Monday, 14th October 2024

Daali Dhananjaya: ಡಾಲಿ ಧನಂಜಯ್-ಸತ್ಯದೇವ್ ನಟನೆಯ ‘ಜೀಬ್ರಾ’ ಟೀಸರ್ ರಿಲೀಸ್; ಶಿವಣ್ಣ ಸಾಥ್‌

Daali Dhananjaya

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ (Daali Dhananjaya) ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಜಾನರ್‌ನ ಸಿನಿಮಾ ಮಾಡುವ ಅವರು ತೆಲುಗಿನಲ್ಲಿಯೂ ಅಭಿನಯಿಸುತ್ತಿದ್ದಾರೆ. ಅವರೀಗ ತೆಲುಗು ನಟ ಸತ್ಯದೇವ್ (Satyadev) ಜತೆಗೂಡಿ ಜೀಬ್ರಾ (Zebra) ಕಥೆ ಹೇಳಲು ಬರುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿರುವ ʼಜೀಬ್ರಾʼ ಸಿನಿಮಾ ಬೆಳಕಿನ ಹಬ್ಬ ದೀಪಾವಳಿಯಂದು ರಿಲೀಸ್ ಆಗಲಿದೆ. ಮೋಷನ್ ಪೋಸ್ಟರ್ ವಿಡಿಯೊ ಮೂಲಕ ಇತ್ತೀಚೆಗಷ್ಟೇ ಬಿಡುಗಡೆ ದಿನಾಂಕ ಪ್ರಕಟಿಸಿದ್ದ ಚಿತ್ರತಂಡ ಈಗ ಟೀಸರ್ ಅನಾವರಣಗೊಳಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ʼಜೀಬ್ರಾʼ ಮಲ್ಟಿಸ್ಟಾರರ್‌ ಸಿನಿಮಾ. ಇದು ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗಿದೆ. ಇದು ಧನಂಜಯ್ ಅಭಿನಯದ 26ನೇ ಸಿನಿಮಾ ಎನ್ನುವುದು ವಿಶೇಷ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ʼಜೀಬ್ರಾʼ ಟೀಸರ್ ಗಮನ ಸೆಳೆದಿದೆ. ಡಾಲಿ ವೈಟ್ ಹಾರ್ಸ್, ಸತ್ಯದೇವ್ ಬ್ಲಾಕ್ ಹಾರ್ಸ್ ಎಂದು ಪರಿಚಯ ಮಾಡಿಕೊಡಲಾಗಿದೆ. ವಿಭಿನ್ನವಾಗಿ ಟೀಸರ್ ಕಟ್ ಮಾಡಲಾಗಿದ್ದು, ರವಿ ಬಸ್ರೂರ್ ಸಂಗೀತ ಕಿಕ್ ಕೊಡುತ್ತಿದೆ.

ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌.ಎನ್. ರೆಡ್ಡಿ, ಎಸ್. ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಚಿತ್ರವನ್ನು ನಿರ್ಮಿಸಿದ್ದಾರೆ. ʼಕೆಜಿಎಫ್ʼ ಮತ್ತು ʼಸಲಾರ್ʼ ಮೂಲಕ ಪರಭಾಷೆಯಲ್ಲಿಯೂ ಮೋಡಿ ಮಾಡಿರುವ ರವಿ ಬಸ್ರೂರ್ ಅವರ ಸಂಗೀತ ಚಿತ್ರದ ಹೈಲೈಟ್.‌

ಇನ್ನು ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ತೆಲುಗು, ಕನ್ನಡ ಜತೆಗೆ ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ʼಜೀಬ್ರಾʼ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸದ್ಯ ಡಾಲಿ ಧನಂಜಯ್‌ ಕನ್ನಡದ ಜತೆಗೆ ತೆಲುಗಿನಲ್ಲಿಯೂ ನಟಿಸುತ್ತಿದ್ದಾರೆ. ಬಹು ನಿರೀಕ್ಷಿತ, ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪ 2ʼ ಚಿತ್ರದಲ್ಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಲಿ ರೆಡ್ಡಿ ಪಾತ್ರದಲ್ಲಿ ಅವರು ಮೋಡಿ ಮಾಡಲಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಡಿಸೆಂಬರ್‌ 6ರಂದು ತೆರೆಗೆ ಬರಲಿದೆ. ಇದರ ಜತೆಗೆ ಧನಂಜಯ್‌ ಹಲವು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಉತ್ತರಕಾಂಡʼ, ʼಅಣ್ಣ ಫ್ರಂ ಮೆಕ್ಸಿಕೊʼ, ʼನಾಡಪ್ರಭು ಕೆಂಪೇಗೌಡʼ ಮತ್ತು ʼಜಿಂಗೊʼ ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ.

2011ರಲ್ಲಿ ತೆರೆಕಂಡ ʼಮಿ.ಪರ್ಫೆಕ್ಟ್‌ʼ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸತ್ಯದೇವ್‌ 2022ರಲ್ಲಿ ತೆರೆಕಂಡ ಅಕ್ಷಯ್‌ ಕುಮಾರ್‌ ನಟನೆಯ ʼರಾಮಸೇತುʼ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಸದ್ಯ 4 ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼಕೃಷ್ಣಮ್ಮʼ, ʼಫುಲ್‌ ಬಾಟಲ್‌ʼ, ʼಜೀಬ್ರಾʼ ಮತ್ತು ʼಗರುಡ: ಚಾಪ್ಟರ್‌ 1ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ʼಜೀಬ್ರಾʼ ನಿರೀಕ್ಷೆ ಮೂಡಿಸಿದೆ.

ಈ ಸುದ್ದಿಯನ್ನೂ ಓದಿ: Kodalli Shivaram: ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಕೋಡಳ್ಳಿ ಶಿವರಾಮ್ ನಿಧನ