Wednesday, 11th December 2024

Actress Samantha: ಮಲಯಾಳಂ, ತಮಿಳು ನಂತರ ತೆಲುಗು ಚಿತ್ರರಂಗಕ್ಕೂ ತಟ್ಟಿತಾ MeToo ಶಾಪ? ನಟಿ ಸಮಂತಾ ಹೇಳಿದ್ದೇನು?

Samantha

ಹೈದರಾಬಾದ್‌: ಮಲಯಾಳಂ ಚಿತ್ರರಂಗ(Mollywood Sex Mafia)ದಲ್ಲಿ ಭುಗಿಲೆದ್ದಿರುವ ಕಾಸ್ಟ್‌ ಕೌಚಿಂಗ್‌(Cast Couching) ವಿವಾದದ ಬೆನ್ನಲ್ಲೇ ಬಹುಭಾಷಾ ನಟಿ ಸಮಂತಾ ಪ್ರಭು(Actress Samantha) ತೆಲುಗು ಸಿನಿರಂಗ(Telugu Film Industry)ದಲ್ಲಿ ನಡೆಯುತ್ತಿರುವ ಕಿರುಕುಳ ಬಗ್ಗೆ ಧ್ವನಿ ಎತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾವನ್ನು ಬಯಗೆಳೆದಿರುವ ನ್ಯಾ. ಹೇಮಾ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಮಂತಾ, ತೆಲುಗು ಚಿತ್ರರಂಗದಲ್ಲೂ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗೆಗಿನ ವರದಿಯನ್ನು ಪ್ರಕಟಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಸಮಂತಾ, ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹೇಮಾ ಕಮಿಟಿ ವರದಿಯನ್ನು ಪ್ರಶಂಸಿದ್ದಾರೆ. ಇಂತಹದ್ದೇ ಸಮಿತಿ ತೆಲುಗು ಚಿತ್ರರಂಗದ ಬಗ್ಗೆ ಅಧ್ಯಯನ ನಡೆಸಿದರೆ ಉತ್ತಮ. ಇದರಿಂದ ಮಹಿಳೆಯರು ಸಿನಿಮಾದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇದರಿಂದ ಮಹಿಳೆಯರಿಗೆ ಒಂದು ರೀತಿಯ ಭದ್ರತೆ ಸಿಗುತ್ತದೆ ಎಂದಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಬ್‌ ಕಮಿಟಿ ಸಲ್ಲಿಸಿರುವ ವರದಿಯನ್ನು ಪ್ರಕಟಿಸುವಂತೆ ನಾನು ಈ ಮೂಲಕ ತೆಲಂಗಾಣ ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ತೆಲುಗು ಚಿತ್ರರಂಗದಲ್ಲಿ ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಭುಗಿಲೆದ್ದಿರುವ ಕಾಸ್ಟ್‌ ಕೌಚಿಂಗ್‌ ವಿಚಾರ ಇದೀಗ ತೆಲುಗು ಚಿತ್ರರಂಗದತ್ತ ಎಲ್ಲರ ಕಣ್ಣು ಹೊರಳುವಂತೆ ಮಾಡಿದೆ.

 ಏನಿದು ಹೇಮಾ ಕಮಿಟಿ ವರದಿ?

ಕೆಲವು ದಿನಗಳ ಹಿಂದೆ ನ್ಯಾ. ಹೇಮಾ ನೇತೃತ್ವದ ಸಮಿತಿ ಮಲಯಾಳಂ ಚಿತ್ರರಂಗ ಸೆಕ್ಸ್‌ ಮಾಫಿಯಾ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿತ್ತು. ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರು ಎತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲು ನಿರ್ಧರಿಸಿದ್ದಾರೆ. ಇನ್ನು ಮಲಯಾಳಂ ನಟರಾದ ಸಿದ್ದಿಕಿ, ಜಯಸೂರ್ಯ, ಮುಖೇಶ್‌, ನಿರ್ದೇಶಕರಾದ ರಂಜಿತ್‌ ಸೇರಿದಂತೆ ಹಲವರ ವಿರುದ್ಧ ಮೀಟೂ ಕೇಸ್‌ ದಾಖಲಾಗಿದೆ.