Friday, 13th December 2024

Malayalam Film Industry: ಲಿಂಗ ತಾರತಮ್ಯ, ಲೈಂಗಿಕ ಕಿರುಕುಳ ಸೇರಿ ಮಲಯಾಳಂ ಚಿತ್ರೋದ್ಯಮದ ಕರಾಳ ಮುಖವನ್ನು ತೋರಿಸಿದ ಹೇಮಾ ಸಮಿತಿ ವರದಿ

Malayalam Film Industry

ಮಲಯಾಳಂ ಚಲನಚಿತ್ರೋದ್ಯಮದಲ್ಲಿ (Malayalam Film Industry) ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ (gender discrimination), ಮಹಿಳಾ ನಟಿಯರಿಗೆ ಲೈಂಗಿಕ ಕಿರುಕುಳ (Sexual harassment) ಸೇರಿದಂತೆ ಅನೇಕ ಭಯಾನಕ ಕಥೆಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿ (Justice Hema Committee) ವರದಿ ತೆರೆದಿಟ್ಟಿದೆ. 2017 ರಲ್ಲಿ ರಚಿಸಲಾದ ಮೂರು ಸದಸ್ಯರ ಸಮಿತಿಯ ವರದಿಯನ್ನು 2024ರ ಆಗಸ್ಟ್ 19ರಂದು ಬಿಡುಗಡೆ ಮಾಡಲಾಗಿದೆ.

ಕೇರಳ ಮೂಲದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಅರ್ಜಿಯ ಬಳಿಕ 2017 ರಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ತಾರತಮ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಹೇಮಾ, ಮಾಜಿ ನಟಿ ಶಾರದಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ.ಬಿ. ವಲ್ಸಲಾ ಕುಮಾರಿ ಅವರನ್ನು ಒಳಗೊಂಡ ಹೇಮಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಮೊದಲು 2019ರ ಡಿಸೆಂಬರ್ ನಲ್ಲಿ ಕೇರಳ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇದನ್ನು ಬಳಿಕ ಸೀಮಿತ ತಿದ್ದುಪಡಿಗಳೊಂದಿಗೆ ಕಳೆದ ಆಗಸ್ಟ್ ನಲ್ಲಿ ಬಿಡುಗಡೆ ಮಾಡಿದೆ.

ಯಾರ ಮೇಲೆ ಆರೋಪ ?

ಸಮಿತಿ ವರದಿ ಬಿಡುಗಡೆಯಾದ ಬಳಿಕ ನಟ ಮತ್ತು ನಿರ್ದೇಶಕ ಬಾಬುರಾಜ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಚಲನಚಿತ್ರವೊಂದರಲ್ಲಿ ಪಾತ್ರಕ್ಕಾಗಿ ಮನೆಗೆ ಕರೆದು ಬಾಬುರಾಜ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಕಿರಿಯ ನಟಿಯೊಬ್ಬರು ಆರೋಪಿಸಿದ್ದಾರೆ.

ಮಲಯಾಳಂ ಚಲನಚಿತ್ರ ನಟರ ಸಂಘದ (ಅಮ್ಮ) ಜಂಟಿ ಕಾರ್ಯದರ್ಶಿ ಬಾಬುರಾಜ್ ಅವರು ಈ ಆರೋಪವನ್ನು ನಿರಾಕರಿಸಿದ್ದು, ಆರೋಪದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮಲಯಾಳಂನ ಹಿರಿಯ ನಟ ಸಿದ್ದಿಕ್ ತಮ್ಮ ಮೇಲೆ ಚಿಕ್ಕವಯಸ್ಸಿನಲ್ಲಿಅತ್ಯಾಚಾರ ನಡೆಸಿರುವುದಾಗಿ ನಟಿಯೊಬ್ಬರು ಆರೋಪಿಸಿದ ಬಳಿಕ ಸಿದ್ದಿಕ್ ಅಮ್ಮಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸರ್ಕಾರ ತನಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರೆ ಕಾನೂನು ಕ್ರಮಕ್ಕೆ ಸಿದ್ಧ ಎಂದು ನಟಿ ಹೇಳಿದ್ದು ಮಾತ್ರವಲ್ಲದೆ ಉದ್ಯಮದಲ್ಲಿ ಇನ್ನೋರ್ವ ವೃತ್ತಿಪರರು ತಮ್ಮನ್ನು ಲೈಂಗಿಕ ಅನುಕೂಲಕ್ಕಾಗಿ ಬಳಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಕೇರಳ ಅಸೆಂಬ್ಲಿಯಲ್ಲಿ ಎರಡು ಬಾರಿ ಸಿಪಿಐ(ಎಂ) ಶಾಸಕರಾಗಿದ್ದವರು ಸೇರಿದಂತೆ ವಿವಿಧ ನಟರಿಂದ ಲೈಂಗಿಕ ದುರ್ವರ್ತನೆ ಎದುರಿಸಿದ್ದೇನೆ ಎಂದು ನಟಿ ಮಿನು ಮುನೀರ್ ಆರೋಪಿಸಿದ್ದಾರೆ.

ಅವರು ಮುಖೇಶ್, ಜಯಸೂರ್ಯ, ಮಣಿಯನ್ಪಿಳ್ಳ ರಾಜು ಮತ್ತು ಅಮ್ಮಾ ಪ್ರಮುಖ ನಾಯಕ ಎಡವೇಲ ಬಾಬು ಅವರನ್ನು ಹೆಸರಿಸಿದ್ದಾರೆ. ಮುನೀರ್ ಅವರ ಹೇಳಿಕೆಗಳಿಗೆ ಮುಖೇಶ್, ಜಯಸೂರ್ಯ ಮತ್ತು ಬಾಬು ಪ್ರತಿಕ್ರಿಯಿಸದಿದ್ದರೂ, ಆರೋಪಗಳ ತನಿಖೆಯನ್ನು ಸ್ವಾಗತಿಸುವುದಾಗಿ ರಾಜು ಹೇಳಿದ್ದಾರೆ.

ಬಂಗಾಳಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರ ಹೆಸರು ಬಹಿರಂಗ ಪಡಿಸಿದ್ದರಿಂದ ಚಲನಚಿತ್ರ ನಿರ್ದೇಶಕ ರಂಜಿತ್ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ನಟ ಸಿದ್ದಿಕ್ ಅಮ್ಮಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಕೊಲ್ಲಂನ ಸಿಪಿಐ(ಎಂ) ಶಾಸಕ ವಿಚು ಮುಖೇಶ್ ವಿರುದ್ಧ ಕಾಸ್ಟಿಂಗ್ ಡೈರೆಕ್ಟರ್ ಟೆಸ್ ಜೋಸೆಫ್ ಹಲ್ಲೆ ಆರೋಪವನ್ನು ಮಾಡಿದ್ದಾರೆ.

ಇಬ್ಬರು ನಟಿಯರು ನಿರ್ದೇಶಕ ತುಳಸಿದಾಸ್ ಅವರಿಂದ ತಮಗೆ ಕೆಟ್ಟ ಅನುಭವವಾಗಿದೆ ಎಂದು ಹೇಳಿದ್ದಾರೆ.

ಹೇಮಾ ಸಮಿತಿ ರಚನೆ

2017ರ ಫೆಬ್ರವರಿಯಲ್ಲಿ ಮಲಯಾಳಂನ ಜನಪ್ರಿಯ ಮಹಿಳಾ ನಟಿಯೊಬ್ಬರು ಕೊಚ್ಚಿಯಲ್ಲಿ ತಮ್ಮನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವನ್ನು ನಡೆಸಿರುವುದಾಗಿ ಆರೋಪಿಸಿದ ಬಳಿಕ ಚಲನಚಿತ್ರೋದ್ಯಮದಲ್ಲಿ ಹಲವು ಪ್ರಕರಣಗಳು ಬೆಳಕಿಗೆ ಬಂದಿತು. ಅನೇಕರು ಲೈಂಗಿಕ ತಾರತಮ್ಯ ಎದುರಿಸುತ್ತಿರುವುದಾಗಿ ದೂರಿದರು. ಈ ಹಿನ್ನೆಲೆಯಲ್ಲಿ ಮಹಿಳಾ ನಟಿಯರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರನ್ನು ಒಳಗೊಂಡ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಅನ್ನು ರಚಿಸಲಾಯಿತು. 2017ರ ಮೇ 18ರಂದು ಡಬ್ಲ್ಯುಸಿಸಿ ಕೇರಳ ಮುಖ್ಯಮಂತ್ರಿಗೆ ಈ ಘಟನೆಯ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿತು.

2017ರ ಜುಲೈನಲ್ಲಿ ಕೇರಳ ಸರ್ಕಾರವು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳನ್ನು ಪರಿಶೀಲಿಸಲು ಹೇಮಾ ಸಮಿತಿಯನ್ನು ರಚಿಸಿತು. ಈ ಸಮಿತಿಯು 2019 ರ ಡಿಸೆಂಬರ್‌ನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ 295 ಪುಟಗಳ ವರದಿಯನ್ನು ಸಲ್ಲಿಸಿದೆ.

ವರದಿ ಏನು ಹೇಳಿದೆ?

ಉದ್ಯಮದ 30 ವಿವಿಧ ವರ್ಗಗಳಲ್ಲಿ ಕೆಲಸ ಮಾಡುವ ಮತ್ತು ಉದ್ಯಮಕ್ಕೆ ಪ್ರವೇಶಿಸಲು ಬಯಸುವ ಮಹಿಳೆಯರಿಗೆ ಲೈಂಗಿಕತೆಗೆ ಒತ್ತಾಯ, ಲೈಂಗಿಕ ಕಿರುಕುಳ, ವಿವಿಧ ರೀತಿಯಲ್ಲಿ ನಿಂದನೆ ಸೇರಿದಂತೆ ಕನಿಷ್ಠ 17 ರೀತಿಯಲ್ಲಿ ಮಹಿಳೆಯರನ್ನು ಶೋಷಿಸಲಾಗುತ್ತಿದೆ ಎಂದು ಸಮಿತಿ ವರದಿ ತಿಳಿಸಿದೆ.

ಮಹಿಳೆಯರಿಗೆ ಉತ್ತಮ ಅವಕಾಶಕ್ಕಾಗಿ ಅಥವಾ ಕಪ್ಪುಪಟ್ಟಿಗೆ ಸೇರಿಸುವುದನ್ನು ತಪ್ಪಿಸಲು ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯ ಮಾಡಲಾಗುತ್ತದೆ. ನಟಿಯರ ಸಂಭಾವನೆ, ಸುರಕ್ಷತೆಗಳ ವಿಷಯದಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಸಮಿತಿ ತಿಳಿಸಿದೆ.

ಮಲಯಾಳಂ ಚಲನಚಿತ್ರೋದ್ಯಮವು ಕೆಲವೇ ಕೆಲವು ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ನಿಯಂತ್ರಣದಲ್ಲಿದೆ. ಮಹಿಳೆಯರ ವಿರುದ್ಧ ಆನ್‌ಲೈನ್ ಕಿರುಕುಳ ಮತ್ತು ಸೈಬರ್ ದಾಳಿಗಳು ನಿರಂತರವಾಗಿದೆ ಎಂಬುದಾಗಿಯೂ ಸಮಿತಿ ತಿಳಿಸಿದೆ.

ವರದಿ ಏಕೆ ಬಿಡುಗಡೆ?

ಐವರು ಮಾಹಿತಿ ಹಕ್ಕು ಕಾರ್ಯಕರ್ತರು ವರದಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೇರಳ ರಾಜ್ಯ ಮಾಹಿತಿ ಆಯೋಗವನ್ನು (KSIC) ಸಂಪರ್ಕಿಸಿದರು. ಮಾಹಿತಿ ಆಯೋಗವು 2024ರ ಜುಲೈ 6ರಂದು ವರದಿಯ ಬಿಡುಗಡೆಗೆ ನಿರ್ಧರಿಸಿತು.

ಚಲನಚಿತ್ರ ನಿರ್ಮಾಪಕ ಸಾಜಿ ಪರಾಯಿಲ್ ಅವರ ಅರ್ಜಿಯ ಅನಂತರ ಕೇರಳ ಹೈಕೋರ್ಟ್ ವರದಿ ಬಿಡುಗಡೆಗೆ ತಡೆ ನೀಡಿತು. ವಾದವಿವಾದದ ಬಳಿಕ ಅವರ ಅರ್ಜಿಯನ್ನು ವಜಾಗೊಳಿಸಲಾಯಿತು. ಬಳಿಕ ವರದಿಯ 63 ಪುಟಗಳನ್ನು ಆಗಸ್ಟ್ 14ರಂದು ಬಿಡುಗಡೆ ಮಾಡಲಾಗಿದ್ದು, ಇದಕ್ಕೂ ಮುನ್ನ ಕೆಲವು ತಿದ್ದುಪಡಿ ಮಾಡಲಾಗಿದೆ.

ವರದಿ ಬಿಡುಗಡೆಗೆ ತಡವಾಗಿದ್ದು ಯಾಕೆ?

2019 ರಲ್ಲಿ ಸಿಎಂಗೆ ಸಲ್ಲಿಸಲಾದ ವರದಿಯನ್ನು ಐದು ವರ್ಷಗಳ ಕಾಲ ಮುಚ್ಚಿಡಲಾಗಿತ್ತು. ವೈಯಕ್ತಿಕ ಗೌಪ್ಯತೆಯನ್ನು ರಕ್ಷಿಸಲು ವರದಿ ಬಿಡುಗಡೆಯ ಸಮಯದಲ್ಲಿ ಕೆಲವು ಭಾಗಗಳನ್ನು ಪರಿಷ್ಕರಿಸಲಾಯಿತು.

ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಕಾರಣ ಪಿಣರಾಯಿ ವಿಜಯನ್ ಅವರು ಅಪರಾಧ ಎಸಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ವಿಜಯನ್, ನ್ಯಾಯಮೂರ್ತಿ ಹೇಮಾ ಅವರು 2020ರ ಫೆಬ್ರವರಿ 19ರಂದು ಸರ್ಕಾರಕ್ಕೆ ಪತ್ರ ಬರೆದು ಇದು ಅನೇಕರ ಖಾಸಗಿತನದ ಮೇಲೆ ಪರಿಣಾಮ ಬೀರುವ ಕಾರಣದಿಂದ ಈ ವರದಿಯನ್ನು ಸಾರ್ವಜನಿಕಗೊಳಿಸಬೇಡಿ ಎಂದು ವಿನಂತಿಸಿದ್ದರು ಎಂದು ಹೇಳಿದ್ದಾರೆ.