Sunday, 1st December 2024

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇನ್ನಿಲ್ಲ

ಮುಂಬೈ/ನವದೆಹಲಿ: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಬುಧವಾರ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿ ಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂದೇ ಖ್ಯಾತರಾಗಿದ್ದರು.

ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ‘ದೇವದಾಸ್’ (1955), ‘ನಯಾ ದೌರ್’ (1957), ‘ಮೊಘಲ್-ಎ-ಅಜಮ್’ (1960), ‘ಗಂಗಾ ಜಮುನಾ’ ಮುಂತಾದ ಚಲನಚಿತ್ರಗಳಲ್ಲಿ ಅಪ್ರತಿಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. 1998 ರಲ್ಲಿ ತೆರೆಕಂಡ ಬಾರಿಗೆ ‘ಕಿಲಾ’ದಲ್ಲಿ ಕಾಣಿಸಿಕೊಂಡಿದ್ದು ಅವರ ವೃತ್ತಿ ಬದುಕಿನಲ್ಲಿ ಕೊನೆ ಸಿನಿಮಾವಾಗಿತ್ತು.

ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾಗಿದ್ದ ದಿಲೀಪ್ ಕುಮಾರ್ ರಾಜ್ಯಸಭೆ ಸದಸ್ಯರೂ ಆಗಿದ್ದರು.

ಅವರ ತಂದೆಯ ಲಾಲಾ ಗುಲಾಮ್ ಸರ್ದಾರ್ ಹಣ್ಣಿನ ಬೆಳೆಗಾರರು, ವ್ಯಾಪಾರಿಯಾಗಿದ್ದರು. ಪೇಶಾವರ ಮತ್ತು ಮಹಾರಾಷ್ಟ್ರದ ನಾಸಿಕ್ ಸಮೀಪ ದೇವಲಾಲಿ ಬಳಿ ಅವರ ಹಣ್ಣಿನ ತೋಟಗಳು ಇದ್ದವು. 1930ರ ದಶಕದಲ್ಲಿ ದಿಲೀಪ್ ಕುಮಾರ್ ಕುಟುಂಬ ಮುಂಬೈಗೆ ಬಂದು ನೆಲೆಸಿತು.

ಯುವಕರಾಗಿದ್ದ ಯೂಸೂಫ್ ಖಾನ್ ಪುಣೆಯಲ್ಲಿ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದರು. ಜೊತೆಗೆ ಒಣಹಣ್ಣುಗಳ ವ್ಯಾಪಾರ ಆರಂಭಿಸಿದ್ದರು. ಬಾಂಬೆ ಟಾಕೀಸ್ ಮಾಲೀಕ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾರಾಣಿ ಯೂಸೂಫ್ ಖಾನ್ ಚಿತ್ರರಂಗ ಪ್ರವೇಶಿಸಲು ಸಹಾಯ ಮಾಡಿದರು. 1944 ರಲ್ಲಿ ‘ಜ್ವಾರ್ ಭಾಟಾ’ ಚಿತ್ರದ ನಾಯಕನ ಪಾತ್ರಕ್ಕೆ ದಿಲೀಪ್ ಕುಮಾರ್ ಎಂದು ಹೆಸರಿಟ್ಟಿದ್ದು, ಅದೇ ಮುಂದುವರೆಯಿತು. 1947 ರಲ್ಲಿ ‘ಜುಗ್ನು’ ಚಿತ್ರದ ಬಳಿಕ ಖ್ಯಾತಿ ಪಡೆದರು.

ದಿಲೀಪ್ ಕುಮಾರ್ ನಟಿಸಿದ ‘ಅಂದಾಜ್’, ‘ದೀದಾರ್’, ‘ಆನ್’, ‘ಅಮರ್’, ‘ಆಜಾದ್’, ‘ದೇವದಾಸ್’, ‘ಮುಸಾಫಿರ್’, ‘ಮಧುಮತಿ’, ‘ಮುಘಲ್ ಎ ಆಜಂ’ ಮೊದಲಾದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿವೆ. ಹೆಚ್ಚಿನ ಸಿನಿಮಾಗಳಲ್ಲಿನ ಪಾತ್ರಗಳ ಕಾರಣಕ್ಕೆ ಅವರು ದುರಂತ ನಾಯಕ ಎಂಬ ಖ್ಯಾತಿಯನ್ನು ಪಡೆದರು. ‘ಮುಘಲ್-ಎ-ಆಜಂ’ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರಿ ಯಶಸ್ಸು ಕಂಡಿತ್ತು.

1961 ರಲ್ಲಿ ಬಿಡುಗಡೆಯಾದ ‘ಗಂಗಾ ಜಮುನಾ’ ದಿಲೀಪ್ ಕುಮಾರ್ ಅವರ ಮೊದಲ ವರ್ಣಚಿತ್ರವಾಗಿದೆ. 1981ರ ನಂತರದಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ‘ಕ್ರಾಂತಿ’,’ವಿಧಾತಾ’ ಸೇರಿ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 1966 ರಲ್ಲಿ ಅಂದಿನ ಚಿತ್ರರಂಗದ ನಟಿ ಸಾಯಿರಾಬಾನು ಅವರನ್ನು ಮದುವೆಯಾದ ದಿಲೀಪ್ ಕುಮಾರ್ ಅವರಿಗೆ 44 ವರ್ಷ ವಯಸ್ಸಾಗಿತ್ತು. ಆಗ ಸಾಯಿರಾಬಾನು ವಯಸ್ಸು 22 ವರ್ಷ ಮಾತ್ರ. ನಂತರ ದಿಲೀಪ್ ಕುಮಾರ್ 1980 ರಲ್ಲಿ ಆಸ್ಮಾ ಜೊತೆ ಎರಡನೇ ಮದುವೆಯಾದರು ಬಹುಬೇಗನೆ ಡೈವೋರ್ಸ್ ಕೊಟ್ಟರು.

8 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ದಿಲೀಪ್ ಕುಮಾರ್ ಅವರಿಗೆ 1992 ರಲ್ಲಿ ಫಿಲಂ ಫೇರ್ ಲೈಫ್ ಟೈಂ ಅಚಿವ್ ಮೆಂಟ್ ಪ್ರಶಸ್ತಿ ನೀಡಲಾಗಿದೆ. 1994 ರಲ್ಲಿ ಭಾರತ ಸರ್ಕಾರ ದಾದಾ ಸಾಹೇಬ್ ಪ್ರಶಸ್ತಿ, 1991 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2015 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ.

ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಬಾರದ ಲೋಕಕ್ಕೆ ತೆರಳಿದ್ದಾರೆ. ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ ಚಿತ್ರರಂಗ ಕಂಬನಿ ಮಿಡಿದಿದೆ.