Friday, 13th December 2024

Dimsole Movie: ಕರಾವಳಿ ಭಾಗದ ಮತ್ತೊಂದು ವಿಶಿಷ್ಟ ಕಥೆ ಹೊತ್ತುಬಂದ ‘ದಿಂಸೋಲ್’; ಫಸ್ಟ್ ಲುಕ್ ರಿಲೀಸ್‌

ಬೆಂಗಳೂರು: ʼಕಿರಿಕ್ ಪಾರ್ಟಿʼ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ, ʼಅಭಿರಾಮಚಂದ್ರʼ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದ ನಾಗೇಂದ್ರ ಗಾಣಿಗ (Nagebdra Ganiga) ಮತ್ತೊಂದು ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜತೆಗೆ ತ್ರಿಕೋನ ಪ್ರೇಮಕಥೆ ಹೇಳಿದ್ದ ಅವರೀಗ ಕರಾವಳಿ ಸಂಸ್ಕೃತಿಯ ಸೊಗಡನ್ನು ʼದಿಂಸೋಲ್ʼ (Dimsole Movie) ಸಿನಿಮಾ ಮೂಲಕ ಚಿತ್ರಸಲು ಹೊರಟಿದ್ದಾರೆ. ನಾಗೇಂದ್ರ ಗಾಣಿಗ ರಚಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರ ʼದಿಂಸೋಲ್ʼನ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಆಚರಣೆಯೇ ʼದಿಂಸೋಲ್ʼ. ದಿಂಸೋಲ್ ಹಾಗೂ ಕರಾವಳಿ ಎಲ್ಲ ಸಂಸ್ಕೃತಿಯನ್ನು ಈ ಚಿತ್ರದ ಮೂಲಕ ನಾಗೇಂದ್ರ ದೃಶ್ಯರೂಪಕ್ಕೆ ಇಳಿಸುತ್ತಿದ್ದಾರೆ. ಫಸ್ಟ್ ಲುಕ್ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದೆ. ಆದಿದೇವಿಯು ರಕ್ತೇಶ್ವರಿ ಉಗ್ರ ಅವತಾರ ತಾಳಿದ್ದು, ಪೋಸ್ಟರ್ ನಾನಾ ಕಥೆ ಹೇಳುತ್ತಿದೆ.

ʼಅಭಿರಾಮಚಂದ್ರʼ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್ ಹಾಗೂ ಶಿವಾನಿ ರೈ ದಿಂಸೋಲ್ ಚಿತ್ರದಲ್ಲಿಯೂ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ʼಕಾಂತಾರʼ ಖ್ಯಾತಿಯ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಣಾಜಿ, ಮೈಮ್ ರಾಮ್ ದಾಸ್, ಗಣೇಶ್ ಕಾರಂತ್, ಸೂರಜ್ ಹಾಗೂ ಸುರಭಿ ಹಾಗೂ ಕರಾವಳಿ ಭಾಗದ ಸಾಕಷ್ಟು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡ ಇಡೀ ಕರಾವಳಿ ಭಾಗದಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ʼದಿಂಸೋಲ್ʼ ಸಿನಿಮಾಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ನಾಗೇಂದ್ರ ಗಾಣಿಗ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದಾರೆ. ʼಕೆಜಿಎಫ್ʼ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ಸಂಹಿತಾ ಪ್ರೊಡಕ್ಷನ್‌ನಡಿ ʼದಿಂಸೋಲ್ʼ ಚಿತ್ರ ಮೂಡಿ ಬರಲಿದೆ.

ಈ ಸುದ್ದಿಯನ್ನೂ ಓದಿ: Santhosha Sangeetha Movie: ಹೃದಯಸ್ಪರ್ಶಿ ಕಥೆಯನ್ನೊಳಗೊಂಡ ʼಸಂತೋಷ ಸಂಗೀತʼ ಚಿತ್ರ ನ.8ಕ್ಕೆ ಬಿಡುಗಡೆ