ಚೆನ್ನೈ: ದಳಪತಿ ವಿಜಯ್ (Vijay) ಕಾಲಿವುಡ್ ಮಾತ್ರ ದಕ್ಷಿಣ ಭಾರತದಲ್ಲೇ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕರ ಪಟ್ಟಿಯಲ್ಲಿ ಅವರ ಹೆಸರೂ ಇದೆ. ಇದೀಗ ಅವರು ತಮ್ಮ ಜೀವನದ ಇನ್ನೊಂದು ಹಂತಕ್ಕೆ ತೆರಳಲು ಸಜ್ಜಾಗಿದ್ದಾರೆ. ವೆಟ್ರಿ ಕಝಗಂ ಪಾರ್ಟಿ (Vettri Kazhagam party) ಎಂಬ ಪಕ್ಷ ಹುಟ್ಟು ಹಾಕಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಲಿದೆ. ಹೀಗಾಗಿ ಅವರು ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದಾರೆ. ಸದ್ಯ ಅವರ ಕೊನೆಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼದಳಪತಿ 69ʼ (Thalapathy 69) ಎನ್ನುವ ಟೈಟಲ್ ಇದಲಾಗಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವನ್ನು ಬೆಂಗಳೂರು ಮೂಲದ ಕೆವಿಎನ್ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಇದೀಗ ವಿಜಯ್ ಪುತ್ರ ಜೇಸನ್ ಸಂಜಯ್ (Jason Sanjay) ಚಿತ್ರರಂಗ ಪ್ರವೇಶಿಸಲು ಮುಂದಾಗಿದ್ದಾರೆ.
ಜೇಸನ್ ಸಂಜಯ್ ಅವರಿಗೆ ಈಗ 24 ವರ್ಷ. ವಿಶೇಷ ಎಂದರೆ ಅವರು ಹೀರೋ ಆಗಿ ಚಿತ್ರರಂಗ ಪ್ರವೇಶಿಸುತ್ತಿಲ್ಲ. ಬದಲಾಗಿ ನಿರ್ದೇಶಕರಾಗಿ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ.
A new chapter unfolds 📖 as we welcome our exceptional cast & crew @sundeepkishan 😎 @MusicThaman 🎶 & @Cinemainmygenes ✂️🎞️ on board for JASON SANJAY-01 📚💵
— Lyca Productions (@LycaProductions) November 29, 2024
▶️ https://t.co/5kPO4Kvz0U
On floors soon… 📽️🎬@official_jsj @LycaProductions #Subaskaran @gkmtamilkumaran…
ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಾಥ್
2014ರಲ್ಲಿ ತೆರೆಕಂಡ ವಿಜಯ್ ಅಭಿನಯದ ʼಕತ್ತಿʼ ಚಿತ್ರವನ್ನು ನಿರ್ಮಿಸುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೇಸನ್ ಸಂಜಯ್ ಅವರ ಕನಸಿಗೆ ಸಾಥ್ ಕೊಟ್ಟಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಟೀಸರ್ ರಿಲೀಸ್ ಮಾಡಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದೆ.
ಹೀರೋ ಯಾರು?
ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಂದೀಪ್ ಕಿಶನ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಈ ಮೊದಲ ಸಿನಿಮಾದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ತಮನ್ ಎಸ್. ಮ್ಯೂಸಿಕ್ ನೀಡಲಿದ್ದಾರೆ.
ವಿದೇಶದಲ್ಲಿ ಓದಿರುವ ಜೇಸನ್ ಸಂಜಯ್
ಜೇಸನ್ ಸಂಜಯ್ ಒಂದಷ್ಟು ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಧುಮುಕಿದ್ದಾರೆ. ಚೆನ್ನೈಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿರುವ ಜೇಸನ್ ಸಂಜಯ್ ಬಳಿಕ ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. ಜತೆಗೆ ಲಂಡನ್‌ನಲ್ಲಿ ಚಿತ್ರಕಥೆ ಬರವಣಿಗೆಯಲ್ಲಿ ಬಿಎ ಪದವಿ ಪಡೆದಿದ್ದಾರೆ. ಸದ್ಯ ಕಾಲಿವುಡ್ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅತ್ತ ತಂದೆ ಚಿತ್ರರಂಗ ತೊರೆಯಲು ನಿರ್ಧರಿಸಿದ್ದು ಇತ್ತ ಪುತ್ರ ಬಲಗಾಲಿಟ್ಟು ಸಿನಿಮಾರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ತಂದೆಯಂತೆ ಮಗನನ್ನೂ ಪ್ರೇಕ್ಷಕರು ಎರಡೂ ಕೈ ಚಾಚಿ ಸ್ವಾಗತಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಲೈಕಾ ಪ್ರೊಡಕ್ಷನ್ಸ್ ಕಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಯಾಗಿದ್ದು, ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರಗಳನ್ನು ತಯಾರಿಸಿದೆ. ತಮಿಳಿನ ಜತೆಗೆ ತೆಲುಗು, ಹಿಂದಿ ಚಿತ್ರಗಳನ್ನೂ ನಿರ್ಮಿಸಿದೆ. ʼ2.0ʼ, ʼಪೊನ್ನಿಯಿನ್ ಸೆಲ್ವನ್ Iʼ, ʼಪೊನ್ನಿಯಿನ್ ಸೆಲ್ವನ್ IIʼ, ʼಇಂಡಿಯನ್ 2ʼ, ʼರಾಮ ಸೇತುʼ ಮೊದಲಾದ ಸಿನಿಮಾಗಳನ್ನು ತಯಾರಿಸಿದೆ.
ಈ ಸುದ್ದಿಯನ್ನೂ ಓದಿ: Shiva Rajkumar: ಮತ್ತೊಂದು ತಮಿಳು ಚಿತ್ರದಲ್ಲಿ ಶಿವಣ್ಣ; ದಳಪತಿ ವಿಜಯ್ ಕೊನೆಯ ಸಿನಿಮಾದಲ್ಲಿ ನಟನೆ