Wednesday, 6th November 2024

Bigg Boss Kannada 11: ಸ್ವರ್ಗ-ನರಕ ಕಾನ್ಸೆಪ್ಟ್ ಎರಡೇ ವಾರಕ್ಕೆ ಕೊನೆಗೊಳ್ಳಲು ಏನು ಕಾರಣ?: ಇಲ್ಲಿದೆ ನೋಡಿ

Swarga and Naraka

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಎರಡು ವಾರ ಆಗುತ್ತಿವೆ. ಈ ಬಾರಿ ಹೊಸ ಅಧ್ಯಾಯ ಎಂದು ಹೇಳುತ್ತ ಶುರುವಾದ ಈ ಶೋ ಮೊದಲ ವಾರವೇ ರೋಚಕತೆ ಸೃಷ್ಟಿಸಿತ್ತು. ಸ್ವರ್ಗ ವಾಸಿಗಳು ಮತ್ತು ನರಕ ವಾಸಿಗಳು ಎಂಬ ಕಾನ್ಸೆಪ್ಟ್ ವೀಕ್ಷಕರಿಗೆ ಮತ್ತು ಒಳಗಿದ್ದ ಸ್ಪರ್ಧಿಗಳು ವಿಭಿನ್ನವಾಗಿತ್ತು. ಆದರೀಗ ಈ ವಿಶೇಷ ಕಾನ್ಸೆಪ್ಟ್ ಅನ್ನು ಎರಡೇ ವಾರಕ್ಕೆ ನಿಲ್ಲಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ನರಕದವರು ವಾಸಿಸುವ ಜಾಗವನ್ನು ಮುಸುಕುದಾರಿಗಳು ಬಂದು ಪೀಸ್ ಪೀಸ್ ಮಾಡಲಾಗಿದೆ. ಇನ್ಮುಂದೆ ಎಲ್ಲ ಸ್ವರ್ಧಿಗಳು ಒಟ್ಟಾಗಿ ಜೀವಿಸಲಿದ್ದಾರೆ.

ಕಳೆದ ಎರಡು ವಾರಗಳಿಂದ ಸ್ವರ್ಗ-ನರಕ ತಂಡ ಮಾಡಿ ಇವರ ನಡುವೆ ಟಾಸ್ಕ್ ನಡೆಸಲಾಗುತ್ತಿತ್ತು. ಸೋಲು-ಗೆಲುವು, ಸ್ಪರ್ಧಿಗಳ ಆಯ್ಕೆಯ ಮೇರೆಗೆ ಆಗಾಗ ಸ್ವರ್ಗದಿಂದ ನರಕಕ್ಕೆ, ನರಕದಿಂದ ಸ್ವರ್ಗಕ್ಕೆ ಕೆಲ ಸ್ಪರ್ಧಿಗಳು ಅದಲು-ಬದಲಾಗಿದ್ದರು. ಶೋ ಆರಂಭಗೊಂಡಾಗ ಗೋಲ್ಡ್ ಸುರೇಶ್, ಅನುಷಾ ರೈ, ಮಾನಸಾ, ಶಿಶಿರ್ ಶಾಸ್ತ್ರಿ, ಚೈತ್ರಾ ಕುಂದಾಪುರ, ರಂಜಿತ್ ಹಾಗೂ ಮೋಕ್ಷಿತಾ ಪೈ ನರಕಕ್ಕೆ ಕಾಲಿಟ್ಟಿದ್ದರು

ಮೊದಲ ವಾರದ ಅಂತ್ಯದಲ್ಲಿ ರಂಜಿತ್‌ ಸ್ವರ್ಗಕ್ಕೆ ಕಾಲಿಟ್ಟರು. ನರಕಕ್ಕೆ ಜಗದೀಶ್ ಹೋದರು. ಎರಡನೇ ವಾರ ಟಾಸ್ಕ್‌ಗಳ ನಿಯಮಾನುಸಾರ ಸ್ವರ್ಗದಿಂದ ನರಕಕ್ಕೆ ಐಶ್ವರ್ಯಾ ಸಿಂಧೋಗಿ ಪ್ರವೇಶಿಸಿದರು. ಐಶ್ವರ್ಯಾ ಸಿಂಧೋಗಿ ಜಾಗಕ್ಕೆ ನರಕದಿಂದ ಹೋದವರು ಮಾನಸಾ. ಹಾಗೆಯೆ ಶಿಶಿರ್ ಶಾಸ್ತ್ರಿ ಕ್ಯಾಪ್ಟನ್ ಆಗಿ ಸ್ವರ್ಗಕ್ಕೆ ತೆರಳು ತ್ರಿವಿಕ್ರಮ್ ನರಕಕ್ಕೆ ಬಂದಿದ್ದರು. ಕೆಲವು ವಾರಗಳ ಕಾಲ ಸ್ವರ್ಗ-ನರಕದ ಕಾನ್ಸೆಪ್ಟ್ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಎರಡೇ ವಾರಕ್ಕೆ ಇದನ್ನು ನಿಲ್ಲಿಸಲಾಗಿದೆ.

ಎರಡನೇ ವಾರಕ್ಕೆ ಈ ಕಾನ್ಸೆಪ್ಟ್ ನಿಲ್ಲಿಸಲು ಕಾರಣ ಏನು ಎಂಬುದನ್ನು ಕಲರ್ಸ್ ಕನ್ನಡ ವಾಹಿಸಿ ಈವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಇತ್ತೀಚೆಗಷ್ಟೆ ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದ ಸ್ವರ್ಗ, ನರಕದ ಕಾನ್ಸೆಪ್ಟ್ ಕುರಿತಾಗಿ ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹೋಗಿತ್ತು. ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಎಂ. ನಾಗಮಣಿ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ತೆರೆಳಿ ದೂರು ದಾಖಲು ಮಾಡಿದ್ದರು. ಚಿತ್ರನಟ-ಶೋ ನಿರೂಪಕ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟಿವಿ ಬಿಜಿನೆಸ್ ಹೆಡ್, ವಯಾಕಾಮ್ 18 ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು.

ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಮನಗರದ ಎಸ್‌ಪಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚನೆ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಬಿಗ್ ಬಾಸ್‌ ಮನೆಯೊಳಗೆ ನರಕವನ್ನ ಧ್ವಂಸ ಮಾಡಿ. ಎಲ್ಲರಿಗೂ ಸಮಾನ ಸ್ಥಾನಮಾನ, ಸಮಾನ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲಾಗಿದೆ. ‘ಈ ಮನೆ ಎರಡಾಗೋದಕ್ಕೆ ಒಂದು ದೊಡ್ಡ ಉದ್ದೇಶ ಇತ್ತು. ಆ ಉದ್ದೇಶ ಪೂರ್ಣಗೊಂಡಿದೆ. ಈಗ ಈ ಮನೆ ಒಂದಾಗೋ ಸಮಯ ಬಂದಿದೆ. ಇನ್ನು.. ಎರಡಾಗಿದ್ದ ಮನೆ ಒಂದಾಗುತ್ತೆ. ಒಂದಾದ ಮನೆ ಸ್ವರ್ಗವಾಗಿ ಉಳಿಯುತ್ತಾ? ಇಲ್ಲ.. ನರಕ ಆಗುತ್ತಾ ಅನ್ನೋದು ನಿಮ್ಮ ಕೈಯಲ್ಲೇ ಇದೆ’ ಎಂದು ಬಿಗ್ ಬಾಸ್ ಹೇಳಿದ್ದಾರೆ.

BBK 11: ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್: ಶಿಶಿರ್ ಶಾಸ್ತ್ರಿ ಈಗ ದೊಡ್ಮನೆ ನಾಯಕ