Friday, 13th December 2024

‘ಭಜರಂಗಿ 2’ ಪೋಸ್ಟರ್ ಬಿಡುಗಡೆ; ಭಾವನಾ ಲುಕ್ ಗೆ ಫಿದಾ ಆದ ಫ್ಯಾನ್ಸ್!

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆಗೊಂಡಿದ್ದು, ಭಾವನಾ ಮೆನನ್ ಸಖತ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ವೇದಿಕೆಯಲ್ಲಿ ಚಿನಿಮಿನಿಕಿ-ದಿ ಲೇಡಿ ಫೈರ್’ ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ನ ಪೋಸ್ಟರ್ ಅನ್ನು ಸಿನೆಮಾ ತಂಡ ಹಂಚಿಕೊಂಡಿದೆ.

ಶಿವಣ್ಣನ ಜನ್ಮದಿನದಂದ, ನಿರ್ದೇಶಕ ಎ. ಹರ್ಷ ಅವರ ಬತ್ತಳಿಕೆಯಿಂದ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ದೊಡ್ಡ ಕ್ಯಾನ್ವಾಸ್‌ನಲ್ಲಿ ‘ಭಜರಂಗಿ 2’ ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಭಜರಂಗಿ’ ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ. ‘ಭಜರಂಗಿ’ ಚಿತ್ರದಲ್ಲಿ ಸಿಕ್ಸ್ ಪ್ಯಾಕ್‌ನಲ್ಲಿ ಮಿಂಚಿದ್ದ ಶಿವಣ್ಣ, ‘ಭಜರಂಗಿ 2’ ಚಿತ್ರದಲ್ಲಿ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ ‘ಭಜರಂಗಿ 2’ ಎಲ್ಲರ ಮನ ಗೆದ್ದಿತು. ‘ಕೆಜಿಎಫ್‌’ ರೀತಿಯೇ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಗುಣಮಟ್ಟದಲ್ಲಿ ‘ಭಜರಂಗಿ 2’ ಸಿದ್ಧವಾಗಿದೆ ಎಂಬುದಕ್ಕೆ ಟೀಸರ್‌ ಸಾಕ್ಷಿ ನೀಡಿತ್ತು.

ಶಿವರಾಜ್‌ಕುಮಾರ್‌ ಮತ್ತು ಹರ್ಷ ಸಿನಿಮಾ ಮಾಡಿದರೆ ಅದು ಪಕ್ಕಾ ಸಕ್ಸಸ್‌ ಎಂಬುದು ಗಾಂಧಿನಗರದ ಲೆಕ್ಕಾಚಾರ. ಹಾಗಾಗಿ ಈ ಕಾಂಬಿನೇಶನ್‌ ಮೇಲೆ ಹಣ ಹೂಡಲು ಸಾಕಷ್ಟು ನಿರ್ಮಾಪಕರು ಮುಂದೆ ಬಂದಿ ದ್ದಾರೆ. ಕೊರೊನಾ ನಂತರವೂ ‘ಭಜರಂಗಿ 2′ ಚಿತ್ರದ ಹಿಂದಿ ರೈಟ್ಸ್‌ ಕೋಟ್ಯಾಂತರ ರೂಪಾಯಿಗೆ ಮಾರಾಟವಾಗಿದೆ. ಬರೀ ಶೋ ರೀಲ್‌ ನೋಡಿ ಅಲ್ಲಿನ ವಿತರಕರು ಸಿನಿಮಾ ಕೊಂಡುಕೊಂಡಿದ್ದಾರೆ. ಚಿತ್ರದ ಮೊದಲ ಟೀಸರ್ ಅಷ್ಟೊಂದು ಹವಾ ಕ್ರಿಯೆಟ್ ಮಾಡಿತ್ತು.

ಭಜರಂಗಿ 2’ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ‘ಭಜರಂಗಿ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊಂಚ ತಡವಾಗಿದ್ದವು. ಅ.29ರಂದು ‘ಭಜರಂಗಿ 2’ ಚಿತ್ರ ನಿಮ್ಮೆಲ್ಲರ ಮುಂದೆ ಬರಲಿದೆ. ‘ಭಜರಂಗಿ 2’ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ‘ಭಜರಂಗಿ 2’ ಚಿತ್ರದಲ್ಲಿ ಭಾವನಾ ಮೆನನ್, ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ.