Friday, 13th December 2024

Divya Bharti Death Secret: ನಟಿ ದಿವ್ಯಾ ಭಾರತಿ ಸಾವಿನ ಸೀಕ್ರೆಟ್‌ ರಿವೀಲ್‌- 31 ವರ್ಷಗಳ ಬಳಿಕ ಸ್ಫೋಟಕ ಸಂಗತಿ ಬಿಚ್ಚಿಟ್ಟ ಆತ್ಮೀಯ ಗೆಳತಿ

ಮುಂಬೈ: 90ರ ದಶಕದ ಬಾಲಿವುಡ್ ಸೆನ್ಸೇಷನ್ ಹಾಗೂ ಆ ಕಾಲದ ನಟಿಯರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ದಿವ್ಯಾ ಭಾರತಿ 1993ನೇ ಇಸವಿಯಲ್ಲಿ ತನ್ನ 19ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಬಾಲಿವುಡ್ ಮಾತ್ರವಲ್ಲದೇ ಇಡೀ ದೇಶಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು ಮತ್ತು ದಿವ್ಯಾ ಭಾರತಿ ಸಾವಿನ ಸುತ್ತ ಹಲವಾರು ಅನುಮಾನದ ಹುತ್ತಗಳೂ ಸಹ ಎದ್ದಿದ್ದವು(Divya Bharti Death Secret).

1993ರ ಎಪ್ರಿಲ್ 5ರಂದು ತನ್ನ ಬರ್ತ್ ಡೇಯ ಒಂದು ದಿನದ ಬಳಿಕ ದಿವ್ಯ ಭಾರತಿ ಮುಂಬೈಯಲ್ಲಿರುವ ತನ್ನ ಅಪಾರ್ಟ್ ಮೆಂಟಿನ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಈ ಸಾವಿನ ಹಿಂದೆ ಆಕೆಯ ಪತಿಯಾಗಿದ್ದ ಸಾಜಿದ್ ನಾಡಿಯಾವಾಲಾ ಕೈವಾಡ ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಇದೀಗ ಖ್ಯಾತ ಹಾಸ್ಯ ನಟಿ ಮತ್ತು ದಿವ್ಯಾ ಭಾರತಿಯ ಆಪ್ತ ಗೆಳತಿಯಾಗಿದ್ದ ಗುಡ್ಡಿ ಮಾರುತಿ ದಿವ್ಯಾಳದ್ದು ಕೊಲೆಯಲ್ಲ, ಅದೊಂದು ಆಕಸ್ಮಿಕ ಸಾವು ಎಂದು ಹೇಳಿಕೊಂಡಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಈ ವಿಚಾರದ ಕುರಿತಾಗಿ ಮುಕ್ತವಾಗಿ ಮಾತನಾಡಿರು ಗುಡ್ಡಿ ಮಾರುತಿ ಅವರು ದಿವ್ಯಾ ಅವರ ಗುಣ ಸ್ವಭಾವಗಳ ಕುರಿತಾಗಿ ಮತ್ತು ಆಕೆಯ ಸಾವಿನ ವಿಚಾರಗಳ ಕುರಿತಾಗಿ ಇಂಟರೆಸ್ಟಿಂಗ್ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಗುಡ್ಡಿ ಹೇಳುವ ಪ್ರಕಾರ, ‘ದಿವ್ಯಾ ಒಳ್ಳೆಯ ಹುಡುಗಿಯಾಗಿದ್ದಳು.. ಆದರೆ ಅವಳ ಮನಸ್ಥಿತಿ ಯಾವಾಗಲೂ ಗೊಂದಲಮಯವಾಗಿತ್ತು. ಮತ್ತು ಆಕೆ ತನ್ನ ಜೀವನದ ಪ್ರತೀ ಕ್ಷಣವನ್ನು, ಇದೇ ತನ್ನ ಕೊನೆಯ ದಿನ ಎಂಬಂತೆ ಜೀವಿಸಿದ್ದಳು..’ ಎಂಬ ವಿಚಾರವನ್ನು ಗುಡ್ಡಿ ಹೇಳಿಕೊಂಡಿದ್ದಾರೆ. “ಆ ಸಂದರ್ಭದಲ್ಲಿ ಆಕೆ ಸಾಜಿದ್ ನಾಡಿಯಾವಾಲಾನ ಸಂಪರ್ಕದಲ್ಲಿದಳು ಮತ್ತು ಆವಾಗ ‘ಶೋಲಾ ಔರ್ ಶಬ್ನಮ್’ ಚಿತ್ರದ ಶೂಟಿಂಗ್ ನಡೀತಿತ್ತು.

ಆಕೆ ಆಕಸ್ಮಿಕವಾಗಿ ಸಾವನ್ನಪ್ಪುವ ಒಂದು ದಿನ ಮೊದಲು ಅಂದರೆ, ಎಪ್ರಿಲ್ 4ರಂದು ಆಕೆಯ ಬರ್ತ್ ಡೇ ಇತ್ತು. ಆ ದಿನ ನಾವೆಲ್ಲರೂ ಚೆನ್ನಾಗಿ ಪಾರ್ಟಿ ಮಾಡಿದ್ದೆವು. ಆ ಪಾರ್ಟಿಯಲ್ಲಿ ಗೋವಿಂದ, ದಿವ್ಯಾ, ಸಾಜಿದ್ ಸೇರಿದಂತೆ ಹಲವು ಗೆಳೆಯರಿದ್ದರು. ಆ ದಿನ ಆಕೆ ಮೇಲ್ನೋಟಕ್ಕೆ ನಗುನಗುತ್ತಾ ಇದ್ರೂ ಸಹ ಒಳಗಿಂದ ಆಕೆ ಯಾಕೋ ಬೇಸರದಲ್ಲಿದ್ದಳು ಅಂತ ನನಗೆ ಅನ್ನಿಸ್ತಾ ಇತ್ತು. ಆಕೆಗೆ ಒಂದು ಔಟ್ ಡೋರ್ ಶೂಟಿಂಗ್ ಗೆ ಹೋಗಲು ಇತ್ತು, ಆದರೆ ಆಕೆಗೆ ಆ ಶೂಟಿಂಗ್ ಗೆ ಹೋಗುವುದು ಇಷ್ಟವಿರಲಿಲ್ಲ..” ಎಂದು ಆ ದಿನವನ್ನು ಗುಡ್ಡಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಅಳಿಲನ್ನು ಸಹೋದರ ಎಂದು ಭಾವಿಸಿ ಪೂಜಿಸಿದ ಯುವತಿ! ವಿಡಿಯೊ ನೋಡಿ

ಮತ್ತೆ ಎಪ್ರಿಲ್ 5ರಂದು ನಡೆದ ಆ ದುರ್ಘಟನೆಯ ಬಗ್ಗೆ ಮಾತನಾಡಿದ ಗುಡ್ಡಿ, ‘ದಿವ್ಯಾಳ ಫ್ಲ್ಯಾಟ್ ಜುಹು ಬಿಲ್ಡಿಂಗ್ ನ ಐದನೇ ಮಹಡಿಯಲ್ಲಿತ್ತು, ಅದೊಂದು ದಿನ ಗುಡ್ಡಿ ಅಲ್ಲೇ ಸಮೀಪದಲ್ಲಿದ್ದ ಐಸ್ ಕ್ರೀಂ ಶಾಪ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮೇಲಿನಿಂದ ಆಕೆಯ ಹೆಸರು ಕೂಗಿದಂತಾಗುತ್ತದೆ, ಗುಡ್ಡಿ ಯಾರೆಂದು ಮೇಲೆ ನೋಡಿದಾಗ ನಟಿ ದಿವ್ಯಾ ಅಲ್ಲಿ ಲಾಂಜ್ ಗೋಡೆಯ ಮೇಲೆ ಕುಳಿತು ತನ್ನ ಕಾಲನ್ನು ಕೆಳಗೆ ಬಿಟ್ಟಿದ್ದಳು. ಕೂಡಲೇ ಗುಡ್ಡಿ ಆಕೆಗೆ “ಹಾಗೆ ಕುಳಿತುಕೊಳ್ಳಬೇಡ..ಒಳಗೆ ಹೋಗು..” ಎಂದು ಹೇಳುತ್ತಾಳೆ, ಆದರೆ ಗೆಳತಿಯ ಮಾತನ್ನು ಕೇಳದೇ ದಿವ್ಯಾ, “ಕುಚ್ ನಹೀ ಹೋತಾ.. (ಏನೂ ಆಗೋದಿಲ್ಲ..”) ಎಂದು ಹೇಳುತ್ತಾಳೆ. ನಿಜ ಹೇಳಬೇಕೆಂದ್ರೆ ದಿವ್ಯಾಳಿಗೆ ಎತ್ತರದ ಜಾಗದ ಬಗ್ಗೆ ಭಯ ಇರ್ಲಿಲ್ಲ.. ಆದ್ರೆ ವಿಪರ್ಯಾಸವೆಂದರೆ ಅದೇ ಅವಳ ಸಾವಿಗೆ ಕಾರಣವಾಯ್ತು..!

ಅದೇ ರೀತಿಯಾಗಿ ಎಪ್ರಿಲ್ 5ರಂದ ದಿವ್ಯಾ ತನ್ನ ಫ್ಲ್ಯಾಟ್ ನ ಕಿಟಕಿಯಿಂದ ಬಗ್ಗಿ, ಸಾಜಿದ್ ನ ಕಾರು ಬಂತೇ ಎಂದು ನೋಡುತ್ತಿದ್ದ ಸಂದರ್ಭದಲ್ಲಿ ಅವಳು ಆಯತಪ್ಪಿ ಬಿದ್ದು ಸಾವನ್ನಪ್ಪುವಂತಾಯಿತು, ಎಂದು ತನ್ನ ಗೆಳತಿಯ ದುರ್ಮರಣವನ್ನು ಗುಡ್ಡಿ ಭಾರವಾದ ಹೃದಯದಿಂದ ನೆನಪಿಸಿಕೊಂಡಿದ್ದಾರೆ. ಮತ್ತು ದಿವ್ಯಾ ಆ ರೀತಿಯಾಗಿ ಕೆಳಗೆ ಬೀಳುವುದನ್ನು ಡಿಸೈನರ್ ನೀತಾ ಲುಲ್ಲಾ ಕಣ್ಣಾರೆ ಕಂಡಿದ್ದಾರೆ ಎಂಬ ವಿಚಾರವನ್ನೂ ಸಹ ಗುಡ್ಡಿ ನೆನಪಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ದಿವ್ಯಾಳ ತಾಯಿಯ ಆರೋಗ್ಯ ಸಿಕ್ಕಾಪಟ್ಟೆ ಹದಗೆಟ್ಟಿತ್ತು, ಸಾಜಿದ್ ಅಂತೂ ಸಂಪೂರ್ಣವಾಗಿ ಕಂಗೆಟ್ಟು ಹೋಗಿದ್ದ. ನಿಜ ಹೇಳಬೇಕೆಂದ್ರೆ ಈ ಘಟನೆ ನಡೆದಾಗ ಆತ ಮನೇಲೇ ಇರ್ಲಿಲ್ಲ..’ ಎಂಬ ವಿಚಾರವನ್ನು ಮಾರುತಿ ಗುಡ್ಡಿ ನೆನಪಿಸಿಕೊಳ್ಳುವ ಮೂಲಕ 90ರ ದಶಕದ ಸೆನ್ಸೇಷನ್ ನಟಿಯ ಬದುಕು ಯಾವ ರೀತಿ ದುರಂತ ಅಂತ್ಯ ಕಂಡಿತು ಎಂಬುದನ್ನು ಇಷ್ಟು ವರ್ಷಗಳ ಬಳಿಕ ನೆನಪಿಸಿಕೊಂಡಿದ್ದಾರೆ.