Friday, 13th December 2024

Delhi Ganesh: 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಡೆಲ್ಲಿ ಗಣೇಶ್‌ ಇನ್ನಿಲ್ಲ

delhi Ganesh

ಚೆನ್ನೈ: ಸುಮಾರು ಮೂರು ದಶಕಗಳ ಕಾಲ ತಮಿಳು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಡೆಲ್ಲಿ ಗಣೇಶ್(Delhi Ganesh) ವಿಧಿವಶರಾಗಿದ್ದಾರೆ. ಅವರಿಗೆ 80ವರ್ಷ ವಯಸ್ಸಾಗಿದ್ದು, ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸುದ್ದಿ ಪೋಸ್ಟ್ ಮಾಡಿರುವ ಅವರ ಪುತ್ರ ಮಹದೇವನ್, ಡೆಲ್ಲಿ ಗಣೇಶ್ ಅಗಲಿಕೆ ಬಗ್ಗೆ ಖಚಿತಪಡಿಸಿದ್ದಾರೆ. ನಮ್ಮ ತಂದೆ ಶ್ರೀ ದೆಹಲಿ ಗಣೇಶ್ ಅವರು ನವೆಂಬರ್ 9 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಿಧನರಾದರು ಎಂದು ತಿಳಿಸಲು ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಡೆಲ್ಲಿ ಗಣೇಶ್ ಹಿನ್ನೆಲೆ

ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಪತ್ತಿನ ಪ್ರವೇಶಂ (1976) ಚಿತ್ರದಲ್ಲಿ ನಟಿಸುವ ಮೂಲಕ ಗಣೇಶ್‌ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಹೆಸರೇ ಸೂಚಿಸುವಂತೆ, ಅವರು ದೆಹಲಿ ಮೂಲದವರು. ಅಲ್ಲಿ ಅವರು ನಾಟಕ ತಂಡವಾದ ದಕ್ಷಿಣ ಭಾರತ ನಾಟಕ ಸಭಾದ ಸಕ್ರಿಯ ಸದಸ್ಯರಾಗಿದ್ದರು. ಸಿನಿಮಾ ರಂಗಕ್ಕೆ ಪ್ರವೇಶಿಸುವ ಮುನ್ನ ಒಂದು ದಶಕದ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಚಿತ್ರರಂಗಕ್ಕೆ ಪ್ರವೇಶಿಸಿದ ಅತ್ಯದ್ಬುತ ಪೋಷಕ ನಟರಾಗಿ ಗುರುತಿಸಿಕೊಂಡರು. ಇದುವರೆಗೆ ಅವರು 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ಉಳಗನಾಯಕನ್ ಕಮಲ್ ಹಾಸನ್ ಅವರ ಇಂಡಿಯನ್ 2 ನಲ್ಲಿ ಕಾಣಿಸಿಕೊಂಡರು.

ಕಂಬನಿ ಮಿಡಿ ಚಿತ್ರರಂಗ

ಇನ್ನು ಡೆಲ್ಲಿ ಗಣೇಶ್‌ ನಿಧನದ ಸುದ್ದಿ ಕೇಳಿ ತಮಿಳು ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಡೆಲ್ಲಿ ಗಣೇಶ್ ಸರ್ ಅವರ ನಿಧನದಿಂದ ದುಃಖವಾಗಿದೆ. ಹಲವಾರು ಚಲನಚಿತ್ರಗಳಲ್ಲಿನ ಅವರ ಅಪ್ರತಿಮ ಪಾತ್ರಗಳು ಮತ್ತು ಪರದೆಯ ಮೇಲೆ ಮರೆಯಲಾಗದ ಪಾತ್ರಗಳಿಗೆ ಜೀವ ತುಂಬುವ ಅವರ ಸಾಮರ್ಥ್ಯವು ತಮಿಳು ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಿಸ್‌ ಯೂ ಸರ್‌ ಎಂದು ತಮಿಳು ನಟ ಕಾರ್ತಿ ಬರೆದುಕೊಂಡಿದ್ದಾರೆ. ಇನ್ನು ಕಾರ್ತಿ ಮತ್ತು ಅವರ ತಂದೆ ಹಿರಿಯ ನಟ ಶಿವಕುಮಾರ್ ಭಾನುವಾರ ಬೆಳಗ್ಗೆ ದೆಹಲಿ ಗಣೇಶ್ ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.

ನಟ ಶ್ರೀಮನ್ ಕೂಡ ಪೋಸ್ಟ್‌ವೊಂದನ್ನು ಮಾಡಿರುವ ಅವರು, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ದೈಹಿಕವಾಗಿ ನಾವು ನಿಮ್ಮನ್ನು ಕಳೆದುಕೊಳ್ಳುತ್ತೇವೆ. ಆದರೆ ನಿಮ್ಮ ಕಾರ್ಯಕ್ಷಮತೆ ನಿಮ್ಮ ಪರದೆಯ ಉಪಸ್ಥಿತಿಯು ಎಂದೆಂದಿಗೂ ಜೀವಂತವಾಗಿರುತ್ತದೆ. ಮಿಸ್ ಯು ಸರ್ ಎಂದಿದ್ದಾರೆ. ಏತನ್ಮಧ್ಯೆ, ಶುಭ ಮಂಗಲ್ ಸದನ್ ನಿರ್ದೇಶಕ ಆರ್ ಎಸ್ ಪ್ರಸನ್ನ ಪೋಸ್ಟ್‌ವೊಂದನ್ನು ಮಾಡಿದ್ದು, “ಲೆಜೆಂಡ್ ಇನ್ನಿಲ್ಲ ಎಂಬುದನ್ನೂ ಯೋಚಿಸಲೂ ಸಾಧ್ಯವಾಗುತ್ತಿಲ್ಲ. ಓಂ ಶಾಂತಿ. ಲವ್ ಯು ಸರ್‌ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ‌Viral Video: ಕನ್ನಡದ ನಟನಿಗೆ ತಮಿಳುನಾಡಿನ ಮಾಲ್‌ನಲ್ಲಿ ಕಪಾಳಮೋಕ್ಷ ಮಾಡಿದ ಮಹಿಳೆ! ವಿಡಿಯೊ ವೈರಲ್