Friday, 13th December 2024

Bhairathi Ranagal: ʻಭೈರತಿ ರಣಗಲ್’ ಸೀಕ್ವೆಲ್‌ ಕೂಡ ಬರುತ್ತೆ; ಸಿನಿಪ್ರಿಯರಿಗೆ ಸರ್ಪ್ರೈಸ್‌ ಕೊಟ್ಟ ಶಿವಣ್ಣ

Bhairathi ranagal

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್​ಕುಮಾರ್ (Shivarajkumar) ನಟನೆಯ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಿನಿಪ್ರಿಯರು..ಅದರಲ್ಲೂ ಶಿವಣ್ಣನ ಫ್ಯಾನ್ಸ್‌ ಬಹಳ ಕಾತರದಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’(Bhairathi Ranagal) ಚಿತ್ರದ ಸೀಕ್ವೆಲ್ ಕೂಡ ಬರುತ್ತದೆ ಎಂದು ಹೇಳುವ ಮೂಲಕ ಫ್ಯಾನ್ಸ್‌ಗೆ ಶಿವರಾಜ್‌ಕುಮಾರ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ.

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ‘ಅಜ್ಞಾತವಾಸ’ ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಯಿತು. ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ ಕುಮಾರ್‌ ಮಾತನಾಡಿದರು.

‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರದ ಸೀಕ್ವೆಲ್ ಕೂಡ ಬರುತ್ತದೆ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್, “ಮಫ್ತಿ” ಚಿತ್ರದ “ಭೈರತಿ ರಣಗಲ್” ಪಾತ್ರ ಬಹಳ ಇಷ್ಟ. ನಂತರ ನಿರ್ದೇಶಕ ನರ್ತನ್, “ಭೈರತಿ ರಣಗಲ್” ಚಿತ್ರದ ಕಥೆ ಹೇಳಿದರು. ನನಗೆ ಹಾಗೂ ನನ್ನ ಶ್ರೀಮತಿ ಗೀತಾ ಅವರಿಗೆ ಕಥೆ ಮೆಚ್ಚುಗೆಯಾಯಿತು. ನಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಈ ಚಿತ್ರದಲ್ಲಿದ್ದು, ಚಿತ್ರ ಉತ್ತಮವಾಗಿ ಮೂಡಿಬರಲು ಅವರೆಲ್ಲರ ಸಹಕಾರ ಬಹುಮುಖ್ಯ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ದೀಪಾವಳಿ ಹಾಗೂ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ‘ಅಜ್ಞಾತವಾಸ’ ಹಾಡು ಬಿಡುಗಡೆಯಾಗಿದೆ. ನವೆಂಬರ್ 15 ರಂದು ಚಿತ್ರ ತೆರೆಗೆ ಬರಲಿದೆ. ಮುಂದೆ ಈ ಚಿತ್ರದ ಮುಂದಿನ ಭಾಗ ಸಹ ಬರಲಿದೆ ಎಂದರು.

ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ಗೀತಾ ಶಿವರಾಜಕುಮಾರ್ ಹಾಗೂ ಶಿವರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಕಥೆಗೆ ಶಿವಣ್ಣ ಸೇರಿದಂತೆ ಎಲ್ಲಾ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರು ಸಹಕಾರ ನೀಡಿದ್ದಾರೆ. ಎಲ್ಲರ ಶ್ರಮದಿಂದ “ಭೈರತಿ ರಣಗಲ್” ಉತ್ತಮ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆ. ನವೆಂಬರ್‌ 5 ರಂದು ಟ್ರೇಲರ್ ಬರಲಿದೆ. ಚಿತ್ರ ನವೆಂಬರ್ 15 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಎಂದು ನಿರ್ದೇಶಕ ನರ್ತನ್ ತಿಳಿಸಿದರು.

ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ನೀವೆಲ್ಲರೂ ಬಂದಿರುವುದು ಬಹಳ ಖುಷಿಯಾಗಿದೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ನವೆಂಬರ್ 15 ಚಿತ್ರ ಬಿಡುಗಡೆಯಾಗುತ್ತಿದೆ. “ಭೈರತಿ ರಣಗಲ್” ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಗೀತಾ ಶಿವರಾಜಕುಮಾರ್.

ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ರುಕ್ಮಿಣಿ ವಸಂತ್ ಹೇಳಿದರು. ಚಿತ್ರದಲ್ಲಿ ನಟಿಸಿರುವ ದೇವರಾಜ್, ಅವಿನಾಶ್, ರಾಹುಲ್ ಬೋಸ್, ಛಾಯಾಸಿಂಗ್, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ಪ್ರತಾಪ್, ಶಬೀರ್, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಛಾಯಾಗ್ರಾಹಕ ನವೀನ್ ಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ಸಾಹಸ ನಿರ್ದೇಶಕ ಚೇತನ್ ಡಿಸೋಜ, ಕಲಾ ನಿರ್ದೇಶಕ ಗುಣ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ “ಭೈರತಿ ರಣಗಲ್” ಚಿತ್ರದ ಕುರಿತು ಮಾತನಾಡಿದರು.

ನನಗೆ ಚಿತ್ರರಂಗದಲ್ಲಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ತಂದೆ ತಾಯಿ ಸಮಾನರು. ಅವರ ನಿರ್ಮಾಣದ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ನಟ ದುನಿಯಾ ವಿಜಯ್ ಹಾರೈಸಿದರು.

ಈ ಸುದ್ದಿಯನ್ನೂ ಓದಿ: Giri Dwarakish: ತಮಿಳಿನ ಹಲವು ಸಿನಿಮಾಗಳಲ್ಲಿ ದ್ವಾರಕೀಶ್‌ ಕಿರಿಯ ಮಗ ಗಿರಿಗೆ ಅವಕಾಶ