಿಯೂ ಭಾಗಿಯಾಗಿದ್ದಾರೆ. ಯಶ್ ಮತ್ತು ಯಥರ್ವ್ ತಮ್ಮ​ ಕಾಲಿಗೆ ಹಗ್ಗ ಕಟ್ಟಿಕೊಂಡು ಓಡಿದ್ದಾರೆ. ಈ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಾತ್ರವಲ್ಲ ಅವರು ಮನೆಯವರೊಂದಿಗೆ ಸೇರಿ ದೀಪಾವಳಿಯನ್ನೂ ಸಂಭ್ರಮದಿಂದ ಆಚರಿಸಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ, ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದರೂ ಕುಟುಂಬದೊಂದಿಗೆ, ಮಕ್ಕಳೊಂದಿಗೆ ಸಮಯ ಕಳೆಯುವ ಅವರ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಸದ್ಯದ ಪ್ರಾಜೆಕ್ಟ್‌

ಸದ್ಯ ಯಶ್‌ ಬಹು ನಿರೀಕ್ಷಿತ ‘ಟಾಕ್ಸಿಕ್‌’ ಮತ್ತು ಬಾಲಿವುಡ್‌ನ ‘ರಾಮಾಯಣʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ʼಟಾಕ್ಸಿಕ್‌ʼಗೆ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದರೆ ʼರಾಮಾಯಣʼವನ್ನು ನಿತೇಶ್‌ ತಿವಾರಿ ನಿರ್ದೇಶಿಸುತ್ತಿದ್ದಾರೆ. ಈ ಎರಡೂ ಚಿತ್ರಗಳು ದೇಶಾದ್ಯಂತ ನಿರೀಕ್ಷೆ ಹುಟ್ಟು ಹಾಕಿವೆ.

ಈ ಸುದ್ದಿಯನ್ನೂ ಓದಿ: Actor Yash: ʼರಾಮಾಯಣʼದಲ್ಲಿ ಅಭಿನಯಿಸುತ್ತಿದ್ದಾರಾ ಯಶ್?‌ ಕೊನೆಗೂ ಮೌನ ಮುರಿದ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?