Thursday, 12th December 2024

Joseph Prabu: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾರ ತಂದೆ ವಿಧಿವಶ!

actor Samantha Ruth Prabhu's Father, Joseph Prabu, Passes Away; Actress Shares Heartbreaking Post

ನವದೆಹಲಿ: ದಕ್ಷಿಣ ಭಾರತದ ಸ್ಟಾರ್‌ ನಟಿ ಸಮಂತಾ ಋತು ಫ್ರಭು ಅವರ ತಂದೆ ಜೋಸೆಫ್‌ ಪ್ರಭು (Joseph Prabu) ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ತಮ್ಮನ್ನು ಅಗಲಿದ ತಂದೆಗಾಗಿ ನಟಿ ಸಮಂತಾ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ, “ನಾವು ಮತ್ತೆ ಭೇಟಿಯಾಗುವವರೆಗೆ, ಅಪ್ಪ” ಎಂದು ಭಾವನಾತ್ಮಕ ಪದಗಳನ್ನು ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.

ಸಮಂತಾ ಅವರ ತಂದೆ ಯಾವ ಕಾರಣಕ್ಕಾಗಿ ನಿಧನರಾಗಿದ್ದಾರೆಂದು ತಿಳಿದುಬಂದಿಲ್ಲ. ಆದರೆ, ಸಮಂತಾ ಅವರ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ತಂದೆ ಕೊನೆಯುಸಿರೆಳೆದಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ತೇಜಾ ಸಜ್ಜಾ, “ನಿಮ್ಮ ತಂದೆಯೊಂದಿಗೆ ನೀವು ಹಂಚಿಕೊಂಡ ನೆನಪುಗಳಲ್ಲಿ ನೀವು ಶಾಂತಿಯನ್ನು ಕಂಡುಕೊಳ್ಳಲಿ. ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ನನ್ನ ಆಳವಾದ ಸಹಾನುಭೂತಿ ಸಮಂತ ಪ್ರಭು ಅವರೆ,” ಎಂದು ಬರೆದಿದ್ದಾರೆ.

ಸಮಂತಾ ಅವರ ತಂದೆ ಜೋಸೆಫ್‌ ಪ್ರಭು ಅವರು ಚೆನ್ನೈನ ತೆಲುಗು-ಆಂಗ್ಲ ಭಾರತೀಯರು. ಅವರು ತಮ್ಮ ಪುತ್ರಿ ಸಮಂತಾ ಅವರ ಪಾಲನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಅದರಂತೆ ದಕ್ಷಿಣ ಭಾರತದ ನಟಿ, ಅನೇಕ ಸಂದರ್ಭಗಳಲ್ಲಿ ತನಗೆ ಬೆಂಬಲ ನೀಡಿದ್ದ ತನ್ನ ಕುಟುಂಬಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ತಮ್ಮ ತಂದೆಯ ಜತೆ ಇದ್ದ ಆತ್ಮೀಯ ಸಂಬಂಧದ ಬಗ್ಗೆಯೂ ಸಮಂತಾ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು.

ತಮ್ಮ ತಂದೆಯ ಮಾತುಗಳನ್ನು ಸ್ಮರಿಸಿದ್ದ ಸಮಂತಾ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಮಂತಾ, ತಮ್ಮ ತಂದೆಯೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. “ನನ್ನ ತಂದೆ, ಅನೇಕ ಭಾರತೀಯ ಪೋಷಕರಂತೆ, ಅವರು ತಮ್ಮ ಟೀಕೆಗಳಿಂದ ನನ್ನನ್ನು ರಕ್ಷಿಸುತ್ತಿದ್ದಾರೆಂದು ನಂಬಿದ್ದರು. ಅವರು ನನ್ನನ್ನು ‘ನಿಜವಾಗಿಯೂ ನೀನು ಅಷ್ಟು ಬುದ್ಧಿವಂತೆಯಲ್ಲ’ ಎಂದು ಹೇಳುತ್ತಿದ್ದರು. ಅಲ್ಲದೆ, ‘ಇದು ಕೇವಲ ಭಾರತೀಯ ಶಿಕ್ಷಣದ ಮಾನದಂಡವಾಗಿದೆ, ಮತ್ತು ಅದಕ್ಕಾಗಿಯೇ ನೀವು ಸಹ ಮೊದಲನೇ ಶ್ರೇಯಾಂಕ ಪಡೆಯಬಹುದು.ʼ ಎಂದಿದ್ದರು. ನನ್ನ ತಂದೆ ಮಗುವಿದ್ದಾಗಲೇ ಈ ಮಾತುಗಳನ್ನು ನನಗೆ ಹೇಳಿದ್ದರು. ಅದರಂತೆ ದೀರ್ಘಾವಧಿಯಿಂದ ನಾನು ಸಾಕಷ್ಟು ಬುದ್ದವಂತಳಲ್ಲ ಹಾಗೂ ಸಾಕಷ್ಟು ಒಳ್ಳೆಯವಳಲ್ಲ ಎಂದು ನಂಬಿದ್ದೇನೆ,” ಎಂದು ಸಮಂತಾ ತಿಳಿಸಿದ್ದಾರೆ.

ತಮ್ಮ ಪುತ್ರಿ ಡಿವೋರ್ಸ್‌ ಬಗ್ಗೆ ನೋವು ತಿಂದಿದ್ದ ಜೋಸೆಫ್‌ ಪ್ರಭು

ಸಮಂತಾ ಮತ್ತು ನಾಗ ಚೈತನ್ಯ ಅವರು 2021ರ ಅಕ್ಟೋಬರ್ ತಿಂಗಳಲ್ಲಿ ಬೇರ್ಪಟ್ಟಿದ್ದರು. ಸಮಂತಾ ಅವರಿಗಿಂತ ಹೆಚ್ಚಾಗಿ ಅವರ ದಿವಂಗತ ತಂದೆ ಜೋಸೆಫ್ ಪ್ರಭು ಅವರು ತಮ್ಮ ಮಗಳ ವಿಚ್ಛೇದನದಿಂದ ಆಘಾತಕ್ಕೆ ಒಳಗಾಗಿದ್ದರು ಹಾಗೂ ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 2022 ರಲ್ಲಿ ಅವರು ತಮ್ಮ ಮಗಳ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದರು ಹಾಗೂ ಮಗಳ ಈ ಕಹಿ ಘಟನೆಯನ್ನು ಸ್ವೀಕರಿಸಲು ಬಹಳ ಸಮಯ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿಕೊಂಡಿದ್ದರು.