Wednesday, 6th November 2024

Devara Box Office Collection: ಮೊದಲ ದಿನದ ಕಲೆಕ್ಷನ್‌ನಲ್ಲಿ ಶಾರುಖ್‌ ಖಾನ್‌ ಹಿಂದಿಕ್ಕಿದ ಜೂನಿಯರ್‌ ಎನ್‌ಟಿಆರ್‌; ʼದೇವರʼ ಗಳಿಸಿದ್ದೆಷ್ಟು?

Devara Box Office Collection

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ, ಟಾಲಿವುಡ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ರಿಲೀಸ್‌ ಆಗಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸಾಧಾರಣ ವಿಮರ್ಶೆಯ ಹೊರತಾಗಿ ಸಿನಿಮಾ ಮೊದಲ ದಿನ ದಾಖಲೆಯ ಕಲೆಕ್ಷನ್‌ ಮಾಡಿದೆ. ಮಾಸ್‌ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಜೂನಿಯರ್‌ ಎನ್‌ಟಿಆರ್ ಎರಡನೇ ಬಾರಿಗೆ ಕೈಜೋಡಿಸಿದ್ದು ವರ್ಕ್‌ಔಟ್‌ ಆಗಿದೆ. ವಿಶೇಷ ಎಂದರೆ ಮೊದಲ ದಿನದ ಗಳಿಕೆಯಲ್ಲಿ ಇದು ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಅಭಿನಯದ ʼಜವಾನ್‌ʼ (Jawan) ಚಿತ್ರವನ್ನೂ ಮೀರಿಸಿದೆ. ಹಾಗಾದರೆ ಆ್ಯಕ್ಷನ್‌ ಪ್ರಿಯರ ಮನಗೆದ್ದ ಕಡಲ ಮಕ್ಕಳ ಕಥೆಯನ್ನೊಳಗೊಂಡ ಈ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ವಿವರ.

2022ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಆರ್‌.ಆರ್‌.ಆರ್‌ʼ ಸಿನಿಮಾದ ಬಳಿಕ ಜೂನಿಯರ್‌ ಎನ್‌ಟಿಆರ್‌ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಇದರಲ್ಲಾದರೆ ಜೂನಿಯರ್‌ ಎನ್‌ಟಿಆರ್‌ ಜತೆ ರಾಮ್‌ ಚರಣ್‌ ಕೂಡ ಮಿಂಚಿದ್ದರು. ಇನ್ನು ಜೂನಿಯರ್‌ ಎನ್‌ಟಿಆರ್‌ ಏಕೈಕ ನಾಯಕರಾಗಿ ಕಾಣಿಸಿಕೊಂಡ ಕೊನೆಯ ಚಿತ್ರ 2018ರಲ್ಲಿ ಬಿಡುಗಡೆಯಾದ ʼಅರವಿಂದ ಸಮೇತ ವೀರ ರಾಘವʼ. ಹೀಗಾಗಿ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಅವರ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಅದರ ಪರಿಣಾಮ ಈಗ ಬಾಕ್ಸ್‌ ಆಫೀಸ್‌ನಲ್ಲಿ ಗೋಚರಿಸಿದೆ.

ಮೊದಲ ದಿನವೇ 83 ಕೋಟಿ ರೂ. ದೋಚಿದ ʼದೇವರʼ

ಸೆಪ್ಟೆಂಬರ್‌ 27ರಂದು ತೆರೆಕಂಡ ʼದೇವರʼ ಮೊದಲ ದಿನವೇ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ 83 ಕೋಟಿ ರೂ. ಬಾಚಿಕೊಂಡಿದೆ ಎನ್ನಲಾಗಿದೆ. ಆ ಮೂಲಕ ಮೊದಲ ದಿನ ಅತೀ ಹೆಚ್ಚು ಗಳಿಸಿದ ಭಾರತದ 8ನೇ ಚಿತ್ರ ಎನಿಸಿಕೊಂಡಿದೆ. ವಿಶೇಷ ಎಂದರೆ ಈಮೂಲಕ ಜೂನಿಯರ್‌ ಎನ್‌ಟಿಆರ್‌ ಶಾರುಖ್‌ ಖಾನ್‌-ನಯನತಾರಾ ಅಭಿನಯದ ʼಜವಾನ್‌ʼ (75 ಕೋಟಿ ರೂ.) ಮತ್ತು ದಳಪತಿ ವಿಜಯ್‌ ನಟನೆಯ ʼಲಿಯೋʼ (66 ಕೋಟಿ ರೂ.) ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮೊದಲ ದಿನ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರಗಳು

ʼಆರ್‌.ಆರ್‌.ಆರ್‌.ʼ – 134 ಕೋಟಿ ರೂ.
ʼಬಾಹುಬಲಿ 2: ದಿ ಕನ್‌ಕ್ಲೂಷನ್‌ʼ – 121 ಕೋಟಿ ರೂ.
ʼಕೆ.ಜಿ.ಎಫ್‌. ಚಾಪ್ಟರ್‌ 2ʼ – 116 ಕೋಟಿ ರೂ.
ʼಕಲ್ಕಿ 2898 ಎಡಿʼ – 93 ಕೋಟಿ ರೂ.
ʼಸಲಾರ್‌ʼ – 92 ಕೋಟಿ ರೂ.
ʼಆದಿಪುರುಷ್‌ʼ – 89 ಕೋಟಿ ರೂ.
ʼಸಾಹೋʼ – 88 ಕೋಟಿ ರೂ.
ʼದೇವರʼ – 83 ಕೋಟಿ ರೂ.
ʼಜವಾನ್‌ʼ – 75 ಕೋಟಿ ರೂ.
ʼಲಿಯೋʼ – 66 ಕೋಟಿ ರೂ.

ವಿಸ್ವಾದ್ಯಂತ ದೇವರ ಮೊದಲ ದಿನ ಒಟ್ಟು 140 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇನ್ನು ತೆಲುಗು ರಾಜ್ಯಗಳಲ್ಲಿ ಅತೀ ಹೆಚ್ಚು ಅಂದರೆ 68 ರೂ. ಆದಾಯ ಹರಿದು ಬಂದಿದೆ. ಹಿಂದಿ ಅವತರಣಿಕೆ 7 ಕೋಟಿ ರೂ., ಕನ್ನಡ ಮತ್ತು ಮಲಯಾಳಂ 30 ಲಕ್ಷ ರೂ., ತಮಿಳು 80 ಲಕ್ಷ ರೂ. ಗಳಿಸಿದೆ. ಇನ್ನು ತೆಲುಗಿನಲ್ಲಿಯೂ ದೇವರ ದಾಖಲೆ ಬರೆದಿದೆ. ಪ್ರಬಾಸ್‌-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 ಎಡಿ‌ ತೆಲುಗು ವರ್ಷನ್‌ ಮೊದಲ ದಿನ 65.8 ಕೋಟಿ ರೂ. ಗಳಿಸಿದರೆ ದೇವರ ಮೊದಲ ದಿನವೇ 68.6 ಕೋಟಿ ರೂ. ಬಾಚಿಕೊಂಡಿದೆ. ದೇವರ ಚಿತ್ರದಲ್ಲಿ ಜಾನ್ವಿ ಕಪೂರ್‌, ಸೈಫ್‌ ಆಲಿ ಖಾನ್‌, ಚೈತ್ರಾ ರೈ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿಸದ್ದಾರೆ.

ಈ ಸುದ್ದಿಯನ್ನೂ ಓದಿ: Devara Movie Review: ಜ್ಯೂ.ಎನ್‌ಟಿಆರ್‌ ಅಭಿಮಾನಿಗಳಿಗೆ ಹಬ್ಬ, ಜಾನ್ವಿ ಕಪೂರ್‌ ಫ್ಯಾನ್‌ಗಳಿಗೆ ನಿರಾಶೆ