Friday, 13th December 2024

Anthamthana Movie: ಮತ್ತೊಮ್ಮೆ ಮೋಡಿ ಮಾಡಲು ಅಚ್ಯುತ್ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ ಸಜ್ಜು; ಸೆಟ್ಟೇರಿತು ‘ಅಣ್ತಮ್ತನ’

Anthamthana Movie

ಬೆಂಗಳೂರು: ಸಹಜಾಭಿನಯದಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದರಾದ ಅಚ್ಯುತ್‌ ಕುಮಾರ್‌ (Achyuth Kumar) ಮತ್ತು ಗೋಪಾಲಕೃಷ್ಣ ದೇಶಪಾಂಡೆ (Gopalkrishna Deshpande) ಒಂದೇ ಚಿತ್ರದಲ್ಲಿ ಅಭಿನಯಿಸುವ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಶೀರ್ಷಿಕೆಯ ‘ಅಣ್ತಮ್ತನ’ (Anthamthana Movie) ಚಿತ್ರದಲ್ಲಿ ಇವರಿಬ್ಬರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೇಟಾ’ಸ್ ಸಿನಿ ಕೆಫೆ ಮತ್ತು ಫಿಲ್ಮಿ ಮಾಂಕ್ ಸಹಯೋಗದೊಂದಿಗೆ ನಿರ್ದೇಶಕರಾದ ʼಕಿರಾತಕʼ ಪ್ರದೀಪ್ ರಾಜ್, ಪಿ.ಸಿ. ಶೇಖರ್, ಪ್ರಶಾಂತ್ ರಾಜಪ್ಪ ಮತ್ತಿತರರೊಂದಿಗೆ ಕೆಲಸ ಮಾಡಿದ ಅನುಭವ ಇರುವ ವಿಶ್ವ ನಿರ್ದೇಶನದ ಚೊಚ್ಚಲ ಚಿತ್ರ ‘ಅಣ್ತಮ್ತನ’ ಘೋಷಣೆಯಾಗಿದೆ.

ಈ ಚಿತ್ರದಲ್ಲಿ ನಟ ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅಣ್ಣ ತಮ್ಮಂದಿರಾಗಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ʼಒಂದ್ ಕಥೆ ಹೇಳ್ಲಾʼ ಹಾಗೂ ʼಶಾಲಿವಾಹನ ಶಕೆʼ ಮೊದಲಾದ ಚಿತ್ರಗಳ ಖ್ಯಾತಿಯ ಗಿರೀಶ್ ಜಿ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಎಸ್.ವಿ. ಅವರ ಸಂಗೀತ, ಶೈಲೇಶ್ ಕುಮಾರ್ ಸಂಭಾಷಣೆ, ಹರಿ ಪರಾಕ್ ಸಾಹಿತ್ಯ ಇರಲಿದೆ.

ಈ ಚಿತ್ರ ಅಣ್ಣ-ತಮ್ಮನ ನಡುವಿನ ಸಂಬಂಧ, ನಮ್ಮ ಮಣ್ಣಿನ ಆಚರಣೆ, ಹಳೆ ಮೈಸೂರು ಸಂಸ್ಕೃತಿ, ನಂಬಿಕೆ ಮೂಢನಂಬಿಕೆಗಳ ಸುತ್ತ ಹೆಣೆದಿರುವ ಕಥೆ ಹೊಂದಿದೆ. ಆದಿಚುಂಚನಗಿರಿ, ನಾಗಮಂಗಲ, ಮದ್ದೂರು, ಮಂಡ್ಯ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಸ್ಯಾಂಡಲ್‌ವುಡ್‌ನ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಅಚ್ಯುತ್‌ ಕುಮಾರ್‌ ಸದ್ಯ ಪರಭಾಷೆಗಳಲ್ಲಿಯೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ‘ಕಾಂತಾರ’, ‘ಕೆಜಿಎಫ್‌’, ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಮೊದಲಾದ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಸಿನಿಪ್ರಿಯರ ಗಮನ ಸೆಳೆದ ಅವರು ಈ ವರ್ಷ ತೆರೆಕಂಡ ತಮಿಳಿನ ʼಬ್ರದರ್‌ʼ ಮತ್ತು ತೆಲುಗಿನ ʼದಿ ಫ್ಯಾಮಿಲಿ ಸ್ಟಾರ್‌ʼ, ʼಕೆಎʼ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅ. 31ರಂದು ತೆರೆಕಂಡಿರುವ ಶ್ರೀಮುರಳಿ ಅಭಿನಯದ ʼಬಘೀರʼ ಚಿತ್ರದ ಮುಖ್ಯ ಪಾತ್ರದಲ್ಲಿ ಮಿಂಚಿರುವ ಅವರು ಸದ್ಯ ಕನ್ನಡ ʼವಾಮನʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ʼಶಾಖಾಹಾರಿʼ ಸಿನಿಮಾ ಮೂಲಕ ಗಮನ ಸೆಳೆದವರು ಹಿರಿಯ ನಟ ಗೋಪಾಲಕೃಷ್ಣ ದೇಶಪಾಂಡೆ. ಎಸ್‌ಐ ಮಲ್ಲಿಕಾರ್ಜುನ ಹೀರೇಮಠ್‌ ಪಾತ್ರದಲ್ಲಿ ಮೋಡಿ ಮಾಡಿದ್ದ ಅವರು ʼಸಪ್ತ ಸಾಗರದಾಚೆ ಎಲ್ಲೋʼ ಸರಣಿ ಸಿನಿಮಾದಲ್ಲಿಯೂ ಮಿಂಚಿದ್ದಾರೆ. ತೆರೆಗೆ ಬರಲು ಸಜ್ಜಾಗಿರುವ ಡಾ. ಶಿವ ರಾಜ್‌ಕುಮಾರ್‌-ರುಕ್ಮಿಣಿ ವಸಂತ್‌ ಅಭಿನಯದ ʼಭೈರತಿ ರಣಗಲ್‌ʼ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಸದ್ಯ ವಿವಿಧ ಸಿನಿಮಾಗಳಲ್ಲಿ ಬ್ಯುಸಿ ಇರುವ ಅವರು ‘ಅಣ್ತಮ್ತನ’ ಮೂಲಕ ಮತ್ತೊಮ್ಮೆ ಅಚ್ಯುತ್‌ ಕುಮಾರ್‌ ಜತೆ ಸೇರಿ ಮಿಂಚು ಹರಿಸಲು ಸಜ್ಜಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Jaggesh: ಗುರುಪ್ರಸಾದ್ ಎರಡನೇ ಹೆಂಡತಿಯ ಮಗುವಿಗೆ ಆಸರೆ; ಜಗ್ಗೇಶ್ ನಿರ್ಧಾರ