Thursday, 12th September 2024

Drishti Bottu Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’; ರೂಪವೇ ಶಾಪವಾದವಳ ಕಥೆ

Drishti Bottu Serial

ಬೆಂಗಳೂರು: ಕನ್ನಡಿಗರಿಗೆ ಸದಭಿರುಚಿಯ ಮನೋರಂಜನೆ ನೀಡುತ್ತ ಬಂದಿರುವ ಕಲರ್ಸ್ ಕನ್ನಡ ವಾಹಿನಿಯು ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಹೊತ್ತು ತಂದಿದೆ. ರೂಪವೇ ಶಾಪವಾದ ಹುಡುಗಿಯೊಬ್ಬಳ ಕಥೆಯನ್ನು ಮನಮುಟ್ಟುವಂತೆ ಹೇಳುವ ಈ ಹೊಸ ಧಾರಾವಾಹಿಯ ‘ದೃಷ್ಟಿಬೊಟ್ಟು’. ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ (Drishti Bottu Serial).

ಜನಪ್ರಿಯ ಕಿರುತೆರೆ ತಾರೆ ವಿಜಯ್ ಸೂರ್ಯ ಈ ಧಾರಾವಾಹಿಯ ಮೂಲಕ ಕಲರ್ಸ್ ಕನ್ನಡ ವಾಹಿನಿಗೆ ಮರಳಿರುವುದು ವಿಶೇಷ. ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಎಂಬ ಹೊಸ ಪ್ರತಿಭೆ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಅಂಬಿಕಾ ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಜೊತೆಗೆ ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಸೇರಿದಂತೆ ಅನೇಕ ಕಿರಿ ಹಿರಿ ನಟನಟಿಯರು ಅಭಿನಯಿಸಿದ್ದಾರೆ.

ಈ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆಲ್ಲುವಂತಿದೆ ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದು ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಮತ್ತೊಂದು ಹೆಗ್ಗಳಿಕೆ. 

ಈ ಧಾರಾವಾಹಿಯ ಸ್ಪೆಷಲ್ ಪಾರ್ಟನರ್ ಸ್ಪರ್ಶ್ ಮಸಾಲಾ. ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ.

ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೊಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. ಆಮೇಲೆ ಕತೆ ಹಲವು ಊಹಿಸಲಾಗದ ತಿರುವುಗಳನ್ನು ತೆಗೆದುಕೊಳ್ಳುತ್ತ ಮುಂದೆ ಸಾಗುತ್ತದೆ. ದೃಷ್ಟಿಗೆ ತನ್ನ ಸೋದರಿ ಸಿಕ್ಕಳೆ? ವಿಧಿ ದತ್ತ ಮತ್ತು ದೃಷ್ಟಿಯನ್ನು ಒಂದುಮಾಡುವುದೆ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಬಲ್ಲಳೆ? ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂದರೆ ನೀವು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ನೋಡಬೇಕು. ಸದ್ಯ ರಿಲೀಸ್‌ ಆಗಿರುವ ಪ್ರೋಮೋ ಗಮನ ಸೆಳೆದಿದೆ. ಸಿನಿಮಾ ಮಾದರಿಯಲ್ಲಿ ಮೂಡಿ ಬಂದಿರುವ ಆ್ಯಕ್ಷನ್‌ ದೃಶ್ಯಗಳಿಗೆ ವೀಕ್ಷಕರು ಮನ ಸೋತಿದ್ದಾರೆ.

ಜಿಯೊ ಸಿನಿಮಾ ಆ್ಯಪ್‌ನಲ್ಲಿ ಕೂಡ ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ನೀವು ವೀಕ್ಷಿಸಬಹುದು.

ಈ ಸುದ್ದಿಯನ್ನೂ ಓದಿ: Bigg Boss Kannada: ಶೀಘ್ರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ; ಪ್ರೋಮೊ ಔಟ್‌

Leave a Reply

Your email address will not be published. Required fields are marked *