Saturday, 14th December 2024

ತೆಲುಗು ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

ಹೈದರಾಬಾದ್: ತೆಲುಗು ಚಿತ್ರರಂಗದ ಹಾಸ್ಯ ನಟ ಅಲ್ಲು ರಮೇಶ್ (52) ಅವರು ಹೃದಯಾಘಾತದಿಂದ ನಿಧನರಾದರು.
ಎದೆನೋವಿನಿಂದ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ವಿಶಾಖಪಟ್ಟಣಂ ಮೂಲದ ಅಲ್ಲು ರಮೇಶ್ ಅವರು ಚಿರುಜಲ್ಲು, ವೇದಿ, ಬ್ಲೇಡ್ ಬಾಬ್ಜಿ, ನೆಪೋಲಿಯನ್ ಸೇರಿದಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಹಾಗೂ ಪೋಷಕ ನಟನಾಗಿ ಅಭಿನಯಿಸಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅವರ ನಿಧನಕ್ಕೆ ತೆಲುಗು ಚಿತ್ರ ರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಅಲ್ಲು ರಮೇಶ್ ಅವರ ನಿಧನ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಆನಂದ್ ರವಿ, ‘ಮೊದಲ ದಿನದಿಂದಲೂ ನನಗೆ ನೀವು ದೊಡ್ಡ ಬೆಂಬಲವಾಗಿ ನಿಂತಿದ್ದೀರಿ. ಈಗಲೂ ನಾನು ನಿಮ್ಮ ಧ್ವನಿಯನ್ನು ಕೇಳಬಲ್ಲೆ. ರಮೇಶ್ ಅವರೇ, ನಿಮ್ಮ ನಿಧನದ ಸುದ್ದಿಯನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಹೃದಯಗಳಿಗೆ ನೀವು ಹತ್ತಿರವಾಗಿದ್ದೀರಿ.. ಮಿಸ್ ಯೂ.. ಓಂ ಶಾಂತಿ..’ ಎಂದು ಬರೆದುಕೊಂಡಿದ್ದಾರೆ.