Monday, 14th October 2024

Bigg Boss Kannada 11: ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ನರಕ ದರ್ಶನ ತೋರಿದ ಚೈತ್ರಾ ಕುಂದಾಪುರ; ಕೌಂಟರ್ ಮೇಲೆ ಕೌಂಟರ್

Bigg Boss Kannada 11

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಈ ಹೆಸರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರಪರಿಚಿತ. ತಮ್ಮ ನೇರ ಹಾಗೂ ಖಡಕ್‌ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ ಖ್ಯಾತಿ ಪಡೆದಿರುವ ಇವರು ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೆ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡುವುದಾಗಿ ಹೇಳಿ ವಂಚನೆ ಮಾಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನಲ್ಲಿ ಹೊರಗಿದ್ದಾರೆ. ಇದರ ನಡುವೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ (Bigg Boss Kannada 11).

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಆರ್ಭಟಿಸಿದ್ದಾರೆ. ಜತೆಗೆ ಸ್ವರ್ಗ ವಾಸಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ನರಕದಲ್ಲಿರುವ ಚೈತ್ರಾ ಮೊದಲ ವಾರವೇ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಕೂಡ ಆಗಿದ್ದಾರೆ. ಆದರೆ ಇವರ ಗೇಮ್ ಪ್ಲಾನ್​ಗೆ ನೆಟ್ಟಿಗರು ಫಿದಾ ಆಗಿದ್ದು, ಸ್ವರ್ಗ ವಾಸಿಗಳಿಗೆ ಮಾಡಿದ ಸ್ಟ್ರಾಟಜಿ ಕಂಡು ದಂಗಾಗಿ ಹೋಗಿದ್ದಾರೆ.

ಚೈತ್ರಾ ಪ್ಲ್ಯಾನ್‌ ಏನಿತ್ತು?

ಸ್ವರ್ಗದಲ್ಲಿರುವ ಧನರಾಜ್ ಆಚಾರ್ಯ ಮತ್ತು ಭವ್ಯ ಗೌಡ ಅವರು ತಮಾಷೆಗಾಗಿ ಬಿಗ್‌ ಬಾಸ್‌ ಬಳಿ ಒಂದು ಮನವಿ ಮಾಡುತ್ತಾರೆ. ನರಕವಾಸಿಗಳು ಸ್ವರ್ಗದ ಮನೆ ಕೆಲಸ ಮಾಡಿಸುವ ಹಾಗೆ ಟಾಸ್ಕ್ ಕೊಡಿ ಎಂದು ಕೇಳುತ್ತಾರೆ. ಅದರಂತೆ ನರಕದಲ್ಲಿರುವ ಇಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಸ್ವರ್ಗದ ಮನೆ ಕ್ಲೀನ್ ಮಾಡಿಸಿ ಎಂದು ಬಿಗ್‌ ಬಾಸ್‌ ಆದೇಶ ನೀಡುತ್ತಾರೆ. ಈ ರೀತಿ ಆಯ್ಕೆಯಾದವರು ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್.

ಆಗ ತಮ್ಮ ತಂಡದವರೊಂದಿಗೆ ಚರ್ಚಿಸಿ ಸ್ಟ್ರಾಟಜಿ ಮಾಡಿಕೊಂಡ ಚೈತ್ರಾ, ನಾವು ಸ್ವರ್ಗ ವಾಸಿಗಳು ಹೇಳುವ ಕೆಲಸವನ್ನು ಸರಿಯಾಗಿ ಮಾಡಿಲ್ಲ ಅಂದರೆ ಸ್ವರ್ಗದವರೇ ಹೊಣೆ ಆಗುತ್ತಾರೆ. ಅಲ್ಲಿ ಕೆಲಸ ಮಾಡುವ ನೆಪದಲ್ಲಿ ನಾವು ಟೈಮ್‌ ವೇಸ್ಟ್‌ ಮಾಡಬೇಕು ಎಂದು ಪ್ಲ್ಯಾನ್‌ ಮಾಡುತ್ತಾರೆ. ಅದರಂತೆ ಸಿಕ್ಕ ಸಿಕ್ಕ ಎಲ್ಲ ಅವಕಾಶವನ್ನು ಬಳಸಿಕೊಂಡ ಚೈತ್ರಾ ಮಾತಿನಲ್ಲೇ ಎದುರಾಳಿಯ ಬಾಯಿ ಮುಚ್ಚಿಸಿ ಸ್ವರ್ಗದ ಮನೆಯ ನಿವಾಸಿಗಳ ಮೇಲೆ ಹಿಡಿತ ಸಾಧಿಸುತ್ತಾರೆ. ಮಾತ್ರವಲ್ಲ ಟೈಮ್‌ ವೇಸ್ಟ್‌ ಕೂಡ ಮಾಡುತ್ತಾರೆ.

ಒಂದು ಹಂತದಲ್ಲಿ ಚೈತ್ರಾ ಹಾಗೂ ಯಮುನಾ ಅವರ ಮಾತುಕತೆ ತಾರಕಕ್ಕೇರಿತು. ಯಮುನಾ ಅವರು ಚೈತ್ರಾ ಬಳಿ, ನೀವು ಹೆಚ್ಚು ಮಾತನಾಡಬೇಡಿ, ಈ ಮನೆಯಲ್ಲಿ ಜೋರಾಗಿ ಮಾತನಾಡಬೇಡಿ ಎಂದು ಹೇಳುತ್ತಾರೆ. ಇದಕ್ಕೆ ಖಡಕ್ ರಿಪ್ಲೇ ಕೊಟ್ಟ ಚೈತ್ರಾ, ರೂಲ್ಸ್‌ ಬುಕ್‌ನಲ್ಲಿ ಮಾತನಾಡಬಾರದು ಅಂತ ಏನಾದ್ರು ಇದೆಯೇ? ಎಂದು ಪ್ರಶ್ನಿಸುತ್ತಾರೆ.

ಉಗ್ರಂ ಮಂಜು ಅವರು ಚೈತ್ರಾ ಅವರ ಬಳಿ ಹಣ್ಣನ್ನು ಕಟ್ ಮಾಡಿ ಕೊಡಿ ಎಂದು ಹೇಳುತ್ತಾರೆ. ಆದರೆ ಇದನ್ನು ಚೈತ್ರಾ ಅವರು ಕಸಿದು ತಿನ್ನುತ್ತಾರೆ. ಅಲ್ಲಿಂದ ಸ್ವರ್ಗದ ನಿವಾಸಿಗಳಲ್ಲೇ ಗಲಾಟೆ ಶುರುವಾಗುತ್ತೆ. ತಾನು ಅಂದುಕೊಂಡಂತೆ ಸ್ವರ್ಗದವರನ್ನು ಕೆಣುಕತ್ತಲೇ ಅವರ ಮಧ್ಯೆಯೇ ಜಗಳ ಆಗುವಂತೆ ಮಾಡುತ್ತಾರೆ. ಇದೆಲ್ಲ ನನ್ನ ಸ್ಟ್ರಾಟಜಿ ಆಗಿತ್ತು ಎಂದು ಸ್ವತಃ ಚೈತ್ರಾ ಅವರೆ ನಾಮಿನೇಶನ್‌ ವೇಳೆ ಎಲ್ಲರಿಗೂ ತಿಳಿಸಿದ್ದಾರೆ. ಅಲ್ಲದೆ ಸ್ವರ್ಗ ವಾಸಿಗಳು ಚೈತ್ರಾ ಅವರನ್ನು ನಾಮಿನೇಟ್ ಮಾಡಿದಾಗ ಅದಕ್ಕೆ ಅವರು ನೀಡಿದ ಉತ್ತರ ಕೇಳಿ ನೀವು ನಿಜವಾಗಿಯೂ ಸಿಂಹಿಣಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Bigg Boss Kannada 11 : ಮೊದಲ ದಿನವೇ ನಾಮಿನೇಷನ್ ಟ್ವಿಸ್ಟ್: 10 ಜನರಲ್ಲಿ 7 ಮಂದಿ ನಾಮಿನೇಟ್ ಮಾಡಿದ್ದು ಇವರೊಬ್ಬರನ್ನೇ!