Wednesday, 11th December 2024

ಅಭಿಷೇಕ್ ಅಂಬರೀಷ್-ಅವಿವಾ ಬಿದ್ದಪ್ಪ ನಿಶ್ಚಿತಾರ್ಥ

ಬೆಂಗಳೂರು: ನಟ ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥವು ಖಾಸಗಿ ಹೊಟೇಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು, ಅದಕ್ಕೆ ಇಂಬು ಕೊಡುವಂತೆ ನಗರದ ಖಾಸಗಿ ಹೊಟೇಲ್‍ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವು ನೆರವೇರಿದೆ.

ನಿಶ್ಚಿತಾರ್ಥದಲ್ಲಿ ಅಂಬರೀಷ್ ಹಾಗೂ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪರ ಕುಟುಂಬದವರು, ಸಚಿವ ಅಶ್ವತ್ಥ ನಾರಾಯಣ, ನಿರ್ದೇಶಕ ಆಯೋಗ್ಯ ಮಹೇಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲ ನಿರ್ಮಾಪಕರು, ನಿರ್ದೇಶಕರು, ಆಪ್ತೇಷ್ಟರು ಪಾಲ್ಗೊಂಡಿ ದ್ದರು.

ಎರಡು ಕುಟುಂಬದವರ ಸದಸ್ಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಪರಸ್ಪರ ಉಂಗುರಗಳನ್ನು ಬದಲಾಯಿಸಿ ಕೊಂಡು ನಿಶ್ಚಿತಾರ್ಥ ಮಾಡಿ ಕೊಂಡರು.

ಆಪರೇಷನ್ ಅಂತದ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಅಭಿಷೇಕ್, ಅಮರ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾದರು. ಬ್ಯಾಡ್ ಮ್ಯಾನರ್ಸ್ ಹಾಗೂ ಅಯೋಗ್ಯ ಮಹೇಶ್‍ರ ಹೊಸ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ನಟಿಸುತ್ತಿದ್ದಾರೆ.

ನಟಿ ಅದಿತಿ ಪ್ರಭುದೇವ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರೆ, ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾರ ನಿಶ್ಚಿತಾರ್ಥ ನಡೆದಿರುವುದರಿಂದ ಸ್ಯಾಂಡಲ್‍ವುಡ್‍ನಲ್ಲಿ ಈಗ ಮದುವೆ ಸಂಭ್ರಮಗಳು ಕಲೆಕಟ್ಟುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.